ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಬಿಸಿ ಬಿಸಿ ಊಟ

ಹೊಟ್ಟೆ ಯಾರ ಮಾತನ್ನೂ ಕೇಳುವುದಿಲ್ಲ. ಅದಕ್ಕೆ ತಿಳಿಯುವ ಭಾಷೆ ಒಂದೇ - ಅನ್ನ. ಹೆಂಡತಿಯ ಪ್ರೀತಿ ನಮ್ಮ ಹೊಟ್ಟೆಯಿಂದ ಪ್ರಾರಂಭಪಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಅಂದರೆ ಗಂಡನ ಪ್ರೀತಿ ಗಳಿಸಬೇಕಾದರೆ ಅಡುಗೆ ರುಚಿಯಾಗಿರಬೇಕೆಂದರ್ಥ. ಅಡುಗೆ ರುಚಿಯಾಗಿದ್ದರೆ, ನನ್ನ ಹೆಂಡತಿ ತರಹ ಇಡೀ ಪ್ರಪಂಚದಲ್ಲಿ ಯಾರೂ ಅಡುಗೆ ಮಾಡುವುದಿಲ್ಲ ಎಂದು ಪ್ರಶಂಸೆಯ ಗಾಳಿಪಟ ಆಕಾಶದಲ್ಲಿ ಅತಿ ಎತ್ತರವಾಗಿ ಹಾರಲು ಬಿಡುತ್ತಾರೆ.ಅಡುಗೆ ಸರಿಯಾಗಿಲ್ಲವಾದಲ್ಲಿ ಏನಾಗುತ್ತೆ ನಿಮಗೇ ಗೊತ್ತು! ಅಡುಗೆ ರುಚಿಯಾಗಿಲ್ಲದಿದ್ದರೆ ಮನೆಯಾಕೆಗೆ ಬಯ್ಯಬೇಡಿ, ಏಕೆಂದರೆ ಅವರೇ ತಾನೆ ನಿಮಗೆ ಪ್ರತೀದಿನ ಕಷ್ಟಪಟ್ಟು ಅಡುಗೆ ಮಾಡಿ ಹಾಕೋದು. ಅಂದರೆ ಅಡುಗೆ ಚೆನ್ನಾಗಿಲ್ಲದಿದ್ದರೂ ಬಾಯಿ ಮುಚ್ಚಿಕೊಂಡು ತಿನ್ನಬೇಕು ಎನ್ನುತ್ತೀರಾ? ಇಲ್ಲ. ನಿಮಗೆ ಒಂದು ಸರಳ ರಹಸ್ಯ ಹೇಳಿಕೊಡುತ್ತೇನೆ ಕೇಳಿಸಿಕೊಳ್ಳಿ. "ನಿನ್ನೆ ಅಡುಗೆ ತುಂಬಾ ಚೆನ್ನಾಗಿತ್ತು...ಇವತ್ತು ಯಾಕೋ ಸ್ವಲ್ಪ..." ಇಷ್ಟು ಮಾತ್ರ ಹೇಳಿ. ನಾಳೆಯ ತಿಂಡಿ ನೋಡಿ. ನಿಮ್ಮ ಹೋಮ್ ಮಿನಿಷ್ಟ್ರು ಬಹಳ ಜಾಗರೂಕತೆಯಿಂದ ಅಡುಗೆ ತಯಾರು ಮಾಡುತ್ತಾರೆ. ಅಕ್ಕಪಕ್ಕದವರನ್ನು ಕೇಳಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾರೆ. ನೋಡಿದ್ರಾ ಮೃದುವಾಗಿ ಹೇಳಿದ ಒಂದು ವಾಕ್ಯ ಎಷ್ಟು ಪ್ರಭಾವಶಾಲಿಯಾಗಿ ಕೆಲಸ ಮಾಡಿತು!

ರುಚಿ ರುಚಿಯಾಗಿ ತಿಂದು ವೈದ್ಯರ ಬಳಿ ಹೋಗಿ, ಅವನ ಮಾತನ್ನು ಸಹ ಸ್ವಲ್ಪ ಕೇಳಿ...ಆರೋಗ್ಯವಾಗಿರಲು ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಿ. "ಹೊಟ್ಟೆ" ರೋಗಗಳ ಕೋಟೆ. ಸರಿಯಾದ ಸಮಯಕ್ಕೆ ಊಟ ಮಾಡಿ. ಹೊಟ್ಟೆಯನ್ನು ಮೊರು ಭಾಗಗಳಾಗಿ ವಿಂಗಡಿಸಿ. ಒಂದು ಭಾಗ ನೀರು, ಒಂದು ಭಾಗ ಊಟ ಮತ್ತು ಇನ್ನೊಂದು ಭಾಗವನ್ನು ಖಾಲಿ ಬಿಡಿ. ಆಗ ಸುಗಮವಾಗಿ ಪಚನಕ್ರಿಯೆ ನಡೆಯುತ್ತದೆ. ತೇಗು ಬರುವ ಹಾಗೆ ತಿಂದು ನಿಮ್ಮ ಶರೀರಕ್ಕೆ ದ್ರೋಹ ಬಗೆಯಬೇಡಿ. ಅತೀ ಕಡಿಮೆ ತಿಂದು ನಿಶ್ಯಕ್ತರಾಗಿ ರೋಗಿಗಳಾಗಿ ನರಳಬೇಡಿ. ಹಿಂದೊಂದು ಕಾಲದಲ್ಲಿ ಜನ ಆಹಾರದ ಕೊರತೆಯಿಂದ ಸಾಯುತ್ತಿದ್ದರಂತೆ. ಆದರೆ ಈಗ ಆಹಾರವೇ ಹಲವಾರು ರೋಗಗಳಿಗೆ ಕಾರಣವಾಗಿಬಿಟ್ಟಿದೆ. ನಾಲಿಗೆಯ ರುಚಿ ವೈದ್ಯರ ಮಾತು ಕೇಳುತ್ತಾ? ಅದನ್ನು ತಿನ್ನಬೇಡ, ಇದನ್ನು ತಿನ್ನಬೇಡವೆಂದರೂ, ಮನಸ್ಸು ಮಾತ್ರ "ಆದಾಗೆ ಆಗ್ಲಿ ಮಾದಪ್ಪನ್ ಜಾತ್ರೆ" ಅಂತ ಏನೂ ಲೆಕ್ಕಿಸದೆಯೇ ತಿಂದು ನಮ್ಮನ್ನು ಆಸ್ಪತ್ರೆಯ ದರ್ಶನ ಮಾಡಿಸಿಯೇ ತೀರುತ್ತೆ. ಆರೋಗ್ಯವಾಗಿರಲು ಎಷ್ಟು ಪೌಷ್ಟಿಕ ಆಹಾರ ಅಗತ್ಯವೋ ಅಷ್ಟನ್ನೇ ತಿನ್ನಿ. ಅತಿಯಾಗಿ ತಿಂದು ಜೀರ್ಣಿಸಲಾಗದೆ ರೋಗಕ್ಕೆ ಬಲಿಯಾಗುವುದಕ್ಕಿಂತ ಸಾವೇ ಮೇಲೆಂದು ಹಿರಿಯರು ಹೇಳಿದ್ದಾರೆ. ನಿಜ. ಸೋಮಾರಿ ಮನುಷ್ಯ ಯಾವ ಸಾಧನೆ ತಾನೇ ಮಾಡಲು ಸಾಧ್ಯ?

ಹೋಟೆಲ್ ಗಳು ದಿನೇದಿನೇ ಹೆಚ್ಚುತ್ತಿರಲು ಕಾರಣವೇನು ಗೊತ್ತೇ? "ಶೆಕ್ ಅಪ್ನಾ ಅಪ್ನಾ ದೇಖ್" ಬೇರೆಯವರಿಗೆ ಸಹಾಯ ಮಾಡುವ ಭಾವನೆ ನಮ್ಮಲ್ಲಿ ಕ್ಷೀಣಿಸುತ್ತಾ ಬಂದಿರುವುದೇ ಇದಕ್ಕೆ ಕಾರಣ. ಹಿಂದೊಂದು ಕಾಲದಲ್ಲಿ ಪ್ರಯಾಣಿಕರು ಒಂದೂರಿನಿಂದ ಇನ್ನೊಂದೂರಿಗೆ ಹೋದರೆ ಅಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ತಂಗುದಾಣಗಳಿರುತ್ತಿದ್ದವು. ಊರಲ್ಲಿ ಯಾರಾದರೊಬ್ಬರು ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಬಡಿಸುತ್ತಿದ್ದರು. ಸೂಫಿ ಸಂತರ ಆಶ್ರಮಗಳಲ್ಲಿ ಅನ್ನದಾನದ ವ್ಯವಸ್ಥೆ ಇರುತ್ತಿತ್ತು. ಛತ್ರಗಳಲ್ಲಿ ಜಾತಿಮತಗಳ ಭೇದ-ಭಾವವಿಲ್ಲದೆ, ಮೇಲು-ಕೀಳು ಎಂಬ ಭಾವನೆಗಳಿಲ್ಲದೆ ಮಹಾತ್ಮರು ಅನ್ನದಾನದ ವ್ಯವಸ್ಥೆ ಮಾಡುತ್ತಿದ್ದರು. ಬೆಂಗಳೂರಿನಲ್ಲಿಯೊ ಸಹ ೩ "ಲಂಗರ್ ಖಾನ"(ಉಚಿತ ಅನ್ನದಾಶ್ರಮ)ಗಳಿದ್ದವು. ದೆಹಲಿಯ ಸೂಫಿ ಸಂತರಾಗಿದ್ದ ನಿಜಾಮುದ್ದೀನ್ ರವರ(ರ) ಆಶ್ರಮದಲ್ಲಿ ಪ್ರತೀದಿನ ೧೫೦೦ ಸಾವಿರ ಜನರಿಗೆ ಅನ್ನದಾನ ಮಾಡಲಾಗುತ್ತಿತ್ತು. ಜಾತಿಯ ಯಾವ ಭೇದಭಾವವೂ ಇರಲಿಲ್ಲ. ಹರಿದೇವ ಎಂಬ ಸೈನಿಕ ಸಂತರನ್ನು ಕಾಣಲು ಕಾಲ್ನಡಿಗೆಯಲ್ಲಿ ಔರಂಗಾಬಾದಿನಿಂದ ದೆಹಲಿಗೆ ಬಂದರು. ಸಂತರಿಗೆ ಈ ವಿಷಯ ತಿಳಿಸಲಾಯಿತು. ಸಾವಿರಾರು ಭಕ್ತರ ನಡುವೆ ಸರಿಸಮಾನವಾಗಿ ಸಕಲ ಮರ್ಯಾದೆಗಳಿಂದ ಹರಿದೇವನಿಗೆ ವಿಶೇಷವಾಗಿ ತಟ್ಟೆಯನ್ನು ಕೊಟ್ಟು ಅನ್ನವನ್ನು ಬಡಿಸಲಾಯಿತು. ಆತನಿಗೆ ತಂಗಲು ವ್ಯವಸ್ಥೆ ಮಾಡಲಾಯಿತು.

ಆದರೆ ಈಗ ನಮ್ಮ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ವಿಶ್ಲೇಷಿಸಿಕೊಳ್ಳೋಣ. ಒಂದು ಕಾಲದಲ್ಲಿ ಮನೆ ಮುಂದಿನ ಫಲಕದಲ್ಲಿ "ಅತಿಥಿ ದೇವೋಭವ" ಎಂದು ಬರೆಯಲಾಗುತ್ತಿತ್ತು. ನಂತರ ಆ ಫಲಕ ಹೋಗಿ "ಸುಸ್ವಾಗತ" ಎಂದು ಪರಿವರ್ತನೆಗೊಂಡಿತು. ಈಗ ಆ ಫಲಕದ ಮೇಲೆ "ನಾಯಿ ಇದೆ ಎಚ್ಚರಿಕೆ" ಎಂದು ಬರೆಯಲಾಗುತ್ತದೆ. ಸಕಲ ಸವಲತ್ತುಗಳಿದ್ದರೂ ಮನೆಗೆ ನೆಂಟರು ಬಂದರೆ ಊಟ ಬಡಿಸುವುದಿರಲಿ, ಒಂದು ಲೋಟ ಕಾಫಿ-ಟೀ ಸಹ ಕೊಡುವುದಕ್ಕೂ ಹಿಂದೇಟು ಹಾಕುತ್ತೇವೆ. ಮಾನವೀಯತೆಯ ಮೌಲ್ಯಗಳನ್ನು ದಿನೇದಿನೇ ನಾವು ಕಳೆದುಕೊಳ್ಳುತ್ತಿದ್ದೇವೆ. ಬಂಗಲೆಯಂತಹ ಮನೆಯಿದೆ ಆದರೆ ಇರೋದು ಇಬ್ಬರೇ. ದೊಡ್ಡ ದೊಡ್ಡ ಪದವಿಗಳಿವೆ ಆದರೆ ವಿವೇಕ ಬಹಳ ಕಡಿಮೆ. ನೂರಾರು ಔಷಧಿಗಳಿದ್ದರೂ ಆರೋಗ್ಯ ಮಾತ್ರ ಸೊನ್ನೆ. ಚಂದ್ರ ಲೋಕಕ್ಕೆ ಕಾಲಿಟ್ಟಿದ್ದೇವೆ ಆದರೆ ಪಕ್ಕದಮನೆಯವರು ಗೊತ್ತಿಲ್ಲ. ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದರೂ ಮನಃಶಾಂತಿಯಿಲ್ಲ. ಒಳ್ಳೆಯ ಸ್ನೇಹವಿದೆ. ಆದರೂ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲ. ತಂದೆ-ತಾಯಿಯ ಆಶೀರ್ವಾದವಿಲ್ಲ. ತಾಯಿತ ಮಮತೆಯಿಲ್ಲ. ಎಲ್ಲವೂ ಕನಸಾಗಿ ಉಳಿದುಬಿಟ್ಟಿದೆ. ಇವೆಲ್ಲವನ್ನೂ ನೆನೆಸಿಕೊಂಡರೆ ಕಣ್ಣಲ್ಲಿ ನೀರು ತುಂಬಿ ಬರುತ್ತದೆ. ಇಂಥ ಜೀವನವನ್ನು ನಾವು ಏತಕ್ಕೋಸ್ಕರ, ಯಾರಿಗೋಸ್ಕರ ಬದುಕುತ್ತಿದ್ದೇವೆ ಎಂಬ ಯೋಚನೆಗಳು ಬರುತ್ತವೆ. ಹೋದ ಸಮಯ ಮತ್ತೆ ಬರುವುದಿಲ್ಲ. ನಮ್ಮನ್ನು ನಾವು ವಿಶ್ಲೇಷಿಸಿಕೊಂಡು ಇರುವಷ್ಟು ದಿನ ಪ್ರೀತಿಯಿಂದ, ಆನಂದದಿಂದ, ನೆಮ್ಮದಿಯಿಂದ ಬಾಳಲು ಪ್ರಯತ್ನಿಸೋಣ.

- ಜಬೀವುಲ್ಲಾ ಖಾನ್

0 comments:

Post a Comment