ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
5:38 PM

ದೂರದೂರಿನ ಪಯಣ

Posted by ekanasu

ಸಾಹಿತ್ಯ


ಅಮ್ಮಾ... ಇಂದು ಅಂಬುಜಮ್ಮನ ಮಗ ನಾರಾಯಣ ಸಿಕ್ಕಿದ್ದ. ದುಬಾಯಿಯಿಂದ ಬಂದಿದ್ದಾನೆ. ೩ ತಿಂಗಳು ರಜೆಯಂತೆ. ಊರಿನಲ್ಲಿ ಹೇಗಿದ್ದವನು ಈಗ ಹೇಗೆ ಬಂದಿದ್ದಾನೆ ಗೊತ್ತಾ ಅಮ್ಮಾ... ನಾನೂ ಯಾಕೆ ಗಲ್ಫ್ ಗೆ ಹೋಗಲು ಯತ್ನಿಸಬಾರದು? ನಾಲ್ಕು ಕಾಸು ಸಂಪಾದಿಸಿದರೆ ನಿಮ್ಮಿ ಗೂ ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಬಹುದು. ನಮ್ಮ ತುಂಬಾ ಹಳೆಯದಾದ ಈ ಮನೆಯ ದುರಸ್ತಿ ಕೂಡಾ ಮಾಡಬಹುದು. ಹಗಲೂ ರಾತ್ರಿ ಹೊಲಿಗೆಯಂತ್ರ ತುಳಿಯುತ್ತಿರುವ ನಿನಗೂ ಸ್ವಲ್ಪ ಆರಾಮ ಸಿಗಬಹುದು. ಸ್ವಲ್ಪವಾದರೂ ತಲೆಯೆತ್ತಬಹುದು. ಏನಂತೀಯಾ ಅಮ್ಮಾ...? ಎಂದ. ಅದು ಸರಿ ನವೀನ, ಅಲ್ಲಿಗೆ ಹೋಗಲು ಏನೆಲ್ಲಾ ವ್ಯವಸ್ಥೆಗಳು ಬೇಕು, ವೀಸಾ ಬೇಕು, ಹಣಬೇಕು. ಅಷ್ಟು ಸುಲಭವಿರಲಿಕ್ಕಿಲ್ಲ ಕಣೋ... ಎಂದಾಗ ನೋಡೋಣ ಅಮ್ಮಾ, ಪ್ರಯತ್ನಿಸಬಹುದಲ್ಲಾ... ಅಲ್ವೇನೇ ನಿಮ್ಮಿ... ಎಂದು ತಂಗಿಯ ಕೆನ್ನೆಗೊಂದು ಮೃದುವಾಗಿ ಹೊಡೆದು ಅಲ್ಲಿಂದ ಮೇಲೆದ್ದ.


ರಾತ್ರೆ ಮಲಗಿದ ನಂತರವೂ ನವೀನನಿಗೆ ತನ್ನ ಸ್ನೇಹಿತ ನಾರಾಯಣನದ್ದೇ ನೆನಪು. ಇಬ್ಬರೂ ಒಂದೇ ಕ್ಲಾಸಿನಲ್ಲಿದ್ದವರು. ಅವನು ೭ನೇ ತರಗತಿಯಲ್ಲಿ ಎರಡು ಸಾರಿ ಫೈಲಾಗಿ ಮನೆಗೆಲಸ ಮಾಡಿಕೊಂಡು ಮಾಸಿದ ಬನಿಯನ್, ಲುಂಗಿತೊಟ್ಟು ಕಾಲಲ್ಲಿ ಚಪ್ಪಲಿ ಕೂಡಾ ಇಲ್ಲದೆ ತಿರುಗಾಡುತ್ತಿದ್ದವನು ಅದುಹೇಗೋ ದುಬಾಯಿ ತಲ್ಪಿ ೨ ವರ್ಷದ ನಂತರ ಬಂದಿದ್ದಾನೆ. ಗರಿಗರಿಯಾದ ಪ್ಯಾಂಟ್ ಶರ್ಟ್, ಕಾಲಲ್ಲಿ ಮಿರುಗುವ ಶೂ, ಮಣಿಗಂಟಿನ ಮೇಲೆ ಹೊಚ್ಚ ಹೊಸಾ ವಾಚು, ಕಣ್ಣಿಗೊಂದು ಕಪ್ಪು ಕನ್ನಡಕ, ಕುತ್ತಿಗೆಯಲ್ಲಿ ಚಿನ್ನದ ಚೈನು, ಕಿಸೆಯಲ್ಲಿ ಸಿಗರೇಟ್ ಪ್ಯಾಕೆಟ್, ಚಿಮುಕಿಸಿಕೊಂಡ ಸೆಂಟಿನ ಪರಿಮಳ... ನಿಜವಾಗಿಯೂ ನಂಬಲಾಗದ ಸತ್ಯ! ಏನು ಮಾಡಿಕೊಂಡಿರುವಿ ನಾರಾಯಣಾ... ಕೇಳಿದ್ದಕ್ಕೆ ತೊಂದ್ರೆಯಿಲ್ಲ ಕೆಲಸ ಚೆನ್ನಾಗಿದೆ ಎಂದಿದ್ದ. ತಾನು ಎಸ್.ಎಸ್.ಎಲ್.ಸಿ.ಯಲ್ಲಿ ಒಳ್ಳೆಯ ಮಾರ್ಕ್ನಾಲ್ಲೇ ಪಾಸಾಗಿ ಐ.ಟಿ.ಐ. ಮುಗಿಸಿ ಸಣ್ಣ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಾ ದಿನಕ್ಕೆ ೨೦೦ ರೂ. ತನಕ ಸಿಗುತ್ತದೆ ಮನೆಯ ಖರ್ಚು ಸಾಗುತ್ತದೆ. ಆದರೆ ಈ ಸಂಪಾದನೆ ಕಾಲಿಗೆಳೆದರೆ ತಲೆಗಿಲ್ಲ, ತಲೆಗೆಳೆದರೆ ಕಾಲಿಗಿಲ್ಲ ಎಂಬಂತೆ, ತಾಯಿ ಹೊಲಿಗೆ ಯಂತ್ರ ಇಟ್ಟುಕೊಂಡು ಅಕ್ಕಪಕ್ಕದವರ ವಸ್ತ್ರ, ಬಟ್ಟೆ ಹೊಲಿದುಕೊಡುತ್ತಿರುವುದರಿಂದ ಮನೆಗೆ ಸ್ವಲ್ಪ ಆಧಾರವಾಗುತ್ತಲಿದೆ. ತಂಗಿ ನಿಮ್ಮಿ ಪಿ.ಯು.ಸಿ. ಕಲಿತು ಮನೆಯಲ್ಲಿದ್ದಾಳೆ. ನಾನು ಗಲ್ಫ್ ಗೆ ಹೋಗುವಂತಾದರೆ ತಾಯಿಗೆ ಸ್ವಲ್ಪ ಆರಾಮಕೊಡಬಹುದು, ತಂಗಿಗೂ ಒಳ್ಳೆಯ ಕಡೆ ನೋಡಿ ವಿವಾಹ ಮಾಡಿಕೊಡಬಹುದು. ಏನೇನೋ ಯೋಚಿಸುತ್ತಾ ನಿದ್ದೆ ಹೋದ... ನಿದ್ದೆಯಲ್ಲೂ ಸುಂದರ ಕನಸುಗಳು.

ಬೆಳಿಗ್ಗೆ ಎದ್ದವನೇ ಕಾಫಿ ಕುಡಿದು ಪಾಸ್ಪೋರ್ಟ್ ವ್ಯವಸ್ಥೆ ಮಾಡಿಕೊಡುತ್ತಿರುವ ಏಜೆನ್ಸಿಯೊಂದಕ್ಕೆ ಹೋಗಿ ಪಾಸ್ಪೋರ್ಟ್ ಗೆ ಬೇಕಾಗುವ ಅರ್ಜಿ ಇತರ ಅವಶ್ಯಕತೆಗಳನ್ನು ಪೂರೈಸಿದ. ಆದಷ್ಟು ತ್ವರಿತವಾಗಿ ಪಾಸ್ಪೋರ್ಟ್ ಒದಗಿಸಿಕೊಡುವಂತೆ ವಿನಂತಿಸಿಯೂ ಆಯಿತು. ಅಂದೇ ಮುಂಬಯಿಯಲ್ಲಿರುವ ಚಿಕ್ಕಮ್ಮನಿಗೆ ನಾನು ಗಲ್ಫ್ ಗೆ ಹೋಗಲು ಪ್ರಯತ್ನಿಸುತ್ತಿರುವುದಾಗಿಯೂ ಆ ಪ್ರಯುಕ್ತ ಮುಂಬಯಿಗೆ ಬರುತ್ತಿರುವುದಾಗಿಯೂ ಕೆಲಸ ಆಗುವ ತನಕ ಮುಂಬಯಿಯಲ್ಲಿ ತಮ್ಮ ಮನೆಯಲ್ಲೆ ತಂಗಲು ಇಚ್ಚಿಸುತ್ತಿರುವುದಾಗಿಯೂ ತಾವೆಲ್ಲ ನನಗೆ ಬೆಂಬಲ, ಸಹಾಯ, ಪ್ರೋತ್ಸಾಹ ನೀಡಬೇಕಾಗಿಯೂ ಪತ್ರ ಬರೆದು ಪೋಸ್ಟ್ ಗೆ ಹಾಕಿದ. "ಖಂಡಿತ ಬಾ ನವೀನ್, ನಿನ್ನ ಮನದಾಸೆಗಳೆಲ್ಲ ನೆರವೇರಲಿ ನಮ್ಮ ಆಶೀರ್ವಾದ ಸದಾ ನಿನ್ನೊಂದಿಗಿದೆ"ಎಂದು ಚಿಕ್ಕಮ್ಮನಿಂದ ಉತ್ತರ ಕೂಡಾ ಬಂತು.

ದಿನಗಳುರುಳಿ ಎರಡು ತಿಂಗಳಲ್ಲೇ ಪಾಸ್ಪೋರ್ಟ್ ಬಂತು. ತಾನು ಕೆಲಸ ಮಾಡುತ್ತಿರುವಲ್ಲಿಗೆ ಹೋಗಿ, ತಾನು ಮುಂಬಯಿಗೆ ಹೋಗುತ್ತಿರುವುದಾಗಿ ತಿಳಿಸಿ ಮುಂಬೈ ಪ್ರಯಣಕ್ಕಾಗಿ ಟಿಕೆಟ್ ಕಾದಿರಿಸಿದ. ಹೊರಡುವ ಸಮಯದಲ್ಲಿ ಕಣ್ತುಂಬಿನಿಂತ ತಾಯಿಯ ಕಾಲಿಗೆರಗಿದಾಗ ತಾಯಿಯ ಕೈಗಳೆರಡೂ ಆಶೀರ್ವಾದಗಳೊಂದಿಗೆ ಮಗನ ತಲೆಯ ಮೇಲಿದ್ದುವು. ಒಳ್ಳೆಯ ಕೆಲಸ ಸಿಗಲಿ ಅಣ್ಣಾ... ನನ್ನ ಆಶೀರ್ವಾದ ಕೂಡಾ ನಿನ್ನ ಮೇಲಿದೆ ಎಂದು ನಮ್ರತಾ ಕೂಡಾ ತಮಾಷೆಯಾಗಿ ನುಡಿದಳು. ಕೆಲಸ ಖಂಡಿತವಾದ ಕೂಡಲೇ ಊರಿಗೆ ಬಂದುಹೋಗುತ್ತೇನೆ. ಜಾಗ್ರತೆಯಾಗಿರಿ ಎಂದು ಬಸ್ಸು ಹತ್ತಿದ.

ಮುಂಬಯಿಯ ಚಿಕ್ಕಮ್ಮನ ಮನೆಯಲ್ಲಿ ನವೀನ್ ಗೆ ಯಾವ ಅನಾನುಕೂಲತೆಯೂ ಇರಲಿಲ್ಲ. ಚಿಕ್ಕಮ್ಮ, ಚಿಕ್ಕಪ್ಪ ಅವರ ಮಕ್ಕಳಾದ ರಾಕೇಶ್ ಮತ್ತು ರಕ್ಷಿತಾ ತುಂಬಾ ಅನ್ಯೋನ್ಯತೆಯಿಂದ ನೋಡಿಕೊಳ್ಳುತ್ತಿದ್ದರು. ನವೀನ್ ಈ ಮೊದಲು ಮುಂಬಯಿಗೆ ಬಂದಿರದಿದ್ದರೂ ಚಿಕ್ಕಮ್ಮನ ಕುಟುಂಬ ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದು ನವೀನ್ ಮನೆಯಲ್ಲೇ ತಂಗುತ್ತಿದ್ದುದರಿಂದ ಊರಿನ ಸುಂದರವಾದ ತಾಣಗಳೆನ್ನೆಲ್ಲ ಸುತ್ತುವಾಗ ನವೀನ್ ನ ಮಾರ್ಗದರ್ಶನವೇ ಪ್ರಮುಖವಾಗಿರುತ್ತಿತ್ತು. ಈಗ ಮುಂಬಯಿಯಲ್ಲಿ ಚಿಕ್ಕಮ್ಮನ ಮಗಳು ರಕ್ಷಿತಾಳೆಂತೂ ನಮ್ರತಾಳಿಂದ ದೂರವಾದ ಕೊರತೆಯನ್ನು ದೂರ ಮಾಡಿದ್ದಳು. ನವೀನಣ್ಣ, ನವೀನಣ್ಣ ಎಂದು ಹಿಂದೆಮುಂದೆ ಸುತ್ತುತ್ತಾ ಅವನಿಗೆ ಬೇಕಾದ ಎಲ್ಲಾ ಸಹಾಯವನ್ನು ಮಾಡುತ್ತಿದ್ದಳು. ಪತ್ರಿಕೆಯಲ್ಲಿ ಬರುತ್ತಿದ್ದ ಜಾಹೀರಾತುಗಳನ್ನು ಕಂಡು ನವೀನ್ ಗೆ ಮುಂಬಯಿ ಹೊಸತಾದುದರಿಂದ ಚಿಕ್ಕಪ್ಪ ಆಫೀಸಿಗೆ ರಜೆಹಾಕಿ ಅವನನ್ನು ಕರೆದುಕೊಂಡು ಹೋಗಿಬರುತ್ತಿದ್ದರು. ರಾಕೇಶ್ ಕೂಡಾ ಕಾಲೇಜ್ಗೆಯ ರಜೆಹಾಕಿ ಕೆಲವು ಸಾರಿ ನವೀನ್ನೆನ್ನು ಜಾಹೀರಾತಿನಲ್ಲಿದ್ದ ವಿಳಾಸಗಳಿಗೆ ಕರೆದೊಯ್ಯುತ್ತಿದ್ದನು. ಯತ್ನದ ಮೇಲೆ ಪ್ರಯತ್ನ ವೆಂಬಂತೆ ೨ ತಿಂಗಳು ಓಡಾಡಿದ ನಂತರ ಒಂದು ಕಡೆ ವೀಸಾ ಇರುವುದು ಖಚಿತವಾಗಿ ಇಂಟರ್ವ್ಯೂ ಕೂಡಾ ಮುಗಿಯಿತು. ಏಜೆನ್ಸಿಯ ಮ್ಯಾನೇಜರ್ ಒಳಗೆ ಕರೆದು ೭೦ ಸಾವಿರ ಕೊಟ್ಟರೆ ೮ ದಿನಗಳೊಳಗೆ ಪ್ರಯಾಣ ಮಾಡಬಹುದು ಎಂದಾಗ ಸರಿ ಎಂದು ಹೊರಗೆ ಬಂದ ನವೀನ್ನರ ಮೈ ಬೆವರತೊಡಗಿತು. ಎಲ್ಲಿಂದ ತರುವುದು ಇಷ್ಟು ದೊಡ್ಡ ಮೊತ್ತ? ತಂಗಿಯ ಮದುವೆಗೆಂದು ರೂಪಾಯಿ ರೂಪಾಯಿ ಕೂಡಿಸಿಟ್ಟಿದ್ದು ೨೦ ಸಾವಿರದಷ್ಟು ಬ್ಯಾಂಕಿನಲ್ಲಿರಬಹುದು. ಅದರಿಂದೇನಾಗುತ್ತದೆ? ಯೋಚನೆಯಿಂದಲೇ ಹೊರಗೆ ಬಂದಾಗ ಬಾಡಿದ್ದ ಇವನ ಮುಖ ಕಂಡು ಏನಾಯಿತು ಎಂದು ಚಿಕ್ಕಪ್ಪ ವ್ಯಾಕುಲತೆಯಿಂದಲೇ ಪ್ರಶ್ನಿಸಿದರು. ಪಕ್ಕನೆ ಸಾವರಿಸಿಕೊಂಡ ನವೀನ್ ಏನಿಲ್ಲ ಅಂಕಲ್ ಇಂಟರ್ವ್ಯೂ ಒಳ್ಳೆಯದರಲ್ಲಾಯಿತು ಇನ್ನು ಮುಂದಿನ ಯೋಚನೆ ಎಂದು ಬರುತ್ತಾ ವಿಷಯವನ್ನೆಲ್ಲ ವಿವರಿಸಿದ. "ಮುಂಬಯಿಯ ಜೀವನ ನಿನಗೆ ತಿಳಿದೇ ಇದೆ. ಸ್ವಲ್ಪ ಆ ಕಡೆ ಈ ಕಡೆ ಆಯಿತೆಂದಾದರೆ ತಿಂಗಳಕೊನೆಯಲ್ಲಿ ನೂರಿನ್ನೂರಕ್ಕಾಗಿ ಬೇರೆಯವರನ್ನು ಕೇಳುವ ಫಜೀತಿ. ಬ್ಯಾಂಕಿನಲ್ಲಿ ಸ್ವಲ್ಪ ಹಣ ಇದೆ. ಅಗತ್ಯಬಿದ್ದರೆ ೨೦-೨೫ ಸಾವಿರ ತೆಗೆದುಕೊ" ಚಿಕ್ಕಪ್ಪನೆಂದರು. ಸ್ವಾಭಿಮಾನ ತೊರೆಯಲಿಚ್ಚಿಸದೆ ಸರಿ ಅಂಕಲ್ ಬೇಕಾದರೆ ಕೇಳುತ್ತೇನೆಂದ. ಮನೆಯಲ್ಲಿ ಚಿಕ್ಕಮ್ಮನಿಗೂ ವಿಷಯ ತಿಳಿಸಿದಾಗ ಇಷ್ಟೊಂದು ಹಣಕೊಡಬೇಕೇನೋ ನವೀನ್? ನಿನಗೆ ಹೋಗಲೇಬೇಕಿದ್ದರೆ ಆದಷ್ಟು ಸಹಾಯ ಅಂಕಲ್ ಮಾಡಬಹುದು ಎಂದಾಗ ಮೊದಲು ಊರಿಗೆ ಹೋಗಿ ಏನಾದರೂ ಆಗಬಹುದಾ ನೋಡುತ್ತೇನೆ ಚಿಕ್ಕಮ್ಮ... ನಂತರ ಬೇಕಾದರೆ ಕೇಳುತ್ತೇನೆ ಎಂದು ಮರುದಿನವೇ ಊರಿಗೆ ಹೊರಟ.

ಮನೆ ತಲ್ಪಿದ ನವೀನ್ ತಾಯಿಯಲ್ಲಿ ವಿಷಯ ತಿಳಿಸಿದಾಗ ಆ ತಾಯಿ ತಲೆಯಮೇಲೆ ಕೈಹೊತ್ತು ಕುಳಿತರು. ಏನು ಮಾಡುವುದು, ಎಲ್ಲಿಗೆ ಹೋಗುವುದು? ರಾತ್ರಿಯಿಡೀ ಎಲ್ಲರಿಗೂ ಶಿವರಾತ್ರೆಯಂತಾಯ್ತು. ಬೆಳಿಗ್ಗೆ ಎದ್ದವರೆ ತಾಯಿ ಸುಮಿತ್ರಮ್ಮ ಮನೆಯಲ್ಲಿದ್ದ ಒಡವೆಗಳು ಹಾಗೂ ಮನೆಯ ಕಾಗದ ಪತ್ರಗಳನ್ನು ಮಗನ ಕೈಯಲ್ಲಿಡುತ್ತಾ ಇದನ್ನು ಬ್ಯಾಂಕಿನಲ್ಲಿಡೋಣ. ನೀನು ಗಲ್ಫ್ ಗೆ ಹೋದ ನಂತರ ಆದಷ್ಟು ಬೇಗ ಬಿಡಿಸಿಕೊಳ್ಳಬಹುದಲ್ಲಾ... ಬೇರೆ ಮಾರ್ಗವಿಲ್ಲ ಮಗೂ ಎಂದಾಗ ನವೀನ್ ಗೆ ಅರಿಯದಂತೆಯೇ ಕಣ್ಣಿಂದ ನೀರು ತೊಟ್ಟಿಕ್ಕಿತು. ಆದರೂ ಒಂದು ದೂರದ ಆಸೆ... ನಿರೀಕ್ಷೆ. ಸಮಯ ಜಾಸ್ತಿ ಇಲ್ಲದಿದುದರಿಂದ ತಾಯಿಯೊಂದಿಗೆ ಬ್ಯಾಂಕ್ ತಲುಪಿ ಒಡವೆಗಳನ್ನೂ, ಮನೆಯ ಕಾಗದಪತ್ರವನ್ನೂ ಇಟ್ಟು ೬೦ ಸಾವಿರ ರೂಪಾಯಿಗಳನ್ನು ಪಡೆದು ಬ್ಯಾಂಕಿನಲ್ಲಿದ್ದ ಹಣದಲ್ಲಿ ೧೦ ಸಾವಿರ ತೆಗೆದು ಉಳಿದ ಹಣ ಮನೆಯ ಖರ್ಚಿಗಾಗಿ ಇರಲಿ ಎಂದು ತಾಯಿಯವರಿಗೆ ತಿಳಿಸಿ ಅಮ್ಮಾ.. ಏನಿಲ್ಲ ಅಂದರೂ ಓವರ್ ಟೈಂ ಎಲ್ಲ ಸೇರಿ ೧೫-೨೦ ಸಾವಿರ ಸಂಬಳ ಬರಬಹುದು. ಬೇಗ ಸಾಲ ತೀರಿತೆಂದರೆ ನಮ್ರತಾಳ ಮದುವೆಯನ್ನೂ ಆದಷ್ಟು ಬೇಗ ಮಾಡಿಮುಗಿಸಬಹುದು ಚಿಂತೆಮಾಡಬೇಡಮ್ಮಾ ಎಂದು ಹೇಳಿದರೂ ಒಡವೆ, ಮನೆಯ ಕಾಗದ ಪತ್ರ ಬ್ಯಾಂಕಿನೊಳಗೆ ಸೇರಿದುದರಿಂದ ಮನದಲ್ಲಿ ದುಗುಡ ತುಂಬಿಕೊಂಡೇ ಇತ್ತು.

ಅಂದೇ ಸಂಜೆ ಮುಂಬಯಿಗೆ ಹೊರಟ ಮಗನನ್ನು ಕಂಡು ಹೆತ್ತಬ್ಬೆಯ ಕರುಳು ನೊಂದಿತು.ಎನ್ದೂ ನಮ್ಮನ್ನು ಬಿಟ್ಟು ದೂರವಿರದ ಈಗ ಎರಡು ವರ್ಷಕ್ಕಾಗಿ ದೇಶವನ್ನು ಬಿಟ್ಟು ದೂರದ ಊರಿಗೆ ಪಯಣಿಸುತ್ತಿದ್ದಾನೆ. ಆದರೂ ಅವನ ಗುರಿ ತಲುಪಲು ಈ ನಿರ್ಗಮನ ಅನಿವಾರ್ಯವಾಗಿತ್ತು. ಮಗನ ಯಶಸ್ಸಿಗಾಗಿ ಮನಸಾರೆ ಹರಸಿದಳು ಆ ಮಾತೆ. ತನ್ನ ಸ್ನೇಹಿತ, ಮಾರ್ಗದರ್ಶಿ, ಆಟ,ಕೀಟಲೆಗಳ ಸಂಗಾತಿ ಪ್ರೀತಿಯ ಅಣ್ಣ ದೂರ ಹೋಗುತ್ತಿರುವುದನ್ನು ಸಹಿಸಲಾರದೆ ನಮ್ರತಾ ಅಣ್ಣನನ್ನು ಅಪ್ಪಿ ಹಿಡಿದು ರೋದಿಸತೊಡಗಿದಳು. ಅವಳನ್ನು ಸಮಾಧಾನಿಸಿ ಆಗಾಗ ಪಕ್ಕದ ಶಾಂತಕ್ಕನವರ ಮನೆಗೆ ಫೋನ್ ಮಾಡುತ್ತೇನೆ. ಜಾಗ್ರತೆಯಲ್ಲಿರಿ. ಅಮ್ಮನನ್ನು ನೋಡಿಕೊಳ್ಳು ನಮ್ರತಾ... ನಮ್ರತಾ ಜಾಗ್ರತೆ ಅಮ್ಮಾ... ಎನ್ನುತ್ತಲೇ ಬಸ್ಸನ್ನೇರಿದ.

ಮುಂಬಯಿ ತಲ್ಪಿದ ನವೀನ್ ಅಂದೇ ಏಜೆನ್ಸಿಗೆ ಹೋಗಿ ಹಣ ಕೊಟ್ಟು ಇತರ ಅವಶ್ಯಕತೆಗಳನ್ನು ಪೂರೈಸಿದಾಗ ೪-೫ ದಿನಗಳಲ್ಲೇ ಹೊರಡಬಹುದು ಎಂದರು. ಹಣ ಬೇಕಾ ನವೀನ್ ಎಂದು ಚಿಕ್ಕಪ್ಪನೇ ಕೇಳಿದಾಗ ಬೇಡ ಅಂಕಲ್ ಥ್ಯಾಂಕ್ಸ್, ವ್ಯವಸ್ಥೆಯಾಗಿದೆ ಎಂದು ಹೇಳಿದ. ಎಂಟೇ ದಿನಗಳಲ್ಲಿ ವೀಸಾ ಟಿಕೆಟ್ ರೆಡಿಯಾಗಿ ಚಿಕ್ಕಪ್ಪ, ಚಿಕ್ಕಮ್ಮನವರ ಕಾಲಿಗೆರಗಿ ರಾಕೇಶ್ ನೊಂದಿಗೆ ಏರ್ಪೋರ್ಟ್ ತಲಿದಾಗ ನವೀನ್ನಸನ್ನು ಆಲಂಗಿಸಿಕೊಂಡ ರಾಕೇಶ್ ಬೆಸ್ಟ್ ಆಫ್ ಲಕ್ ನವೀನ್... ಹ್ಯಾವ್ ಪ್ಲೀಸೆಂಟ್ ಜರ್ನಿ ಎಂದ. ಕಣ್ಣು ಮಂಜಾದರೂ ತೋರ್ಪಡಿಸದೇ ಏರ್ಪೋರ್ಟ್ ನ ಒಳ ನಡೆದ ನವೀನ್. ಇನ್ನೂ ಹತ್ತಾರು ಮಂದಿ ಅವನು ಹೋಗುತ್ತಿರುವ ಕಂಪೆನಿಗೇ ಹೋಗುತ್ತಿರುವವರ ಭೇಟಿಯಾದುದರಿಂದ ಸ್ವಲ್ಪ ಸಮಾಧಾನವಾದರೂ ಎಲ್ಲರೂ ಹೊಸಬರೇ...

ಗಲ್ಫ್ ಸೇರಿದ ನವೀನ್ ಅಲ್ಲಿನ ಸರಕಾರೀ ನಿಯಮ ಇತರ ಅಗತ್ಯತೆಗಳು ಮುಗಿದ ನಂತರ ಕೆಲಸಕ್ಕೆ ಹಾಜರಾದ. ಎಲ್ಲವೂ ನವನವೀನ. ತನ್ನ ಹುಟ್ಟೂರಿಗೂ ಈ ಊರಿಗೂ ಎಳ್ಳಷ್ಟೂ ತಾಳೆಯಾಗದಂತಹ ಅಜಗಜಾಂತರ ವ್ಯತ್ಯಾಸ. ಎಲ್ಲೆಲ್ಲೂ ಹಸಿರು ತೋರಣ ಕಟ್ಟಿದಂತೆ ಮರಗಿಡಗಳಿಂದ ತುಂಬಿ ಕಂಗೊಳಿಸುತ್ತಿರುವ ತನ್ನೂರು... ಕಣ್ಣಿನ ದೃಷ್ಟಿ ಹಾಯುವ ತನಕವೂ ಕಾಣಿಸುತ್ತಿರುವ ಮರಳಿನ ದಿನ್ನೆಗಳ ಮೈದಾನದಂತಹ ಈ ಊರು! ಮನಸ್ಸಿಗೆ ಆಹ್ಲಾದಕರ, ಪ್ರಫುಲ್ಲತೆ ನೀಡುವ ತಂಪಾದ ವಾತಾವರಣದ ತನ್ನ ಊರು, ಶುಷ್ಕತೆ, ಆರ್ಧತೆ, ಸುಡು ಬಿಸಿಲಿನ ಝಳದಿಂದ ತಳಮಳಿಸುವ ಈ ಊರು... ಏನೇ ಇರಲಿ, ಈಗ ಇದೇ ನನ್ನ ಊರು ದೇಶ ಎಂದು ತದೇಕ ಚಿತ್ತದಿಂದ, ತನ್ಮಯತೆಯಿಂದ ತನಗೊಪ್ಪಿಸಿದ ಕರ್ತವ್ಯ ಮಾಡುತ್ತಿದ್ದ. ಬೆಳಿಗ್ಗೆ ೬ ರಿಂದ ಸಂಜೆ ೬ ರ ತನಕ ಕೆಲವೊಮ್ಮೆ ೮ ಗಂಟೆಯ ತನಕ ಕೆಲಸ. ಒಳ್ಳೆ ಓವರ್ ಟೈಮ್ ದೊರಕುತ್ತಿತ್ತು. ಹವಾಮಾನಕ್ಕೆ ಒಗ್ಗಿಕೊಳ್ಳಲು ತುಸು ಕಷ್ಟವಾದರೂ ಬೇಸರಿಸದೆ ತಾನಿಟ್ಟಿರುವ ಗುರಿಯನ್ನು ನೆನೆದುಕೊಂಡು ದುಡಿಯುತ್ತಿದ್ದ. ಇಲೆಕ್ಟ್ರಿಕಲ್ ವೃತ್ತಿಯಲ್ಲಿ ಉತ್ತಮ ಅನುಭವವಿರುವ ನವೀನ್ನುನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಕಂಪೆನಿಯಿಂದ ದೊರೆತ ಸ್ವಲ್ಪ ಎಡ್ವಾನ್ಸ್ ಹಣದಲ್ಲಿ ಊರಿನ ನೆರೆಮನೆಗೆ ಫೋನ್ ಮಾಡಿ ಅಮ್ಮ, ತಂಗಿಯೊಂದಿಗೆ ಮಾತಾಡಿ ಒಳ್ಳೆ ಸಂಬಳ ಸಿಗಬಹುದು ಅಮ್ಮಾ... ಚಿಂತಿಸಬೇಡಿ. ನಮ್ಮ ಸಾಲವನ್ನೆಲ್ಲಾ ಆದಷ್ಟು ಬೇಗ ಸಂದಾಯ ಮಾಡೋಣ ಎಂದಾಗ ಅಮ್ಮನೂ ಸಮಾಧಾನದಿಂದ ನಿಟ್ಟುಸಿರು ಬಿಟ್ಟರು.

ರಾತ್ರೆ ಮಲಗಿರುವಾಗ ನವೀನ್ ನ ನೆನಪುಗಳು ಸ್ವಲ್ಪ ಸ್ವಲ್ಪವೇ ಹಿಂದೆ ಸರಿದವು. ತಾನು ೧೦-೧೨ ವರ್ಷದವನಿರುವಾಗಲೇ ಅಪಘಾತವೊಂದರಲ್ಲಿ ತಂದೆ ತೀರಿಕೊಂಡದ್ದು, ಇದ್ದ ಹೊಲಿಗೆಯಂತ್ರದೊಂದಿಗೆ ತಾನೂ ಯಂತ್ರವಾಗಿ ತಾಯಿ ತನ್ನನ್ನೂ ತಂಗಿಯನ್ನೂ ಓದಿಸಿದ್ದು, ತಾನು ಎಸ್.ಎಸ್.ಸಿ. ಮುಗಿಸಿದ ನಂತರ ಐ.ಟಿ.ಐ. ಮುಗಿಸಿ ಕೆಲಸ ಆರಂಭಿಸಿದ್ದು, ತಾನು ತರುವ ಸಂಬಳದಿಂದ ಮನೆಯ ಖರ್ಚೇನೂ ಸಾಗುತ್ತಿದ್ದರೂ ತಂಗಿಯ ಮದುವೆ, ಶಿಥಿಲಗೊಂಡಿದ್ದ ಮನೆ , ತಾಯಿಯನ್ನು ಹೊಲಿಗೆ ಯಂತ್ರದಿಂದ ಬಿಡುಗಡೆ ಮಾಡುವುದು. ಇನ್ನೂ ಏನೇನೋ...ನೆನಪಿಗೆ ಬರುತ್ತಲಿತ್ತು. ಹಾಗೆ ನೋಡಿದರೆ ನವೀನ್ ತುಂಬಾ ಕಷ್ಟದಿಂದ ದುಡಿಯುತ್ತಲಿದ್ದ. ಕೆಲಸ ಮಾಡುತ್ತಿದ್ದಲ್ಲಿ ಸಹಿಸಲಾರದ ಆರ್ಧ್ರತೆ, ಧರಿಸಿದ ಸಮವಸ್ತ್ರ ಒದ್ದೆಯಾಗಿ ನೀರಿಳಿಯುತ್ತಿತ್ತು. ಅಡುಗೆ ಕೂಡ ತಾನೇ ಮಾಡಿಕೊಳ್ಳಬೇಕಾಗಿತ್ತು. ಅಡುಗೆಯಲ್ಲಿ ಏನೇನೂ ಅನುಭವವಿಲ್ಲದಿದ್ದರೂ ಏನೋ ಹಸಿಬಿಸಿ ಮಾಡಿಕೊಂಡು ತಿನ್ನಲೇಬೇಕಾಗಿತ್ತು. ಅವಿವಾರ್ಯತೆ ಮನುಷ್ಯನಿಂದ ಎಂತಹ ಕೆಲಸವನ್ನೂ ಮಾಡಿಸುತ್ತದೆ ಎಂಬ ಮಾತು ಸುಳ್ಳಲ್ಲ. ಎಂತಹ ಕಷ್ಟವೇ ಬರಲಿ ಎದೆಯೊಡ್ಡಿ ನಿಂತು ಜೀವನದಲ್ಲಿ ತಾನಿರಿಸಿಕೊಂಡ ಗುರಿ ತಲುಪಲು ದ್ರಢ ನಿರ್ಧಾರ ಮಾಡಿಕೊಂಡಾಗಿದೆ ತಾನು ದುಡಿಯುವ ಲೆಕ್ಕದಲ್ಲಿ ೧೫ ಸಾವಿರಕ್ಕಿಂತ ಮಿಕ್ಕಿ ಸಂಬಳ ಸಿಗಬಹುದು. ತನ್ನ ಊಟದ ಖರ್ಚಿಗೆ ಸ್ವಲ್ಪ ಉಳಿಸಿಕೊಂಡು ಮತ್ತೆಲ್ಲವನ್ನು ಊರಿಗೆ ಕಳುಹಿಸಬಹುದು. ಪರಮಾತ್ಮನ ದಯೆಯಿಂದ ನಮ್ಮ ಸಂಕಷ್ಟಗಳಿಗೆಲ್ಲ ನಿಧಾನವಾಗಿಯಾದರೂ ಅಂಕದ ಪರದೆ ಎಳೆಯಬಹುದು... ಯೋಚನೆಗಳ ಸರಮಾಲೆ ಮುಂದುವರಿಯುತ್ತಿರುವಂತೆಯೇ ನಿದ್ರಾದೇವಿ ಆತನನ್ನು ಆಲಂಗಿಸಿದಳು.

ನವೀನ್ ಬಂದು ತಿಂಗಳು ಒಂದು ಕಳೆಯಿತು. ಒಂದೂವರೆ ತಿಂಗಳಾಯಿತು. ಸಂಬಳ ಸಿಗಲಿಲ್ಲ. ಸಿಕ್ಕಿದ ಅಡ್ವಾನ್ಸ್ ಹಣ ಖರ್ಚಾಗಿ ಊಟಕ್ಕೆ ಹಣವಿರಲಿಲ್ಲ. ಸಮೀಪದಲ್ಲಿದ್ದ ಭಾರತೀಯನೊಬ್ಬನ ಅಂಗಡಿಯಿಂದ ಕಡವಾಗಿ ಸಾಮಾನು ತರುತ್ತಿದ್ದರು. ಎಲ್ಲರೂ ಹೊಸಬರಾದ್ದರಿಂದ ಸಂಬಳದ ಬಗ್ಗೆ ವಿಚಾರಿಸಲು ಭಯ. ತಿಂಗಳೆರಡು ಕಳೆಯಿತು. ನವೀನ್ ಗೆ ಆತಂಕವಾಗತೊಡಗಿತು. ಊರಿನಲ್ಲಿ ಬ್ಯಾಂಕ್ ಸಾಲ, ಮನೆಖರ್ಚು. ಸುಪರ್ ವೈಸರ್ ಒಬ್ಬರಲ್ಲಿ ನಿಧಾನವಾಗಿ ವಿಚಾರಿಸಿದಾಗ ಸಿಗಬಹುದು ಎಂಬ ಉತ್ತರ ದೊರಕಿತೇ ವಿನಹ ಯಾವಾಗೆಂದಿಲ್ಲ. ತಿಂಗಳು ಮೂರಾಯಿತು... ಸಂಬಳದ ಸುದ್ದಿಯಿಲ್ಲ. ಬ್ಯಾಂಕಿನವರು ರಗಳೆ ಮಾಡುತ್ತಿದ್ದಾರೆಂದು ತಾಯಿಯ ಪತ್ರ. ಇವನೊಂದಿಗೆ ಬಂದವರೆಲ್ಲಾ ಒಂದಿಲ್ಲೊಂದು ತೊಂದರೆಯಿಂದಲೇ ಬಂದವರು. ತಿಂಗಳು ನಾಲ್ಕಾಯಿತು, ಐದಾಯಿತು. ಎಲ್ಲರ ಕಣ್ಣುಗಳಲ್ಲಿ ಭಯ, ಆತಂಕ ತುಂಬಿಕೊಂಡಿದ್ದರೂ ಕೆಲಸ ಮಾತ್ರ ಓವರ ಟೈಮ್ನೊಂಬದಿಗೆ ನಡೆದೇ ಇತ್ತು. ಇತ್ತ ಅಂಗಡಿಯವನು ಕೂಡಾ ಕಿರಿ ಕಿರಿ ಮಾಡಲಾರಂಭಿಸಿದ್ದ. ಸಣ್ಣ ಅಂಗಡಿ, ಅವನಾದರೂ ಎಷ್ಟೆಂದು ಕಡ ಕೊಟ್ಟಾನು? ನವೀನ್ಗೆತ ಬ್ಯಾಂಕಿನಿಂದ ಪತ್ರ ಬಂತು. ಹಣ ಕಟ್ಟುವ ಬಗ್ಗೆ, ಆದಷ್ಟು ಬೇಗ ಕಟ್ಟ ಬೇಕೆಂಬ ಒತ್ತಾಯ. ತನ್ನ ಖಾತೆಯಲ್ಲಿ ಬಾಕಿ ಉಳಿದಿರುವ ೧೦ ಸಾವಿರವನ್ನು ಸಾಲಕ್ಕೆ ವಜಾ ಮಾಡಿಕೊಳ್ಳಿರಿ ಬೇರೆ ಹಣದ ವ್ಯವಸ್ಥೆ ಆದಷ್ಟು ಬೇಗ ಮಾಡುತ್ತೇನೆಂದು ಬ್ಯಾಂಕಿಗೆ ಉತ್ತರಿಸಿ, ತಾಯಿ, ತಂಗಿಗೂ ಧೈರ್ಯ ಹೇಳಿ ಬರೆದರೂ ಮನಸ್ಸಿನ ಮೂಲೆಯಲ್ಲಿ ಅದ್ಯಾವುದೋ ಅವ್ಯಕ್ತ ಭಯ. ತಿಂಗಳು ಆರು ಕಳೆದು ಏಳು ತಿಂಗಳು ಪೂರ್ತಿಯಾದರೂ ಸಂಬಳ ಮಾತ್ರ ಉಹುಂ...

ಒಂದು ದಿನ ನವೀನ್ನೊಂ ದಿಗೇ ಕೆಲಸ ಮಾಡುತ್ತಿರುವ ನೆರೆ ರಾಜ್ಯದವರಾದ ೧೦-೧೫ ಮಂದಿ ಇನ್ನು ಕಾದರಾಗದು ೮ ತಿಂಗಳಾಗುತ್ತಿದೆ, ಲೇಬರ್ ಕೋರ್ಟಿಗಾದರೂ ದೂರು ಕೊಡುವುದೊಳ್ಳೆಯದೆಂದು ಯೋಚಿಸಿ ನವೀನ್ನತನ್ನೂ ಕರೆದೊಯ್ದು ದೂರು ಸಲ್ಲಿಸಿದರು. ದೂರು ಅಲ್ಲಿನ ರಾಯಭಾರಿ ಕಚೇರಿಗೂ ತಲ್ಪಿತು. ಅವರು ಪೋಲೀಸ್ ಮುಖಾಂತರ ಆ ಕಂಪೆನಿಯ ಮಾಲೀಕರನ್ನು ಕರೆದು ವಿಚಾರಣೆ ನಡೆಸಿದಾಗ ಕಂಪೆನಿ ನಷ್ಟದಲ್ಲಿದೆ ಏನು ಮಾಡಲೂ ನನ್ನಲ್ಲಿ ಹಣವಿಲ್ಲವೆಂದು ಕೈಮೇಲಕ್ಕೆತ್ತಿದ. ದೂರು ಕೋರ್ಟಿಗೆ ಹೋಯಿತು... ಕೋರ್ಟ್ ಕೂಡಾ ಇಂದು ಬನ್ನಿ ನಾಳೆ ಬನ್ನಿ ಎನ್ನುತ್ತಾ ಕೊನೆಯಲ್ಲಿ ಹಿಂತಿರುಗಿ ಹೋಗಲು ಟಿಕೆಟ್ ಕೊಟ್ಟು ಕೂಡಲೇ ಅವರನ್ನು ಅವರವರ ದೇಶಕ್ಕೆ ಕಳುಹಿಸತಕ್ಕದ್ದು ಎಂದು ಮಾಲೀಕರಿಗೆ ತಾಕೀತು ಮಾಡಿ ತೀರ್ಪಿತ್ತಿತು.

ತೀರ್ಪು ಕೇಳಿದ ನವೀನ್ ನ ಹೃದಯವೇ ನಿಂತ ಅನುಭವ. ಅಲ್ಲೇ ಕುಸಿದು ಕುಳಿತ. ಅಮ್ಮ ಮಗಳ ಮದುವೆಗಿರಲಿ ಎಂದು ಜಾಗ್ರತೆಯಾಗಿರಿಸಿದ್ದ ಒಡವೆಗಳನ್ನೆಲ್ಲ ನುಂಗಿ ನೀರು ಕುಡಿದಂತಾಗಿದೆ. ಮನೆ, ಜಾಗ ಬ್ಯಾಂಕಿನಲ್ಲಿದೆ. ೮ ತಿಂಗಳ ಬಡ್ಡಿ ಬೆಳೆದಿದೆ. ಊರಿನಲ್ಲಿ ದುಡಿದು ಈ ಸಾಲ ತೀರಿಸುವುದು ಖಂಡಿತಾ ಅಸಾಧ್ಯದ ಮಾತು. ಮುಂದಿನ ದಾರಿಯೇ ಕಾಣುತ್ತಿರಲಿಲ್ಲ. ಸಹೋದ್ಯೋಗಿಗಳು ಸಮಾಧಾನಿಸಿ ರೂಮಿಗೆ ಕರೆದುಕೊಂಡು ಬಂದರು.

ನವೀನ್ಗೆಗ ರಾತ್ರೆ ಊಟ ಮಾಡಲಾಗಲಿಲ್ಲ. ಹಾಗೇ ಮಲಗಿದ್ದ...ನಿದ್ದೆ ಹತ್ತಿರ ಸುಳಿಯುತ್ತಿರಲಿಲ್ಲ. ಏನೇನೋ ಯೋಚನೆಗಳೆಲ್ಲ ಸಮುದ್ರದ ಅಲೆಗಳಂತೆ ಮನಸ್ಸಿಗೆ ಬಡಿದು ವಾಪಾಸಾಗುತ್ತಿದ್ದುವು. ಭವಿಷ್ಯವು ಬೃಹತ್ ಪ್ರಶ್ನೆಯಾಗಿ ಎದುರು ಬಂದು ನಿಂತಿತ್ತು. ಕೊನೆಯಲ್ಲಿ ಏನೋ ಒಂದು ತೀರ್ಮಾನಕ್ಕೆ ಬಂದವನಂತಾಗಿದ್ದ.

ಮರುದಿನ ಎಲ್ಲರೂ ಭಾರತಕ್ಕೆ ತೆರಳಬೇಕು. ೯ ಗಂಟೆಗೆಲ್ಲ ರಾಯಭಾರಿ ಕಚೇರಿಗೆ ಬರಹೇಳಿದ್ದರಿಂದ ಎಲ್ಲರೂ ಬೇಗ ಎದ್ದು ತಯಾರಾಗಿದ್ದರು. ನವೀ‍ನನ್ನು ಕರೆಯಲು ಅವನ ರೂಮಿಗೆ ಬಂದು ಬಾಗಿಲು ತಟ್ಟುವಾಗ ಬಾಗಿಲು ತಂತಾನೇ ತೆರೆದುಕೊಂಡಾಗ ಒಳಗಿನ ಆ ದೃಶ್ಯ ಕಂಡು ಎಲ್ಲರಿಗೂ ಒಮ್ಮೆಲೇ ಬರಸಿಡಿಲು ಎರಗಿದಂತಾಯಿತು. ನವೀನ್ ತನ್ನ ಹಾಸಿಗೆಯ ಹೊದಿಕೆಯನ್ನೇ ಕುತ್ತಿಗೆಗೆ ಉರುಳು ಬಿಗಿದು ಶವವಾಗಿ ನೇತಾಡುತ್ತಿದ್ದ. ತಾಯಿ, ತಂಗಿಯವರಿಗೆ ಕೊಟ್ಟಿದ್ದ ಆಶ್ವಾಸನೆ, ತಾನು ತನ್ನಲ್ಲೇ ಇರಿಸಿಕೊಂಡಿದ್ದ ಆತ್ಮವಿಶ್ವಾಸ ಹಾಗೂ ತನ್ನ ಗುರಿಯ ಜವಾಬ್ದಾರಿಯನ್ನು ಸಂಪೂರ್ಣ ತೊರೆದು ಮುಂದೆಂದಿಗೂ ಹಿಂದೆ ಬರಲಾಗದ ದೂರದ ಆ ಊರಿಗೆ ಪ್ರಯಾಣ ಮಾಡಿದ್ದ. ಜೀವನಕ್ಕೆ ಬೆನ್ನು ತಿರುಗಿಸಿ ಓಡಿಹೋಗುವುದು ಬಹಳ ಸುಲಭ... ಆದರೆ ಅದೇ ಜೀವನದಲ್ಲಿ ಎದುರಾಗುವ ಕಷ್ಟಕಾರ್ಪಣ್ಯ, ದುಖಃ ಧಾರಿದ್ರ್ಯಗಳ ಬವಣೆಗಳನ್ನು ಧೈರ್ಯದಿಂದ ಎದುರಿಸಿ ಬದುಕಿದರೆ ಅದಕ್ಕೆ ಬರುವ ಮಹತ್ವವನ್ನು ತಿಳಿಯಲಾರದೇ ಆತ್ಮಹತ್ಯೆಯಂತಹ ಹೀನ,ಧೀನ ಕಾರ್ಯಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದ.

ಪೋಲೀಸಿನವರು ಬಂದು ಶವ ಕೆಳಗಿಳಿಸಿದರು. ಆತನ ಕೈಯಲ್ಲೊಂದು ಪತ್ರ ಕಂಡು ಕನ್ನಡ ಬಲ್ಲವರನ್ನು ಕರೆಸಿ ಓದಿಸಿದಾಗ...

"ಅಮ್ಮಾ... ತಪ್ಪು ಮಾಡುತ್ತಿದ್ದೇನೆ. ನಿಮಗೂ ನಮ್ರತಾಳಿಗೂ ಆಧಾರ ಸ್ಥಂಭವಾಗಿರಬೇಕಾಗಿದ್ದ ನಾನೇ ಕುಸಿದಿದ್ದೇನೆ. ರಾತ್ರೆಯಿಡೀ ಯೋಚಿಸಿದೆ ಅಮ್ಮಾ... ಯಾವುದೇ ಮಾರ್ಗ ಗೋಚರಿಸಲೇ ಇಲ್ಲ. ನನ್ನ ಈ ಪಲಾಯನ ಸೂತ್ರಕ್ಕೆ ಖಂಡಿತವಾಗಿಯೂ ಯಾರೂ ನನ್ನನ್ನು ಕ್ಷಮಿಸಲಾರರು. ಆದರೂ ಅನ್ಯ ದಾರಿಯೇ ನನಗಿರಲಿಲ್ಲ. ನಿಮ್ಮಿಬ್ಬರನ್ನೂ ನಡುನೀರಿನಲ್ಲಿ ಬಿಟ್ಟು ಹೋಗುತ್ತಿರುವ ನನ್ನನ್ನು ಕ್ಷಮಿಸಿ ಅಮ್ಮ...

ನನ್ನ ಈ ರೀತಿಯ ನಿರ್ಗಮನದಿಂದ ನನ್ನಂತೆಯೇ ಜಾಗ, ಮನೆ, ಚಿನ್ನ, ಬಂಗಾರ ಅಡವಿಟ್ಟು ಮರೀಚಿಕೆಯ ಬೆನ್ನತ್ತಿ ಗಲ್ಫ್ ಗೆ ಬರಲಿಚ್ಚಿಸುವ ನನ್ನಂತಹ ಇತರ ಯುವಜನತೆಗಾದರೂ ಒಂದು ಸಂದೇಶ ನನ್ನಿಂದಾದೀತು ಎಂದು ನಂಬುತ್ತೇನೆ...ಎಲ್ಲರಿಗೂ ನಮಸ್ಕಾರ"

-ವಿಜಯ್ ಬಾರ್ಕೂರು , ಕತಾರ್.

ಉಡುಪಿ ಜಿಲ್ಲೆಯ ಹೆಸರು ವಿಜಯ್ ಸುವರ್ಣ ವಿಜಯ್ ಬಾರ್ಕೂರು ಹೆಸರಿನಲ್ಲಿ ಪರಿಚಿತರು. ಪ್ರಸ್ತುತ ಕೊಲ್ಲಿರಾಷ್ಟ್ರವಾದ ಕತಾರ್ ನಲ್ಲಿನ ಅಂತರಾಷ್ಟ್ರೀಯ ಇಂಜಿನಿಯರಿಂಗ್ ಸಂಸ್ಥೆಯೊಂದರಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ.ಇದೀಗ ಅಭಿಮಾನದಿಂದ ಈ ಕನಸಿಗೆ ಕಥೆ ಬರೆಯುತ್ತಿದ್ದಾರೆ.

0 comments:

Post a Comment