ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೃಶ್ಯ ಮಾಧ್ಯಮದ ನೆನಪಿನ ಸವಾರಿ...

ಲೇಖನ ಮಾಲೆ ಕೊನೆಯ ಕಂತು
`...ಕಣ್ಣ ಬಿಂಬಕೆ' ಕ್ಯಾಮರಾ ಕಣ್ಣು!!

ತಾಳ್ಮೆಯಿದ್ದರೆ ಕಥೆ ಕಾದಂಬರಿಗಳನ್ನು ಬರೆಯುವುದು ಸುಲಭ. ಆದರೆ ಅವುಗಳಿಗೊಂದು ಶೀರ್ಷಿಕೆ ನೀಡುವುದು ಕಷ್ಟದ ಕೆಲಸ. ಇದು ನನ್ನ ಅಭಿಪ್ರಾಯ. ಕೆಲವೊಮ್ಮೆ ಕಥೆ/ ಕಾದಂಬರಿಯನ್ನು ಬರೆದು ಎಷ್ಟೋ ಸಮಯವಾದರೂ ಅರ್ಥಪೂರ್ಣ ಶೀರ್ಷಿಕೆ ಹೊಳೆಯದೆ ಅವುಗಳು ಕಂಪ್ಯೂಟರ್ನಲ್ಲಿ ಹಾಗೆ ಉಳಿದು ಬಿಡುವುದಿದೆ.ಹಾಗೆ ಒಂದು ಜನಪ್ರಿಯ ಪತ್ರಿಕೆಗಾಗಿ ಬರೆದು ಮುಗಿಸಿದ ಸಸ್ಪೆನ್ಸ್ ಕಾದಂಬರಿಗೆ ಸರಿಯಾದ ಶೀರ್ಷಿಕೆ ಇಲ್ಲದೆ ಫೈಲ್ನಲ್ಲಿಯೆ ಬಾಕಿಯಾಗಿತ್ತು. ಆ ಸಮಯದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ನನ್ನ ಗೆಳೆಯ ಕಥೆಗಾರ, ವಿಮರ್ಶಕರಾದ ನರೇಂದ್ರ ಪೈ ಅವರ ಕಥೆಗಳನ್ನು ಝೆರಾಕ್ಸ್ ಮಾಡಿ ಓದುತ್ತಿದ್ದೆ. ಅವರು ಬರೆದ ಒಂದು ಕಥೆಯ ಶೀರ್ಷಿಕೆ ನನ್ನನ್ನು ಬಹಳವಾಗಿ ಕಾಡುತ್ತಿತ್ತು. ನಾನು ಆ ಹೆಸರನ್ನೇ ನನ್ನ ಕಾದಂಬರಿಗೆ ನಾಮಕರಣ ಮಾಡಬೇಕೆಂದುಕೊಂಡು ಅಳುಕಿನಿಂದಲೇ ಅವರನ್ನು ಕೇಳಿದೆ.


ಛೆ! ಅದಕ್ಕೆ ಯಾಕೆ ಹಾಗೆ ಕೇಳ್ತೀರಿ? ಬಳಸಿಕೊಳ್ಳಿ... ನನ್ನ ಅನುಮತಿಯ ಅವಶ್ಯಕತೆಯಿಲ್ಲ ಅಂದರು. ಅದು ಅವರ ದೊಡ್ಡತನವನ್ನು ತೋರಿಸಿತು. ಕೊನೆಗೆ ಅದೇ ಶೀರ್ಷಿಕೆಯಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡು ನನ್ನ ಕಾದಂಬರಿಗೆ `ನಿನ್ನ ಕಣ್ಣ ಬಿಂಬದಿ ನಾನಿಲ್ಲವೇ?!...' ಅನ್ನೋ ನಾಮಕರಣ ಮಾಡಿ `ಕರ್ಮವೀರ' ಪತ್ರಿಕೆಗೆ ಕಳುಹಿಸಿದೆ. ಕೇವಲ ಹದಿನೈದೇ ಕಂತುಗಳಿದ್ದ ಆ ಧಾರಾವಾಹಿಯನ್ನು ಓದಿ ಪ್ರಕಟಿಸುವುದಾಗಿ ಸಂಪಾದಕರಿಂದ ಉತ್ತರ ಬಂತು. ಏತನ್ಮಧ್ಯೆ ಸಂಪಾದಕರ ಬಳಿ ನಾನು ಫೋಟೋಕಾಮಿಕ್ಸ್ ವಿಷಯ ಪ್ರಸ್ತಾಪಿಸಿದ್ದೆ. ಅವರು ಕಥೆ ಕಳುಹಿಸಿ ಪರಿಶೀಲಿಸಿ ತಿಳಿಸೋಣ ಅನ್ನುವ ಉತ್ತರ ನೀಡಿದರು. ಕೊನೆಗೆ ಯಾಕೋ ಯಾವುದೂ ಸರಿಯಾಗದೆ ನಾನು ಒತ್ತಡದಲ್ಲಿ ಸಿಲುಕಿದೆ. ಪರಿಣಾಮವಾಗಿ ನನ್ನ ಫೋಟೋಕಾಮಿಕ್ಸ್ ನ ಕಾರ್ಯ ನೆನೆಗುದಿಗೆ ಬಿತ್ತು. ಆದರೂ ನನಗೇನಾದರೂ ಹೊಸತನವನ್ನು ಕೊಡಬೇಕೆನ್ನುವ ಉದ್ದೇಶವಿತ್ತು. ಹಾಗಾಗಿ ಸಂಪಾದಕರಿಗೆ ಫೋನ್ ಮಾಡಿ, ಸಾರ್, ನನ್ನ ಕಾದಂಬರಿಗೆ ಸರಿಹೊಂದುವ ಹಾಗೆ ವಾರವಾರವೂ ರೂಪದರ್ಶಿಗಳನ್ನು ಹಾಕಿಕೊಂಡು ಸ್ಟಿಲ್ ಫೋಟೋಗಳನ್ನು ಕಳುಹಿಸಿದರೆ ಹೇಗೆ? ಅಂದೆ.

ಸರಿ, ಆದರೆ ರೂಪದರ್ಶಿಗಳ ಆಯ್ಕೆ ಸರಿಯಾಗಿರಲಿ ಅಂದರು.

ತಟ್ಟನೆ ನನಗೆ ನೆನಪಾಗಿದ್ದು ನನ್ನ ಹಿತೈಷಿ ಮಿತ್ರ, ಧರ್ಮಸ್ಥಳದ ಮಂಜುವಾಣಿ ಪತ್ರಿಕೆಯ ಪ್ರಬಂಧಕರಾದ ಶ್ರೀ ವರ್ಧಮಾನ್ ಅವರು. ತಕ್ಷಣ ಅವರನ್ನು ಭೇಟಿ ಮಾಡಿ, ನಾವು ಧಾರಾವಾಹಿಗಾಗಿ ಫೋಟೋಗಳನ್ನು ತೆಗೆದು ಪತ್ರಿಕೆಗಳಿಗೆ ಕಳುಹಿಸುವುದಕ್ಕಿದೆ. ರೂಪದರ್ಶಿಗಳಗಳ ಅಗತ್ಯವಿದೆ. ನಿಮಗೆ ಯಾರಾದರೂ ಪರಿಚಿತರಿದ್ದರೆ ಹೇಳಿ. ಆದಷ್ಟು ಬೇಗನೆ ಕೆಲಸ ಮುಗಿಯುವ ಹಾಗೆ ಆಗಬೇಕು ಅಂದೆ.

ಅವರು ಆಲೋಚಿಸಿ ನನ್ನನ್ನು `ನಿನಾಸಂ' ತರಬೇತು ಪಡೆದ ನಾಟಕದ ಮೇಷ್ಟ್ರು, ಶ್ರೀ ನವೀನ್ ಎಡಮಂಗಲ ಅವರನ್ನು ಪರಿಚಯಿಸಿದರು. ಅವರು ತಕ್ಷಣವೇ ಒಪ್ಪಿಗೆ ನೀಡಲಿಲ್ಲ. ನಿಮ್ಮ ಕಾದಂಬರಿಗೆ ಬೇಕಾಗಿರುವ ರೂಪದರ್ಶಿಗಳಗಳನ್ನು ಹುಡುಕುವುದು ಕಷ್ಟ. ನಮ್ಮ ವಿದ್ಯಾರ್ಥಿಗಳಿದ್ದಾರೆ. ಅವರ ಮನೆಯವರ ಅನುಮತಿ ತೆಗೆದುಕೊಳ್ಳಬೇಕು. ಶೂಟಿಂಗ್ ಸ್ಪಾಟ್ಗೆ ಬರಬೇಕು. ಹೀಗೆಲ್ಲಾ ರಾಮಾಯಣ ಇರುವಾಗ ಕಷ್ಟವೇ ಅಂದವರು, ಆದರೂ ಪ್ರಯತ್ನ ಮಾಡೋಣ ಅನ್ನುವ ಆಶ್ವಾಸನೆಯಿತ್ತರು.

ನೋಡಿ ಸಾರ್, ಧಾರಾವಾಹಿ ಆರಂಭವಾಗುವ ಮುನ್ನ ನಾನು ಫೋಟೋಗಳನ್ನು ಕಳುಹಿಸಬೇಕಿದೆ. ಅದರೊಳಗೆ ಮಾಡುವುದಕ್ಕೆ ಸಾಧ್ಯವಾದರೆ ಒಳ್ಳೆಯದು ಅಂದೆ. ಜೊತೆಗೆ, ಪ್ರಾಂಶುಪಾಲರ ಅನುಮತಿಯನ್ನು ತೆಗೆದುಕೊಂಡಿದ್ದೇನೆ. ನಮ್ಮಲ್ಲಿ ಆಸಕ್ತಿಯಿರೋ ಸಿಬಂದಿಗಳಾದರೂ ಪರವಾಗಿಲ್ಲ ಅಂದಾಗ ಅವರು, ಸರಿ ಸಾರ್, ವ್ಯವಸ್ಥೆ ಮಾಡೋಣ ಅನ್ನುವ ಭರವಸೆಯನ್ನು ಕೊಟ್ಟರು.

ವ್ಯವಸ್ಥೆಗಳು ಸರಿಯಾಗದೆ ಪ್ಲಾನೆಲ್ಲಾ ತಲೆಕೆಳಗಾದಂತೆ ಆಯಿತು. ಸಡನ್ನಾಗಿ ಪತ್ರಿಕಾ ಕಚೇರಿಯಿಂದ ಫೋನ್ ಬಂತು.


ನಿಮ್ಮ ಫೋಟೋಗಳು ಇನ್ನೂ ತಲುಪಿಲ್ಲ. ಕಾದಂಬರಿಯನ್ನು ಆರಂಭಿಸುತ್ತಿದ್ದೇವೆ ಅನ್ನುವಂತೆ. ತತ್ಕ್ಷಣ ಅವರಿಗೆ ಒಂದು ವಾರದೊಳಗೆ ಮಾಡಿಕೊಡುವುದಾಗಿ ಭರವಸೆಯನ್ನು ಕೊಟ್ಟು, ಮೇಷ್ಟ್ರನ್ನು ಹುಡುಕಿಕೊಂಡು ಬಂದೆ. ಅಷ್ಟರೊಳಗೆ ಆಸಕ್ತಿಯಿದ್ದ ನಮ್ಮ ಕೆಲವು ಸ್ಟಾಫ್ಗಳನ್ನು ಭೇಟಿಯಾಗಿ ವಿಷಯ ಪ್ರಸ್ತಾಪಿಸಿದೆ. ಕೆಲವರಂತೂ ಬಹಳ ಸಂತೋಷದಿಂದಲೇ ಒಪ್ಪಿಕೊಂಡರು. ಇನ್ನು ಕೆಲವರಂತು ಧೈರ್ಯ ತುಂಬಿಸಿದರು. ಅಷ್ಟರಲ್ಲಿ ನವೀನ್ ಮೇಷ್ಟ್ರು ಕೂಡ ಒಂದಿಬ್ಬರು ಫೀಮೇಲ್ ಕ್ಯಾರೆಕ್ಟರ್ಗೆ ಬೇಕಾದ ರೂಪದರ್ಶಿಗಳನ್ನು ಗೊತ್ತು ಪಡಿಸಿದರು. ನಾನು ನಿರಾಕರಿಸುವಂತೆಯೇ ಇರಲಿಲ್ಲ. ಒಪ್ಪಿಕೊಂಡು ಶೂಟಿಂಗ್ಗಾಗಿ ಮುಂದಿನ ಸಿದ್ಧತೆಗಳನ್ನು ಮಾಡಿಕೊಂಡೆ. ಹದಿನೈದು ಚಿತ್ರಗಳು ಮತ್ತು ಜಾಹೀರಾತಿಗಾಗಿ ನಾಲ್ಕು ಚಿತ್ರಗಳು. ಒಟ್ಟು ಹತ್ತೊಂಬತ್ತು ಚಿತ್ರಗಳು ಬೇಕಾಗಿದ್ದವು. ಅವಕ್ಕೆ ಸರಿಯಾದ ಲೊಕೇಶನ್ಗಳನ್ನು ಗುರುತಿಸಿಕೊಂಡು ಛಾಯಾಚಿತ್ರಗ್ರಾಹಕ ಅಭಿಷೇಕ್ ಮರಾಠೆಯವರ ಬಳಿ ಲೊಕೇಶನ್ಸ್ ಬಗ್ಗೆ ಪ್ರಸ್ತಾಪಿಸಿದೆ. ಗೆಳೆಯ ಕಿರಣ್ ಬಳಿ ಕೂಡ ಲೊಕೇಶನ್ ಬಗ್ಗೆ ಮಾತನಾಡಿ ಕೊನೆಗೆ ಚಾರ್ಮಾಡಿಯಲ್ಲಿ ಶೂಟಿಂಗ್ ನಡೆಸುವುದೆಂದು ನಿರ್ಧರಿಸಿದೆವು. ನವೀನ್ ಮೇಷ್ಟ್ರಿಗೂ ವಿಷಯ ತಿಳಿಸಿ ರೂಪದರ್ಶಿಗಳ ಮತ್ತು ಅವರ ಮನೆಯವರ ಅನುಮತಿಯನ್ನು ಪಡೆಯುವಂತೆ ಕೇಳಿಕೊಂಡೆ. ಅವರು ಅದಾಗಲೇ ಅದಕ್ಕೆ ಬೇಕಾಗಿದ್ದ ಎಲ್ಲಾ ಕೆಲಸಗಳನ್ನು ಮಾಡಿದ್ದರು. ಒಂದು ಆದಿತ್ಯವಾರದಂದು ನಮ್ಮ ಶೂಟಿಂಗ್ ಕೆಲಸ ಮಾಡಿ ಮುಗಿಸುವ ನಿರ್ಧಾರ ಮಾಡಿದೆ. ಅದಕ್ಕಾಗಿ ಎಲ್ಲಾ ರೂಪದರ್ಶಿಗಳಿಗೂ ಬೆಳಗ್ಗೆ ಒಂಬತ್ತು ಗಂಟೆಯೊಳಗಾಗಿ ಉಜಿರೆ ಬಸ್ ಸ್ಟಾಂಡ್ಗೆ ಬರುವಂತೆ ಸೂಚಿಸಿದೆವು. ಗೆಳೆಯ ಸಂಪತ್ ಕುಮಾರ್ ಅವರ ಒಮ್ನಿಯನ್ನು ನಮಗಾಗಿ ಸಿದ್ಧಗೊಳಿಸಿದರು. ನಾವು ಉಜಿರೆ ಬಸ್ಸ್ ಸ್ಟಾಂಡ್ನಲ್ಲಿ ಎಷ್ಟು ಹೊತ್ತು ಕಾದರೂ ಛಾಯಾಚಿತ್ರಗ್ರಾಹಕ ಬರಲೇ ಇಲ್ಲ. ಕಾದದ್ದೆ ಬಂತು. ಫೋನಾಯಿಸಿದರೆ `ಬರ್ತಾ ಇದ್ದೇನೆ' ಅಂತ ಉತ್ತರ. ಅವರ ಮನೆಯಿಂದ ಅಬ್ಬಬ್ಬ ಅಂದರೆ ಅರ್ಧಗಂಟೆ ದಾರಿಯಷ್ಟೆ. ಆದರೂ ಬರಲಿಲ್ಲವೆಂದರೆ? ಅನುಮಾನ ಮೂಡಿತು. ಕಿರಣ್ನನ್ನು ಕೇಳಿದೆ. ಅವರು ಫೋನಾಯಿಸಿದಾಗ ನಿಜ ಉತ್ತರ ಸಿಕ್ಕಿತು. ಅಂತು ಒಮ್ನಿಯಲ್ಲಿ ಕುಳಿತು ಚಾರ್ಮಾಡಿಯತ್ತ ಹೊರಟಾಗ ಮೆಲ್ಲಗೆ ಕೇಳಿದೆ, ಹೇಗಿದೆ ಈಗ? ಅಂತ. ಅವರು ನಕ್ಕು ಕಿರಣ್ನ ಮುಖ ನೋಡಿದರು. ಕೊನೆಗೆ ಹೊಟ್ಟೆಯನ್ನು ಮುಟ್ಟಿನೋಡಿ, ಈಗ ಓಕೆ ಅಂದರು ಒಳಗೊಳಗೆ ನಗುತ್ತಾ.

ಚಾರ್ಮಾಡಿ ತಲುಪುವಾಗ ಹನ್ನೊಂದು ಗಂಟೆಯಾಗಿತ್ತು. ಮೋಡಗಳ ಮೇಳ ಬೆಟ್ಟಗಳನ್ನು ಮುಚ್ಚಿದ್ದರಿಂದ ಬಿಸಿಲಿನ ತೀಕ್ಷಣತೆ ಅಷ್ಟೊಂದು ಇರಲಿಲ್ಲವಾಗಿ ಶೂಟಿಂಗ್ಗೆ ಏನೂ ತೊಂದರೆಯೆನಿಸಲಿಲ್ಲ. ಹೊಳ್ಳ ಆರ್ಟ್ಸ್ ನ ಮೇಕಪ್ ಮೇನ್ ರೂಪದರ್ಶಿಗಳಿಗೆ ಮೇಕಪ್ ಮುಗಿಸುತ್ತಲೇ ಒಂದೊಂದೇ ಸನ್ನಿವೇಶಗಳನ್ನು ನವೀನ್ ಮೇಷ್ಟ್ರ ನಿರ್ದೇಶನದಂತೆ ಚಿತ್ರೀಕರಿಸುತ್ತಾ ಸಮಯ ಸರಿದದ್ದೇ ತಿಳಿಯಲಿಲ್ಲ. ಕೊನೆಯ ದೃಶ್ಯವನ್ನು ಚಿತ್ರೀಕರಿಸುವಾಗ ಇನ್ನಿಬ್ಬರು ಗೆಳೆಯರಾದ ಗುರುರಾಜ್ ಮತ್ತು ಅಮರೇಶ್ ಹೆಬ್ಬಾರ್ ಬಂದು ನಮ್ಮನ್ನು ಸೇರಿಕೊಂಡರು. ಅವರ ತಮಾಷೆ, ನಗುವಿನ ಜೊತೆಗೆ ಶೂಟಿಂಗ್ ಮುಗಿಸಿ ಗುರಿಪಳ್ಳದ ಗುರುರಾಜ್ ಅವರ ಮನೆಯ ಸುತ್ತ ಮುತ್ತ ಚಿತ್ರೀಕರಣ ನಡೆಸುವುದಕ್ಕೆ ಹೊರಟೆವು. ಮನೆಯವರೆಲ್ಲ ದು:ಖದ ಛಾಯೆಯಲ್ಲಿದ್ದರು ನಮ್ಮನ್ನು ಔಪಚಾರಿಕವಾಗಿ ನಡೆಸಿಕೊಂಡದ್ದನ್ನು ನಾವು ಮರೆಯುವಂತಿಲ್ಲ. ಅಂತು ಸಂಜೆಯ ಸೂರ್ಯ ಕಂತುವ ಹೊತ್ತಿಗೆ ಕೊನೆಯ ಎರಡು ದೃಶ್ಯಗಳನ್ನು ಬೆನಕ ಹೆಲ್ತ್ ಸೆಂಟರ್ನಲ್ಲಿ ಚಿತ್ರೀಕರಿಸುತ್ತಲೇ ಶೂಟಿಂಗೇನೋ ಮುಗಿದಿತ್ತು. ಬಳಿಕ `ಸ್ವಪ್ನಾ'ಕ್ಕೆ ಬಂದು ಖುಷಿಯನ್ನು ಹಂಚಿಕೊಳ್ಳುತ್ತಾ ಶೂಟಿಂಗ್ನಲ್ಲಿ ನಡೆದ ಕೆಲವೊಂದು ಘಟನೆಗಳನ್ನು ಮೆಲುಕು ಹಾಕಿಕೊಂಡೆವು.

ಅದರಲ್ಲಿ ಮೊದಲನೆಯದಾಗಿ ಕಥೆಯ ನಾಯಕ ಮತ್ತು ನಾಯಕಿ ಇಬ್ಬರೂ ಮೇಲಿನಿಂದ ಕೆಳಕ್ಕೆ ದುಮುಕುವಂತೆ ಚಿತ್ರ ತೆಗೆಯಬೇಕಾಗಿತ್ತು. ರೂಪದರ್ಶಿ ಗಳಿಬ್ಬರೂ ಮೇಲೆ ಏರಿಯಾಗಿತ್ತು. ಅಲ್ಲೊಂದು ಮರದ ದೊಡ್ಡ ದಿಮ್ಮಿಯೊಂದು ಅಡ್ಡಲಾಗಿತ್ತು. ಅದರ ಮೇಲೆ ಕಾಲಿಟ್ಟ ನಾಯಕ ಕಿರಣ್ ಆಕ್ಷ್ಯನ್ ಕೊಡುವಾಗಲೇ ನಾಯಕಿ ಚೈತನ್ಯ ಹಾರಬೇಡ ಅನ್ನುವಂತೆ ಆಕ್ಷ್ಯನ್ ಮಾಡಬೇಕಾಗಿತ್ತು. ಅವಳು ಆಕ್ಷನ್ ಮಾಡುವಾಗಲೆ ಕಲ್ಲಿನಿಂದ ಜಾರಿ, ತಕ್ಷಣ ಕಿರಣ್ ನ ಭುಜಗಳನ್ನು ಹಿಡಿದುಕೊಂಡಳು. ಆಗ ಅವನಿಗೂ ಬ್ಯಾಲೆನ್ಸ್ ತಪ್ಪಿ ಇಬ್ಬರೂ ಜಾರಿ ಕೂಡಲೇ ಸಾವರಿಸಿಕೊಂಡರು. ಫೋಟೋ ತೆಗೆಯುತ್ತಿದ್ದ ಮರಾಠೆ, `ಕಂದಸ್ವಾಮಿ' ಅನ್ನುತ್ತಾ ತಮಾಷೆ ಮಾಡಲಾರಂಭಿಸಿದರು.

ಇಂತಹುದೇ ಇನ್ನೊಂದು ಸನ್ನಿವೇಶದಲ್ಲಿ ನಾಯಕಿ ಚೈತನ್ಯ ರಸ್ತೆಯ ನಡುವೆ ಬಿದ್ದಿರುವ ದೃಶ್ಯ. ಕೈಗೆ, ಹಣೆಗೆ ಮತ್ತು ಕಾಲುಗಳಲ್ಲಿ ಗಾಯವಾಗಿ ರಕ್ತ ಸುರಿಯುತ್ತಿರುವಾಗ ಡಾಕ್ಟರ್ ರೂಪದರ್ಶಿ , ಗುರುರಾಜ್ ಕಾರು ನಿಲ್ಲಿಸಿ ಕೆಳಗಿಳಿದು ಅವಳ ಹತ್ತಿರ ಬರುವ ದೃಶ್ಯ. ಅದನ್ನು ಚಿತ್ರೀಕರಿಸುವಾಗ ನಾಯಕಿ ಸೀರೆ ಉಟ್ಟಿದ್ದರಿಂದ ರಕ್ತದ ಬಣ್ಣ ಹಚ್ಚುವುದು ಕಷ್ಟವಾಗಲಿಲ್ಲ. ಬಟ್ಟೆಗಳಿಗೆ ಬಣ್ಣ ತಾಗದಂತೆ ಜಾಗ್ರತೆಯಿಂದ ಮೇಕಪ್ ಮಾಡಿ ರಸ್ತೆಯಲ್ಲಿ ಮಲಗಬೇಕಿತ್ತು. ಆಕೆ ಮೊದಲಿಗೆ ನೆಲದ ಮೇಲೆ ಮಲಗಲು ನಿರಾಕರಿಸಿದರೂ ಕೊನೆಗೆ ಒಪ್ಪಿಕೊಂಡು ಆಕ್ಷನ್ ಕೊಟ್ಟಾಗ ಚಿತ್ರೀಕರಣಕ್ಕೆ ಸರಿಯಾದ ಆಂಗಲ್ ಹುಡುಕುತ್ತಿದ್ದ ಅಭಿಷೇಕ್ ಶೂಟಿಂಗ್ ಡಿಲೆ ಮಾಡುತ್ತಲೇ ನಾಯಕಿ ಅಳುವುದಕ್ಕೆ ಶುರು ಮಾಡಿದಾಗ ನಮಗೆಲ್ಲ ಗಾಬರಿಯಾಯಿತು. ಏನಾಯ್ತು? ಎಂದು ಔಪಚಾರಿಕವಾಗಿ ಕೇಳುವಾಗ ಆಕೆ, ಸಾರ್, ಶೂಟಿಂಗ್ ಬೇಗ ಮುಗಿಸಿ ಅನ್ನುವುದಕ್ಕೆ ಶುರು ಮಾಡಿದಳು

ಯಾಕೆ ಏನಾಯ್ತು? ಅನ್ನುತ್ತಿರುವಾಗಲೇ ಶೂಟಿಂಗ್ ಮುಗಿದಿತ್ತು. ಆಕೆ ಎದ್ದು ಮೈ ಕೈಯನ್ನು ಒರೆಸಿಕೊಂಡು ಬಾಯಿಯಿಂದ ಫೂ ಫೂ ಅನ್ನುತ್ತಾ ಗಾಳಿಹಾಕಿಕೊಂಡಳು. ಬಿಸಿಯಾದ ಟಾರ್ ರೋಡಿನ ಮೇಲೆ ಮಲಗಿದ್ದರಿಂದ ಅವಳ ನುಣುಪು ಕೈಗಳಲ್ಲಿ ನಿಜವಾಗಿಯೂ ಕೆಂಪು ಕೆಂಪಾಗಿ ರಕ್ತದಂತೆ ಕಾಣುತ್ತಿತ್ತು ಚರ್ಮ. ಅದನ್ನು ನಮಗೆ ತೋರಿಸುತ್ತಲೇ ಅವಳ ಕಣ್ಣುಗಳಲ್ಲಿ ನಿಜವಾಗಿಯೂ ನೀರು ಕಾಣಿಸಿತ್ತು. ಅಂತು ಆ ದೃಶ್ಯ ನ್ಯಾಚುರಲ್ ಆಗಿ ಬಂದಿದೆ ಅಂದಾಗ ಅವಳ ಮುಖದಲ್ಲಿ ನಗು ಕಂಡಿತು.

ಶೂಟಿಂಗ್ ಮುಗಿದು ಒಂದು ವಾರದಲ್ಲಿ ಎಡಿಟಿಂಗ್ ಕೆಲಸ ಮುಗಿಸಿ ಅದನ್ನು ಸಿಡಿಯಲ್ಲಿ ಹಾಕಿ ಪತ್ರಿಕೆಗೆ ಕಳುಹಿಸಿದೆ. ನನ್ನ ದುರಾದೃಷ್ಟವೋ ಏನೋ ಸಿಡಿ ಅವರನ್ನು ತಲುಪಿದ್ದರೂ ಅದು ಪತ್ರಿಕಾ ಕಚೇರಿಯಲ್ಲಿ ಕಳೆದುಹೋಗಿತ್ತು. ನನ್ನ ಕಂಪ್ಯೂಟರ್ನಲ್ಲಿ ಇದ್ದ ಫೋಟೋಗಳನ್ನು ಮತ್ತೊಮ್ಮೆ ಧಾರಾವಾಹಿಯಂತೆ ಹೊಂದಿಸಿ ಒಂದು ಎರಡು ಸಂಖ್ಯೆಯನ್ನು ಆಯಾಯಾ ಕಂತಿಗೆ ಜೋಡಿಸಿ ಮತ್ತೊಮ್ಮೆ ಸಿಡಿ ಕಳುಹಿಸಿದೆ. ಅದೂ ಕಳೆದು ಹೋಯಿತಂತೆ!

ಕೊನೆಗೆ ನಾನೆ ಅವರಿಗೆ ಇ-ಮೇಲ್ ಮೂಲಕ ಕಳುಹಿಸುತ್ತೇನೆಂದು ಹೇಳಿದ ಮೇಲೆ ಒಪ್ಪಿಕೊಂಡರು. ಅದರಂತೆ ಒಮ್ಮೆಗೆ ಎರಡೆರಡು ಫೋಟೋಗಳನ್ನು ಒಟ್ಟು ಹತ್ತು ಇ-ಮೇಲ್ನಲ್ಲಿ ಅಟ್ಯಾಚ್ಮಾಡಿ ಕಳುಹಿಸಿದೆ. ಸರಿಯಾದ ರೀತಿಯಲ್ಲಿ ಕಂತುಗಳ ಸಂಖ್ಯೆಯನ್ನು ನಮೂದಿಸಿದರೂ ಧಾರಾವಾಹಿ ಆರಂಭವಾಗುವ ಹೊತ್ತಿಗೆ ಎಲ್ಲವೂ ಕಲಸುಮೇಲೊಗರವಾಗಿ ಜಾಹೀರಾತಿಗಾಗಿ ಕಳುಹಿಸಿದ ಚಿತ್ರಗಳು ಧಾರಾವಾಹಿಯ ಚಿತ್ರಗಳ ಜೊತೆಗೆ ಬೆರೆತು ಧಾರಾವಾಹಿಯ ಕಥೆಗೂ ಆ ವಾರದ ಚಿತ್ರಕ್ಕೂ ತಾಳೆಯಾಗದೆ ಹೋಗಿದ್ದು ಮಾತ್ರ ಬೇಸರವೆನಿಸಿತು. ಪತ್ರಿಕೆಯವರ ಬೇಜವಾಬ್ದಾರಿಯೋ ನನ್ನ ಅತೀ ನಿರೀಕ್ಷೆಯೋ ಅಂತು ಧಾರಾವಾಹಿ ಮತ್ತು ಅದಕ್ಕೆ ಪೂರಕವಾದ ಚಿತ್ರವಿಲ್ಲದೆ ನಿರಾಶೆ ಮೂಡಿಸಿತು. ಅಷ್ಟು ಕಷ್ಟಪಟ್ಟು ಮಾಡಿದ ಕೆಲಸ ನಿರರ್ಥಕವಾಗಿತ್ತು ಮಾತ್ರವಲ್ಲ ಬೆಲೆಯಿಲ್ಲದಂತಾಗಿತ್ತು. ಕೊನೆಗೂ ಧಾರಾವಾಹಿಯ ಜಾಹೀರಾತು ಬರುವಷ್ಟರಲ್ಲೆ ಗೆಳೆಯ ನಿರ್ದೇಶಕ, ನಾಟಕದ ಮೇಷ್ಟ್ರು ನವೀನ್ ಎಡಮಂಗಲ ರಂಗಸೇವೆಯನ್ನು ಮಾಡುತ್ತಲೇ ಅಕಾಲ ಮೃತ್ಯುವಿಗೀಡಾದರು. ಅವರ ನೆನಪಿಗಾಗಿಯೇ ಪುಸ್ತಕರೂಪದಲ್ಲಿ ಹೊರ ಬಂದ `ನಿನ್ನ ಕಣ್ಣ ಬಿಂಬದಿ ನಾನಿಲ್ಲವೇ?!... ಕಾದಂಬರಿಯನ್ನು ಅವರಿಗೆ ಮನ:ಪೂರ್ವಕವಾಗಿ ಅರ್ಪಿಸಿದ್ದೇನೆ.

(ಮುಗಿಯಿತು)


- ಅನು ಬೆಳ್ಳೆ

1 comments:

Anonymous said...

ಉತ್ತಮವಾದ ಪ್ರಯತ್ನ...ನಿಮ್ಮ ಪ್ರಯತ್ನ ನಿಲ್ಲಿಸಬೇಡಿ...
Deepak.

Post a Comment