ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:26 PM

ವಾಸ್ತವಕ್ಕೆ ದೂರ

Posted by ekanasu

ಈ ಕಸನು ಸ್ಪೆಷಲ್
1. ಅಕ್ಟೋಬರ್ 23,2010 ಭಾರತದ ಜನಪ್ರಿಯ ಟಿವಿ ವಾಹಿನಿ ಇಮ್ಯಾಜಿನ್ ಟಿ ವಿ "ರಾಖಿ ಕಾ ಇನ್ಸಾಫ್" ಹೆಸರಿನಲ್ಲಿ ತಾನು ನಡೆಸುತ್ತಿದ್ದ ,ಅತೀ ಹೆಚ್ಚು ಟಿ.ಆರ್.ಪಿ ರೇಟ್ ಹೊಂದಿದ್ದ ರಿಯಾಲಿಟಿ ಶೋನ ದೈನಂದಿನ ಕಂತನ್ನು ಎಂದಿನಂತೆ ಪ್ರಸಾರ ಮಾಡಿತ್ತು. ಶೋನ ಹೋಸ್ಟ್ ಭಾರತದ ಖ್ಯಾತ ಸೆಕ್ಸಿ ತಾರೆ ರಾಖಿ ಸಾವಂತ್ ಎಂದಿನಂತೆ ತನ್ನ ಗಿಮಿಕ್ಗಳೊಂದಿಗೆ ಸೆಟ್ ಪ್ರವೇಶಿಸಿದಳು. ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಬೇಕು... ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಆಸೆಯನ್ನು ಹೊತ್ತು ಜಾನ್ಸಿಯ ಪುಟ್ಟ ಹಳ್ಳಿಯೊಂದರಿಂದ ಮುಂಬೈಗೆ ಆಗಮಿಸಿದ ಲಕ್ಷ್ಮಣ್ ಆ ಶೋನಲ್ಲಿದ್ದ. ಕಾಂಟ್ರೋವರ್ಸಿಗಳನ್ನು ಹುಟ್ಟುಹಾಕಿ ಸದಾ ಜನಪ್ರಿಯತೆಯನ್ನು ಪಡೆಯುತ್ತಿದ ರಾಖಿ ಇಲ್ಲೂ ತನ್ನಹಳೇ ಚಾಳಿ ಬಿಡಲಿಲ್ಲ.ತುಂಬಿದ ಸಭೆಯ ಎದುರು, ಕ್ಯಾಮರಾಗಳ ಮುಂದೆ ಲಕ್ಷ್ಮಣನ ತೇಜೋವಧೆಗಿಳಿದಳು. ಆಕೆಯ ಬಾಯಿಯಿಂದ ಹೊರಬಿದ್ದ "ನಪುಂಸಕ" ಎಂಬ ಶಬ್ಭ ಲಕ್ಷ್ಮಣನನ್ನು ಮಾನಸಿಕವಾಗಿ ಘಾಸಿಗೊಳಿಸಿತು. ಮನೆಗೆ ಮರಳಿದ ಲಕ್ಷ್ಮಣ್ ಹಲವು ದಿನಗಳವರೆಗೆ ಮಾನಸಿಕ ಖಿನ್ನತೆಯಿಂದ ಬಳಲಿದ. ಆಸ್ಪತ್ರೆಗೆ ದಾಖದರೂ ರೋಗ ವಾಸಿಯಾಗಲಿಲ್ಲ. ಅನ್ನ -ನೀರು ಮರೆತ ಆತ ಕೊನೆಗೊಂದು ದಿನ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದ.


2. 2005 ರಲ್ಲಿ ನ್ಯೂಜಿಲ್ಯಾಂಡ್ನ ಎನ್ ಬಿ ಸಿ ಚಾನೆಲ್ ಬಾಕ್ಸಿಂಗ್ ರಿಯಾಲಿಟಿ ಶೋವೊಂದನ್ನು ಪ್ರಸಾರ ಮಾಡುತ್ತಿತ್ತು. ಫಿಲೆಡೆಲ್ಫೀಯಾ ಮೂಲದ ನಜಾಯ್ ಆ ಸ್ಪರ್ಧೆಯ ಅಂತಿಮ ಸುತ್ತನ್ನು ಪ್ರವೇಶಿಸಿದ್ದ. ಫೈನಲ್ಸ್ನಲ್ಲಿ ಎದುರಾದ ಸೋಲನ್ನು ಅರಗಿಸಿಕೊಳ್ಳಲಾಗದೇ ತನ್ನ ಜಿಮ್ನ ಹೊರಗೆ ನಿಲ್ಲಿಸಿದ ಕಾರ್ನೊಳಗೆ ಕುಳಿತು ರಿವಾಲ್ವರ್ನಿಂದ ತನ್ನನ್ನು ತಾನು ಶೂಟ್ ಮಾಡಿಕೊಂಡ. ಆತನ ಎರಡು ವರುಷದ ಪುಟ್ಟ ಮಗಳು ತಂದೆಯ ಸಾವಿನ ಅರಿವಿಲ್ಲದೆ ಹೊರಗೆ ಆಟವಾಡುತ್ತಿದ್ದಳು.

ಮೇಲಿನ ಎರಡೂ ಘಟನೆಗಳಿಂದ ರಿಯಾಲಿಟಿ ಶೋಗಳು ವ್ಯಕ್ತಿಯ ಮಾನಸಿಕತೆಯ ಮೇಲೆ ಬೀರುವ ದುಷ್ಪರಿಣಾಮವನ್ನು ನಾವು ತಿಳಿಯಬಹುದು. ಅಮೆರಿಕನ್ ಸಂಶೋಧನೆಯೊಂದರ ಪ್ರಕಾರ ರಿಯಾಲಿಟಿ ಶೋಗಳಲ್ಲಿ ಹೋಸ್ಟ್ ಗಳು ಮಾತನಾಡುವಾಗ ಬಳಸುವ ಒಟ್ಟು ಭಾಷೆಯಲ್ಲಿ ಶೇ 48 ಭಾಗ ಫೌಲ್ ಲಾಂಗ್ವೇಜ್ (ಕೆಟ್ಟ ಭಾಷೆ) ಅನಿಸಿಕೊಳ್ಳುತ್ತದೆ. ಅವರು ಬಳಸುವ ಅಶ್ಲೀಲ ಹಾಗೂ ದ್ವಂದಾರ್ಥ ಕೊಡುವ ಪದಗಳು ಶೋನಲ್ಲಿ ಪಾಲ್ಗೊಳ್ಳಲು ಬಂದ ಅಭ್ಯರ್ಥಿಗಳ ಮಾನಸಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ ಅವರ ಮನೋಬಲವನ್ನು ಸಾಕಷ್ಟು ಕುಗ್ಗಿಸುತ್ತದೆ.


ಇಂದು ಟಿವಿ ಪರದೆಯ ಮೇಲೆ ರಿಯಾಲಿಟಿ ಶೋಗಳದ್ದೇ ಕಾರುಬಾರು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯಸ್ಸಿಗೆ ಸರಿಹೊಂದುವಂತಹ ರಿಯಾಲಿಟಿ ಶೋಗಳು ವಿವಿಧ ಚಾನಲ್ಗಳಲ್ಲಿ ಬಿತ್ತರಗೊಳ್ಳುತ್ತಿವೆ. ಆದರೆ ಅವಲ್ಲಿ ಅದೆಷ್ಟು ಶೋಗಳು ಮೌಲ್ಯಾಧಾರಿತ ಮನರಂಜನೆಯನ್ನು ವೀಕ್ಷಕರಿಗೆ ಕೊಡುತ್ತಿವೆ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಇಂದು ತಮ್ಮ ಟಿ ಆರ್ ಪಿ ಹೆಚ್ಚಿಸಿ ಹಣ ಗಳಿಸುವ ಉದ್ದೇಶದಿಂದ ಚಾನೆಲ್ಗಳು ದಿನಂಪ್ರತಿ ಹೊಸ ಹೊಸ ಪ್ರಯೋಗಗಳಿಗೆ ಕೈಹಾಕುತ್ತಿವೆ. ರಿಯಾಲಿಟಿ ಶೋಗಳ ಹೆಸರಿನಲ್ಲಿ ಕೋಟಿ ಕೋಟಿ ದುಡ್ಡನ್ನು ಬಾಚಿಕೊಳ್ಳುವುದರ ಜತೆಗೆ ಯುವಜನತೆಯನ್ನು ಹಾದಿ ತಪ್ಪಿಸುತ್ತಿವೆ.
ನಿಜ ಜೀವನದಲ್ಲಿ ಮನೆಯೊಳಗೆ ಗೌಪ್ಯವಾಗಿರಬೇಕಾದ ವಿಚಾರಗಳು ಇಂದು ರಿಯಾಲಿಟಿ ಶೋಗಳ ಹೆಸರಿನಲ್ಲಿ ಜಗಜ್ಜಾಹಿರಾಗುತ್ತವೆ. ಮದುವೆಯಂತಹ ಮಧುರ ಬಾಂಧವ್ಯವನ್ನು ಇಂದು ಮಾರುಕಟ್ಟೆಯಲ್ಲಿ ಹರಾಜಿಡುವಲ್ಲಿ ಇಂತಹ ಶೋಗಳು ಯಶಸ್ವಿಯಾಗಿವೆ.

ಶಾಲೆಗೆ ಹೋಗುವ ಮಕ್ಕಳು ರಿಯಾಲಿಟಿ ಶೋನ ಹೆಸರಿನಲ್ಲಿ ತುಂಡುಡುಗೆಯುಟ್ಟು ಯಾವ ಸೆಕ್ಸಿ ತಾರೆಯರಿಗಿಂತಲೂ ತಾವು ಕಡಿಮೆ ಇಲ್ಲವೆಂಬಂತೆ ಮೈಮರೆತು ಕುಣಿದಾಡುತ್ತವೆ. ಚಿಕ್ಕ ವಯಸ್ಸಿನಲ್ಲೇ ಮರ್ಯಾದಿ ಮರೆತು ಕುಣಿಯುವ ತಮ್ಮ ಮಕ್ಕಳನ್ನು ಕಂಡು ತಲೆತಗ್ಗಿಸಬೇಕಾದ ಹೆತ್ತವರು ಇಂದು ಅದನ್ನೇ ಎಂಜಾಯ್ ಮಾಡುತ್ತಿರುವುದು ದುರಂತವೇ ಸರಿ. ತಮ್ಮ ಪುಟ್ಟ ಮಕ್ಕಳು ರಿಯಾಲಿಟಿ ಶೋಗಳಲ್ಲಿ ಅರೆಬರೆ ಬಟ್ಟೆಯುಟ್ಟು ಕುಣಿದರೆ ಸಮಾಜದಲ್ಲಿ ತಮ್ಮ ಸ್ಟೇಟಸ್ ಹೆಚ್ಚುವುದೆಂಬ ಅಭಿಪ್ರಾಯ ಹೆತ್ತವರದ್ದು.

ರಿಯಾಲಿಟಿ ಶೋಗಳು ಇಂದು ಜನರ ಸಾಮನ್ಯ ಜೀವನದ ಮೇಲೂ ಸಾಕಷ್ಟು ಪ್ರಭಾವ ಬೀರಿದೆ. ಶೋಗಳಲ್ಲಿ ಕಾಣಿಸಿಕೊಳ್ಳುವ ಗ್ಲ್ಯಾಮರಸ್ ಉಡುಗೆ ತೊಡುಗೆಗಳನ್ನು ಕಾಣುವ ನಮ್ಮ ಯುವತಿಯರು ನಿಜಜೀವನದಲ್ಲೂ ಅಂತಹ ಗ್ಲ್ಯಾಮರನ್ನು ಬಯಸತೊಡಗಿದ್ದಾರೆ. ಮಧ್ಯಮ ವರ್ಗದ ಯುವತಿಯ ಉಡುಗೆ ತೊಡುಗೆಗಳ ಮೇಲೂ ಇಂದು ಈ ಶೋಗಳು ಸಾಕಷ್ಟು ಪರಿಣಾಮ ಬೀರಿವೆ.

ಇಂದು ಇನ್ನೊಬ್ಬನ ಸೋಲಿನಲ್ಲಿ ಆನಂದವನ್ನು ಪಡೆಯುವ ಮನೋಭಾವ ನಮ್ಮ ಲ್ಲಿ ವೃದ್ಧಿಯಾಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ರಿಯಾಲಿಟಿ ಶೋಗಳು. ಸಾಹಸಮಯ ರಿಯಾಲಿಟಿ ಶೋವೊಂದರಲ್ಲಿ ವ್ಯಕ್ತಿಯೋರ್ವ ಜೀವನ್ಮರಣದ ನಡುವೆ ಹೋರಾಡುತ್ತಿದ್ದರೆ ನಾವು ಟಿವಿ ಪರದೆಯ ಮುಂದೆ ಕುಳಿತು ಚಪ್ಪಾಳೆ ತಟ್ಟುತ್ತೇವೆ. ಅಷ್ಟರ ಮಟ್ಟಿಗೆ ನಮ್ಮಲ್ಲಿ ಕ್ರೌರ್ಯವನ್ನು ತುಂಬುವಲ್ಲಿ ರಿಯಾಲಿಟಿ ಶೋಗಳು ಯಶಸ್ವಿಯಾಗಿವೆ.

ಬಿಗ್ ಬ್ರದರ್ನಂತಹ ಅಂತರಾಷ್ಟ್ರೀಯ ಮಟ್ಟದ ರಿಯಾಲಿಟಿ ಶೋಗಳು ಇಂದು ವ್ಯಕ್ತಿಯ ತೀರಾ ಖಾಸಗಿ ಜೀವನವನ್ನು ಮಾಧ್ಯಮದಲ್ಲಿ ಹರಾಜಿಗಿಟ್ಟು ದುಡ್ಡುಗಳಿಸುವಷ್ಟು ಕೀಳು ಮಟ್ಟಕ್ಕಿಳಿದಿವೆ. ಮಾತ್ರವಲ್ಲ ವಿವಿಧ ದೇಶಗಳಿಂದ ಶೋನಲ್ಲಿ ಭಾಗವಹಿಸಲು ಬಂದ ಅಭ್ಯರ್ಥಿಗಳನ್ನು ಮಾನಸಿಕವಾಗಿ ಶೋಷಿಸಿ ಆ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನು ಕೊಟ್ಟು ಪಾಪ್ಯುಲರ್ ಆಗುವ ಯೋಜನೆಯನ್ನು ಹಾಕಿಕೊಳ್ಳುತ್ತಿವೆ. ಸ್ಪರ್ಧೆಯಲ್ಲಿ ವೀಜೇತನೆಂದು ಘೋಷಿಸಿ ಕ್ಯಾಮರಾದ ಮುಂದೆ ಚೆಕ್ ಕೊಟ್ಟು ನಾಟಕವಾಡಿ ಬಳಿಕ ಮೋಸವೆಸಗಿದ ಹಲವಾರು ಪ್ರಕರಣಗಳು ಇಂದು ನಮ್ಮ ದೇಶದಲ್ಲೇ ನಡೆದಿವೆ.


ರಿಯಾಲಿಟಿ ಶೋಗಳು ಪ್ರತಿಭೆಯ ಅನಾವರಣಕ್ಕಿರುವ ಸೂಕ್ತ ವೇದಿಕೆ ಎಂಬ ಅಭಿಪ್ರಾಯ ಹಲವರದು. ನಿಜ! ವ್ಯಕ್ತಿಯಲ್ಲಡಗಿದ ಸುಪ್ತ ಪ್ರತಿಭೆಯನ್ನು ಹೊರಹಾಕಲು ಇಂತಹ ಶೋಗಳು ಉತ್ತಮ ವೇದಿಕೆಯನ್ನು ರೂಪಿಸಿಕೊಡುತ್ತವೆ. ಆದರೆ ಉತ್ತಮ ಅಭಿರುಚಿಯುಳ್ಳ ರಿಯಾಲಿಟಿ ಶೊಗಳು ಇಂದು ಬೆರಳೆಣಿಕೆಯಷ್ಟು ಮಾತ್ರಾ. ಮಕ್ಕಳಲ್ಲಡಗಿದ ಸಂಗೀತ- ನೃತ್ಯ ಪ್ರತಿಭೆಯನ್ನು ಜನತೆಗೆ ತಲುಪಿಸಲು ಶ್ರಮ ಪಡುವ ರಿಯಾಲಿಟಿ ಶೋಗಳು ಇಂದು ಕೆಲ ಟಿವಿ ವಾಹಿನಿಗಳಲ್ಲಿ ಬಿತ್ತರಗೊಳ್ಳುತ್ತಿವೆ. ಆದರೆ ಅಂತಹ ಕಾರ್ಯಕ್ರಮಗಳಿಗಿರುವ ವೀಕ್ಷಕರು ಮಾತ್ರ ತೀರಾ ವಿರಳ.

ಹಿಂಸೆ, ಸ್ಟಂಟ್ ಹಾಗೂ ಗ್ಲ್ಯಾಮರ್ಗಳನ್ನೇ ಉತ್ರೇಕ್ಷಿಸುವ ಇಂದಿನ ರಿಯಾಲಿಟಿ ಶೋಗಳಿಂದ ಒಳಿತಿಗಿಂತ ಕೆಡುಕೇ ಹೆಚ್ಚು. ಶೋಗಳಲ್ಲಿ ನೋಡಿದ ಸ್ಟಂಟ್ಗಳನ್ನು ಅನುಕರಿಸಲು ಹೋಗಿ ಪ್ರಾಣ ಕಳೆದುಕೊಂಡ ಮಕ್ಕಳ ಪ್ರಕರಣಗಳು ನಮ್ಮ ದೇಶದಲ್ಲಿ ಹಲವಾರಿವೆ. ಅಮೆರಿಕಾದಲ್ಲಿ ಕಳೆದ ಒಂದೇ ವರುಷದಲ್ಲಿ 13ಕ್ಕೂ ಅಧಿಕ ಮಕ್ಕಳು ಇಂತಹ ಪ್ರಕರಣದಲ್ಲಿ ಸಾವನಪ್ಪಿದ್ದಾರೆ.

ದೇಶದ ಸಂಸ್ಕೃತಿಯನ್ನು ಹಾಳುಗೆಡವಿ ಆಧುನಿಕತೆಯ ಹೆಸರಿನಲ್ಲಿ ನಮ್ಮ ಯುವಜನತೆಯನ್ನು ತಪ್ಪುಹಾದಿಯತ್ತ ನಡೆಸುವಲ್ಲಿ ಈ ರಿಯಾಲಿಟಿ ಶೋಗಳ ಪಾತ್ರ ಮಹತ್ವದ್ದು . ಶೋಕಿ ಬದುಕಿನ ಕನಸು ಕಾಣಿಸಿ ನಿಜ ಜೀವನದ ವಾಸ್ತವಿಕತೆಗೆ ಮುಖ ಮಾಡುವ ಪ್ರವೃತ್ತಿಯನ್ನು ಜನರಲ್ಲಿ ಮೂಡಿಸಿರುವ ಇಂತಹ ರಿಯಾಲಿಟಿ ಶೋಗಳ ಬಗ್ಗೆ ಇನ್ನಾದರೂ ನಾವು ಎಚ್ಚೆತ್ತುಕ್ಕೊಳ್ಳೋಣ. ದೇಶದ ಪ್ರಸಾರ ವ್ಯವಸ್ಥೆ ಇನ್ನಾದರೂ ಇಂತಹ ಹಾನಿಕಾರಕ ರಿಯಾಲಿಟಿ ಶೋಗಳ ಬಗ್ಗೆ ಗಮನ ಹರಿಸಲಿ. ಜನತೆಯ ಹಿತರಕ್ಷಣೆಯನ್ನು ಗಮನದಲ್ಲಿರಿಸಿ ಇನ್ನಾದರೂ ಅವುಗಳ ಪ್ರಸಾರಕ್ಕೆ ನಿರ್ಬಂಧ ಹೇರಲಿ.

- ಅಕ್ಷತಾ ಭಟ್ , ಸಿ.ಎಚ್.
ಉಪನ್ಯಾಸಕಿ, ಗೋವಿಂದ ದಾಸ ಕಾಲೇಜು, ಸುರತ್ಕಲ್.

1 comments:

ejaz umari said...

ಅಶ್ಲೀಲತೆಯನ್ನು "ಧರ್ಮ"ದಂತೆ ಪಾಲಿಸುವವರು, ಅವರಿಂದ ಇದಕ್ಕಿಂತ ಹೆಚ್ಚು ಏನನ್ನು ಪ್ರತೀಕ್ಷಿಸಬಹುದು?

Post a Comment