ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ನಾಳೆ ಮನೆ ಹಾಳು

ಎದೆಯಾಳದಲ್ಲಿ ನೂರೊಂದು ಆಸೆಗಳು. ಆದರೆ ಅವೆಲ್ಲಾ ಪೂರ್ಣಗೊಳ್ಳುವುದು ಯಾವಾಗ...? ನನ್ನ ತಂದೆತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಚೆನ್ನಾಗಿ ಅಂದರೆ ? ಅವರಿಗೆ ಯಾವ ಕಷ್ಟವೂ ಕೊಡಬಾರದು. ನಮ್ಮ ತಾಯಿ ಕೈಗಳಿಂದ ಯಾವ ಮನೆಗೆಲಸವೂ ಮಾಡಿಸಬಾರದು, ನಮ್ಮ ತಂದೆಯವರಿಗೆ ದುಡಿಯಲು ಕಳುಹಿಸಬಾರದು. ಅವರಿಬ್ಬರಿಗೂ ಆದಷ್ಟು ಸಂತೋಷ ಕೊಡಬೇಕು. ನನ್ನ ಹೆಂಡತಿ ಮಕ್ಕಳನ್ನೂ ಚೆನ್ನಾಗಿ ನೋಡಿಕೊಳ್ಳಬೆಕು. ಅವರ ಪ್ರತಿಯೊಂದು ಆಸೆ ತೀರಿಸಬೇಕು. ಒಂದು ದಿನ ದೇವರು ಕಣ್ಣು ಬಿಟ್ಟಿ ನನ್ನ ಕಡೆ ನೋಡೇ ನೋಡುತ್ತಾನೆ. ನನ್ನ ಆಸೆಗಳನ್ನು ನಾನು ತೀರಿಸಿಯೇ ತೀರುತ್ತೇನೆ. ಅಕ್ಕ ತಂಗಿ, ಅಣ್ಣ ತಮ್ಮಂದಿರಿಗೂ ಏನಾದರು ಒಂದು ದಾರಿ ಕಾಣಿಸಬೇಕು ಅಂತ ಆಸೆ ಇದೆ. ನನ್ನಿಂದ ಆದಷ್ಟು ನಮ್ಮ ಸಮಾಜಕ್ಕೆ ಸಹಾಯ ಮಾಡಬೇಕು. ಬಡಮಕ್ಕಳಿಗೆ ಹೇಗಾದರು ಮಾಡಿ ಒಂದು ಒಳ್ಳೆಯ ಜೀವನ ಕೊಡಿಸಬೇಕು. ಎಷ್ಟೋ ಮಕ್ಕಳು ಶಾಲೆಯ ಶುಲ್ಕ ಕಟ್ಟಲಾಗದೆ ಶಾಲೆಗೆ ಹೋಗುವುದಿಲ್ಲ. ಅಂಥವರಿಗೆ ಸಹಾಯ ಮಾಡಬೇಕೆಂದಿದ್ದೇನೆ.ಹೌದೂ...! ಇದೆಲ್ಲಾ ಮಾಡೋದು ಯಾವಾಗ? ನೀನು ಶ್ರೀಮಂತನಾದರೆ ತಾನೆ? ಆಗಲಿಲ್ಲವೆಂದರೆ ನಿನ್ನ ಆಸೆಗಳು ಆಸೆಗಳಾಗಿಯೇ ಉಳಿದು ಬಿಡುತ್ತವಲ್ಲಾ....ಆಗ ಏನು ಮಾಡುತ್ತೀಯಾ....ನನ್ನ ಒಂದು ಆಸೆಯೂ ಪೂರ್ಣಗೊಳ್ಳಲಿಲ್ಲವಲ್ಲಾ ಎಂದು ಪ್ರತಿದಿನ ಕೊರಗಿ ಕೊರಗಿ ಮಲಗುತ್ತಿಯೋ...? ಸಮಾಜವನ್ನು ದೂಷಿಸುತ್ತೀಯೋ...? ದೇವರನ್ನು ದೂಷಿಸುತ್ತಿಯೋ? ನಿನ್ನ ನಸೀಬನ್ನು ದೂಷಿಸುತ್ತೀಯೋ...? ಏನು ಮಾಡುತ್ತೀಯಾ ಹೇಳು...?

ನಾನು ಏನು ತಾನೆ ಮಾಡಲು ಸಾಧ್ಯ ರಫಿವುಲ್ಲಾ ಸಾಬ್? ನಾನೊಬ್ಬ ಸಾಮಾನ್ಯ ಮನುಷ್ಯ ಯಾವ ಚಮತ್ಕಾರ ಮಾಡಲಿ? ಸಿನಿಮಾಗಳಲ್ಲಿ ಒಂದು ರಾತ್ರಿಯಲ್ಲೇ ಶ್ರೀಮಂತರಾಗಿ ಹೋಗುತ್ತಾರೆ. ಅದು ಸಿನಿಮಾ. ನಿಜ ಜೀವನದಲ್ಲಿ ಹಾಗೆ ಆಗುವುದಿಲ್ಲವಲ್ಲಾ...

ಈಗೇನೋ ಗಟ್ಟಿಮುಟ್ಟಾಗಿದ್ದೀಯ. ನಾಳೆ ಏನಾದರು ಹೆಚ್ಚುಕಡಿಮೆ ಆದರೆ..? ಈ ಮಾತು ನಿನಗೆ ಯಾಕೆ ಹೇಳುತ್ತಿದ್ದೀನಿ ಅಂದರೆ, ಒಂದು ದಿನ ಎಲ್ಲರೂ ಸಾಯಲೇಬೇಕು ಅಲ್ಲವೇ..? ಸಾವು ಯಾವ ಸಮಯದಲ್ಲಿ, ಎಲ್ಲಿ ಬರುತ್ತೆ ಅಂತ ನಮಗೆ ಗೊತ್ತೇ...? ನೂರು ವರ್ಷ ದೇವರು ನಿನಗೆ ಆಯಸ್ಸು ಕೊಡಲಿ. ಅಕಸ್ಮಾತ್ ಒಂದು ತಿಂಗಳಲ್ಲಿ ನೀನು ಸತ್ತು ಹೋಗುತ್ತೀಯ ಅಂದು ಕೊಳ್ಳೋಣ. ಆಗ ನಿನ್ನ ಒಂದು ಆಸೆಯೂ ಪೂರ್ಣಗೊಳ್ಳಲ್ಲವಲ್ಲಾ...

ಅದಕ್ಕೆ ನಿನಗೆ ಒಂದು ಮಾತು ಹೇಳುತ್ತೇನೆ ಕೇಳು - ನಾನು ಶ್ರೀಮಂತನಾದರೆ ಅದನ್ನು ಇದನ್ನು ಮಾಡುತ್ತೇನೆ ಎಂಬ ಆಸೆ ಬಿಟ್ಟುಬಿಡು. ನಿನ್ನ ಈಗಿರುವ ಪರಿಸ್ಥಿತಿಯಲ್ಲಿ ನೀನು ಏನು ಮಾಡಲು ಸಾಧ್ಯವೋ ಅದನ್ನು ಮಾಡು. ನಿಮ್ಮ ತಾಯಿಯ ಹುಟ್ಟು ಹಬ್ಬ ಯಾವಾಗ ? ಆಗಸ್ಟ್ ತಿಂಗಳಲ್ಲಿ. ಸದ್ಯ ನಿನಗಾದರೂ ಗೊತ್ತಿದೆ. ಕೆಲವರಿಗೆ ಅವರ ಹುಟ್ಟು ಹಬ್ಬದ ದಿನಾಂಕವೇ ಗೊತ್ತಿರುವುದಿಲ್ಲ. ನಿಮ್ಮ ತಾಯಿಯ ಹುಟ್ಟು ಹಬ್ಬದ ದಿನ ನೀನು ಏನು ಮಾಡಬೇಕು ಗೊತ್ತಾ...? 200 ರೂಗಳ ಕೇಕನ್ನು ಮಾಡಿಸು. ನಿನ್ನ ಕೈಲಾದಷ್ಟು ಹಣದಿಂದ ಒಂದು ಸೀರೆ ತಗೆದುಕೊ. ಒಂದು ಗ್ರೀಟಿಂಗ್ ಕಾರ್ಡನ್ನು ಸಹ ತೆಗೆದುಕೋ...ಅದರಲ್ಲಿ ಬರೆ - "ಅಮ್ಮಾ ನಾನು ನಿನ್ನನ್ನು ಬಹಳ ಪ್ರೀತಿಸುತೇನೆ. ನಿನ್ನ ಪಾದಗಳ ಕೆಳಗೆಯೇ ನನ್ನ ಸ್ವರ್ಗ,ನನ್ನಿಂದ ಏನಾದರು ತಪ್ಪಾಗಿದ್ದರೆ ಕ್ಷಮಿಸು,ನಿನ್ನ ಕರುಳಿನ ಕುಡಿಯನ್ನು ಆಶೀರ್ವದಿಸು, ನಿನ್ನ ಪ್ರೀತಿಯ ಮಗ ವೆಂಕಟೇಶ".

ನಿಮ್ಮ ತಂದೆಗೆ ಜೀವನದಲ್ಲಿ ಏನಾದರು ಉಡುಗೊರೆ ಕೊಟ್ಟಿದ್ದಿಯೋ...? ಇಲ್ಲ. ಅವರು ನಿನ್ನನ್ನು ಎಷ್ಟು ಪ್ರೀತಿಯಿಂದ ಬೆಳೆಸಿದ್ದಾರೆಂದು ನಿನಗೇನು ಗೊತ್ತು. ತಂದೆತಾಯಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ನಿನಗೆ ಅವರ ವಯಸ್ಸಾಗಬೇಕು. ನಿನ್ನ ಚರ್ಮದಲ್ಲಿ ಅವರಿಗೆ ಚಪ್ಪಲಿ ಮಾಡಿಸಿಕೊಟ್ಟರೂ ಅವರ ಋಣವನ್ನು ತೀರಿಸಲು ಸಾಧ್ಯವಾಗುವುದಿಲ್ಲ. ಈ ತಿಂಗಳು ನಿನ್ನ ಬಳಿ ಹಣ ಇಲ್ಲವಾದರೆ ಬರುವ ತಿಂಗಳು ಅವರಿಗೆ ಏನಾದರು ಉಡುಗೊರೆ ಕೊಡು. ಉಡುಗೊರೆಯೇ ಪ್ರೀತಿ ಅಲ್ಲ ಆದರೆ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಪುಟ್ಟ ವಿಧಾನ.

ನಿನ್ನನ್ನೇ ನಂಬಿ ಬಂದಿರುವ ನಿನ್ನ ಹೆಂಡತಿಯ ಮನಸ್ಸಿನಲ್ಲಿ ಏನೇನು ಸಣ್ಣಪುಟ್ಟ ಆಸೆಗಳಿವೆ ಎಂಬುದನ್ನು ತಿಳಿದುಕೊ. ಮನೆಗೆ ಹೋಗುವಾಗ, ಇಂದೇ ಅವಳಿಗೆ ಮಲ್ಲಿಗೆ ಹೂಗಳನ್ನು ತೆಗೆದುಕೊಂಡು ಹೋಗಿ ಕೊಡು. ಮಗನಿಗೆ 50 ರೂಗಳ ಏನಾದರು ಆಟಿಕೆ ಸಾಮಾನನ್ನು ತೆಗೆದುಕೊಂಡು ಹೋಗು. ನಾಳೆ ಮನೆ ಹಾಳು ಕಣಪ್ಪಾ ವೆಂಕಟೇಶ. ನಾಳೆ...ನಾಳೆ... ಎಂದೇ ನಾವು ಇಡೀ ಜೀವನ ಕಳೆದು ಬಿಡುತ್ತೇವೆ. ಆ ನಾಳೆ ಬರುವುದೇ ಇಲ್ಲ. ಇನ್ನೊಂದು ಮಾತು - ಒಮ್ಮೆ ಕುಟುಂಬದವರೆಲ್ಲಾ ಸೇರಿ ಎಲ್ಲಾದರು ಪ್ರವಾಸಕ್ಕೆ ಹೋಗಿ. ಕುಟುಂಬ ಸಮೇತ ಸಮಯ ಕಳೆಯುವ ಒಂದು ಸುಂದರ ಅವಕಾಶ ಸಿಗುತ್ತದೆ. ಜೀವನದಲ್ಲಿ ಕಷ್ಟಗಳು ಯಾರಿಗಿರುವುದಿಲ್ಲ ಹೇಳು....? ಕಷ್ಟ ಕಷ್ಟ ಅಂತ ಹೇಳಿ ಹೇಳಿ ನಾವು ನಮ್ಮ ಸಣ್ಣಪುಟ್ಟ ಸಂತೋಷವನ್ನೂ ಸಹ ಕಳೆದುಕೊಳ್ಳುತ್ತೇವೆ. ನಾವು ಸಂತೋಷವಾಗಿರಬೇಕಾದರೆ ನಮ್ಮ ಸುತ್ತುಮುತ್ತಲ ಜನರನ್ನು ಸಂತೋಷ ಪಡಿಸಬೇಕು. ಜೀವನ್ನದಲ್ಲಿ ಪ್ರಯತ್ನ ಪಟ್ಟರೆ ಏನು ಬೇಕಾದರೂ ಪಡೆಯಬಹುದು ಆದರೆ ಹೋದ ಕಾಲ ಮತ್ತು ಸತ್ತು ಹೋಗಿರುವ ತಂದೆತಾಯಿಯನ್ನು ಮಾತ್ರ ಪಡೆಯಲು ಸಾಧ್ಯವಿಲ್ಲ. ಅದಕ್ಕೆ ಅವರು ಬದುಕಿರುವಾಗಲೇ ನಮ್ಮಿಂದ ಆದಷ್ಟು ಸಂತೋಷ ಅವರಿಗೆ ಕೊಡಬೇಕು. ನಮ್ಮಿಂದ ಅವರು ಏನೂ ಬಯಸುವುದಿಲ್ಲ. ಅವರು ನಮ್ಮ ಒಳಿತನ್ನೇ ಬಯಸುತ್ತಿರುತ್ತಾರೆ. ನೀನು ಏನೂ ಕೊಡಲಾಗದಿದ್ದರೂ ಮನಸ್ಸು ತುಂಬ ಪ್ರೀತಿ ಕೊಡಬಹುದಲ್ಲಾ....?

- ಜಬೀವುಲ್ಲಾ ಖಾನ್

0 comments:

Post a Comment