ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಂಪಾದಕೀಯ

ದೇಗುಲಗಳಲ್ಲಿರುವ ನಿಧಿಯಾಗಲೀ, ಒಡವೆ, ಆಸ್ತಿಯಾಗಲೀ ಅದು ದೇಗುಲದ ಸೊತ್ತು. ದೇಗುಲದ ಸೊತ್ತನ್ನೂ ಲೂಟಿಮಾಡಿ, ಅದರಲ್ಲೂ ರಾಜಕಾರಣ ಮೆರೆಯುವ ಕುಟಿಲ ನೀತಿ ಸರಿಯಲ್ಲಿ. ಈ ರೀತಿಯ ಹೇಳಿಕೆ ನೀಡುವುದು, ದೇವರ ಆಸ್ತಿಗೇ ಕನ್ನ ಹಾಕುವುದು ಓರ್ವ ಪ್ರಜ್ಞಾವಂತ ನಾಗರೀಕರಿಗೆ ಹೇಳಿ ಮಾಡಿಸಿದ್ದಲ್ಲ.

ರಾಷ್ಟ್ರದ ಇತಿಹಾಸವನ್ನು ಎಳೆ ಎಳೆಯಾಗಿ ಬಿಡಿಸಿಡುವಂತಹ, ಸಾಂಸ್ಕೃತಿಕ ಆಸ್ತಿಯ ಮಹಾನತೆಗೆ ಒಂದು ಸಾಕ್ಷಿಯಾಗುವಂತಹ , ಸಂಸ್ಕೃತಿ, ಸಂಸ್ಕಾರ, ಪುರಾತನ ಐತಿಹ್ಯಗಳ ಮೇಲೊಂದು ಬೆಳಕು ಚೆಲ್ಲತಕ್ಕಂತಹ, ಐತಿಹ್ಯಗಳ ಆಗರ, ಅನಘ್ಯ ಸಂಪತ್ತನ್ನು ಹೊಂದಿರುವಂತಹ ,ಅಗಾಧ ಸಾಂಸ್ಕೃತಿಕ ಇತಿಹಾಸದ ಎಳೆ ಒದಗಿಸುವ ಸಾಧ್ಯತೆಗಳನ್ನೊಳಗೊಂಡ ಆಸ್ತಿಯತ್ತ ರಾಜಕೀಯ ವಕ್ರದೃಷ್ಟಿ ಬೀರಿರುವ ಸಂಗತಿ ನಿಜಕ್ಕೂ ಖೇದಾರ್ಹ. ಶ್ರೀ ಕ್ಷೇತ್ರದ ಸೊತ್ತುಗಳತ್ತ ನೀಚದೃಷ್ಟಿ ಬೀರುವ ಸ್ಥಾಪಿತ ಹಿತಾಸಕ್ತಿಗಳು; ವಿವಿಧ ನೆಪವೊಡ್ಡಿ ಹಂಚಿ ತಿನ್ನುವ ಯತ್ನ ಮಾಡುವವರತ್ತ ಪ್ರತಿಯೊಬ್ಬ ಹಿಂದುವೂ ಎದ್ದೇಳಬೇಕಾಗಿದೆ. ಪ್ರತಿಭಟನೆ ನಡೆಸಬೇಕಾಗಿದೆ.

ಭಾರತದ ಭವ್ಯ ಸಂಸ್ಕೃತಿಗೆ , ಸಂಪ್ರದಾಯಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆಯೇನೂ ಬೇಕಾಗಿಲ್ಲ. ಹಿಂದುಗಳ ಪವಿತ್ರಕ್ಷೇತ್ರಗಳಲ್ಲೊಂದಾದ ತಿರುವನಂತಪುರದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರವೇ ಇದಕ್ಕೆ ಸಾಕ್ಷಿಯಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ಷೇತ್ರವೆಂಬ ಖ್ಯಾತಿಗೆ ಈ ದೇವಸ್ಥಾನ ಪಾತ್ರವಾಗಿದೆ. ಕ್ಷೇತ್ರದ ಆಡಳಿತವನ್ನು ನೋಡಿಕೊಂಡು ಬರುತ್ತಿದ್ದ ತಿರುವಾಂಕೂರು ದೊರೆ ಮನೆತನದವರು ತಮ್ಮ ಔದಾರ್ಯವನ್ನು ಮೆರೆದಿದ್ದನ್ನು ಸ್ಮರಿಸಲೇ ಬೇಕಾಗಿದೆ. ಕಾರಣ ಅಪಾರ ಸಂಪತ್ತನ್ನು ಜತನದಿಂದ ಕಯ್ದುಕೊಂಡು ರಾಷ್ಟ್ರದ ಇತಿಹಾಸ, ಸಾಂಸ್ಕೃತಿಕ ಆಸ್ತಿಯ ಮೇಲಣ ಗೌರವ, ಇದರ ಉಳಿವಿಗೆಕಾರಣವಾಗಿದ್ದು ಒಂದು ಮಾದರಿ.



ವಿಚಾರವಾದಿಗಳು, ಚಿಂತಕರು ಪುರಾತನ ಕ್ಷೇತ್ರಗಳ ನಿಧಿಯ ಬಗೆಗೆ ಸಂಪತ್ತಿನ ವಿಚಾರದಲ್ಲಿ ಮಾತುಗಳನ್ನೆತ್ತಿ ಅದು ಸರಕಾರದ ಸಂಪತ್ತೆಂಬಂತೆ ಹಣೆಪಟ್ಟಿ ಕಟ್ಟಿಸುವ, ತನ್ಮೂಲಕ ತಾವೇನೋ ದೊಡ್ಡ ಸಾಧನೆ ಮಾಡಿದ್ದೇವೆಂಬಂತೆ ಫೋಸ್ ನೀಡುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇಂತಹ ವಿಚಾರವಾದಿಗಳಿಗೆ, ಚಿಂತಕರಿಗೆ ಕೇವಲ ಹಿಂದೂ ಧಾರ್ಮಿಕ ಕ್ಷೇತ್ರಗಳು ಮಾತ್ರ ಕಣ್ಣಿಗೆ ಬೀಳುತ್ತಿರುವುದು ದುರದೃಷ್ಟಕರ.
ಹಿಂದೂ ಕ್ಷೇತ್ರಗತ್ತ ಮಾತ್ರ ದೃಷ್ಟಿಹೊಂದುವ , ಹೊಂದಿಕೊಳ್ಳುವ ವಿಚಾರವಾದಿಗಳು ಇತರ ಕ್ಷೇತ್ರಗಳನ್ನೂ ಇದೇ ರೀತಿ ಕಾಣುತ್ತಿಲ್ಲ ಏಕೆ? ಕೆಲವೊಂದು ರಾಜಕೀಯ ಪಕ್ಷಗಳು ಕೇವಲ ಹಿಂದೂ ಧಾರ್ಮಿಕ ಕೇಂದ್ರಗಳನ್ನಷ್ಟೇ ಪ್ರಮುಖ ಗುರಿ ಎಂಬಂತೆ ಬಿಂಭಿಸುತ್ತಾ ಬರುತ್ತಿರುವುದು ಖಂಡನಾರ್ಹ.

ರಾಜಮನೆತನದ ಆಡಳಿತಕ್ಕೊಳಪಟ್ಟ ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದ ಆಸ್ತಿ , ಐಶ್ವರ್ಯಗಳ , ಕ್ಷೇತ್ರ ಸಂಪತ್ತಿನ ಹೊರತೆಗೆಯುವ ಕಾರ್ಯಕ್ಕೆ ಕೈಯಿಕ್ಕಿದ್ದು ದೊಡ್ಡ ತಪ್ಪು. ಕ್ಷೇತ್ರದ ಸಂಪತ್ತು ಯಾವ ಅಡೆತಡೆಗಳಿಲ್ಲದೆ ನೂರಾರು ವರುಷಗಳಿಂದ ತನ್ನಷ್ಟಕ್ಕೇ ಸುಪ್ತವಾಗಿತ್ತು. ಆದರೆ ಇದೀಗ ನಿಧಿ ಅನ್ವೇಷಣಾ ಕಾರ್ಯ ನಡೆಯಿತಲ್ಲದೆ ;ಸಿಕ್ಕ ನಿಧಿಯಿಂದಾಗಿ ಈ ಕ್ಷೇತ್ರ ವಿಶ್ವದ ಶ್ರೀಮಂತ ದೇವಾಲಯ ಮಾತ್ರವಲ್ಲದೆ ಅತಿ ಸಮೃದ್ಧ ದೇವಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.


"ತೆರೆದಿಟ್ಟ ಬೆಲ್ಲಕ್ಕೆ ಇರುವೆ ಮುತ್ತಬಾರದೆಂದರೆ ಹೇಗೆ"... ಅಂತಹ ಸ್ಥಿತಿ ಇದೀಗ ನಿರ್ಮಾಣವಾದಂತಾಯಿತು. ಕಾರಣ ಒಂದು ಲಕ್ಷ ಕೋಟಿಗೂ ಅಧಿಕ ಸೊತ್ತುಗಳನ್ನು ಒಳಗೊಂಡಿರುವ ಅನಂತಪದ್ಮನಾಭ ಕ್ಷೇತ್ರ ತನ್ನ ನಿಧಿಯಿಂದಾಗಿ ಅಂತಾರಾಷ್ಟ್ರೀಯ ಮನ್ನಣೆಯನ್ನೇನೋ ಪಡಕೊಳ್ಳುವಂತಾಯಿತಾದರೂ ಅಂತಾರಾಷ್ಟ್ರೀಯ ಬೆದರಿಕೆಯಿಂದ ಹೊರತಾಗಿಲ್ಲ ಎಂಬ ಅಂಶವನ್ನು ಮರೆಯುವಂತಿಲ್ಲ.
ಇಷ್ಟೊಂದು ಬೃಹತ್ ಐಶ್ವರ್ಯವನ್ನೊಳಗೊಂಡ ಕ್ಷೇತ್ರ ಇದೀಗ ಭಯೋತ್ಪಾದನೆಯ ಭೀತಿಗೊಳಪಡುವುದರಲ್ಲಿ ಸಂದೇಹವಿಲ್ಲ. ಕ್ಷೇತ್ರದೊಳಗಿನ ಆಂತರಿಕ ಭದ್ರತೆ , ಬಾಹ್ಯ ಭದ್ರತೆಗಳತ್ತ ಗಂಭೀರ ಚಿಂತನೆ ಹರಿಸುವುದು ಅನಿವಾರ್ಯವಾಗಿದೆ. ಕ್ಷಣ ಕ್ಷಣಕ್ಕೂ ಯಾವ ರೀತಿಯಲ್ಲಾದರೂ ಧಾಳಿ ನಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ವಿದೇಶೀ ಧಾಳಿಗಳು, ದೇಶದೊಳಗಣ ಭಯೋತ್ಪಾದನಾ ಕೃತ್ಯಗಳು ಈ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಕಾಡದಿರದು. ಏನೇ ಆದರೂ "ನಿಧಿ ಅನಂತ ಪದ್ಮನಾಭನ ಸೊತ್ತು: ಸಂರಕ್ಷಣೆಗೆ ಕ್ರಮ ಕೈಗೊಳ್ಳುತ್ತೇವೆಂದ" ಕೇರಳದ ಮುಖ್ಯಮಂತ್ರಿಗಳ ಸದ್ಯದ ಧೋರಣೆಗೆ ಮೆಚ್ಚಬೇಕಾಗಿದೆ.

ಸವೋಚ್ಛ ನ್ಯಾಯಾಲಯದ ಅಪ್ಪಣೆ ಪಡೆದು ಕ್ಷೇತ್ರದ ತಂತ್ರಿ ಹಾಗೂ ಮಹಾರಾಜರ ಅಭಿಪ್ರಾಯದಂತೆಯೇ ಶ್ರೀ ಕ್ಷೇತ್ರದೊಳಗೇ ನಿಧಿ ಸಂರಕ್ಷಣಾ ಕಾರ್ಯ ಕೈಗೊಳ್ಳುವ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಯವರ ಸದ್ಯದ ತೀರ್ಮಾನ .ಇಲ್ಲಿ ದೊರೆತಿರುವ ಸಮಸ್ತ ಆಸ್ತಿಯನ್ನು ಜನಸಾಮಾನ್ಯರಿಗೆ, ಪ್ರವಾಸಿಗರಿಗೆ ತೋರಿಸುವ ಕಾರ್ಯ ಮಾಡಬೇಕು.ಆಗ ಪ್ರವಾಸೋದ್ಯಮ ಅಭಿವೃದ್ದಿಯೂ ಆದಂತಾಗುತ್ತದೆ.ಜೊತೆಗೆ ಆದಾಯವೂ ಬಂದಂತಾಗುತ್ತದೆ ಎಂಬುದು ಟ್ರಸ್ಟಿಗಳ ಅಭಿಪ್ರಾಯ.

ಏನೇ ಆಗಲಿ. ರಾಜಮನೆತನದವರು ಶ್ರೀ ಕ್ಷೇತ್ರದ ದೇವರ ಮೇಲಿನ ನಂಬಿಕೆಯಿಂದಾಗಿ ಸಮರ್ಪಿಸಿದ ಸಮಸ್ತ ಆಸ್ತಿ ಅದಾಗಿದೆ. ಅದು ದೇವರ ಸೊತ್ತು. ದೇವರ ಆಸ್ತಿ ದೇವರ ಬಳಿಯಿದ್ದರೇ ಚೆಂದ .ಅದರ ದುರುಪಯೋಗ ಖಂಡಿತಾ ಸಲ್ಲದು. ಆದರೆ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ತೊಂದರೆಗಳ ಬಗ್ಗೆ ಸರಕಾರ ಚಿಂತಿಸಬೇಕು.ದೇಗುಲಗಳ ಆಡಳಿತ ಮಂಡಳಿಯೂ ಈ ಬಗ್ಗೆ ಸಮರ್ಪಕ ತೀರ್ಮಾನ ಕೈಗೊಳ್ಳಬೇಕು.

- ಹರೀಶ್ ಕೆ.ಆದೂರು.

1 comments:

BENAKA..ADKATHIMAR said...

ದೇವರ ಆಸ್ತ್ತಿ ದೇವಸ್ತಾನದಲ್ಲಿಯೇ ಇರಬೇಕು..ಅದು ಸಾರ್ವಜನಿಕ ಸೊತ್ತು ಅಲ್ಲ..ಹೀಗೆ ತಾಜ್ ಮಹಲ್ ನಲ್ಲಿ ಬೀಗ ಜಡಿದ ಹಲವಾರು ಕೋಣೆ ಗಳಿವೆ ಅದರಲ್ಲಿ ಏನು ಇರುವುದೆಂದು ಶೋಧಿಸಲು ಸರಕಾರ ಮುಂದಾಗುವುದೇ..??

Post a Comment