ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಮೂಡುಬಿದಿರೆ (ತುಳು: ಬೆದ್ರ ,ಕೊಂಕಣಿ :ಬಿದ್ರ್ಯಾಂ) ದಕ್ಷಿಣಕನ್ನಡ ಜಿಲ್ಲೆಯ ಒಂದು ಮುಖ್ಯ ಪಟ್ಟಣ. ಮಂಗಳೂರಿನಿಂದ ಪೂರ್ವಕ್ಕೆ ೩೬ ಕಿಲೋ ಮೀಟರುಗಳ ದೂರದಲ್ಲಿರುವ ಮೂಡುಬಿದಿರೆಯು ಕಾರ್ಕಳ-ಮಂಗಳೂರು, ಕಾರ್ಕಳ-ಬಂಟ್ವಾಳ ಮತ್ತು ಧರ್ಮಸ್ಥಳ-ಮಂಗಳೂರು ರಸ್ತೆಗಳನ್ನು ಹೊಂದಿದೆ. ೧೯೯೭ರಲ್ಲಿ ಅವಿಭಜಿತ ದಕ್ಷಿಣ ಕನ್ನಡವನ್ನು ವಿಭಾಗಿಸುವ ಮುನ್ನ ಕಾರ್ಕಳ ತಾಲೂಕಿಗೆ ಸೇರಿದ್ದ ಮೂಡುಬಿದಿರೆಯು ಈಗ ಮಂಗಳೂರಿನ ಭಾಗವಾಗಿದೆ.ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಮೂಡುಬಿದಿರೆಯು ಶ್ರೀಮಂತವಾದ ಇತಿಹಾಸವನ್ನು ಹೊಂದಿದೆ. ಜೈನಕಾಶಿ ಎಂದು ಪ್ರಸಿದ್ಧವಾಗಿರುವ ಮೂಡುಬಿದಿರೆಯಲ್ಲಿ ೧೮ ದೇವಸ್ಥಾನಗಳು, ೧೮ ಜೈನ ಬಸದಿಗಳು ಮತ್ತು ೧೮ ಕೆರೆಗಳು ಇವೆ. ಇಲ್ಲಿನ ಬಸದಿಗಳಲ್ಲಿ ಸಾವಿರ ಕಂಭದ ಬಸದಿಯು ವಿಶ್ವಪ್ರಸಿದ್ಧವಾದುದು. ಗುರು ಬಸದಿಯು ಜೈನರ ಪವಿತ್ರ ಗ್ರಂಥಗಳಾದ ಶ್ರೀಧವಳ ಮತ್ತು ಮಹಾ ಧವಳಗಳ ಹಸ್ತಪ್ರತಿಗಳನ್ನು ಹೊಂದಿದ್ದು, ಆ ಕಾರಣದಿಂದ ಸಿದ್ಧಾಂತ ಬಸದಿ ಎಂದೂ ಕರೆಯಲ್ಪಡುತ್ತದೆ.

ಮೂಡುಬಿದಿರೆ ಹೆಸರಿನ ಮೂಲ

ಮೂಡುಬಿದಿರೆಯು ಹಲವು ನೂರು ವರ್ಷಗಳ ಹಿಂದೆ ಬಿದಿರು ಬೆಳೆಗೆ ಪ್ರಸಿದ್ಧವಾಗಿತ್ತು. ಪೂರ್ವದಿಕ್ಕಿನಲ್ಲಿ ಬಿದಿರು ಬೆಳೆಯುವ ಪಟ್ಟಣವಾದ್ದರಿಂದ ಮೂಡು (= ಪೂರ್ವ) ಬಿದಿರೆ ಎಂಬ ಹೆಸರು ಬಂತು. ಈ ಹೆಸರಿಗೂ ಮುನ್ನ ಈ ಪಟ್ಟಣವನ್ನು ವೇಣುಪುರ ಎಂದು ಕರೆಯುತ್ತಿದ್ದರು. ವೇಣು ಅಂದರೆ ಸಂಸ್ಕೃತದಲ್ಲಿ ಬಿದಿರು ಎಂದೇ ಅರ್ಥವಿರುವುದರಿಂದ ಹಿಂದಿನ ಕಾಲದಿಂದಲೂ ಬಿದಿರು ಮತ್ತು ಈ ಪಟ್ಟಣದ ಹೆಸರು ಜೊತೆಯಾಗಿವೆ. ಇಲ್ಲಿಗೆ ಸಮೀಪದ ವೇಣೂರು ಪಟ್ಟಣವೂ ಕೂಡಾ ತನ್ನ ಹೆಸರಿನಲ್ಲಿ ಬಿದಿರಿನ ನಂಟು ಹೊಂದಿರುವುದು ಹಿಂದೆ ಈ ಪ್ರದೇಶದಲ್ಲಿ ಬಿದಿರು ಸಮೃದ್ಧವಾಗಿ ಬೆಳೆಯಿತೆಂಬುದಕ್ಕೆ ಸಾಕ್ಷಿಯಾಗಿದೆ. ತುಳು ಭಾಷೆಯಲ್ಲಿ ಮೂಡುಬಿದಿರೆಯನ್ನು ಬೆದ್ರ ಎಂದು ಕರೆಯುವುದೂ ಕೂಡಾ ಬಿದಿರಿನ ನಂಟನ್ನು ಸೂಚಿಸುತ್ತದೆ.ಮೂಡುಬಿದಿರೆಯು ಹಿಂದೆ ಚೌಟ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿನ ಚೌಟರ ಅರಮನೆಯಲ್ಲಿ ಇಂದಿಗೂ ಅರಸು ವಂಶಸ್ಥರು ವಾಸವಾಗಿದ್ದಾರೆ. ಜೈನ ವ್ಯಾಪಾರಿಗಳೂ ಮೂಡುಬಿದಿರೆಯಲ್ಲಿ ಸಾಕಷ್ಟಿದ್ದು, ದೇಶ ವಿದೇಶಗಳಲ್ಲಿ ವ್ಯಾಪಾರೀ ಸಂಬಂಧವನ್ನು ಹೊಂದಿದ್ದರು. ಇಲ್ಲಿನ ಜೈನ ವ್ಯಾಪಾರಿಗಳು ಸೇರಿ ಕಟ್ಟಿದ ಸಾವಿರ ಕಂಭದ ಬಸದಿಯು ಅತ್ಯಾಕರ್ಷಕ ವಾಸ್ತು ಕೃತಿ.

ಮೂಡುಬಿದಿರೆ ಎಂದೊಡನೆ ಮೊದಲು ನೆನಪಿಗೆ ಬರುವುದು ಮಹಾಕವಿ ರತ್ನಾಕರವರ್ಣಿಯ ಹೆಸರು. ಹಳೆಗನ್ನಡದ ಪ್ರಖ್ಯಾತ ಕಾವ್ಯಗಳಲ್ಲೊಂದಾದ ಭರತೇಶ ವೈಭವ ಈತ ರಚಿಸಿದ ಪ್ರಮುಖ ಕೃತಿ. ಆಧುನಿಕರಲ್ಲಿ ಶಿಶುಪಾಲ ಪಾರ್ಶ್ವನಾಥ ಶಾಸ್ತ್ರಿ, ವಿದ್ವಾನ್ ಕಾಂತ ರೈ, ಸಿದ್ದಕಟ್ಟೆ ಚಂದ್ರಯ್ಯ ಶೆಟ್ಟಿ ಕೆಲವು ಸಾಹಿತಿಗಳು. ಪ್ರಚಲಿತದಲ್ಲಿ ಪಳಕಳ ಸೀತಾರಾಮ ಭಟ್ಟ, ಡಾ. ನಾ ಮೊಗಸಾಲೆ, ಜಯಪ್ರಕಾಶ ಮಾವಿನಕುಳಿ, ಕವಿ ರಾಮಚಂದ್ರ ಪೈ ಹೆಚ್ಚಾಗಿ ಕೇಳಿ ಬರುವ ಹೆಸರುಗಳು.

ಮೂಡುಬಿದಿರೆಯು ಬಹಳ ಹಿಂದಿನಿಂದಲೂ ಸಾಹಿತ್ಯಾಸಕ್ತರ ಬೀಡಾಗಿದೆ. ಇಲ್ಲಿನ ಸಮಾಜ ಮಂದಿರದಲ್ಲಿ ಊರ ಸಾಹಿತ್ಯಾಸಕ್ತರು ಸೇರಿ ಸ್ಥಾಪಿಸಿದ ಸರಸ್ವತೀ ಸಭಾ ಹಲವು ವರ್ಷಗಳವರೆಗೆ ದಸರಾ ದಿನಗಳಲ್ಲಿ ಪ್ರತಿ ದಿನವೂ ನಾಡ ಪ್ರಖ್ಯಾತ ಸಾಹಿತಿಗಳನ್ನು ಕರೆಸಿ ಏರ್ಪಡಿಸುತ್ತಿದ್ದ ಭಾಷಣಗಳನ್ನು ಊರ ಹಿರಿಯರು ಇಂದಿಗೂ ಮೆಲುಕು ಹಾಕುತ್ತಾರೆ. ಸಾರಸ್ವತ ಲೋಕದ ದಿಗ್ಗಜರೆಲ್ಲರೂ ಬಂದು ತಮ್ಮ ವಿದ್ವತ್ಪ್ರಭೆಯನ್ನು ಬೆಳಗಿ ಹೋದ ಸಮಾಜ ಮಂದಿರವು ಆ ಕಾಲದಲ್ಲಿ ಕನ್ನಡ ವಿದ್ವಾಂಸರಿಗೆ ಪವಿತ್ರ ವೇದಿಕೆಯಾಗಿತ್ತು. ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಸರಸ್ವತೀ ಸಭಾದಿಂದ ಆಹ್ವಾನಿತರಾಗಿ ಭಾಷಣಗೈಯುವುದೆಂದರೆ ಹೆಮ್ಮೆಪಡುತ್ತಿದ್ದ ಕಾಲವದು.

೨೦೦೩ರಲ್ಲಿ ಕಮಲಾ ಹಂಪನಾ ಅವರ ಅಧ್ಯಕ್ಷತೆಯಲ್ಲಿ ನಡೆದ ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲಿನ ಸಾಹಿತ್ಯ ಚಟುವಟಿಕೆಗಳಿಗೆ ಮುಕುಟವಿಟ್ಟಂತಿತ್ತು. ಈ ಹಿಂದೆ ೧೯೮೯ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವೂ ಇಲ್ಲಿ ವೈಭವದಿಂದ ನಡೆದಿತ್ತು.

ಮೂಡುಬಿದಿರೆಯ ಉತ್ಸಾಹಿ ವೈದ್ಯ ಡಾ. ಮೋಹನ ಆಳ್ವರು ಇತ್ತೀಚಿನ ವರ್ಷಗಳಲ್ಲಿ ಏರ್ಪಡಿಸುತ್ತಿರುವ ಆಳ್ವಾಸ್ ನುಡಿಸಿರಿ ಯಾವುದೇ ಸಾಹಿತ್ಯ ಸಮ್ಮೇಳನಗಳಿಗೂ ಕಡಿಮೆ ಇಲ್ಲದ ರೀತಿಯಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿದೆ. ಸಾಹಿತಿಗಳಿಗೂ ಸಾಹಿತ್ಯಾಸಕ್ತರಿಗೂ ಸೂಕ್ತ ವೇದಿಕೆ ಒದಗಿಸಿ ಕನ್ನಡ ಸರಸ್ವತಿಯ ಜಾತ್ರೆಯನ್ನು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸುತ್ತಿರುವ ನುಡಿಸಿರಿ, ವರ್ಷಗಳುರುಳಿದಂತೆ ಹೆಚ್ಚಿನ ಕಳೆ, ಪ್ರಸಿದ್ಧಿ ಪಡೆದುಕೊಳ್ಳುತ್ತಾ ಸಾಹಿತ್ಯ ವಲಯದಲ್ಲಿ ಮೂಡುಬಿದಿರೆಯ ಹೆಸರನ್ನು ಮೇಲಕ್ಕೆತ್ತುತ್ತಿದೆ.


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಕಲ ವಿಶಿಷ್ಟ ಸಂಸ್ಕೃತಿಗಳನ್ನೂ ಮೈಗೂಡಿಸಿಕೊಂಡಿರುವ ಮೂಡುಬಿದಿರೆಯು ನಾಗಾರಾಧನೆ, ಭೂತ ಕೋಲಗಳಂತಹ ಆಚರಣೆಗಳನ್ನೂ ಯಕ್ಷಗಾನ ಬಯಲಾಟ, ನಾಟಕಗಳನ್ನೂ, ಸಂಗೀತ, ನೃತ್ಯ ಕಲೆಗಳನ್ನೂ ಒಳಗೊಂಡ ಶ್ರೀಮಂತ ಸಂಸ್ಕೃತಿಯ ಬೀಡಾಗಿದೆ. ಸಕಲ ಧರ್ಮ ಸಮನ್ವಯಕ್ಕೆ ಹೆಸರಾದ ದಕ್ಷಿಣ ಕನ್ನಡದ ಭಾಗವಾದ ಮೂಡುಬಿದಿರೆಯು ಹಿಂದೂ ಧಾರ್ಮಿಕ ಹಬ್ಬಗಳಲ್ಲಿ ಸಾರ್ವಜನಿಕ ಗಣೇಶೋತ್ಸವ, ಶಾರದೋತ್ಸವ, ಮಹಾಕಾಳಿ ಮಾರಿಗುಡಿ ಜಾತ್ರೆಗಳನ್ನೂ, ಜೈನರಲ್ಲಿ ಸಾವಿರಕಂಭದ ಬಸದಿಯ ವಾರ್ಷಿಕೋತ್ಸವ, ಪದ್ಮಾವತಿ ಅಮ್ಮನವರ ಬಸದಿಯ ನವರಾತ್ರಿ ಉತ್ಸವಗಳನ್ನೂ ಮುಸ್ಲಿಮರ ಉರೂಸ್ ಮುಬಾರಕ್‍ಗಳನ್ನೂ ಕ್ರೈಸ್ತರ ಸಂತ ಮೇರಿ ಉತ್ಸವ, ಕ್ರಿಸ್‍ಮಸ್‍ಗಳನ್ನೂ ಸಂಭ್ರಮದಿಂದ ಆಚರಿಸುತ್ತದೆ. ಆ ಮೂಲಕ ಸರ್ವಧರ್ಮ ಸಮನ್ವಯ ಮತ್ತು ಸಾಮಾಜಿಕ ಸಹಬಾಳ್ವೆಗೆ ಉತ್ತಮ ಮಾದರಿಯಾಗಿದೆ ಮೂಡುಬಿದಿರೆ.ಕೋಮು ಸೂಕ್ಷ್ಮ ಪ್ರದೇಶವಾದ ಕರಾವಳಿಯ ಯಾವ ಭಾಗದಲ್ಲೂ ಗಲಭೆ ನಡೆದರೂ ಮೂಡುಬಿದಿರೆಯಲ್ಲಿ ಇದರ ಪರಿಣಾಮ ಕಾಣುವುದಿಲ್ಲ.

ಇಲ್ಲಿ ಪ್ರತಿ ವರ್ಷ ಜನವರಿಯಲ್ಲಿ ನಡೆಯುವ ಆಳ್ವಾಸ್ ವಿರಾಸತ್ ಸಂಗೀತ ನೃತ್ಯಗಳ ಮಹಾ ಮಹೋತ್ಸವವಾಗಿ ಹೊಮ್ಮುತ್ತಿದೆ. ಡಾ.ಮೋಹನ ಆಳ್ವರು ತಮ್ಮ ಹುಟ್ಟೂರಾದ, ಮೂಡುಬಿದಿರೆಯ ಸಮೀಪದ ಮಿಜಾರಿನ, ತಮ್ಮ ವಿಶಾಲವಾದ ತೋಟದ ಮಧ್ಯೆ ಪ್ರತಿ ವರ್ಷ ಏರ್ಪಡಿಸುವ ಈ ಉತ್ಸವಕ್ಕೆ ಊರು, ಪರ ಊರುಗಳಿಂದ ಸಹಸ್ರಾರು ಕಲಾಭಿಮಾನಿಗಳು ಬಂದು ಸಂಗೀತ ನೃತ್ಯಗಳ ರಸದೌತಣವನ್ನು ಸವಿಯುತ್ತಾರೆ. ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದ ಮಹಾನ್‌ ಕಲಾವಿದರು ಈ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿ ಜನರ ಮನ ತಣಿಸುವುದಲ್ಲದೆ, ತಾವೂ ಅತೀವ ಸಂತೋಷ ಪಡುವುದು ಈ ಉತ್ಸವದ ವಿಶೇಷ.

ಕೆಲವೇ ವರ್ಷಗಳ ಹಿಂದೆ ಇಲ್ಲಿನ ಕಡಲಕೆರೆಯ ಬಳಿ ನಿರ್ಮಿಸಲಾದ ಕಂಬಳದ ಗದ್ದೆಯಲ್ಲಿ ಪ್ರತಿ ವರ್ಷ ನಡೆಯುವ ಕಂಬಳವು ಮೂಡುಬಿದಿರೆಯ ಆಕರ್ಷಣೆಯನ್ನು ಹೆಚ್ಚಿಸಿದೆ. ದಕ್ಷಿಣ ಕನ್ನಡದ ಜಾನಪದ ಕ್ರೀಡೆಯಾದ ಕಂಬಳದಲ್ಲಿ ಕಟ್ಟು ಮಸ್ತಾದ ಕೋಣಗಳ ಮತ್ತು ಅವುಗಳನ್ನು ಓಡಿಸುವವರ ಓಟವನ್ನು ನೋಡಲು ಅಪಾರ ಜನಸ್ತೋಮ ಸೇರಿರುತ್ತದೆ.

ಮೂಡುಬಿದಿರೆಯು ಶಿಕ್ಷಣ ಕ್ಷೇತ್ರದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತಿಯನ್ನು ಪಸರಿಸುವಲ್ಲಿ ತನ್ನ ಕೊಡುಗೆ ನೀಡುತ್ತಾ ಬಂದಿದೆ. ಇಲ್ಲಿನ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಜೈನ ಪ್ರೌಢ ಶಾಲೆ ಮತ್ತು ಪದವಿಪೂರ್ವ ವಿದ್ಯಾಲಯ, ಶ್ರೀ ಮಹಾವೀರ ಮಹಾವಿದ್ಯಾಲಯ, ಶ್ರೀಧವಳಾ ಮಹಾವಿದ್ಯಾಲಯ, ದಿಗಂಬರ ಜೈನ ಪ್ರಾಥಮಿಕ ಶಾಲೆ, ಬಾಬು ರಾಜೇಂದ್ರ ಪ್ರಸಾದ ಪ್ರೌಢ ಶಾಲೆ, ಹೋಲಿ ರೋಸರಿ ಪ್ರೌಢ ಶಾಲೆ, ಜ್ಯೋತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಾಂತ್ಯ ಹಿರಿಯ ಪ್ರಾಥಮಿಕ ಶಾಲೆ ಪ್ರಮುಖವಾದವು. ನಂತರದ ದಿನಗಳಲ್ಲಿ ಪ್ರಾಂತ್ಯ ಸರಕಾರಿ ಪ್ರೌಢ ಶಾಲೆ, ರೋಟರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಸಂತ ಥಾಮಸ್‍ ಶಾಲೆ, ಕಲ್ಲಬೆಟ್ಟು ಸರಕಾರಿ ಪ್ರಾಥಮಿಕ ಶಾಲೆ ಮತ್ತಿತರವು ಅಸ್ತಿತ್ವಕ್ಕೆ ಬಂದವು. ಎಂಭತ್ತರ ದಶಕದಲ್ಲಿ ಸ್ಥಾಪಿತವಾದ ಸರಕಾರಿ ಸಹಕಾರ ತರಬೇತಿ ಸಂಸ್ಥೆ, ಎಸ್ ಎನ್ ಮೂಡುಬಿದಿರೆ ಪಾಲಿಟೆಕ್ನಿಕ್‍, ಎ ಜಿ ಸೋನ್ಸ್ ಕೈಗಾರಿಕಾ ತರಬೇತಿ ಸಂಸ್ಥೆ, ಎಂ ಕೆ ಅನಂತರಾಜ ದೈಹಿಕ ಶಿಕ್ಷಣ ಮಹಾವಿದ್ಯಾಲಯಗಳು ವೃತ್ತಿಪರ ಶಿಕ್ಷಣಕ್ಕೂ ಅವಕಾಶ ಕಲ್ಪಿಸಿದವು. ತೊಂಭತ್ತರ ದಶಕದಲ್ಲಿ ಸ್ಥಾಪಿತವಾಗಿ ದೇಶಾದ್ಯಂತ ಹೆಸರು ಮಾಡಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಗಳು ಪದವಿಪೂರ್ವ ಮತ್ತು ಪದವಿ ವಿದ್ಯಾಲಯ, ದಾದಿಯರ ಶಿಕ್ಷಣ ಸಂಸ್ಥೆ, ಆಯುರ್ವೇದ ಮಹಾವಿದ್ಯಾಲಯ, ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯಗಳನ್ನೊಳಗೊಂಡಿವೆ. ಇವುಗಳೊಂದಿಗೆ ಮಿಜಾರು ತಾಂತ್ರಿಕ ಶಿಕ್ಷಣ ಸಂಸ್ಥೆಯೂ ಸೇರಿ ಮೂಡುಬಿದಿರೆಯು ಶಿಕ್ಷಣ ಕ್ಷೇತ್ರದ ಭೂಪಟದಲ್ಲಿನ ಪ್ರಮುಖ ಚುಕ್ಕೆಯಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ್ದಾರೆ, ಮಾಡುತ್ತಿದ್ದಾರೆ.ಮೂಡುಬಿದಿರೆಯು ಬಹಳ ಹಿಂದಿನಿಂದಲೂ ವ್ಯಾಪಾರ ವಾಣಿಜ್ಯದಲ್ಲಿ ಹೆಸರುವಾಸಿಯಾಗಿದ್ದ ಪಟ್ಟಣ. ಇಲ್ಲಿನ ವ್ಯಾಪಾರಿಗಳು ದೇಶ-ವಿದೇಶಗಳ ವಿವಿಧ ಸ್ಥಳಗಳ ವ್ಯಾಪಾರಿಗಳೊಂದಿಗೆ ವ್ಯವಹಾರ ಸಂಬಂಧ ಇಟ್ಟುಕೊಂಡಿದ್ದರೆಂದು ತಿಳಿದಿದೆ. ಇದಕ್ಕೆ ಸಣ್ಣ ಉದಾಹರಣೆಯಾಗಿ ಸಾವಿರ ಕಂಭದ ಬಸದಿಯ ಗೋಡೆಯ ಮೇಲೆ ಕೆತ್ತಲಾದ ಡ್ರಾಗನ್ ಪ್ರಾಣಿಯ ಉಬ್ಬು ಚಿತ್ರವನ್ನು ಗಮನಿಸಬಹುದು. ಆ ಕಾಲದಲ್ಲೇ ವ್ಯಾಪಾರಿಗಳು ಚೀನಾದೊಂದಿಗೆ ವ್ಯಾಪಾರ ಸಂಬಂಧವಿಟ್ಟುಕೊಂಡಿದ್ದರೆಂದು ಇದರಿಂದ ತಿಳಿಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮೂಡುಬಿದಿರೆ ಮತ್ತು ಆಸುಪಾಸಿನಲ್ಲಿ ಗೋಡಂಬಿ ಉದ್ಯಮ, ಕೃಷಿ, ಸಣ್ಣ ಕೈಗಾರಿಕೆಗಳು, ಭತ್ತ, ಎಣ್ಣೆಯ ಗಾಣಗಳು, ಆಯುರ್ವೇದೀಯ ಔಷಧ ತಯಾರಿಕೆ ಇತ್ಯಾದಿಗಳು ಬೆಳೆದು ನಿಂತಿವೆ.

ಮೂಡಬಿದ್ರೆಯು ಪುರಸಭೆಯ ಆಡಳಿತಕ್ಕೆ ಒಳಪಟ್ಟದ್ದು 23ರಷ್ಟು ವಾರ್ಡುಗಳನ್ನು ಹೊಂದುವ ಮೂಲಕ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.
ಮೂಡಬಿದ್ರೆಯ ಭೌಗೋಳಿಕ ವಿಸ್ತೀರ್ಣವು 39.89 ಚದರ ಕಿ.ಮೀ. ಆಗಿದ್ದು 25,713 ರಷ್ಟು ಜನಸಂಖ್ಯೆ ಹೊಂದಿದೆ. ಇದರಲ್ಲಿ 13,363 ಮಹಿಳೆಯರು ಸೇರಿಂದಂತೆ 12,347 ರಷ್ಟು ಪುರಷರಿದ್ದಾರೆ. ಇಲ್ಲಿ ಹಲವಾರು ಜಾತಿವರ್ಗದ ಜನರು ವಾಸಿಸುತ್ತಿದ್ದು, ಹಿಂದೂ, ಮುಸ್ಲಿಂ, ಕೈಸ್ತರೆಂಬ ಯಾವುದೇ, ಜಾತಿಭೇದವಿಲ್ಲದೆ, ಸಾಮರಸ್ಯದ ಜೀವನವನ್ನು ಸಾಗಿಸುತ್ತಿದ್ದಾರೆ. ಇವರ ಜೊತೆ ಜೊತೆಯಲ್ಲಿಯೇ 2563 ಮಂದಿ ಪರಿಶಿಷ್ಟ ಜಾತಿಯವರೂ, 458 ಪರಿಶಿಷ್ಟ ವರ್ಗದ ಜನರಿದ್ದು ಇಡೀ ಮೂಡಬಿದ್ರೆ ನಗರವು ಈ ಜಾತಿ ಧರ್ಮಗಳ ಕಂಪಿನೊಂದಿಗೆ ಪಾವನವಾದಂತಿದೆ.
ಮೂಡುಬಿದ್ರೆ ಜನರು ನಗರವಾಸಿಗಳಾಗಿದ್ದು, ವ್ಯವಸಾಯ ಕೃಷಿಯಂತಹ ಉದ್ಯೋಗವನ್ನೇ ಆಶ್ರಯಿಸಿಕೊಂಡವರಲ್ಲ, ಬದಲಾಗಿ ಇವರ ಉದ್ಯೋಗಗಳು ಇವೆಲ್ಲಗಳಿಗಿಂತ ಭಿನ್ನವಾಗಿದೆ. ಕೈಗಾರಿಕೆ, ಕಂಪನಿ, ಕನ್ಸ್ಟ್ರಕಪನ್ ಕೆಲಸಗಳಂತಹ ಹತ್ತು-ಹಲವು ಕ್ಷೇತ್ರಗಳಲ್ಲಿ ಇವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇಲ್ಲಿನ ಪುರಸಭೆಯೆಂಬ ಆಡಳಿತಾತ್ಮಕ ಭಾಗವು, ಅಧ್ಯಕ್ಷರು, ಉಪಾಧ್ಯಕ್ಷರೂ ಸೇರಿದಂತೆ 23 ಜನಪ್ರತಿನಿಧಿಗಳನ್ನೊಳಗೊಂಡಿದೆ.
ಇಲ್ಲಿ ಆಡಳಿತ ಆರೋಗ್ಯ, ನಾಗರಿಕ, ಕಂದಾಯ, ನೀರು ಸರಬರಾಜು ಹೀಗೆ 5 ವಿಭಾಗಗಳಲ್ಲಿ ಮೂಲಕ ಜನರಿಗೆ ಉತ್ತಮ ಸೌಲಭ್ಯಗಳನ್ನು ಕೊಡುವಲ್ಲಿ ಯಶಸ್ವಿಯೊಗಿದ್ದಾರೆ. ಮತ್ತು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಆನ್ಲೈನ್ನ್ನೂ ಪರಿಚಯಿಸಲಾಗಿದೆ ಇದರಿಂದ ಸಾರ್ವಜನಿಕರ ಬೇಡಿಕೆಗಳನ್ನು ಕ್ಷಿಪ್ರಗತಿಯಲ್ಲಿ ಈಡೇರಿಸುವುದು ಇದರ ಉದ್ದೇಶವಾಗಿದೆ ಹಾಗೂ ಇದು ನೇರವಾಗಿ ರಾಜ್ಯ ಸರಕಾರದ ಕಾರ್ಯಚಟುವಟಿಕೆಗಳಿಗೆ ಸಂಬಂಧ ಹೊಂದಿದೆ.

ಮೂಡಬಿದಿರೆಗೆ ಕರಾವಳಿಯ ಅತ್ಯಮೂಲ್ಯ ಕೊಡುಗೆಯೆಂದರೆ, ಅರಣ್ಯ ಸಂಪತ್ತು.. ಇದು ಮುಗಿದು ಹೋಗದ ಸಂಪನ್ಮೂಲ ಕೊಡ ಆಗಿದೆ. ಮೂಡುಬಿದ್ರೆ ಕೇಂದ್ರ ಪ್ರದೇಶವನ್ನು ಹೊರತು ಪಡಿಸಿದರೆ, ಅದರ ಸುತ್ತಮುತ್ತ ಈ ಸಂಪತ್ತು ಹೇರಳವಾಗಿದೆ.
ಕುದರೆಮುಖದ ವ್ಯಾಪ್ತಿಯಡಿಯಲ್ಲಿ ಎಂಟು ಮುಖ್ಯವಿಭಾಗಗಳು ಕಂಡುಬರುತ್ತವೆ. ಈ ಮುಖ್ಯ ವಿಭಾಗಗಳಲ್ಲಿ ಮೂಡುಬಿದ್ರೆ ಅರಣ್ಯ ವ್ಯಾಪ್ತಿಯು ಒಂದಾಗಿದೆ.
ಇಲ್ಲಿ 4001 ಹೆಕ್ಟೇರ್ ಪ್ರದೇಶವನ್ನು ರಕ್ಷಿತಾರಣ್ಯವೆಂದು ಫೋಷಿಸಲಾಗಿದ್ದು, ಈ ಪ್ರದೇಶವು ವಿವಿಧ ಕಡೆಗಳಲ್ಲಿ ಮುಖ್ಯವಾಗಿ ಹೊಸಬೆಟ್ಟು 57 ಹೆಕ್ಟರ್ ಪ್ರದೇಶ, ಕಲ್ಲಮುಂಡೂರು 100 ಹೆಕ್ಟರ್ ಪ್ರದೇಶವು ರಕ್ಷಿತಾರಣ್ಯದ ಭಾಗವಾಗಿದೆ.
ಮೂಡಬಿದ್ರೆ ವಲಯದ ಅರಣ್ಯ ಕಛೇರಿ ವ್ಯಾಪ್ತಿಯಲ್ಲಿ ಬರುವ ಅರಣ್ಯದ ವ್ಯಾಪ್ತಿಯನ್ನು ಅರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ, ಶಿರ್ತಾಡಿ, ಕಿನ್ನಿಗೋಳಿ, ಹೊಸ್ಮಾರು, ಬಜಗೋಳಿ, ಮೂಡುಬಿದ್ರೆ ಕೇಂದ್ರ ಮೂಡುಬಿದ್ರೆ (ಪುತ್ತಿಗೆ, ಮಾರ್ಪಾಡಿ). ಇವುಗಳ ಮೇಲುಸ್ತುವಾರಿಯು ವಲಯ ಅರಣ್ಯ ಸಂರಕ್ಷಣಾಧಿಕಾರಿಯ ಮೂಲಕ ಇತರ ಅಧಿಕಾರಿಗಳು ನಿರ್ವಹಿಸುತ್ತಾರೆ.
ಚಿರತೆ, ಕಾಟಿ, ಮುಳ್ಳಹಂದಿ, ಕಾಡುಹಂದಿ, ಕಾಳಿಂಗಸರ್ಪ ಸೇರಿದಂತೆ, ಕೋತಿ, ನರಿ, ಮೊಲ, ಹೆಬ್ಬಾವು ಹೀಗೆ ಹಲವಾರು ಜಾತಿಯ ಜೀವಿಗಳು ಈ ಅರಣ್ಯಗಳಲ್ಲಿ ವಾಸಿಸುತ್ತಿವೆ (ಜೀವನ ನಡೆಸುತ್ತಿವೆ). ಇತ್ತೀಚಿನ ದಿನಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಾದುದರ ಪರಿಣಾಮವಾಗಿ ಅರಣ್ಯಗಳಲ್ಲಿ ಮರಗಿಡಗಳು ತಮ್ಮ ಬೆಳವಣಿಗೆಯನ್ನು ಕಂಡಿವೆ.


ಇಲ್ಲಿನ ದೇವಾಲಯಗಳ ಪೈಕಿ ದುರ್ಗಾದೇವಿಯ ದೇವಾಲಯ (ಗೌರಿ ದೇವಸ್ಥಾನ) ಬಹಳ ಪ್ರಾಚೀನವಾದುದು ಕ್ರಿ.ಶ. 13ನೇ ಶತಮಾನದಲ್ಲಿ ವಿಶೇಷವಾದ ರಾಜಾಶ್ರಯವನ್ನು ಪಡೆದಿದ್ದ ಶಕ್ತಿ ಕೇಂದ್ರ. ನಾಗಾರಾಧನೆಯ ಪರಂಪರೆಯಾ ಎಲ್ಲಿ ಜನಪ್ರಿಯವಾದದ್ದು, ಇಂದಿಗೂ ಇಲ್ಲಿನ ಜನರು ನಾಗಾರಾಧನೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬಂದಿದ್ದಾರೆ. ಇಲ್ಲಿನ ಇತರ ಪ್ರಮುಖ ದೇವಸ್ಥಾನಗಳೆಂದರೆ ಶ್ರೀಬಡಗು ಮಹಾಲಿಂಗೇಶ್ವರ ದೇವಸ್ಥಾನ(ಅಲಂಗಾರು), ಶ್ರೀ ಕಾಳಿಕಾಂಬ ದೇವಸ್ಥಾನ, ಶ್ರೀ ವೀರಮಾರುತಿ ದೇವಸ್ಥಾನ, ಶ್ರೀ ವೆಂಕರರಮಣ ದೇವಸ್ಥಾನ, ಶ್ರೀ ಮಹಾಮ್ಮಾಯಿ ದೇವಸ್ಥಾನ, ಶ್ರೀವೆಂಟರಮಣ ದೇವಸ್ಥಾನ, ಹನುಮಂತ ದೇವಸ್ಥಾನ, ಶ್ರೀ ಕಾಳಿಕಾಂಬ ಮಠ (ಅಲಂಗಾರು), ಜಂಗಮ ಮಠ (ಪೊನ್ನೆಚಾರಿ), ಆದಿಶಕ್ತಿ ಮಹಾದೇವಿ ದೇವಸ್ಥಾನ ಮಾರಿಗುಡಿ (ಸ್ವರಾಜ್ಯ ಮೈದಾನ), ಮಾರಿಯಮ್ಮ ದೇವಸ್ಥಾನ (ಕೊಡಂಗಲ್ಲು), ಕೊಡಮಣಿತ್ತಾಯ ದೇವಸ್ಥಾನ (ನಿಡ್ಡೋಡಿ), ನಾಗಬ್ರಹ್ಮ ದೇವಸ್ಥಾನ (ಲಾಡಿ), ಮಣಿಕಂಠ ಅಯ್ಯಪ್ಪ ದೇವಸ್ಥಾನ (ಒಂಟಿಕಟ್ಟೆ), ದೈವಾರಾಧನೆ, ನಾಗಾರಾಧನೆಗಳು ಇಲ್ಲಿನ ಜನರ ಜೀವನದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಪಡೆದಿವೆ.
ಇಲ್ಲಿನ ಸುಮಾರು 10 ರಷ್ಟು ಮಸೀದಿಗಳಿವೆ ಬದ್ರಿಯ ಜುಮ್ಮಾ ಮಸೀದಿ, ಜಾಮಿಯಾ ಮಸೀದಿ, ಮೊಗಿಯುದ್ದೀನ್ ಜುಮ್ಮಾ ಮಸೀದಿ, ಬದ್ರಿಯಾ ಮಸೀದಿ, ಮಹಮ್ಮದೀಯಾ ಮಸೀದಿ ಮರಿಯಾಡಿ, ಮಸ್ಜಿದ್ ಮಹ್ಮದಿಯಾ, ವಿಕ್ತಿಯಾ ಮಸೀದಿ, ಮಸ್ಜಿದುಸ್ಸಹಾಬ, ಚಮನ್ ಷಾ ವಲಿ ದರ್ಗಾ .
ಈ ಪ್ರದೇಶದಲ್ಲಿ ಒಟ್ಟು 3 ಪ್ರಮುಖ ಇಗರ್ಜಿಗಳನ್ನು ಕಾಣಬಹುದು; ಟೌನ್ ಇಗರ್ಜಿ, ಅಲಂಗಾರು ಇಗರ್ಜಿ , ಕಲ್ಲಬೆಟ್ಟು ಇಗರ್ಜಿ.

ಜೈನ ಬಸದಿಗಳು:
ಮೂಡುಬಿದಿರೆಯಲ್ಲಿ ಕಲಾಪ್ರೇಮಿಗಳನ್ನು ಆಕರ್ಷಿಸುವುದು, ಮೂಡುಬಿದಿರೆಗೆ ಹೊಸ ಕಳೆಯನ್ನು ತಂದುಕೊಟ್ಟು ಇಂದಿಗೂ ಸಾವಿರಾರು ಪ್ರವಾಸಿಗರ ತೀರ್ಥಯಾತ್ರಿಯರ, ಸಂಸ್ಕೃತಿ ಪ್ರಿಯರನ್ನು ತನ್ನೆಡೆಗೆ ಕೈಬೀಸಿ ಕರೆಯುತ್ತಿರುವ ಪ್ರಾಚೀನವಾದರೂ ಚಿನ್ನದಷ್ಟೇ ಹೊಳಪುಳ್ಳ ಜೈನ ಬಸದಿಗಳು, ಒಟ್ಟು 18 ಬಸದಿಗಳು ಒಂದೇ ಕಡೆ ಕಾಣಸಿಗುತ್ತಿರುವುದು ಇಲ್ಲಿನ ವಿಶೇಷ ಅವುಗಳಲ್ಲಿ ವಾಸ್ತುಶಿಲ್ಪದ ದೃಷ್ಠಿಯಿಂದ ಅಮ್ಮನವರ ಬಸದಿ, ಗುರುಬಸದಿ, ಸಾವಿರ ಕಂಬದ ಬಸದಿ, ತಿಪ್ಪದ ಬಸದಿಗಳು ಮಹತ್ವವಾದವುಗಳು ಸಾವಿರ ಕಂಬದ ಬಸದಿ ಎಂದು ಜನಪ್ರಿಯವಾಗಿರುವ 'ತ್ರಿಭುವನ ತಿಲಕ ಚೂಡಾಮಣಿ ಬಸದಿ' ಕ್ರಿ.ಶ 1430 ರಲ್ಲಿ ರಚಿಸಲ್ಪಟ್ಟಿದೆ. ಇದನ್ನು 'ಹೊಸಬಸದಿ' ಎಂದೂ ಕರೆಯುತ್ತಾರೆ.
ಈ ಬಸದಿಗಳಲ್ಲಿ 'ಗುರುಬಸದಿ' ಉಳಿದೆಲ್ಲ ಬಸದಿಗಳಿಗಿಂತ ಪ್ರಾಚೀನವಾದದು ಎನ್ನಲಾಗಿದೆ. ಈ ಬಸದಿ ಸುಮಾರು 10 ಅಡಿ ಎತ್ತರದ ಜೈನ ತೀರ್ಥಂಕರ ಪಾರ್ಶ್ವನಾಥನ ಅಪೂರ್ವ ಕಲಾವಿಗ್ರಹ ಹಾಗೂ ಜೈನ ಸಿದ್ಧಾಂತ ಗ್ರಂಥಗಳನ್ನು ಒಳಗೊಂಡಿದೆ.
ಉಳಿದ ಬಸದಿಗಳೆಂದರೆ: ಪಡುಬಸದಿ, ಮಠದ ಬಸದಿ, ಪಾಠಶಾಲಾ ಬಸದಿ, ಬಡಗು ಬಸದಿ, ಶೆಟ್ರ ಬಸದಿ, ಅಮ್ಮನವರ ಬಸದಿ, ಬೆಟ್ಕೇರಿ ಬಸದಿ, ಕೋಟಿ ಬಸದಿ, ತಿಪ್ಪದ ಬಸದಿ, ದೇರಮ್ಮ ಶೆಟ್ಟಿ ಬಸದಿ, ಕೆರೆ ಬಸದಿ, ಬೈಕಣತಿಕಾರಿ ಬಸದಿ, ಮಹಾದೇವಶೆಟ್ಟಿ ಬಸದಿ, ಚೋಳಶೆಟ್ಟಿ ಬಸದಿ, ಕಲ್ಲು ಬಸದಿ, ವಿಕ್ರಮ ಶೆಟ್ಟಿ ಬಸದಿ ಈ ಎಲ್ಲಾ ದೇವಾಲಯಗಳನ್ನೊಳಗೊಂಡು ಒಂದು ಪವಿತ್ರ ತೀರ್ಥಕ್ಷೇತ್ರದಂತೇ ಬೆಳೆದಿದೆ ಈ ತುಳುನಾಡು.
ಬಿದಿರೆಯ ರಾಜಕಾರಣಿಗಳು...

ಕೆ. ಅಭಯಚಂದ್ರ ಜೈನ್ ಪ್ರಸ್ತುತ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕರಾಗಿ ಕಾರ್ಯ ನಿರ್ವಸುತ್ತಿದ್ದಾರೆ. ಅಮರನಾಥ ಶೆಟ್ಟಿ ಮೂಡಬಿದಿರೆಯ ಮಾಜಿ ಸಚಿವರಲ್ಲೊಬ್ಬರು. ಜಗದೀಶ ಅಧಿಕಾರಿ, ಶ್ರೀಮತಿ ಹರಿಣಾಕ್ಷಿ ಸುವರ್ಣ, ಪ್ರೇಮಾನಂದ ಪ್ರಭು ಮೇಘನಾಥ ಶೆಟ್ಟಿ, ಕೆ.ಕೃಷ್ಣರಾಜ ಹೆಗ್ಡೆ, ಬಾಹುಬಲಿ ಪ್ರಸಾದ್, ಆಗ್ನೆಸ್ ಸಲ್ಡಾನಾ, ಎಂ.ಎಸ್. ಕೋಟ್ಯಾನ್, ಜೊಸ್ಸಿ ಮಿನೆಜಸ್, ಹನೀಪ್, ಕೆ.ಆರ್.ಪಂಡಿತ್, ಸ್ವೀವನ್ ವಿನ್ನೆಂಟ್ ಡಿ'ಸೋಜ, ಧರ್ಮಪಾಲ ಜೈನ, ಕೆ.ಸೋಮನಾಥ ಶೆಟ್ಟಿ ಇಂದಿನ ಮೂಡಬಿದಿರೆಯಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿರುವ ಪ್ರಮುಖ ರಾಜಕಾರಣಿಗಳು ರತ್ನಾಕರ ದೇವಾಡಿಗ ಮಾಡಬಿದಿರೆಯ ಪುರಸಭಾದ್ಯಕ್ಷರಾದರೆ, ಶ್ರೀಮತಿರಮಣಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಮಾಜ ಸೇವಕರು

ಮೂಡಬಿದಿರೆ, ಹಲವಾರು ಉದಾರ ಹೃದಯಗಳು, ಕಷ್ಟವೆಂದರೆ ಸಹಾಯಹಸ್ತ ಚಾಚುವವರ ಊರು, ಪರಸ್ಪರ ಸಹಕಾರ ಮನೋಭಾವ ಮಾನವೀಯತೆಯ ಒಂದು ಪ್ರಮುಖ ಮೌಲ್ಯ.
ಮೂಡುಬಿದಿರೆಯಲ್ಲಿ ಹಲವಾರು ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದ ಸಮಾಜ ಸೇವಕರು ಸಾರ್ವಜನಕರ, ಕಷ್ಟದಲ್ಲಿರುವವರ ಸಹಾಯಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್ನ ಮಾಲಿಕ ಶ್ರೀಪತಿ ಭಟ್, ಎಂ.ರಾಮದಾಸ್ ಪೈ, ಎಂ.ಶೈಲೇಂದ್ರ ಕುಮಾರ್, ಅಶೋಕ ಅಧಿಕಾರಿ, ಬಿ.ಕೆ.ಸದಾಶಿವ, ಬಿ.ಮೋಹನ್ದಾಸ್ ಶೆಟ್ಟಿ, ಪ್ರಪುಲ್ಲಾಯಂ ಶೆಟ್ಟಿ, ಮಹಮ್ಮದಾಲಿ, ಯಂ.ಜಯರಾಮ ಆಚಾರ್ಯ, ಎಂ.ಎ.ರೆಹ್ಮಾನ್, ಪ್ರಭಾಚಂದ್ರ ಜೈನ್, ಬೇಲಾಡಿ ರಾಮಚಂದ್ರಾಚಾರ್ಯ, ಸುಂದರ್ ಜಿ.ಕೋಟ್ಯಾನ್, ಎಂ.ಸುರೇಶ್ ಕುಮಾರ್, ಗೋಪಾಲ ಎಂ., ಯಶವಂತ ಕಾಮತ್, ಅಹ್ಮದ್ ಬಾವ, ಸತೀಶ್ ಸಾಲ್ಯಾನ್, ರಘುರಾಮ್ ಶೆಟ್ಟಿ, ಟಿ.ಕೆ ಆಚಾರ್ಯ ಮುಂತಾದವರು ಸಮಾಜಸೇವೆಗೆ ತಮ್ಮಿಂದಾಗುವಂತ ಕೊಡುಗೆ ನೀಡಿ ಸಮಾಜಯೂ ತೀರಿಸುವಲ್ಲಿ ತೃಪ್ತಿ ಪಡೆಯುತ್ತಿದ್ದಾರೆ.

ಹಲವು ಪ್ರಥಮಗಳ ತವರೂರು:
2003ರಲ್ಲಿ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜೈನಕಾಶಿ ಮೂಡುಬಿದಿರೆಯಲ್ಲಿ ನಡೆದದ್ದು ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತಂದು ಕೊಟ್ಟಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡುಬಿದಿರೆ ಆರಂಭಿಸಿದ ಕನ್ನಡ ನಾಡು-ನುಡಿಯ ಉತ್ಸವ 'ಆಳ್ವಾಸ್ ನುಡಿಸಿರಿ' ಹಾಗೂ ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನ ಆಳ್ವಾಸ್ ವಿರಾಸತ್' ಇವೆರಡು ಪ್ರಮುಖ ಸಾಹಿತ್ಯ-ಸಾಂಸ್ಕೃತಿಕ ಉತ್ಸವಗಳು ಮೊದಲ ಬಾರಿಗೆ ಒಂದು ಶಿಕ್ಷಣ ಸಂಸ್ಥೆ ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಪ್ರತಿವರ್ಷವೂ ಸಮ್ಮೇಳನಗಳನ್ನು ನಡೆಸುತ್ತಿರುವುದು ಮೂಡಬಿದಿರೆಯ ವೈಭವವನ್ನು ಹೆಚ್ಚಿಸಿದೆ. ಈ ಸಮ್ಮೇಳನಗಳಲ್ಲಿ ಭಾಗವಹಿಸಲು ಸಾವಿರಾರು ಕಲಾಸಕ್ತರು ಪ್ರತೀ ವರ್ಷವೂ ಇಲ್ಲಿ ಒಟ್ಟು ಸೇರುವುದನ್ನು ನೋಡಲೇ ಒಂದು ಸುಗ್ಗಿ.


ಮೂಡಬಿದಿರೆಯ ಪತ್ರಕರ್ತರು:
ಪ್ರಸನ್ನ ಹೆಗ್ಡೆ, ಧನಂಜಯ ಮೂಡಬಿದಿರೆ ಗೋವರ್ಧನ ಹೊಸಮನಿ, ಸದಾನಂದ ಹೆಗ್ಡೆಕಟ್ಟೆ, ಸೀತಾರಾಮ ಆಚಾರ್ಯ, ರೇಮಂಡ್ ಡಿ'ಕುನ್ಹ, ನವೀನ್ ಕುಮಾರ್, ಕೃಷ್ಣ ಕುಮಾರ್, ಗಣೇಶ ಕಾಮತ್, ಹರೀಶ್ ಕೆ. ಆದೂರು, ಬಿ.ಕೆ. ಅಶ್ರಘ್, ಕುಂಟಾಡಿ ದಯಾನಂದ ಪೈ, ಪ್ರೇಮ ಶ್ರೀ ಪ್ರಸ್ತುತ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಇವರುಗಳ ಹಲವು ಬರಹಗಳ ಪತ್ರಿಕೆಗಳಲ್ಲಿ ಪ್ರಕಟವಾಗಿ, ಜನಪ್ರಿಯಗೊಂಡಿವೆ.

ಸಂಘ-ಸಂಸ್ಥೆಗಳು:
ಕೋಟರ್ಯಾಕ್ಟ್ ಕ್ಲಬ್, ಲಯನ್ಸ್ ಕ್ಲಬ್, ರಿಕ್ಷಾ ಮಾಲಕ ಚಾಲಕರ ಸಂಘ, ಮೂಡಬಿದ್ರಿ ಸ್ಪೋರ್ಟ್ಸ್ ಕಲ್ಚರಲ್ ಎನೋಸಿಯೇಶನ್, ಯುವಕ ಮಂಡಲಗಳು, ರಂಗಸಂಗಮ (ನಾಟಕ ಸಂಘ), ವೀರಮಾರುತಿ ಸೇವಾ ಸಂಘ, ವಿಶ್ವಕರ್ಮ ಸೇವಾ ಸಮಿತಿ, ರಾಜ್ಯ ರೈತ ಸಂಘ (ಮೂಡಬಿದ್ರಿ) ಪತ್ರಕರ್ತರ ಸಂಘ, ಸೌಹೌರ್ದ ಸೌರಭ, ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್, ಶ್ರೀ ನಾರಾಯಣಗುರು ಸೇವಾ ಸಂಘ ಜೈನ್ ಮಿಲನ್, ಮಹಾವೀರ ಸಂಘ, ಸೈಂಟ್ ವಿನ್ಸೆಂಟ್ ಡಿಪೋಲ್ ಸೊಸೈಟಿ, ಕಿದ್ಮುತುಲ್ ಇಸ್ಲಾಮ್ ಎಸೋಸಿಯೇಶನ್ ಮುಂತಾದುವು ಜನಪದ, ಸಾಂಸ್ಕೃತಿಕ ಕ್ಷೇತ್ರವಾಗಿ ಮೂಡಬಿದಿರೆಯೂ ಕೂಡ ಗುರುತಿಸಿಕೊಂಡಿದೆ. ಇಲ್ಲಿನ ಜೋಡುಕೆರೆ ಕಂಬಳ ಕೋಟಿ ಚೆನ್ನಯ್ಯ ಕಂಬಳವು ಇಲ್ಲಿನ ಜನಪ್ರಿಯ ಜಾನಪದ ಕ್ರೀಡೆ ಇಲ್ಲಿನ ಉಪಕ್ರೀಡೆಯಾಗಿ ಕೋಳಿ ಅಂಕವನ್ನೂ ನಡೆಸಲಾಗುತ್ತದೆ.

-ಚಂದ್ರಪ್ರಭಾ/ಸುಮನಾ

1 comments:

Anonymous said...

moodbidri ya kendra bindhu jain matha dha
gurugala bagge suddiye illa bore article

Post a Comment