ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:28 AM

ಅಸ್ಪೃಶ್ಯರು

Posted by ekanasu

ವೈದೇಹಿ ಕಾದಂಬರಿ
ಕಳೆದ ಸಂಚಿಕೆಯಿಂದ...

`ಮಂಜ, ನೀನು ಬಂದದ್ದು ಒಳ್ಳೆಯದೇ ಆಯಿತು.ಕಾಣೀಗ, ಹೇಳಿ ಕಳಿಸಿದ ಹಾಗೆ ಬಂದೆ' - ಎಂದರು ಗೌರಮ್ಮ.
`ಇಸ್ವಾಸ ಅಂದರೆ ಅದೇ ಅಲ್ಲವೇ ಅಮ್ಮ? ನನ್ನಿಂದೇನಾಗಬೇಕು ಹೇಳಿ' - ಎಂದು ಹೆಗಲ ಮೇಲಿನ ವಸ್ತ್ರವನ್ನು ಕೊಡಕಿ ತಲೆಗೆ ಸುತ್ತಿಕೊಂಡು ಸೊಂಟಕ್ಕೆ ಕೈ ಕೊಟ್ಟು ನಿಂತ ಮಂಜ. ಮರ ಹತ್ತಿ ಹಲಸಿನಕಾಯಿ ಇಳಿಸಿದ್ದೆಂದರೆ ! ಬಾವಿಗೆ ಕೊಡಪಾನ ಇಳಿಸಿದ ಹಾಗೆ. `ನೀನು ಹೋದ ಜನ್ಮದಲ್ಲಿ ಬಹುಶ: ಮಂಗ ಆಗಿದ್ದಿರಬೇಕು. ಈ ಜನ್ಮದಲ್ಲಿ ಮಂಜ' - ಎಂದ ಶಿವ. `ನೀವು ಏನಂದರೂ ಅದು ಸಮನೇ' - ಎಂದು ಮಂಜ ನಕ್ಕ. ಅವನಿಗೊಂಚೂರು ಕಾಫಿ ತಿಂಡಿಯೂ ಸಿಕ್ಕಿತು. ಮಜೂರಿಯಲ್ಲಿಯೂ ಗೌರಮ್ಮ ಚೌಕಾಸಿ ಮಾಡ ಮಾಡಲಿಲ್ಲ. `ಎರಡು ದಿನ ಬಿಟ್ಟು ಬಾ. ಕಾಟು ಮಾವಿನ ಮರದಲ್ಲಿ ಕಾಯಿ ಬೆಳೆಯುತ್ತದೆ. ಕೊಯಿದು ಹಾಕು. ಬಾವಿಯ ನೀರು ಆರಿಸಿ ಕೆಸರು ತೆಗೆಯಬೇಕು. ಕೆಸರು ತೆಗೆಯಲು ಗೊತ್ತುಂಟಲ್ಲ?'`ಇದೆಂತದಮ್ಮ, ಹೊಸತಾಗಿ ಕೇಳುತ್ತೀರಿ! ದುಡಿದು ತಿಂಬವನಿಗೆ ಅದು ಬರುವುದಿಲ್ಲ, ಇದು ಬರುವುದಿಲ್ಲ ಅಂತ ಉಂಟ?' ಎಂದ ಮಂಜ ಬಿಂಬಲ ಮರದ ಅಡಿಯಲ್ಲಿ ಕುಳಿತು ಬೀಡಿ ಸೇದುತ್ತ.
ಮಾರನೆಯ ದಿನ ಬೆಳೆದದ್ದು ಕಂಡು ಅರ್ಧ ಮಾರುದ್ದದ ಹಲಸಿನ ಕಾಯಿ ಕೊಯ್ದು ಹಾಕಿದಳು ರುಕ್ಕು. ಅಂಗಳದಲ್ಲಿ ಮಡಲಿನ ಮೇಲೆ ಇಟ್ಟುಕೊಂಡು ಕೊಡಲಿ ಎತ್ತಿ ಸಂಯ್ ಅಂತ ನಾಲ್ಕು ಪೆಟ್ಟು ಹಾಕಿದಾಗ `ಆಗ! ಪರಶುರಾಮ! - ಎಂದಳು ಶಾಮಿ. ಸುತ್ತ ನಿಂತ ಮಕ್ಕಳು ನಕ್ಕವು. ರುಕ್ಕುವಿಗೂ ನಗೆ ಬಂದು ಕೊಡಲಿಯ ಒಂದು ಪೆಟ್ಟು ಸಡಿಲವಾಗಿಯೇ ಬಿತ್ತು. `ಶಾಮಮ್ಮ, ನೀವು ಒಂದು ಸಲ ಆಚೆ ಹೋಗಿ, ಕೆಲಸ ಮಾಡಲಿಕ್ಕೆ ಬಿಡುವುದಿಲ್ಲ'-ಎನ್ನುತ್ತ ಮೂಗುತಿಯನ್ನೊಮ್ಮೆ ಮುಟ್ಟಿಕೊಂಡು ಮತ್ತೆರಡು ಪೆಟ್ಟು ಹಾಕಿ ಒಂದು ಕಾಯನ್ನು ಎಂಟು ತುಂಡು ಮಾಡಿಟ್ಟಳು ರುಕ್ಕು.

`ಸಾಕು ಇನ್ನು, ನಡೆ ನಿನ್ನ ಕೆಲಸ ಕಾಣು. ಸೇಡು ಮುಟ್ಟಲಿಕ್ಕೆ ಬರುವುದು ಬೇಡ. ಸೊಳೆ ಸುಲಿದಾದ ಮೇಲೆ ಕರೆಯುತ್ತೇನೆ. ಆಗ ಬಂದು ಚಾರೆ, ಗೂಂಕು ಎಲ್ಲ ಕತ್ತರಿಸಿ ಮಡ್ಡಿಗೆ ಹಾಕು' - ಎಂದರು ಪಾರ್ತಕ್ಕ.

`ಕತ್ತರಿಸಲಿಕ್ಕೆ ಅಡ್ಡಿಯಿಲ್ಲ.ಮುಟ್ಟಲಿಕ್ಕೆ ಮಡಿ ಅಡ್ಡಿ ಬಂತ? ಒಳ್ಳೇ ಪಾರ್ತಮ್ಮ. ಅದಕ್ಕೇ ಮಗ ಹಾಗೆ ಮಾಡಿದ' - ಎಂದು ಓ ಅಷ್ಟು ದೂರದಲ್ಲಿ ಹಟ್ಟಿಯ ಕಟ್ಟೆಯ ಮೇಲೆ ನಿಂತು ಎಲೆಯಡಿಕೆ ಚೀಲ ಬಿಚ್ಚಿಕೊಂಡು ಎಲೆಗೆ ಸುಣ್ಣ ಹಚ್ಚುತ್ತ ಬಾಯಿಗೆಸೆದುಕೊಂಡ ಅಡಿಕೆಹೋಳಿನ ಕುಟುಂ ಜೊತೆಗೆ ಗುಣುಗುಣಿಸಿ ತೃಪ್ತಿಪಟ್ಟು ಬಾಯಿಗೆ ಎಲೆ ತುರುಕಿಕೊಂಡಳು ರುಕ್ಕು.

ಸೊಳೆ ಬಿಡಿಸಲು ಮಕ್ಕಳನ್ನು ಕರೆದರೆ ಅವು ಎಲ್ಲಿ? ಅಷ್ಟರವರೆಗೆ ಅಲ್ಲೇ ಕಾಲು ಕಾಲಿಗೆ ಅಡ್ಡ ತಾಕುತ್ತಾ ನೋಡುತ್ತಾ ಇದ್ದವು ಈಗ ಒಂದೂ ಇಲ್ಲ. ಎಣ್ಣೆ ಹಚ್ಚಿಕೊಂಡು ಜಗಲಿಯ ಕಂಬಕ್ಕೆ ಸುತ್ತು ಹೊಡೆಯುತ್ತಿದ್ದ ರವಿ ಮಾಣಿಯೊಂದನ್ನು ಬಿಟ್ಟರೆ. `ಮಳೆಗಾಲಕ್ಕೆ ಹಪ್ಪಳ ತಿನ್ನಲಿಕ್ಕೆ ಬೇಕು. ಈಗ ಸೊಳೆ ಬಿಡಿಸಲಿಕ್ಕೆ ಯಾಕೆ ಕಳ್ಳಾಟಿಕೆ ಕಾಂಬ' - ಎಂದದ್ದಕ್ಕೆ` ಅದಕ್ಕೇ ನಾನು ಬೇಡ ಎಂದದ್ದು.ಈ ಮಕ್ಕಳನ್ನು ನಂಬಿ ಕೆಲಸ ಹಮ್ಮಿಕೊಂಡರೆ ಹೌದ ಮತ್ತೆ? ಸ್ವಯವಿದ್ದವು ಒಂದೂ ಇಲ್ಲ. ತಡೆಯಿರಿ.ಅದಕ್ಕೆಲ್ಲ ಸರೋಜಮ್ಮನೇ ಸಮ.ಎಬ್ಬಿಕೊಂಡು ಬರಲು ಹೇಳುತ್ತೇನೆ' - ಎಂದು ಗೌರಮ್ಮ ಹೇಳಿ ಒಳಗೆ ಹೋದರು. ಹಾಗೆ ಅವರು ಒಳಗೆ ಹೋಗಿ ಬರವುದರೊಳಗೆ ಆ ತುದಿಯಿಂದ ಈ ತುದಿಯಿಂದ ದೊಡ್ಡ ಹಿತ್ತಿಲ ಕೊಡಿಯಿಂದ ಸಣ್ಣ ಹಿತ್ತಿಲ ಸಂದಿಯಿಂದ ಎಂದು ಎಲ್ಲ ಬಂದು ಮಿಣ್ಣಗೆ ಕುಳಿತಿದ್ದವು.
ಪುಟ್ಟ `ನನಗೊಂದು ಚಮಚ ಬೇಕು. ಬರಿಗೈಯಿಂದ ಸೊಳೆ ಬಡಿಸಲಿಕ್ಕೆ ಆಗುವುದಿಲ್ಲ' - ಎಂದ.`ನಿಂಗೊಬ್ಬನಿಗೆ ಏನು? ನಿನ್ನ ತೊಟ್ಟಿಲೇನು ಉಪ್ಪರಿಗೆ ಮೇಲೆ ಕಟ್ಟಿದ್ದ? ನಂಗೂ ಬೇಕು - ಎಂದಳು ಜಯ.
`ಹ್ಞಾಂ ಹ್ಞಾಂ...ಜಗಳ ಬೇಡ. ಚಮಚವಲ್ಲ ಮತ್ತೆಂತ ಬೇಡವೇ? ಹಾಗೇ ಬಿಡಿಸಿ ಕಾಂಬ. ಚಮಚದಿಂದ ಬಿಡಿಸುವುದು, ಬಿಡಿಸಿಯಾದ ಮೇಲೆ ಅದನ್ನು ಅಲ್ಲಿಯೇ ಬಿಟ್ಟು ಹಾರುವುದು.ಕಡೆಗದು ಕಾಗೆ ಕಚ್ಚಿಕೊಂಡು ಹೋದ ಲೆಕ್ಕವೇ. ಕೆಲಸದವರ ಕೈ ಕಾಯುತ್ತ ಇರುವುದಕ್ಕಾಗುತ್ತದೆಯೇ?'- ಎಂದು ಗದರಿಸಿದರು ಪಾರ್ತಕ್ಕ.

ಮುಂದುವರಿಯುವುದು...

- ವೈದೇಹಿ.

0 comments:

Post a Comment