ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗೋಕರ್ಣ: ಜೀವಿಯ ಮೂಲಸೆಲೆ ಆನಂದ. ಅದರ ಹುಡುಕಾಟವೇ ನಮ್ಮೆಲ್ಲರ ಬದುಕು. ನಿರಂತರವೂ ಶಾಶ್ವತವೂ ಆದ ಸುಖವನ್ನು ಬಿಟ್ಟು ಕ್ಷಣಿಕವಾದ ಪ್ರಲೋಭನೆಗೊಳಗಾಗಿ ಯಾವಯಾವುದರಲ್ಲಿಯೋ ಸುಖವನ್ನು ಅರಸುತ್ತೇವೆ.ಲೌಕಿಕವಾದ ಎಲ್ಲ ಸಂತೋಷಗಳೂ ದುಃಖದಿಂದ ಪ್ರಾರಂಭಗೊಂಡು ದುಃಖದಲ್ಲಿಯೇ ಪರ್ಯವಸಾನ ಹೊಂದುತ್ತವೆ. ಅವುಗಳಲ್ಲಿ ಸಿಗುವ ಸುಖ ಸಂತೋಷಗಳು ಪರಮಾತ್ಮಸಾನ್ನಿಧ್ಯದ ಸುಖಸಾಗರದ ಒಂದು ಬಿಂದು ಮಾತ್ರ. ಆ ಸುಖವೇ, ನಮ್ಮ ಮೂಲನೆಲೆಯನ್ವೇಷಣೆಯ ಕಥೆಯೇ ರಾಮಾಯಣದ ಮೂಲಕಾರಣ ಎಂದು ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.


ಸಮೀಪದ ಅಶೋಕೆಯಲ್ಲಿ ಚಾತುರ್ಮಾಸ್ಯದ ಅಂಗವಾಗಿ ಆಯೋಜಿತವಾದ ಶ್ರೀರಾಮಕಥೆಯಲ್ಲಿ ಪ್ರವಚನವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಚಿಕ್ಕವಸ್ತುವನ್ನು ತೋರಿಸಿ ದೊಡ್ಡದನ್ನು ನಮ್ಮಿಂದ ಮರೆಯಾಗಿಸುವುದು ಮಾಯೆಯ ಕಾರ್ಯ.ಅದರಿಂದಾಗಿಯೇ ನಾವು ಭಗವಂತನಿಂದ ದೂರವಾಗಿದ್ದೇವೆ.ಅಷ್ಟೇ ಅಲ್ಲ,ನಾವು ದೂರವಾಗಿದ್ದೇವೆಂಬ ಅರಿವಿಲ್ಲದವರೂ ಆಗಿದ್ದೇವೆ.ಇದನ್ನರಿತರೆ ಮುಂದಿನ ಮಾರ್ಗ ಸುಲಭ.ಯಾವುದೇ ಆಕಾಂಕ್ಷೆ ತೀವ್ರವಾದರೆ ಅದೇ ತಪಸ್ಸು.ಇಂತಹ ಅತ್ಯುತ್ಕಟವಾದ ಹಂಬಲದಿಂದಲೇ ಜಯವಿಜಯರು ಪರಮಾತ್ಮನ ಕೃಪೆಗೆ ಪಾತ್ರರಾದರು.ಅಷ್ಟೇ ಅಲ್ಲ,ವೈಕುಂಠದ ದ್ವಾರಪಾಲಕರೂ ಆಗಿ ಪರಮಾತ್ಮದರ್ಶನಕ್ಕೆ ಮಾಧ್ಯಮವೂ ಆದರು. ಜೀವಿಯೊಂದು ಸತತ ಸಾಧನೆಯಿಂದ ಎಂತಹ ಸರ್ವೋತ್ಕೃಷ್ಟ ಸಿದ್ಧಿಯನ್ನು ಪಡೆಯಬಹುದೆಂಬುದಕ್ಕೆ ಜಯವಿಜಯರೇ ಶ್ರೇಷ್ಠನಿದರ್ಶನ.ಆದರೆ ಸಾದಿಸಿದ ಔನ್ನತ್ಯವನ್ನು ಕಾಪಾಡಿಕೊಳ್ಳಲೂ ಭಗವತ್ಕೃಪೆಯೇ ಬೇಕೆಂಬುದಕ್ಕೂ ಅವರೇ ಉದಾಹರಣೆ ಎಂದ ಶ್ರೀಗಳು ರಾಮಾಯಣದ ಮೂಲಬೀಜವಾಗಿದ್ದು, ಶ್ರೀರಾಮಾವತಾರಕ್ಕೆ ಕಾರಣವಾಗಿದ್ದು ವೈಕುಂಠದಲ್ಲಿ ನಡೆದ ಒಂದು ಘಟನೆ ಎಂದು ರಾಮಾಯಣದ ಹಿನ್ನೆಲೆಯನ್ನು ಸಂತೋಷದ ತರತಮಭಾವಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರು.


ಈ ಗೀತ,ನೃತ್ಯ,ಆಶುಚಿತ್ರ,ಹಾಗೂ ರೂಪಕಗಳ ಮೂಲಕ ಬಿತ್ತರವಾಗುತ್ತಿರವ ಈ ರಾಮಕಥೆಯಲ್ಲಿ ಇಂದು ಡಾ.ಗಜಾನನ ಶಮರ್ಾ ಮತ್ತು ವಿದ್ವಾನ್ ಜಗದೀಶ ಶರ್ಮ ಅವರ ಸಂಯೋಜನೆಯಲ್ಲಿ ಪ್ರಸ್ತುತವಾದ ವೈಕುಂಠದರ್ಶನ ರೂಪಕವು ಅತ್ಯಾಕರ್ಷಕವಾಗಿ ಜನಮಾನಸವನ್ನು ಸೂರೆಗೊಂಡಿತು.ಗೀತರಾಮಾಯಣ ಖ್ಯಾತಿಯ ಶ್ರೀಪಾದ ಭಟ್,ಖ್ಯಾತ ಗಾಯಕಿ ಪ್ರೇಮಲತಾ ದಿವಾಕರ್, ಸಂಧ್ಯಾ ಭಟ್, ವಿಶ್ವೇಶ್ವರ ಭಟ್ ಗಾಯಕರಾಗಿ, ಗೋಪಾಲಕೃಷ್ಣ ಹೆಗಡೆ, ರಾಜಶೇಖರ ಹೆಬ್ಬಾರ್ ತಬಲಾವಾದಕರಾಗಿ ಹಾಗೂ ಶ್ರೀ ಪ್ರಕಾಶ್ ಕಲ್ಲರೆಮನೆ ಕೊಳಲುವಾದಕರಾಗಿ ಕಾರ್ಯಕ್ರಮಕ್ಕೆ ಮೆರುಗುನೀಡಿದರು.ಕುಮಾರ್ ರೋಡ್ ಲೈನ್ಸ್ ನ ವೆಂಕಟರಮಣಹೆಗಡೆ ದಂಪತಿಗಳು ಇಂದಿನ ರಾಮಕಥೆಯ ಯಾಜಮಾನ್ಯ ವಹಿಸಿದ್ದರು.ಈಮೊದಲು ಹೊನ್ನಾವರಮಂಡಲದ ಗೇರಸೊಪ್ಪ,ಅಪ್ಸರಕೊಂಡ,ಹಾಗೂ ಮುಗ್ವಾ ವಲಯಗಳ ಶಿಷ್ಯಭಕ್ತರ ಶ್ರೀಗುರುದೇವತಾಸೇವೆಯು ಸಂಪನ್ನಗೊಂಡಿತು.
- ಸತ್ಯಶಂಕರ ಶರ್ಮ

0 comments:

Post a Comment