ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:25 AM

ಅಸ್ಪೃಶ್ಯರು

Posted by ekanasu

ವೈದೇಹೀ ಕಾದಂಬರಿ...
ಕಳೆದ ಸಂಚಿಕೆಯಿಂದ...
ಅದಕ್ಕೆ ಶಿವ ಎಂದ `ಅವನಿಗೆ ಚಮಚ ಕಡಲಿಕ್ಕೆ ನನ್ನ ಕಡೆಯಿಂದ ಯಾವ ಆಕ್ಷೇಪ ಇಲ್ಲ. ಪೈಂಟೆಂದರೆ , ಬೆಟ್ಟು ಬೀರನ ಎಂಜಲು ಹಪ್ಪಳದಲ್ಲಿ ಸೇರಿ ಮಳೆಗಾಲವಿಡೀ ನಾವು ತಿನ್ನಬೇಕಾಗುತ್ತದಲ್ಲ!'
ಪುಟ್ಟ ಸಟ್ಟೆಂತ ಬೆಟ್ಟು ಎಳೆದುಕೊಂಡು ಎದ್ದು ಬಂದು ಶಿವನಿಗೆ ಚಿವುಟಿದ. `ಮಣಿ ಶಿವ, ನಿಂಗೆ ಬೇಡದ್ದು. ಯಾಕೆ ಸುಮ್ಮನೆ ಕುಳಿತ ಮಾಣಿಯನ್ನು ತಂಡುವುದು? ಪುಟ್ಟನದು ಎಂತಹ ಎಂಜಲು? ಎಂಟು ವರ್ಷದೊಳಗಿನ ಮಕ್ಕಳ ಎಂಜಲೆಂದರೆ ದೇವರ ಎಂಜಲೇ. ಹೋಗು ಮಣಿ ಪುಟ್ಟ, ಕೈ ತೊಳೆದುಕೊಂಡು ಬಾ. ಅವನ ಹತ್ತಿರ ಅಷ್ಟು ಹೇಳಿಸಿಕೊಳ್ಳಲಿಕ್ಕೆ ನಿಂಗೇನು ಪಳ್ಳ'? ಪುಟ್ಟ ಕೈ ತೊಳೆದುಕೊಂಡು ಬಂದು ಕುಳಿತ.ಒಳಗೆ ಸರೋಜ ಅರೆದುಕೊಳ್ಳುತ್ತಾ ಇದ್ದರೆ ಗೌರಮ್ಮ ಒಲೆಯ ಬಳಿಯ ಕೆಲಸ ಮಾಡುತ್ತಾ ಅಡಿಗೆ ಸಾಗಿತ್ತು.


ಸೊಳೆ ಬಿಡಿಸುವ ಕೆಲಸ ಸುರುಮಾಡುವಾಗ ಚಿರಿಚಿರಿಯಾದರೂ ಕತೆ ಪದ್ಯ ಎಲ್ಲ ಹೇಳುತ್ತಾ ಇದ್ದರೆ ಹೊತ್ತು ಹೋದದ್ದೇ ತಿಳಿಯುವುದಿಲ್ಲ. ಪಾರ್ತಕ್ಕ ಕೃಷ್ಣನನ್ನುತೊಟ್ಟಿಲಿಗೆ ಹಾಕುವ ಹಾಡು ಹೇಳಿದರು. ಬಾಗಿಲು ತಡೆಯುವ ಹಾಡು, ದ್ರೌಪದಿ ವಸ್ತ್ರಾಪಹರಣದ ಹಾಡು, ಎಲ್ಲ ಮುಗಿದವು. ಹುಣ್ಣಿಮೆಯ ರಾತ್ರಿ ಅಂಕದ ಕಟ್ಟೆಯ ಭೂತಗಳು ಉಡುದಾರ ಸೈತ ಇಲ್ಲದೆ ಕುಣಿಯುವ ಕತೆ ಹೇಳಲು ಪಾರ್ತಕ್ಕನಷ್ಟು ಹುಶಾರು ಯಾರೂ ಇಲ್ಲ.

ಕೋಡಿ ಸೀತಾರಾಮ ಒಂದು ದಿನ ನಿರ್ವಾಹವಿಲ್ಲದೆ ಹುಣ್ಣಿಮೆಯ ದಿನ ರಾತ್ರಿ ಅದೇ ದಾರಿಯಲ್ಲಿ ಬರುವಾಗ ಹೀಗೆ ಕುಣಿಯುವ ಭೂತಗಳು ಇವನನ್ನು ಕಂಡದ್ದು, ತಕ್ಷಣ ಬುದ್ದಿವಂತನಾದ ಸೀತಾರಾಮ ಮೈ ಮೇಲಿನ ಮುಂಡು ಶರಟು ಸರಸರ ಬಿಚ್ಚಿ ಬಿಸಾಟು ಅವುಗಳೊಡನೆ ಅವುಗಳಂತೆಯೇ ಕುಣಿದದ್ದು . ನಸುಕು ಹರಿಯುವಾಗ ಅವೆಲ್ಲ ಮಾಯವಾಗಿ ಇವ ಮತ್ತೆ ಬಟ್ಟೆ ಹಾಕಿಕೊಂಡು ಬಂದದ್ದು! ಎಂತಹ ಕಥೆ!ಮನೆಗೆ ಬಂದ ಮೇಲೆ ಎಂಟು ದಿನ ಗಡಿಯಾಗಿ ಆಯಿತು ಹೋಯಿತು ಎನ್ನುವಂತಹ ಜ್ವರ ಬಂತು. ಆ ವಿಷಯ ಅಲಾಯಿದ . ಆದರೆ ಆ ಹೊತ್ತಿಗೆ ಅವ ಹಾಗೆ ಮಾಡಿರದಿದ್ದರೆ ಉಳಿಯುತ್ತಿದ್ದನ? ಸತ್ತು ಎಲುಬು ಚೂರು ಮಾತ್ರ ಸಿಗುತ್ತಿತ್ತು ಅಷ್ಟೇ.

ಹಾಗೆ ಭೂತ ಎಷ್ಟು ಬೇಕಾದರೂ ಉಂಟು. ಕೆಲಸದ ಅಂತ ಒಂದು ದಿನ ಬೆಳಗ್ಗಿನ ಜಾವಕ್ಕೆ ಕೆಲಸಕ್ಕೆ ಬರುವಾಗ ಆಕಾಶಕ್ಕಿಂತಲೂ ಎತ್ತರದ ಒಂದು ಭೂತ ಹಿಂಬಾಲಿಸಿಕೊಂಡೇ ಬಂದಿತ್ತು. ಆತ ಹಿಂದಿರುಗಿ ಸಹ ನೋಡದೆ ಸರಸರ ಬಂದ.ಗೆಜ್ಜೆ ಶಬ್ಧವಾದ್ದರಿಂದ ಅದು ಹೆಣ್ಣು ಭೂತವೇ ಎಂದು ಆತನ ಅಂದಾಜು. ರಾಮ ರಾಮ ಎಂದು ಉದ್ದಕ್ಕೂ ಹೇಳಿದ್ದರಿಂದ ಭೂತಕ್ಕೆ ಅವನನ್ನು ಮುಟ್ಟಲಿಕ್ಕೆ ಆಗದೇ ಹೋಯಿತು.
ಎಂತ ಹೇಳುವುದು...? ಹೈಸ್ಕೂಲು ವಠಾರದಲ್ಲಿಯೇ ಭೂತ ಉಂಟಲ್ಲ? ಒಂದು ದಿನ ಡ್ರೈವರ್ ಅಪ್ಪು ರಾತ್ರಿಗಟ್ಟಿ ಬರುವಾಗ ಆ ಭೂತ ಧಡ್ಡ ಎದುರು ನಿಂತು ಕಾರು ನಿಲ್ಲಿಸಿತು. ಬೀಡಿ ಕೊಡು ಎಂದಿತು. ಅವ ಬೀಡಿ ಕೊಟ್ಟ , ಕೊಟ್ಟ ಬೀಡಿ ಕೆಳಕ್ಕೆ ಪಟ್ಟೆಂತ ಬಿತ್ತು. ಭೂತಗಳ ಕೈಯಲ್ಲಿ ಒಂದು ಒಟ್ಟೆ ಇರುತ್ತದೆ.ಏನು ಕೊಟ್ಟರೂ ಅದು ಕೆಳಗೆ ಬೀಳುತ್ತದೆ. ಬಿದ್ದದ್ದನ್ನು ಹೆಕ್ಕಿಕೊಡು ಎನ್ನುತ್ತದೆ ಭೂತ. ಹೆಕ್ಕಿಕೊಡಲು ಬಗ್ಗಿದರೆ ನಡೂ ಬೆನ್ನಿಗೆ ಗುದ್ದಿ ರಕ್ತ ಕಾರಿಸುತ್ತದೆ. ಆಯಿತು, ಅವನ ಕತೆ ಅಲ್ಲಿಗೇ ಅಂತ ಅಪ್ಪುವಿಗೂ ಗೊತ್ತಿತ್ತು. ಅವ ಹೆಕ್ಕಿಕೊಡಲಿಲ್ಲ ಬದಲು ಆಕಾಶ ಕಾಣು ಎಂದ. ಭೂತ ಆಕಾಶ ಕಾಣಲು ತಲೆ ಎತ್ತಿದಾ ಜೋರಾಗಿ ಕಾರು ಬಿಟ್ಟುಕೊಂಡು ಹೋಗಿಯೇಬಿಟ್ಟ - ಇದೆಲ್ಲ ಶಿವನ ಗಜೆಟಿನಲ್ಲಿನ ಕತೆ. ಕತೆ ಅರ್ಥವಾಗಲೀ ಆಗದಿರಲಿ , ಕೇಳಲು ಹೇಳುವವರ ಬಾಯಿ ಕಾಣುತ್ತ, ರವಿ ಮಾಣಿಯೂ ಬಂದು ಕುಳಿತಿತ್ತು. ಮಕ್ಕಳಿಗೆಲ್ಲ ಉಸಿರೇ ಕೆಟ್ಟಿ ಹೋದಂತಿತ್ತು. ಇದ್ದರೆ ಅಪ್ಪುವಿನ ಹಾಗೆ ಧೈರ್ಯ ಇರಬೇಕು ಎಂದ ಪುಟ್ಟ.ಅದಕ್ಕೆ `ಎಂತದ ನೀನು ಹೇಳುವುದು ? ಅವ ಕಾರು ನಿಲ್ಲಿಸಿದ , ಬೀಡಿ ಕೊಟ್ಟ , ಅಷ್ಟು ಕೂಡಾ ಮಾಡಬಾರದು. ನಾನಾದರೆ ಸುಯ್ಯಂತ ಕಾರು ಬಿಟ್ಟುಕೊಂಡು ಹೋಗಿಯೇ ಬಿಡುತ್ತಿದ್ದೆ'- ಎಂದ ಶಿವ. ರವಿ ಮಾಣಿ ಶಿವನ ಕೈ ಬಾಯಿಯ ಅಭಿನಯ ಕಂಡು ಚಪ್ಪಾಳೆ ತಟ್ಟಿ ನಕ್ಕಿತು.
`ಅದೆಲ್ಲ ಅಷ್ಟು ಸುಲಭ ಅಲ್ಲ ಮಣಿ. ಕಾರು ನಿಲ್ಲಿಸುವಾಗ ಅದು ನಿನ್ನಂತೆಯೇ - ಅಂದರೆ ಮನುಷ್ಯರಂತೆಯೇ - ಇರುತ್ತದೆ. ನಿಲ್ಲಿಸಿದ ಕೂಡಲೇ ಕಾರಿನ ಬಾಗಿಲು ಹಿಡಿದುಕೊಳ್ಳುತ್ತದೆ. ಆಕಾಶಕ್ಕೆ ಬೆಳೆಯುತ್ತಾ ಹೋಗುತ್ತದೆ. ಆಗ ಏನು ಮಾಡುತ್ತಿ ನೀನು..?'
ಜಯ ಹೇಳಿದಳು - `ಸರೋಜಕ್ಕ ಹೇಳಿದ್ದು ಭೂತಗೀತ ಎಲ್ಲ ಢೋಂಗಿ ಅಂತೆ'
`ಭೂತ ಕಣ್ಣಿಗೆ ಕಾಣುವ ವರೆಗೂ ಢೋಂಗಿಯಂತವೇ. ಕಂಡ ಮೇಲೆ ಗೊತ್ತಾದೀತು'-ಗದಗದ ನಡುಗುವಂತಾಯಿತು ಮಕ್ಕಳಿಗೆ. ಹೀಗೆಲ್ಲ ಮಾತುಕತೆ ಸಾಗುತ್ತಿದ್ದಾಗ ಘಂ ಅಂತ ವಾಸನೆ ಹೊಡೆಯಿತು...

ಮುಂದುವರೆಯುತ್ತದೆ...

- ವೈದೇಹಿ.

0 comments:

Post a Comment