ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:13 PM

ಸಾರ್ಥಕ ಸೇವೆ...

Posted by ekanasu

ವೈವಿಧ್ಯ

ನಮ್ಮ ದೇಶದಲ್ಲಿ ಲಂಚ ಇರುವುದು ಸತ್ಯ. ಲಂಚ ಕೊಡದೆಯೂ ಉದ್ಯೋಗ ಪಡೆಯಬಹುದು ಎನ್ನುವುದು ಸತ್ಯ. ಯಾವುದೇ ಲಂಚ ಪಡೆಯದೆ ಉದ್ಯೋಗ ನೀಡುವ ಎಷ್ಟೋ ಕಂಪನಿಗಳಿವೆ, ಸರ್ಕಾರಿ ಹುದ್ದೆಗಳಿವೆ. ಆದರೆ ಯುವಕರು ಪ್ರಯತ್ನಿಸುತ್ತಿಲ್ಲ. ಲಂಚ,Influence ಇಲ್ಲದೆ ನೌಕರಿ ಸಿಗುವುದಿಲ್ಲ ಎಂಬ ಪೂರ್ವಾಗ್ರಹ ಬೆಳೆಸಿಕೊಂಡಿದ್ದಾರೆ. ಯಾವ ಉದ್ಯೋಗಕ್ಕೆ ಎಷ್ಟು qualification ಇರಬೇಕು ಅಂತನೂ ಸರಿಯಾಗಿ ಗೊತ್ತಿರುವುದಿಲ್ಲ. ಹೀಗಾಗಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತದೆ. ಐ.ಎ.ಎಸ್. ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷೆ ಬರೆಯಲು ಬೇಕಾಗಿರುವುದು ಪದವಿ ಮಾತ್ರ. ಪದವೀಧರರು ಲಕ್ಷಾಂತರ ಮಂದಿ ನಮ್ಮ ರಾಜ್ಯದಲ್ಲಿ ಇದ್ದಾರೆ. ಆದರೆ ಅರ್ಜಿ ಹಾಕುವವರು ಕೆಲವರು ಮಾತ್ರ! ಉಳಿದವರೆಲ್ಲ ಈಗಿನ ಕಾಲದಲ್ಲಿ ಲಂಚ ಇಲ್ಲದೆ... ಎಂದು ಮೂಗು ಮುರಿಯುತ್ತಾರೆ.
ಹೀಗಿರುವಾಗ ಉದ್ಯೋಗ ಮತ್ತು ಯುವಕರ ನಡುವೆ ಒಂದು ಸೇತುವೆ ಆಗ್ತಾ ಇದ್ದಾರೆ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ಡಾ| ಜಿ.ಪಿ. ಪಾಠಣ್ಕರ್ ಮನೆ ಮೇಲೆ ಮಹಡಿ ಕಟ್ಟಿ ಅದನ್ನು ವಿದ್ಯಾರ್ಥಿಗಳCareer guidance (ವೃತ್ತಿ ಮಾರ್ಗದರ್ಶನ) ಗೆ ಮೀಸಲಿಟ್ಟಿದ್ದಾರೆ. ತಮ್ಮ ತಾಯಿ ಲಕ್ಷ್ಮಿ ಪಾಂಡುರಂಗ ಪಾಠಣ್ಕರ್ ಹೆಸರಿನಲ್ಲಿ ಗ್ರಂಥಾಲಯವನ್ನೂ ಅಲ್ಲಿ ಪ್ರಾರಂಭಿಸಿದ್ದಾರೆ. ಯಾವುದೇ ಉದ್ಯೋಗ ಅವಕಾಶವಿದ್ದರೂ ಸರ್ಕಾರ ಹೊಸ ಹುದ್ದೆಗಳ ನೇಮಕ ಮಾಡಲು ಹೊರಟರೂ ಅದನ್ನು ವಾಚನಾಲಯದNotice Board ಗೆ ಹಾಕುತ್ತಾರೆ.

ಉದ್ಯೋಗವಕಾಶ ತಿಳಿಸಲೆಂದೇ ಇರುವ ಹಲವು Magazine ಗಳು ಅಲ್ಲಿ ಬರುತ್ತದೆ. ಅಂಗಡಿಯಲ್ಲಿ ಕೊಂಡರೆ ಅಂತಹ Magazine ಗಳಿಗೆ 15-20 ರೂಪಾಯಿ ಇದೆ. ಆದರೆ ಇಲ್ಲಿ ಅಂತಹ ಹಲವುMagazine ಗಳನ್ನು ಉಚಿತವಾಗಿ ಓದಬಹುದು. ಅಷ್ಟೇ ಅಲ್ಲ ಆ ನೇಮಕಾತಿಗೆ ಸಂಬಂಧಪಟ್ಟ ಪರೀಕ್ಷೆಗಳಿಗೆ ಓದಲು ಪುಸ್ತಕಗಳನ್ನು ಅಲ್ಲಿಯ ಗ್ರಂಥಾಲಯದಿಂದ ಪಡೆಯಬಹುದು. ಕ್ಲರ್ಕ್ ಹುದ್ದೆಯಿಂದ ಹಿಡಿದು ಐ.ಎ.ಎಸ್. ಹುದ್ದೆಯ ತನಕ ನಡೆಯುವ ವಿವಿಧ ಪರೀಕ್ಷೆಗಳಿಗೆ ಅಲ್ಲಿ ಪುಸ್ತಕಗಳು ಲಭ್ಯ. ಉದ್ಯೋಗವಕಾಶಕಷ್ಟೇ ಅಲ್ಲದೆ ವಿವಿಧ ಕೋರ್ಸ್ ಗಳಿಗೆ ಸಂಬಂಧಪಟ್ಟಂತೆ ಡಾ| ಪಾಠಣ್ಕರ್ ಕೌನ್ಸೆಲಿಂಗ್ ನಡೆಸುತ್ತಾರೆ. ಬಿ.ಎ. ಮುಗಿಯಿತು ಮುಂದೇನು? ಎನ್ನುವ ಪ್ರಶ್ನೆಗೆ ಅವರ ಬಳಿ ನೂರಾರು ಉತ್ತರಗಳಿವೆ. ವಿವಿಧ ಕೋರ್ಸ್ ಗಳ ಪ್ರವೇಶ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಓದಲು ಅಲ್ಲಿ ಹಲವು ಪುಸ್ತಕಗಳಿವೆ. CAT, MAT, CET, Text Book ಗಳು ಇತ್ಯಾದಿಗಳು.

'ಪುಸ್ತಕ ಕೊಳ್ಳಲು ದುಡ್ಡಿಲ್ಲದೆ ಯಾವ ವಿದ್ಯಾರ್ಥಿಯು ಶಿಕ್ಷಣ ವಂಚಿತನಾಗಬಾರದು' ಎನ್ನುತ್ತಾರೆ ಪಾಠಣ್ಕರರು.
ಡಾ| ಪಾಠಣ್ಕರ್ರಿಗೆ ಸಮಾಜಸೇವೆಗಾಗಿ ರಾಷ್ಟ್ರಮಟ್ಟದ ಡಾ| ಅಂಬೇಡ್ಕರ್ ಫೆಲೊಶಿಪ್ ಪ್ರಶಸ್ತಿ ಬಂದಿದೆ. ಅವರು ರಾಜ್ಯ ಸರ್ಕಾರದ ಜಿಲ್ಲಾ ಸಂಪನ್ಮೂಲ ವ್ಯಕ್ತಿ. ಹಲವಾರು ಕಡೆ ಕಾರ್ಯಗಾರ ನಡೆಸಿದ್ದಾರೆ. ಇವರ ಮಾರ್ಗದರ್ಶನದಿಂದ ಉದ್ಯೋಗ ಪಡೆದ ವ್ಯಕ್ತಿಯೊಬ್ಬ ತನ್ನ ಮದುವೆಯ ಆಮಂತ್ರಣ ಪತ್ರಿಕೆಯಲ್ಲೇ ಡಾ| ಪಾಠಣ್ಕರ್ರ ಹೆಸರು ಛಾಪಿಸಿದ್ದ. ನೂರಾರು ಮಕ್ಕಳು ಇವರಿಂದಾಗಿ ಉದ್ಯೋಗ ಪಡೆದಿದ್ದಾರೆ. ಎಷ್ಟೇ ಪ್ರಶಸ್ತಿಗಳು ಬಂದರೂ ಅಹಂ ಬೆಳೆಸಿಕೊಳ್ಳದ ಪಾಠಣ್ಕರ್ರು ಯಾವುದೇ ವಿದ್ಯಾರ್ಥಿ ಬಂದರೂ ತಾಳ್ಮೆಯಿಂದ ಶಿಕ್ಷಣ, ಉದ್ಯೋಗದ ಬಗ್ಗೆ ಮಾಹಿತಿ ನೀಡುತ್ತಾರೆ. ಸ್ವಂತ ಖರ್ಚಿನಲ್ಲಿ ಕಾಸರಗೋಡಿನಲ್ಲಿ ಮರಳಿನಲ್ಲಿ ಕಲಾಕೃತಿ ರಚಿಸುವ ಹಾಗೂ ಗಾಳಿಪಟ ಹಾರಿಸುವ ಸ್ಪರ್ಧೆ ಏರ್ಪಡಿಸುತ್ತಾರೆ. ಸ್ವಂತ ಖರ್ಚಿ ನಲ್ಲಿ ಊರಿನಲ್ಲಿ ಹಲವಾರು ಗಿಡಗಳನ್ನು ನೆಟ್ಟಿದ್ದಾರೆ. ಅವುಗಳ ಸುತ್ತ ಕಲ್ಲು ಕಟ್ಟಿಸಿ ರಕ್ಷಣೆ ನೀಡಿದ್ದಾರೆ. ಸುಮಾರು 7 ಅಂತರಾಷ್ಟ್ರೀಯ ಸೆಮಿನಾರ್ಗಳಲ್ಲಿ ಸಂಶೋಧನೆಗಳನ್ನು ಮಂಡಿಸಿದ್ದಾರೆ.

ಸುಮಾರು ಒಂದು ಲಕ್ಷಕ್ಕೂ ಹೆಚ್ಚು ರೂಪಾಯಿ ಸ್ವಂತ ಹಣ ಖರ್ಚು ಮಾಡಿ ಇದನ್ನೆಲ್ಲ ಪ್ರಾರಂಭಿಸಿದ್ದಾರೆ. ಅಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಶನ್ ಸಿಗುವ ವ್ಯವಸ್ಥೆ ಮಾಡಿದ್ದಾರೆ. ಅದರ ಫೀಯನ್ನು ಪಾಠಣ್ಕರ್ರೇ ನೀಡುತ್ತಾರೆ. ಅವರ ಈ ಎಲ್ಲಾ ಚಟುವಟಿಕೆಗಳು ನೇರವಾಗಿ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬಡ ವಿದ್ಯಾರ್ಥಿಗಳಿಗೆ ಸಹಾಯವಾಗುವಂತವು. ಇದು ಶಿಕ್ಷಕನೊಬ್ಬ ಮಾಡಬಹುದಾದ ಸಮಾಜಸೇವೆ. ಸಮಾಜಸೇವೆ ಮಾಡಲು ಎಲ್ಲರೂ ಖಾವಿ ತೊಡಬೇಕಾಗಿಲ್ಲ. ಪಾದ್ರಿ ಆಗಬೇಕಿಲ್ಲ. ಎಲ್ಲರೂ ತಮ್ಮ-ತಮ್ಮ ಕ್ಷೇತ್ರದಲ್ಲಿ ಪರೋಪಕಾರ ಬುದ್ಧಿ ಬೆಳೆಸಿಕೊಂಡರೆ ಸಮಾಜ ಉದ್ಧಾರವಾಗುತ್ತದೆ. ಡಾಕ್ಟರ್ ನಾಲ್ಕಾರು ಜನರಿಗೆ ದಿನ ಉಚಿತ ಔಷಧ ನೀಡಿದರೆ ಸಮಾಜಸೇವೆಯೆ. ಶಿಕ್ಷಕರ ಇಂತಹ ಕೆಲಸಗಳನ್ನು ಜನ ಗುರುತಿಸಿ ಬೆಳೆಸಬೇಕು. ಇದು ಕೇವಲ ಪ್ರಾರಂಭ ಮಾತ್ರ ಅಂದಿದ್ದಾರೆ ಪಾಠಣ್ಕರ್ರು. ಅವರ ಈ ಹೆಜ್ಜೆ ಹೆಮ್ಮರವಾಗಿ ಬೆಳೆದು ಸಮಸ್ತ ರಾಜ್ಯಕ್ಕೆ ಆದರ್ಶವಾಗಲಿ ಎಂದು ಆಶಿಸೋಣ.

- ಆದಿತ್ಯ ಭಟ್

0 comments:

Post a Comment