ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಏಕಕಾಲದಲ್ಲಿ ಎರಡು ಕೈಗಳಲ್ಲಿ ಬೇರೆ ಬೇರೆ ತಾಳಗಳನ್ನು ಹಾಕುತ್ತಾ, ಒಂದು ಕಣ್ಣಿನ ಹುಬ್ಬನ್ನು ಹಾರಿಸುತ್ತಾ (ರೇಚಿತ), 72 ಮೇಳಕರ್ತ ರಾಗಗಳ ಹೆಸರುಗಳನ್ನು ಹೇಳುತ್ತಾಳೆ ಈ ಪುಟಾಣಿ ಕಲಾವಿದೆ. 35 ತಾಳಗಳನ್ನು ಪ್ರೇಕ್ಷಕರ ಪ್ರಶ್ನೆಗಳಿಗನುಗುಣವಾಗಿ ಪ್ರತ್ಯಕ್ಷೀಕರಿಸುತ್ತಾಳೀಕೆ. 60 ಸಂವತ್ಸರಗಳು, ನಕ್ಷತ್ರ. ಮಾಸ, ತಿಥಿಗಳ ಹೆಸರು ಹಾಗೂ ಭಗವದ್ಗೀತೆ, ನಾಟ್ಯಶಾಸ್ತ್ರ-ಅಭಿನಯ ದರ್ಪಣದ ಆಯ್ದ ಶ್ಲೋಕಗಳನ್ನು, ಸ್ತೋತ್ರ-ಸೂಕ್ತಗಳನ್ನು ನಿರರ್ಗಳವಾಗಿ ಹೇಳಬಲ್ಲ ಇವಳ ಬಾಲ ಪ್ರತಿಭೆಗೆ ತಲೆದೂಗದವರಿಲ್ಲ. My Country ಎನ್ನುವ ವಿಷಯದ ಬಗ್ಗೆ ಈಕೆ ಮಾಡುವ ಇಂಗ್ಲಿಷ್ ಭಾಷಣವನ್ನು ಹಿರಿಯರೂ ಮೆಚ್ಚುತ್ತಾರೆ. ಕನ್ನಡ ಸಾಹಿತ್ಯ ಪರಂಪರೆಯ ನೂರೈವತ್ತು ಪ್ರಾತಿನಿಧಿಕ ಹೆಸರುಗಳನ್ನು ಪಟಪಟನೆ ಹೇಳಬಲ್ಲ ವಿಶೇಷ ಜ್ಞಾಪಕ ಶಕ್ತಿ ಇವಳಿಗಿದೆ. 60 ಭೂತಗಳ ಹೆಸರು ಈಕೆಗೆ ತಿಳಿದಿದೆ. ದಾಸರ ಪದಗಳನ್ನು, ದೇಶಭಕ್ತಿಗೀತೆಗಳನ್ನು ಹಾಡುತ್ತಾಳೆ ಈ ಬಾಲೆ. ಇಷ್ಟೆಲ್ಲವನ್ನೂ ಇವಳು ನಡೆಸಿ ನೋಡುಗರನ್ನು ಅಚ್ಚರಿಯಲ್ಲಿ ಕೆಡವುವುದು ತನ್ನ ಮನೆಮನೆಗೆ ಭರತನಾಟ್ಯದ ನೃತ್ಯಗಳ ನಡು ನಡುವೆ ! ಈಕೆಯ ಹೆಸರು ಅಯನಾ ವಿ. ರಮಣ್.



ಮನೆಮನೆಗೆ ಭರತನಾಟ್ಯ . . . ಅನ್ನುವ ಪರಿಕಲ್ಪನೆಯೇ ಶಾಸ್ತ್ರೀಯ ನೃತ್ಯ ಕ್ಷೇತ್ರಕ್ಕೆ ಹೊಸದು. ಇದನ್ನು ಸಾಕಾರಗೊಳಿಸಿದ 8 ವರ್ಷದ ಬಾಲೆ ಅಯನಾ.ವಿ.ರಮಣ್. ಮಂಗಳೂರಿನ ರಂಗಭಾರತಿ ಸಂಸ್ಥೆ 2009ನೇ ವರ್ಷದ ಜನವರಿ ತಿಂಗಳಲ್ಲಿ ಆರಂಭಿಸಿದ ಈ ಸಂಗೀತ, ನೃತ್ಯ ಮತ್ತು ಸಂಸ್ಕೃತಿಗಳ ಜಾಗೃತಿ ಅಭಿಯಾನಕ್ಕೆ ಜೀವ ತುಂಬಿದ ಈ ಬಾಲ ಕಲಾವಿದೆ ಈಗಾಗಲೇ 50ಕ್ಕೂ ಮಿಕ್ಕಿ ಏಕವ್ಯಕ್ತಿ ಪ್ರದರ್ಶನಗಳ ಯಶಸ್ಸನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ. ಈ ಬಹುಮುಖ ಪ್ರತಿಭೆಯ ಸ್ಥೂಲ ಪರಿಚಯ ಇಲ್ಲಿದೆ.

ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಭಾರತೀಯ ಕಲೆಗಳ ತರಬೇತಿ ಕೇಂದ್ರ ರಂಗಭಾರತಿಯ ನಿರ್ದೇಶಕ, ಕಲಾವಿದ, ಪತ್ರಕರ್ತ ಕೆ.ವಿ.ರಮಣ್- ಉಪನ್ಯಾಸಕಿ ಮುಕಾಂಬಿಕಾ ದಂಪತಿಯ ಪುತ್ರಿ ಅಯನಾ.ವಿ.ರಮಣ್.

ವಿದುಷಿ ಶ್ರೀಮತಿ ಗೀತಾಸರಳಾಯ ಮತ್ತು ವಿದುಷಿ ಶ್ರೀಮತಿ ರಶ್ಮೀ ಚಿದಾನಂದ್ ರಲ್ಲಿ ನೃತ್ಯಾಭ್ಯಾಸ ಮಾಡುತಿರುವ ಈಕೆ ಬೆಂಗಳೂರಿನ ವಿದ್ವಾನ್ ಸತ್ಯನಾರಾಯಣ ರಾಜು ಅವರಲ್ಲಿ ವಿಶೇಷ ನೃತ್ಯ ತರಬೇತಿ ಪಡೆಯುತಿದ್ದಾಳೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತಗಳಿಗೆ ತಂದೆಯೇ ಇವಳ ಗುರು. ಜೈನಕಾಶಿ ಎಂದೇ ಹೆಸರಾದ ಮೂಡಬಿದ್ರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಅಯನಾ.ವಿ.ರಮಣ್ ಗಜಾನನ ಮರಾಠೆಯವರಲ್ಲಿ ಕೀಬೋರ್ಡ್ ಕಲಿಯುತ್ತಿದ್ದಾಳೆ. ಭರತನಾಟ್ಯ, ಸಂಗೀತ, ಛದ್ಮವೇಷ, ಭಾಷಣ, ಕಥನ, ಯಕ್ಷಗಾನ, ಕೀಬೋರ್ಡ್ ವಾದನ ಹೀಗೆ ಬಹುಮುಖವಾಗಿ ಅರಳಿಕೊಂಡಿದೆ ಈಕೆಯ ಪ್ರತಿಭೆ. ರಂಗಭಾರತಿ, ಮಂಗಳೂರು ಸಂಸ್ಥೆಯ ಮನೆಮನೆಗೆ ಭರತನಾಟ್ಯದ ಬಾಲ ಕಲಾವಿದೆಯಾಗಿ ನೃತ್ಯಕ್ಷೇತ್ರದ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ನಡುಮನೆಗಳಲ್ಲಿ ಭರತನಾಟ್ಯದ ಸರಣಿ ಕಾರ್ಯಕ್ರಮ ನೀಡುತ್ತಿರುವ ಗರಿಮೆ ಅಯನಾ. ವಿ. ರಮಣ್ ಗಿದೆ.



ತನ್ನ ಮೂರನೆಯ ವಯಸ್ಸಿನಿಂದಲೇ ಬಣ್ಣ ಹಚ್ಚತೊಡಗಿದ ಅಯನಾ.ವಿ.ರಮಣ್ ನಿರಂತರ 4 ವರ್ಷಗಳ ಕಾಲ ರಾಜ್ಯಮಟ್ಟದ ಕೃಷ್ಣವೇಷ ಸ್ಪರ್ಧೆಯಲ್ಲಿ ಬಹುಮಾನಿತೆ. ಛದ್ಮವೇಷ, ಭಾಷಣ, ಸಂಗೀತ, ಕಥನ, ನೃತ್ಯ ಸ್ಪರ್ಧೆಗಳ ವಿಜೇತೆ. ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ನೃತ್ಯ ಕಲಾವಿದ ಕೋಲ್ಕತ್ತದ ಪಂಡಿತ್ ಆಶಿಮ್ ಬಂಧು ಭಟ್ಟಾಚಾರ್ಯಜೀ ಅವರ ತಂಡದ ಜತೆ ಆಳ್ವಾಸ್ ವಿರಾಸತ್ನಂತಹ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ವೇದಿಕೆಯಲ್ಲಿ ಅಭಿನಯಿಸುವ ಅವಕಾಶ ಪಡೆದು 'ಸೈ' ಎನಿಸಿಕೊಂಡಾಕೆ. ಸ್ವತಹ ಭಟ್ಟಾಚಾರ್ಯಜೀ ಅವರ ಮೆಚ್ಚುಗೆ ಗಳಿಸಿದಾಕೆ.

ಅಪ್ರತಿಮ ಸಾಂಸ್ಕೃತಿಕ ಸಂಘಟಕ-ಕಲಾವಿದ ಡಾ. ಎಂ. ಮೋಹನ್ ಆಳ್ವರ ಮೋಹನ ಜಾದೂ ಎಂದೇ ಹೆಸರಾದ ಇಂದ್ರಜಾಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ. ಆಳ್ವರಿಂದಲೇ ಶಹಬ್ಬಾಸ್ಗಿರಿ ಪಡೆದಾಕೆ.

ವಿಶ್ವವಿಖ್ಯಾತ ಮೈಸೂರು ದಸರಾದ ವೇದಿಕೆಯಲ್ಲಿ ರಂಗಭಾರತಿ, ಮಂಗಳೂರು ಪ್ರಸ್ತುತಪಡಿಸಿದ 'ದೇಶ-ಧರ್ಮ' ದೃಶ್ಯರೂಪಕದಲ್ಲಿ ಮಾಜಿ ಸಚಿವ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿಯವರ ಜೊತೆ ಅಭಿನಯಿಸಿ ಪ್ರಶಂಸೆಗೆ ಪಾತ್ರಳಾದಾಕೆ. ತುಳುನಾಡಿನ ಪ್ರಾತಿನಿಧಿಕ ಪಾತ್ರಗಳಾದ ಕೋಟಿ-ಚೆನ್ನಯರ ಅಭಿನಯಕ್ಕಾಗಿ ತನ್ನ ಜತೆಪಾತ್ರಧಾರಿಯೊಂದಿಗೆ ಪ್ರಚಂಡ ಕರತಾಡನ ಗಿಟ್ಟಿಸಿಕೊಂಡಾಕೆ. ಬೆಂಗಳೂರಿನಲ್ಲಿ ನಡೆದ ಶಾಸ್ತ್ರೀಯ ನೃತ್ಯ ಪ್ರಕಾರಗಳ ರಾಜ್ಯ ಮಟ್ಟದ ಮಕ್ಕಳ ಉತ್ಸವ ಚಿನ್ನಕಲಾನಾದಂ-2011ರಲ್ಲಿ ವಿಶೇಷ ಅತಿಥಿಯಾಗಿ ಆಮಂತ್ರಿಸಲ್ಪಟ್ಟು ಪ್ರದರ್ಶನ ನೀಡಿದಾಕೆ.

ಕಾಸರಗೋಡಿನಲ್ಲಿ ನಡೆದ ಅಖಿಲಭಾರತ ಸಂಸ್ಕೃತಿ ಸಮ್ಮೇಳನದಲ್ಲಿ ಅಯನಾಳ ಮನೆಮನೆಗೆ ಭರತನಾಟ್ಯ ಕಾರ್ಯಕ್ರಮದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಸಂಗೀತ-ನೃತ್ಯಗಳ ಪ್ರಾಥಮಿಕ ಮಾಹಿತಿಗಳನ್ನು ಹೊಂದಿರುವ ಈ ಭಿತ್ತಿಪತ್ರಗಳನ್ನು ಎಲ್ಲಾ ಕಾರ್ಯಕ್ರಮಗಳಲ್ಲಿ ಹಂಚಲಾಗುತ್ತದೆ. ಇದರ ವಿವರಗಳನ್ನು ಸರಾಗವಾಗಿ ಹೇಳಬಲ್ಲ ಅಯನಾ.ವಿ.ರಮಣ ಅವಳ ಪ್ರತಿಭೆಗೆ ಎಲ್ಲೆಡೆ ಚಪ್ಪಾಳೆಯ ಸುರಿಮಳೆಯಾಗುತ್ತಿದೆ.

ಮನೆಮನೆಗೆ ಭರತನಾಟ್ಯದ ಮೂಲಕ, ತನ್ನ ನೃತ್ಯ ಪಯಣದ ಪಥದಲ್ಲಿರುವ ಅಯನಾಳ ಸಾಧನೆಗೆ ಹಲವಾರು ಪ್ರಮಾಣ ಪತ್ರಗಳು ಸಂದಿವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವಿರೇಂದ್ರ ಹೆಗ್ಗಡೆಯವರು ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಸಂಸ್ಥೆ ನಡೆಸಿದ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಸಮ್ಮಾನಿಸಿ ಆಶೀರ್ವದಿಸಿದ್ದಾರೆ. ವಿಶ್ವಕನ್ನಡ ಸಮ್ಮೇಳನದ ಜಿಲ್ಲಾ ತೇರಿನ ಯಾತ್ರೆಯಲ್ಲಿ ಮೂಡಬಿದ್ರೆಯ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರಿಂದ ಆಶೀರ್ವದ ಪೂರ್ವಕವಾಗಿ ವಿದೇಶೀ ಪೆನ್ನಿನ ಇನಾಮು ಪಡೆದಿದ್ದಾಳೆ.

ಸಂಸದರು, ಶಾಸಕರು, ಸುಪ್ರಸಿದ್ಧ ಕಲಾವಿದರು, ಸಮಾಜ ಮುಖ್ಯರು ಗೌರವಿಸಿದ್ದಾರೆ, ಮೆಚ್ಚಿದ್ದಾರೆ, ಹರಸಿದ್ದಾರೆ. ತನ್ನ ಶಾಲಾ ವಾರ್ಷಿ ಕೋತ್ಸವದಲ್ಲಿ ವಿಶೇಷ ಸಮ್ಮಾನದ ಮಾನ್ಯತೆ ಗಳಿಸಿಕೊಂಡಿದ್ದಾಳೆ. ಮೂಡಬಿದ್ರೆಯ ರೋಟರಿ ಸಂಸ್ಥೆಯ ಅಭಿನಂದನೆ ಸಂದಿದೆ. ಕಟೀಲಿನ ಶ್ರೀ ರಕ್ತೇಶ್ವರಿ ಸೇವಾ ನ್ಯಾಸ ಯಾನೆ ಟ್ರಸ್ಟ್ ನ ಚೊಚ್ಚಲ ಸಮ್ಮಾನ ಇವಳಿಗೆ ಒಲಿದು ಬಂದಿದೆ.

ಬೆಂಗಳೂರಿನಲ್ಲಿ ಮನೆಮನೆಗೆ ಭರತನಾಟ್ಯದ ಚೊಚ್ಚಲ ಅಭಿಯಾನದ ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿಯ ಬಹುಶ್ರುತ ಕಾಮನಬಿಲ್ಲು (ರೈನ್ಬೋ) ಕಾರ್ಯಕ್ರಮದ ಕಾಕಂಬಿಯಲ್ಲಿ ಒಂದು ಗಂಟೆಯ ನೇರಪ್ರಸಾರದ ಕಾರ್ಯಕ್ರಮದಲ್ಲಿ ತನ್ನ ತಂದೆಯ ಜೊತೆ ಭಾಗವಹಿಸಿದ ಗೌರವ ಪಡೆದಿದ್ದಾಳೆ. 2ನೇಯ ಅಖಿಲ ಕರ್ನಾಟಕ ಬೆಳದಿಂಗಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎರಡು ಕೈಗಳಲ್ಲಿ ಬೇರೆ ಬೇರೆ ತಾಳಗಳನ್ನು ಹಾಕುತ್ತಾ, ರಾಗಗಳ ಹೆಸರು, ಸಂವತ್ಸರಗಳ ಹೆಸರುಗಳನ್ನು ಹೇಳಿ ಅಚ್ಚರಿ ಮೂಡಿಸಿ ಕರ್ನಾಟಕ ಬಾಲಪ್ರತಿಭಾ ರತ್ನ ಸಮ್ಮಾನ ಸ್ವೀಕರಿಸಿದ್ದಾಳೆ. ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ಕೊಡಮಾಡುವ ಅರಳುಮಲ್ಲಿಗೆ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾಳೆ. ಜಿಲ್ಲಾಡಳಿತ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕರಾವಳಿ ಸಂಭ್ರಮ ಪುರಸ್ಕಾರ ಪಡೆದ ಏಕೈಕ ಕಲಾವಿದೆ ಅಯನಾ. ಕಾರ್ಕಳದ ಸುನಿನಾದ ಸಂಗೀತ ಕೇಂದ್ರ ನೀಡುವ ಸುನಿನಾದಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾಳೆ. ಮಂಗಳೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಉದ್ಘಾಟಕಿಯಾಗುವ ಮಾನ್ಯತೆ ಪಡೆದಿದ್ದಾಳೆ.

ರಂಗಭಾರತಿ ಸಂಸ್ಥೆ ನಡೆಸಿದ ಸಂಗೀತ ನೃತ್ಯ ಸಪ್ತಾಹದಲ್ಲಿ ಪ್ರತಿದಿನ ವಿವಿಧ ಅನಾಥಾಶ್ರಮ, ವೃದ್ಧಾಶ್ರಮ, ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ಕೇಂದ್ರ, ಜೈಲು ಮುಂತಾದ ಕಡೆಗಳಲ್ಲಿ ಉಚಿತವಾಗಿ ಕಾರ್ಯಕ್ರಮ ನೀಡಿದ್ದಾಳೆ. ವಿವಿಧ ಸಂಘ ಸಂಸ್ಥೆಗಳ ವೇದಿಕೆಗಳಲ್ಲಿಯೂ ಪ್ರತಿಭಾ ಪ್ರದರ್ಶನ ಮಾಡಿದ್ದಾಳೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಆಕಾಡೆಮಿ, ಕರ್ನಾಟ ತುಳು ಸಾಹಿತ್ಯ ಆಕಾಡೆಮಿಗಳಿಂದ ತನ್ನ ಕಾರ್ಯಕ್ರಮ ಪ್ರಾಯೋಜಿಸಲ್ಪಡುವ ಮಾನ್ಯತೆ ಪಡೆದಿದ್ದಾಳೆ. ಬೆಂಗಳೂರಿನಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಮೈಸೂರಿನ ರಾಮೋತ್ಸವದಲ್ಲಿ ತನ್ನ ತಂದೆಯ ಜೊತೆ ಸುಗಮ ಸಂಗೀತ ಹಾಡಿದ್ದಾಳೆ.

2010ನೇ ಸಾಲಿನ ಎಪ್ರಿಲ್ ತಿಂಗಳಲ್ಲಿ ಈ ಅದ್ಭುತ ಬಾಲಕಿ ತನ್ನ ತಂಡದೊಂದಿಗೆ ಬೆಂಗಳೂರಿಗೆ ತೆರಳಿ ಮನೆ, ವಠಾರ, ಮಂದಿರ, ಆಶ್ರಮ, ವಿದ್ಯಾರ್ಥಿ ನಿಲಯ, ನೃತ್ಯ ಕೇಂದ್ರಗಳಲ್ಲಿ ಮೂರನೇ ಬಾರಿ ನೃತ್ಯ-ಪ್ರತಿಭಾ ಪ್ರದರ್ಶನದ ಸರಣಿ ಕಾರ್ಯಕ್ರಮ ನೀಡಿದ್ದಾಳೆ.

ಪ್ರತಿಷ್ಠಿತ ಆಳ್ವಾಸ್ ನುಡಿಸಿರಿ 2010ರ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಂಪರೆಯ 100 ಹೆಸರುಗಳನ್ನು ನಿರರ್ಗಳವಾಗಿ ಹೇಳಿ ಸರ್ವತ್ರ ಶಹಬ್ಬಾಸ್ ಗಿರಿ ಪಡೆದಿದ್ದಾಳೆ. ಅಲ್ಲದೆ ಸಾಂಸ್ಕೃತಿಕ ವೇದಿಕೆಯಲ್ಲಿ ತನಿ ಭರತನಾಟ್ಯ ಮಾಡುವ ಅವಕಾಶ ಪಡೆದ ಅತ್ಯಂತ ಕಿರಿಯ ಕಲಾವಿದೆಯಾಗಿ ಗುರುತಿಸಲ್ಪಟ್ಟಿದ್ದಾಳೆ ಬಾಲ ಕಲಾವಿದೆ ಕು| ಅಯನಾ ವಿ. ರಮಣ್. ಕಲಿಕೆಯಲ್ಲೂ ಮುಂದಿರುವ ಅಯನಾ ತನ್ನ ಹೆತ್ತವರ ಪ್ರೋತ್ಸಾಹದೊಂದಿಗೆ ಮಹತ್ತರ ಸಾಧನೆಯ ಗುರಿಯನ್ನಿರಿಸಿಕೊಂಡು ಮುಂದುವರಿಸುತ್ತಿದ್ದಾಳೆ...ಇವಳ ಸಾಧನೆ ಮುಂದುವರಿಯಲಿ...ಎಲ್ಲರ ಹಾರೈಕೆ ಈ ಬಾಲ ಪ್ರತಿಭೆಯ ಮೇಲಿರಲಿ...

0 comments:

Post a Comment