ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಚಿಲಿಪಿಲಿಗುಟ್ಟುವ ಹಕ್ಕಿಗಳೇ
ಮರಗಳಿಲ್ಲವೆಂದು ಮರುಗದಿರಿ
ಬನ್ನಿ ನನ್ನೆದೆಯಲಿ ಗೂಡುಕಟ್ಟಿ
ನನ್ನೆದೆ ಬೆಚ್ಚಗಿದೆ.. .

ಇದು ಮಂಡಗದ್ದೆ ಎಂಬ ಊರಲ್ಲಿ ನೆರೆ ಬಂದು ಮೊಟ್ಟೆಗಳೆಲ್ಲ ಕೊಚ್ಚಿಕೊಂಡು ಹೋದಾಗ ತಾಯಿ ಹಕ್ಕಿಗಳ ನೋವಿನ ಕೂಗು ಕೇಳಿ ವಿಹ್ವಲಗೊಂಡು ಬರೆದ ಕವಿತೆಯ ಸಾಲುಗಳು ಎಂದು ಕಣ್ದುಂಬಿಗೊಳ್ಳುತ್ತಲೇ ಮಾತಿಗಾರಂಭಿಸಿದಳು ಮುದ್ದು.ಕುವೆಂಪು, ಬೇಂದ್ರೆ , ನಾ.ಡಿಸೋಜ, ನಿಸಾರ್, ವಸುಧೇಂದ್ರ ನನ್ನ ಇಷ್ಟದ ಲೇಖಕರು. ನನ್ನ ವಯಸ್ಸಿಗೆ ಮೀರಿದ ವಿಚಾರಗಳು ಕಾಡದಿರಲೆಂದು ಅಮ್ಮ ಆಯ್ಕೆ ಮಾಡಿ ಪುಸ್ತಕಗಳನ್ನು ನೀಡುತ್ತಾಳೆ. ನನಗೆ ನಿದ್ದೆ ಕಡಿಮೆ ಓದು ಹೆಚ್ಚು. ಓದು ನನ್ನ ಹುಚ್ಚು. ನಿರಂತರ ಅಧ್ಯಯನ. ಜತೆಜತೆಗೆ ಬರವಣಿಗೆ, ಪತ್ರಿಕೆಯ ಕೆಲಸ... ಹೀಗೆ ಅರಳು ಹುರಿದಂತೆ ಮಾತು.. ಮಾತು.. ಮಾತು...

ಈಕೆ ವಿತಾಶಾ. ತೀರ್ಥಹಳ್ಳಿ ಬೆಟ್ಟಮಕ್ಕಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಳೆ. ಮನೆಯಲ್ಲಿ ಅಮ್ಮ 'ಮುದ್ದು' ಎಂದು ಕರೆಯುತ್ತಿದ್ದಳು. ಅದೇ ಇವಳ ಕಾವ್ಯನಾಮವಾಯಿತು. ಮೂರನೇ ತರಗತಿಯಲ್ಲಿರುವಾಗಲೇ 'ಹೂಗೊಂಚಲು' ಎಂಬ ಕೃತಿ ಪ್ರಕಟವಾಯಿತು. ಇದರಲ್ಲಿ 50 ಕವಿತೆ. 7 ಸಣ್ಣಕತೆಗಳು.

ಮೊದಲ ಸಂಕಲನದ ತುಂಬಾ ಕಾಲ್ಪನಿಕ ಸಂಗತಿಗಳೇ ಹೆಚ್ಚು. ಬಳಿಕ ದಿನನಿತ್ಯದ ಚಟುವಟಿಕೆಗಳು, ಅಲ್ಲಿನ ಪ್ರೀತಿ, ದು:ಖ, ಹತಾಶೆ, ತಲ್ಲಣಗಳು ಹೆಚ್ಚು ಕಾಡತೊಡಗಿ ಕತೆ ಕವಿತೆಗಳಿಗೆ ವಾಸ್ತವದ ಸ್ಪರ್ಶ ನೀಡಿದೆ. ಹಾಗೆ ಹುಟ್ಟಿದ ಕವಿತೆಗಳು 'ಕಾನನ ಕಲರವ' ಎಂಬ ನನ್ನ ಎರಡನೇ ಕೃತಿಯ ಹೂರಣವಾಯಿತು ಎನ್ನುತ್ತಾಳೆ ಮುದ್ದು. ಇದಕ್ಕೆ ಬೇಂದ್ರೆ ಪ್ರಶಸ್ತಿ, ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಶಾರದಾರಾವ್ ಪ್ರಶಸ್ತಿ ಮೊದಲಾದ ನಾಲ್ಕು ಗೌರವಗಳ ಕಿರೀಟ. ಹಲವಾರು ಗೋಷ್ಠಿ-ಕವಿಗೋಷ್ಠಿಗಳಲ್ಲಿ ಭಾಷಣ, ವಾಚನ. ನೃತ್ಯ ಇನ್ನೊಂದು ಆಸಕ್ತಿ. ಅಕ್ಕನ ಜತೆಗೆ ಯಕ್ಷಗಾನಕ್ಕೂ ಹೆಜ್ಜೆ.

ಕನ್ನಡ ಪ್ರೀತಿ

ಇಂಗ್ಲಿಷ್ನ ಟೇಸ್ಟ್ ಮತ್ತು ಇವಳ ಆಸಕ್ತಿ ಇದಕ್ಕೆ ತಾಳೆ ಬರಲಿಲ್ಲ. ಅದಕ್ಕೆ ಸೆಂಟ್ರಲ್ ಸೆಲೆಬಸ್ಸಿನ ಇಂಗ್ಲಿಷ್ ಮೀಡಿಯಂ ಶಾಲೆಯನ್ನು ಐದನೇ ಇಯತ್ತೆಯಲ್ಲಿ ಬಿಟ್ಟು ಇದೀಗ ಆರನೇ ತರಗತಿಗೆ ಕನ್ನಡ ಮಾಧ್ಯಮದ ಸರಕಾರಿ ಶಾಲೆಗೆ ಸೇರಿದ್ದಾಳೆ ಈಕೆ. ಅಲ್ಲದೇ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕಾವಾ ಪರೀಕ್ಷೆಗಳನ್ನು ಪ್ರಥಮ ಶ್ರೇಣಿಯಲ್ಲಿ ಪಾಸು ಮಾಡಿದ್ದಾಳೆ. ಹಿಂದಿನ ಶಾಲೆಯಲ್ಲಿ ನೀಡುತ್ತಿದ್ದ ಫೀಸಿನ ಮೊತ್ತವನ್ನು ಸರಕಾರಿ ಶಾಲೆಯಲ್ಲಿ ಹೊಸ ತರಗತಿ ಕೊಠಡಿ ನಿರ್ಮಾಣಕ್ಕೆ ಕೊಟ್ಟಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ.

ತಂದೆ ವಿರೂಪಾಕ್ಷ ಮೈಸೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಮಗಳಿಗೆ ಇತ್ತೀಚೆಗೊಂದು ಕಂಪ್ಯೂಟರ್ ತೆಗೆದುಕೊಟ್ಟಿದ್ದಾರೆ. ಸದಾ ಬೆಂಬಲಿಸುವ ತಾಯಿ ಲಿಡಿಯಾ ಮತ್ತು ಅಕ್ಕ ವಿನಿಶಾ ಜತೆಗೆ ಸೂರ್ಯೋದಯ, ಚಂದ್ರೋದಯ, ಪ್ರಕೃತಿವೀಕ್ಷಣೆಯ ನಡುವೆ ಮನೆತುಂಬ ಇರುವ ಬೆಕ್ಕುಗಳ ಒಡನಾಟದೊಂದಿಗೆ ಖುಷಿಖುಷಿಯಾಗಿ ದಿನಕಳೆಯುತ್ತಿರುವ ಮುದ್ದು, ವೇದಿಕೆಯಲ್ಲಿ ನಿಂತರೆ ಕನ್ನಡ ಸಾಹಿತ್ಯ ಚರಿತ್ರೆಯಿಂದ ತೊಡಗಿ ಸಮಾಜಶಾಸ್ತ್ರ, ಪತ್ರಿಕೋದ್ಯಮದವರೆಗೂ ಗಂಟೆಗಟ್ಟಲೆ ಮಾತಾಡುವ ವಾಗ್ಮಿ.

ಸಂಪಾದಕಿ!

ವಿದ್ಯಾರ್ಥಿಗಳು ಬರವಣಿಗೆಯನ್ನೇ ಮರೆತಿರುವ ಈ ಕಾಲದಲ್ಲಿ ಈಕೆ 'ಮಂದಾನಿಲ'ವೆಂಬ ಮುದ್ದಾದ ಕೈಬರಹ ಪತ್ರ್ರಿಕೆಯನ್ನು ನಡೆಸುತ್ತಿದ್ದಾಳೆ. ಆರಂಭದಲ್ಲಿ 24 ಪುಟಗಳ ಈ ಮಾಸ ಪತ್ರಿಕೆಯನ್ನು ತನ್ನ ಪತ್ರಮಿತ್ರರಿಗೆ ಉಚಿತವಾಗಿ ಕಳುಹಿಸಿಕೊಡುತ್ತಿದ್ದ ಮುದ್ದು ಇದೀಗ ದ್ವೈಮಾಸಿಕಮಾಡಿ ಚಂದಾ ಇಟ್ಟು 350ಕ್ಕೂ ಹೆಚ್ಚು ಮಂದಿಗೆ ಈ ಪತ್ರ್ರಿಕೆಯನ್ನು ಕಳುಹಿಸುತ್ತಿದ್ದಾಳೆ. ಸಂಪಾದಕೀಯ, ಕವಿತಾಲೋಕ, ಒಂದು ಘಟನೆ-ಒಂದು ನೀತಿ, ಯಶೋಗಾಥೆ, ಲಘು ಬರಹ, ವಿದ್ಯುತ್ ವಾಣಿ, ಮಾರ್ದನಿ ಈ ಪತ್ರಿಕೆಯ ಅಂಕಣ-ಹೂರಣ. ದೆಹಲಿ, ಕೇರಳ, ಅಮೆರಿಕಾಗಳಲ್ಲೂ ತನ್ನ ಪತ್ರಿಕೆಗೆ ಓದುಗರಿದ್ದಾರೆ ಎಂದು ಖುಷಿಯಿಂದ ಹೇಳುತ್ತಾಳೆ ಈಕೆ. ಮುಂದೇನು ಎಂದರೆ ಮೊದಲು ನೆಮ್ಮದಿಯಿಂದ ಕಳೆಯುವ, ಇತರರೊಂದಿಗೆ ಸ್ನೇಹ-ಪ್ರೀತಿಯಿಂದ ಬದುಕುವ ಕಲಾಪ್ರೀತಿಯ ಮನುಷ್ಯಳಾಗಬೇಕು. ಮತ್ತೆ ವಿಜ್ಞಾನ ವಿಭಾಗದಲ್ಲಿ ಓದಿ ಜೆನೆಟಿಕ್ ಇಂಜಿನಿಯರ್ ಅಥವಾ ಉಪನ್ಯಾಸಕಿಯಾಗಬೇಕು ಎಂಬ ಆಸೆ.

ಆಳ್ವಾಸ್ನಲ್ಲಿ ಸಾಕ್ಷ್ಯಚಿತ್ರ!!!


ಇತ್ತೀಚೆಗೆ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಕನ್ನಡ ಸಂಘದಲ್ಲಿ ಉಪನ್ಯಾಸ ನೀಡಲು ಮೂಡುಬಿದಿರೆಗೆ ಬಂದಿದ್ದ ಮುದ್ದು ಮಾತು-ಸಂವಾದ ಕೇಳಿ ಕುತೂಹಲಿಗಳಾದ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪನ್ಯಾಸಕ ಹರೀಶ್ ಆದೂರು, ಮೌಲ್ಯ ಜೀವನ್ ಮಾರ್ಗದರ್ಶನದಲ್ಲಿ ಒಂದೇ ವಾರದಲ್ಲಿ ಇವಳ ಕುರಿತು 'ಎಳೆಬಿಸಿಲು' ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿದರು. ಡಾ.ಎಂ.ಮೋಹನ ಆಳ್ವ, ಪತ್ರಕರ್ತ ಅರವಿಂದ ನಾವಡ ಮೊದಲಾದವರ ಸಮ್ಮುಖದಲ್ಲಿ ಈ ಸಾಕ್ಷ್ಯಚಿತ್ರ ಬಿಡುಗಡೆ ನಡೆಯಿತು. ವಿದ್ಯಾರ್ಥಿನಿ ಜಯಲಕ್ಷ್ಮೀ ಆಳ್ವರ ಸೊಗಸಾದ ಸಾಹಿತ್ಯ ಮತ್ತು ನಿರೂಪಣೆ, ಮೇಘ ಸಮೀರ ಮತ್ತು ಪೂಜಾ ಉಡುಪರ ಸಂಗೀತ ವಿದ್ಯಾರ್ಥಿ ಸನತ್ ಕ್ಯಾಮಾರಾ ಈ ಪುಟ್ಟ ಸಾಕ್ಷ್ಯಚಿತ್ರವನ್ನು ಮೆಲ್ಲುವಂತೆ ಮಾಡಿದೆ.

ಹೇಳಿ ಕೊಟ್ಟದ್ದನ್ನು ಬಾಯಿಪಾಠ ಒಪ್ಪಿಸುವ, ಮೈದಾನದಲ್ಲಿ ಕುಂಟೋಬಿಲ್ಲೆ ಆಡುವ ವಯಸ್ಸಿನ ಮುದ್ದು ನಾವೆಲ್ಲ ಬೆರಗಾಗುವಂತೆ ಕ್ರಿಯಾಶೀಲತೆ ಮತ್ತು ಅದ್ಭುತ ಚಿಂತನಾಶಕ್ತಿಯಿಂದ ಗಮನಸೆಳೆಯುತ್ತಾಳೆ. ಈ ಮುದ್ದುವಿಗೆ ವಿಶ್ ಮಾಡಲು.. ಅಲ್ಲಲ್ಲ.. ಶುಭಾಶಯಕೋರಬಯಸುವಿರಾ..?
ಮುದ್ದು ತೀರ್ಥಹಳ್ಳಿ, ಪ್ರಶಮ, ಬೆಟ್ಟಮಕ್ಕಿ ಹೊಸ ಬಡಾವಣೆ, ಸೀಬಿನಕೆರೆ ಅಂಚೆ, ತೀರ್ಥಹಳ್ಳಿ-577432 ಈ ವಿಳಾಸಕ್ಕೆ ಮುದ್ದಾದ ಕೈಬರಹದ ಪತ್ರ ಬರೆಯಿರಿ. ಓಕೆ?

ಧನಂಜಯ ಕುಂಬ್ಳೆ
ಉಪನ್ಯಾಸಕ ಆಳ್ವಾಸ್ ಕಾಲೇಜು, ಮೂಡುಬಿದಿರೆ-574227.
9448911190- (08258-206098)

0 comments:

Post a Comment