ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಕರಾವಳಿ ಎಂದಾಕ್ಷಣ ಮೊದಲು ನೆನಪಾಗುವುದೇ ಚೆಂಡೆಯ ನಿನಾದ...ಯಕ್ಷಗಾನದ ಗೆಜ್ಜೆಯ ಹೆಜ್ಜೆಯ ಸದ್ದು...ತಲೆ ತಲಾಂತರಗಳಿಂದ ಜನಮಾನಸದಲ್ಲಿ ಅಚ್ಚೊತ್ತದೆ ಮತ್ತೆ ಮತ್ತೆ ನನಪಿನಲ್ಲಿ ಕಾಡುವ ಬಣ್ಣದ ಲೋಕ...ಅಲ್ಲಿ ಹಾಡುಗಾರಿಕೆ ಇದೆ...ಶಬ್ಧಗಳ ಭಂಡಾರವಿದೆ... ವಾಕ್ಚಾತುರ್ಯವಿದೆ...ಓಘವಿದೆ...ನಾಟ್ಯವಿದೆ...ವರ್ಣಗಾರಿಕೆಯಿದೆ...ಹಾವ ಭಾವ ಭಂಗಿ...ಸಂದೇಶ...ಏನಿಲ್ಲ...ಎಲ್ಲವೂ ಇದೆ...ಸ್ಪಷ್ಟ ಸಂದೇಶ ರವಾನೆಗೊಂದು ಸೂಕ್ತ ಕಲೆ ಎಂಬಂತಹ ಒಂದು ಮಹತ್ವದ ಹೆಗ್ಗಳಿಕೆ ಜೊತೆಗಿದೆ...ಕರ್ನಾಟಕದ ಕರಾವಳಿಯುದ್ದಕ್ಕೂ ಹರಡಿರುವ ಯಕ್ಷಗಾನ "ಗಂಡು ಕಲೆ" ಎಂದೇ ಗುರುತಿಸಲ್ಪಟ್ಟಿದೆ...ಕರೆಯಲ್ಪಟ್ಟಿದೆ.


ಇಷ್ಟಲ್ಲಾ ವೈಶಿಷ್ಟ್ಯಗಳನ್ನು ಹೊಂದಿಕೊಂಡಿರುವ ಯಕ್ಷಗಾನ "ಜಾನಪದ ಕಲೆ" ಹೌದೇ? ಇದನ್ನು ಜಾನಪದ ಕಲೆ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ...? ಯಕ್ಷಗಾನ "ಶಾಸ್ತ್ರೀಯ ಕಲೆ" . ಕಾಲ ಹಾಗೂ ಪರಿಸರದ ಪ್ರಭಾವಕ್ಕೆ ಒಳಗಾಗಿ ತನ್ನ ಶಾಸ್ತ್ರೀಯತೆಯನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಂಡ ಕಾರಣಕ್ಕೆ ಇದನ್ನು ಜಾನಪದ ಕಲೆ ಎಂದು ಕರೆಯುವುದು ತಪ್ಪು. ಸಮರ್ಥ ಗುರುಗಳ ಕೊರತೆಯೋ, ಅಥವಾ ಕಾಲ , ಪರಿಸರದ ಪ್ರಭಾವಗಳಿಗೋ ತುತ್ತಾಗಿ ಶಾಸ್ತ್ರೀಯತೆಯನ್ನು ಕಳೆದುಕೊಂಡು ಒಂದಷ್ಟು ಬದಲಾವಣೆಯನ್ನು ಕಂಡಮಾತ್ರಕ್ಕೆ ಅದು ಜಾನಪದ ಕಲೆಯಾಗಿ ಸ್ಥಾನ ಪಡಕೊಳ್ಳಲು ಸಾಧ್ಯವೇ ಇಲ್ಲ.

ಆರ್ಭಟಿ,ಕೈಶಿಕಿ,ಭಾರತಿ,ಸಾತ್ವತಿ ಎಂಬ ಭರತನ ನಾಟ್ಯಶಾಸ್ತ್ರದಲ್ಲಿ ಉಲ್ಲೇಖಿತವಾದ ನಾಲ್ಕೂ ವೃತ್ತಿಗಳನ್ನು ಈ ಯಕ್ಷಗಾನ ಒಳಗೊಂಡಿದೆ.ಆಂಗಿಕಾಭಿನಯ, ವಾಚಿಕಾಭಿನಯ,ಆಹಾರ್ಯ,ಸಾತ್ವಿಕಾಭಿನಯಗಳು ಸಮ್ಮಿಳಿತಗೊಂಡಿರುವುದು ಪ್ರಾಮುಖ್ಯತೆಯನ್ನು ಪಡೆಯುತ್ತದೆ.ಒಂದು "ಕಲೆಯು" ನಾಟ್ಯ ಎನಿಸಿಕೊಳ್ಳಬೇಕಾದರೆ ನೃತ್ಯದೊಂದಿಗೆ ವಾಚಿಕ ಅಂದರೆ "ಮಾತೂ" ಇರಬೇಕು. ಅವೆರಡನ್ನೂ ಹೊಂದಿದ ನಾಟ್ಯಕಲೆ ಈ ಯಕ್ಷಗಾನ.

ನಿರ್ಧಿಷ್ಟವಾದ ಹಸ್ತಮುದ್ರೆಗಳನ್ನು ಈ ಕಲೆ ಒಳಗೊಂಡಿದೆ. ನಿರ್ಧಿಷ್ಟ ತಾಳ, ರಾಗ, ರಂಗಚಲನೆ, ರಂಗತಂತ್ರ, ಹೆಜ್ಜೆಗಳನ್ನು ಹೊಂದಿದೆ.ಸಪ್ತತಾಳಗಳು, ನವರಸಾಭಿನಯವನ್ನು ಹೊಂದಿದೆ.ಘನ, ಸುಷಿರ, ಅವನದ್ಧ ವಾದ್ಯಗಳನ್ನು ಹೊಂದಿದೆ. ಹಲವಾರು ಮುಖವರ್ಣಿಕೆ, ನಿರ್ಧಿಷ್ಟ ವೇಷ ಭೂಷಣಗಳನ್ನು ಈ ಕಲೆ ಒಳಗೊಂಡಿದೆ.

ದೇವದಾಸಿಯರ ನೃತ್ಯ `ಸದಿರ್' ಭರತನಾಟ್ಯ ಎನಿಸಿಕೊಂಡು ಶಾಸ್ತ್ರೀಯ ಕಲೆಗಳ ಸಾಲಿಗೆ ಸೇರಲ್ಪಟ್ಟರೆ, ಮುಸಲ್ಮಾನ್ ಸೇವಕಿಯರ ನೃತ್ಯ `ಕಥಕ್' ಶಾಸ್ತ್ರೀಯ ನೃತ್ಯಪ್ರಕಾರವಾದರೆ, ಯಕ್ಷಗಾನಕ್ಕೆ ಯಾಕೆ ಈ ಶಾಸ್ತ್ರೀಯ ಸ್ಥಾನ ಮಾನ ದೊರೆತಿಲ್ಲ ಎಂಬುದು ಅಚ್ಚರಿಯಾಗಿ ಕಾಡುತ್ತಿದೆ.
ಭರತನೃತ್ಯ ತಮಿಳುನಾಡಿನ ಶಾಸ್ತ್ರೀಯ ಕಲೆಯಾದರೆ , ಕಥಕ್ಕಳಿ, ಮೋಹಿನಿಯಾಟ್ಟಂ ಕೇರಳದ ಶಾಸ್ತ್ರೀಯ ಕಲೆ. ಕೂಚಿಪುಡಿ ಆಂಧ್ರದ ಶಾಸ್ತ್ರೀಯ ಕಲೆ, ಒಡಿಸ್ಸಿ ಒರಿಸ್ಸಾದ ಶಾಸ್ತ್ರೀಯ ಕಲೆ.

ದಕ್ಷಿಣ ಭಾರತದ ಈ ಎಲ್ಲಾ ರಾಜ್ಯಗಳೂ ಒಂದೊಂದು ಶಾಸ್ತ್ರೀಯ ಕಲೆಗಳನ್ನು ಒಳಗೊಂಡಿದೆ. ಹಾಗಾದರೆ ಕರ್ನಾಟಕದ ಶಾಸ್ತ್ರೀಯ ಕಲೆ ಯಾವುದು?ನಿಜಾರ್ಥದಲ್ಲಿ ನೋಡಿದರೆ ಕರ್ನಾಟಕದ ಪ್ರಾತಿನಿಧಿಕ ಏಕೈಕ ಕಲೆ ಯಕ್ಷಗಾನವೇ ಅಲ್ಲವೇ?

- ಅಶ್ವಿನಿ ಕೊಂಡದಕುಳಿ.

1 comments:

Unknown said...

hi sister nanu totendra s makal
ma journalisam student in gulbarga
tumba chanagi artical baritira

Post a Comment