ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ನಲವತ್ತು ವರ್ಷ ಮುಂಬಯಿಯಲ್ಲಿ ಕಷ್ಟಪಟ್ಟು ಟ್ಯಾಕ್ಸಿ ಓಡ್ಸಿ, ಹಣವನ್ನೆಲ್ಲ ಕೂಡಿಟ್ಟು ಮಗನಿಗೆ ವಿಧ್ಯೆ ನೀಡಿದೆ... ಅವನು ನನ್ನನ್ನು ಈ ವೃದ್ಧಾಶ್ರಮದಲ್ಲಿ ಬಿಟ್ಟು ಹೆಂಡತಿಯೊಂದಿಗೆ ವಿದೇಶಕ್ಕೆ ಹೋದ! ಹಾಗೆಂದು ಹಿರಿಯ ಜೀವ ಹೇಳುತ್ತಿದ್ದಾಗ ವಿದ್ಯಾರ್ಥಿಗಳ ಕಣ್ಣಂಚಿನಲ್ಲಿ ನೀರಿತ್ತು. ಇನ್ನೊಬ್ಬರ ಮಗ ಇಂಜಿನಿಯರ್ ಚೆನ್ನೈನಲ್ಲಿ ಹೆಂಡತಿಯೊಂದಿಗೆ ವಾಸವಿದ್ದಾನೆ. ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಹೋಗಿದ್ದಾನೆ...


ಇನ್ನೊಬ್ಬರನ್ನು ಮಾನಸಿಕ ಅಸ್ವಸ್ಥರು ಎಂಬ ಸುಳ್ಳು ಕಾರಣ ನೀಡಿ ಅವರ ಮಗ ವೃದ್ಧಾಶ್ರಮದಲ್ಲಿ ಬಿಟ್ಟಿದ್ದಾರೆ ... ಇವರೆಲ್ಲರೂ ಬಡತನದಲ್ಲಿ ಹೊಟ್ಟೆಬಟ್ಟೆ ಕಟ್ಟಿಕೊಂಡು ಮಕ್ಕಳಿಗೆ ವಿಧ್ಯೆ ನೀಡಿದವರು. ಆದರೆ ಮಕ್ಕಳು ದೊಡ್ಡವರಾದ ನಂತರ ನೌಕರಿ ಹಿಡಿದು ಮದುವೆಯಾಗಿ ಇವರನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಹೋಗಿದ್ದಾರೆ. ವೃದ್ಧಾಶ್ರಮದಲ್ಲಿದ್ದ ಪ್ರತಿಯೊಬ್ಬರ ಕಥೆಯು ಹೀಗೆಯಾಗಿತ್ತು.

ಹಿರಿಯರಿಗೆ ಅಪಾರ ಜೀವನಾನುಭವ ಇರುತ್ತದೆ. ಬದುಕಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಕಿರಿಯ ಸ್ವಾಮಿಗಳ ಕಾಲಿಗೆ ಬೀಳುವುದಕ್ಕಿಂತ ಹಿರಿಯ ಗ್ರಹಸ್ಥರನ್ನು ಸಂದರ್ಶಿಸುವುದು ಒಳ್ಳೆಯದು. ವಾನಪ್ರಸ್ಥದ ಘಟ್ಟದಲ್ಲಿರುವ ಹಲವರಲ್ಲಿ ಜೀವನದ ಬಗ್ಗೆ ಸೂತ್ರಗಳಿರುತ್ತದೆ. ಕೆಲವರು ಜೀವನಪರ್ಯಂತ ನಕ್ಕು ಸಮಸ್ಯೆಗಳನ್ನು ತಿಳಿಗೊಳಿಸಿರುತ್ತಾರೆ. ಇನ್ನೂ ಕೆಲವರು ಒಂದು ಗುರಿಯಿಟ್ಟುಕೊಂಡು ತುಂಬಾ ಗಂಭೀರವಾಗಿ ಅದರತ್ತ ಸಾಗುತ್ತಾರೆ. ಸಾಗುವಾಗ ಕೆಲವೊಮ್ಮೆ ನಗುವುದನ್ನೇ ಮರೆತಿರುತ್ತಾರೆ. ಹಾಗಾದರೆ ಯಾವ ಸೂತ್ರ ಒಳ್ಳೆಯದು? ಇದನ್ನೆಲ್ಲ ಅರಿತುಕೊಳ್ಳಲು ನಾನು ಆಳ್ವಾಸ್ ಪದವಿ ಕಾಲೇಜಿನ ಹ್ಯೂಮೆನಿಟಿಸ್ ಫೋರಂನ ವಿದ್ಯಾರ್ಥಿಗಳೊಂದಿಗೆ ವೃದ್ಧಾಶ್ರಮಕ್ಕೆ ಹೊರಟೆ.ಫೋರಂನ ಮುಖ್ಯಸ್ಥ, ರಾಜಕೀಯಶಾಸ್ತ್ರದ ಮುಖ್ಯಸ್ಥ, ಸತ್ಯಕ್ಕೆ ನನಗೆ ಗೀತೋಪದೇಶ ನೀಡುತ್ತಿರುವ ಪ್ರೊ. ರಮೇಶ್ ಬಸ್ ಇತ್ಯಾದಿಗಳನ್ನು ನೀಡಿ, ಮಾರ್ಗದರ್ಶನವನ್ನು ನೀಡಿ ನಮ್ಮ ಜೊತೆಯಲ್ಲೆ ಬಂದರು. ವಾನಪ್ರಸ್ಥ ಡಿಸ್ಕವರಿಂಗ್ ಲೈಫ್ ಎಂಬ ಸಾಕ್ಷ್ಯ ಚಿತ್ರ ಮಾಡುವ ವಿಚಾರವಿತ್ತು ನಮಗೆ. ಪ್ರೊ. ರಮೇಶ್ ಕೂಡಾ ತುಂಬಾ ದಿನಗಳಿಂದ ಒಳ್ಳೆಯ ಕಾರ್ಯಕ್ರಮವನ್ನು ಮಾಡಬೇಕು ಎನ್ನುತ್ತಿದ್ದರು. ವಾನಪ್ರಸ್ಥದ ವಿಚಾರ ಹೇಳಿದಾಗ ಸಂತೋಷದಿಂದ ಒಪ್ಪಿಕೊಂಡರು. ಡಾ| ಮೋಹನ್ ಆಳ್ವರ ಸಾಮ್ರಾಜ್ಯದಲ್ಲಿ ಯಾವಾಗಲೂ ರಚನಾತ್ಮಕವಾದ ಕೆಲಸಗಳಿಗೆ ಬೆಂಬಲ ಸಿಗುತ್ತದೆ. ಇದೆಲ್ಲ ಕಾರಣಗಳಿಂದ ಆಳ್ವಾಸ್ ಕಾಲೇಜಿನ ಹ್ಯೂಮೆನಿಟಿಸ್ ಪೊರಂ ಹೊರಟಿತು ವಾನಪ್ರಸ್ಥ-ಡಿಸ್ಕವರಿಂಗ್ ಲೈಫ್ ಗಾಗಿ. ಪ್ರೊ. ರಮೇಶ್ರನ್ನೂ ಸೇರಿಸಿ ಇದ್ದವರೆಲ್ಲ ಯುವಜನರೇ! ಹಿರಿಯರ ಜೀವನಾನುಭವವನ್ನು ಹೊರತೆಗೆಯಲು ಒಂದಿಷ್ಟು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದೆವು. ಕ್ಯಾಮೆರಾ ಪ್ರವೀಣ ಹಲವು ವಿದ್ಯಾರ್ಥಿಗಳು ಇದ್ದರು. ವೃದ್ದಾಶ್ರಮ ತಲುಪಿ ಪ್ರಶ್ನೆಗಳನ್ನು ಕೇಳಿ, ನಾವೆ ಕೊಂಡೊಯ್ದಿದ್ದ ತಿಂಡಿ-ತಿನಿಸುಗಳನ್ನು ಹಿರಿಯರೊಂದಿಗೆ ಸೇರಿ ತಿಂದೆವು. ನಮ್ಮ ಒಡನಾಟ ಅವರಿಗೆಲ್ಲ ಆಪ್ತವೆನಿಸಿರಬೇಕು. ಒಬ್ಬೊಬ್ಬರಾಗಿ ತಮ್ಮ ದುಃಖ ಹೇಳಿಕೊಳ್ಳಲು ಪ್ರಾರಂಭಿಸಿದರು. ಕ್ಯಾಮರಾ ಮುಚ್ಚಿತು. ಪ್ರಶ್ನೆಗಳ ಹಾಳೆ ಎಲ್ಲೋ ಹಾರಿ ಹೋಯಿತು. ಅವರ ದುಃಖ ನಮ್ಮನ್ನೂ ಆವರಿಸಿತು. ನಾವು ಜೀವನಾನುಭವ ಪಡೆಯಲು ಸಾಕ್ಷ್ಯಚಿತ್ರ ಮಾಡಲು ಬಂದೆವು ಎಂಬುದನ್ನೇ ಕ್ಷಣಕಾಲ ಮರೆತೆವು.
ವಾನಪ್ರಸ್ಥ-ಡಿಸ್ಕವರಿಂಗ್ ಲೈಫ್ ಸಾಕ್ಷ್ಯ ಚಿತ್ರ ಮುಗಿಸುತ್ತೇವೋ ಇಲ್ಲವೋ ಗೊತ್ತಿಲ್ಲ. ಯಾಕೆಂದರೆ ಅವರ ಸ್ಥಿತಿಯನ್ನು ಚಿತ್ರೀಕರಿಸಿ ಸಾಕ್ಷ್ಯಚಿತ್ರ ಮಾಡಿದರೆ ಯಾರದ್ದೋ ವ್ಯಥೆಯನ್ನು ಬಳಸಿಕೊಂಡಂತಾಗುತ್ತದೆ. ಆದರೆ ಒಂದು ವಿಷಯ ಮಾತ್ರ ಸತ್ಯ ಸಾಕ್ಷ್ಯಚಿತ್ರ ಮುಗಿಸದಿದ್ದರೂ ನಾವು ಯಶಸ್ವಿಯೇ. ಯಾಕೆಂದರೆ ಅಂದು ವೃದ್ಧಾಶ್ರಮಕ್ಕೆ ಬಂದ ಯಾವ ವಿದ್ಯಾರ್ಥಿಯು ಹೆತ್ತವರನ್ನು ವೃದ್ಧಾಶ್ರಮದಲ್ಲಿ ಬಿಡುವುದಿಲ್ಲ. ಅಗಲುವಿಕೆಯ ನೋವು ಅವರೆಲ್ಲರಿಗೆ ಅರ್ಥವಾಗಿದೆ.
ಆದಿತ್ಯ ಭಟ್

0 comments:

Post a Comment