ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:09 PM

ಅಸ್ಪೃಶ್ಯರು

Posted by ekanasu

ಸಾಹಿತ್ಯ
ವೈದೇಹೀ ಕಾದಂಬರಿ
ಕಳೆದ ಸಂಚಿಕೆಯಿಂದ...

ಪಾರ್ತಕ್ಕನನ್ನು ಬೇರೆಯೇ ಒಂದು ಮನೆಯಲ್ಲಿಟ್ಟು ಅವರ ಅನುತನು ನೋಡಿಕೊಳ್ಳುವ ಬೇಕಾದರೆ ಎಂದು ಎಷ್ಟೆಷ್ಟು ಬಗೆಯಲ್ಲಿ ಗಂಡನ ಎದುರು ಹೇಳುವ ಎಂದುಕೊಂಡರೂ ಹೇಳುವಂತಿಲ್ಲ. ದಿನ ಹೋಗುತ್ತಾ ಇದೆ.ಪರಿಸ್ಥಿತಿಗೆ ನಿಧಾನವಾಗಿ ಮನಸ್ಸು ಹೊಂದಿಕೊಂಡಿದೆ. ಮೂಲೆಯಲ್ಲಿ ಆಗೊಮ್ಮೆ ಈಗೊಮ್ಮೆ ಕುಟುಕುತ್ತಾ ಇದ್ದರೂ , ಹಾಗೊಮ್ಮೆ ಒಂದು ವೇಳೆ ವಾಸುದೇವರಾಯರು `ನೀ ಹೇಳಿದ್ದು ಸರಿ. ಪಾರ್ತಕ್ಕನನ್ನು ಕಳಿಸಿಬಿಡುವ'- ಎಂದು ಹೇಳಿದ್ದರೂ ತನಗೆ ಕಷ್ಟವೇ ಆಗುತ್ತಿತ್ತು - ಎಂದು ಪಾರ್ತಕ್ಕನ ಬಗ್ಗೆ ಒಮ್ಮೆ ಅತ್ತ ಒಮ್ಮೆ ಇತ್ತ ವಾಲುವ ಭಾವನೆಗಳೊಂದಿಗೆ ಕ್ಷಣಗಳು ಜಾರುತ್ತಿವೆ. ಬಾವಿ ಕಟ್ಟೆಯಲ್ಲಿ ಯಾರ ಮನೆ ಜಗಲಿ ಕಟ್ಟೆಗಳಲ್ಲಿ ದೇವಸ್ಥಾನದ ಪೌಳಿಗಳಲ್ಲಿ ಅಂತಹ ಪಾರ್ತಕ್ಕನನ್ನು ಮನೆಯಲ್ಲಿಟ್ಟುಕೊಂಡಿರುವುದಕ್ಕೆ ವಾಸುದೇವರಾಯರನ್ನು ಟೀಕೆ ಮಾಡುವವರಿದ್ದಾರೆ.ಆದರೆ ಅವರ ಎದುರಿಗೆ ಬಂದು ಹೇಳುವ ಧೈರ್ಯ ಅಷ್ಟು ಸುತ್ತಿನಲ್ಲಿ ಯಾರಿಗೂ ಇಲ್ಲ.ಈ ಸಲ ಮರದಲ್ಲಿ ಎಲೆಯೇ ಕಾಣದಷ್ಟು ಹಲಸಿನಕಾಯಿ ಆಗಿದೆ. ಈ ಸಲ ಕಾಯಿ ಬೆಳೆದದ್ದು ಬೇಗ. ಪ್ರತಿಬಾರಿ ಮಳೆ ಹತ್ತಿರ ಬಂದಾಗಲೇ ಆ ಮನೆಮರದ ಕಾಯಿ ಬೆಳೆಯುವುದು. ಆಚೆ ತಿನ್ನುವವರು ಯಾರು? ಕಂಡ ಕಂಡವರಿಗೆ ಕೊಡುವುದು. ಒಟ್ಟಾರೆ ದಂಬಾಧೂಳಿ.
ಈ ವರ್ಷ ಮುಹೂರ್ತ ಕಂಡಂತೆ ಬೇಗ ಬೆಳೆದಿದೆ. ಪುರುಸೊತ್ತಿಲ್ಲದ ವರ್ಷ.ಮನೆಯಲ್ಲಿ ಮಗು ಬಾಣಂತಿ ಇದ್ದಾರೆ. ಅಡಿಗೆ, ಬಾಣಂತಿ ಅನುಪಥ್ಯ ಇತ್ಯಾದಿ ಮಾಡಿಕೊಂಡು ಇವೆಲ್ಲವನ್ನು ಮಾಡಲು ಇನ್ನಿನ್ನು ತಾನು ಹುಡುಗಿಯಾಗುತ್ತೇನೆಯೇ? ತನ್ನಿಂದ ಖಂಡಿತ ಸಾಗುವುದಿಲ್ಲ. ಪಾರ್ತಕ್ಕನಂತೂ ಈಗೀಗ ಗುಟ್ಟಿನಲ್ಲಿ ಹರಹರ ಎನ್ನುತ್ತಿದ್ದಾರೆ.ಶಕ್ತಿಕೂಡಿ ಕೆಲಸ ಮಾಡುವುದಲ್ಲ, ಅಭ್ಯಾಸ ಬಲದ ಮೇಲೆ ಅವರು ಅಷ್ಟಾದರೂ ಮಾಡಿಕೊಂಡು ಹೋಗುತ್ತಿರುವುದಕ್ಕೆ ತನ್ನ ಪಥ ಇಷ್ಟಾದರೂ ಸಾಗಿದೆ. ಅಷ್ಟು ವರ್ಷವಾಗಿದ್ದರೂ ದೇಹಕ್ಕೆ ಏನೇನೂ ಯಡಯದ್ದಿದ್ದರೂ ಮನಸ್ಸಿನಲ್ಲಿ ಒಂದು ಹುಂಡು ಕೂಡಾ ಉಮೇದು ಇಲ್ಲದಿದ್ದರೂ ಸುಮ್ಮನೆ ಉಂಡು ಹೊರಳುವ ಜಾಯಮಾನ ಪಾರ್ತಕ್ಕನದ್ದಲ್ಲ. ಅವರ ಪ್ರಾಯದಲ್ಲಿ ತನ್ನನ್ನಾದರೆ ಹೋ ಹೋ ಎಂದು ಹೊತ್ತುಕೊಂಡು ಹೋಗಬೇಕಾದೀತು. ತಾನು ಬರೀ ಬುರ್ಣಾಸು ಅಂತೆಲ್ಲ ಅಂದುಕೊಳ್ಳುತ್ತಾರೆ ಗೌರಮ್ಮ.
ಪಾರ್ತಕ್ಕ ಗೌರಮ್ಮನಿಗೆ ಧೈರ್ಯಕೊಡುತ್ತಾರೆ.
`ಕಾಯಿ ಕ್ಕೊಸು ಕಾಂಬ.ರುಕ್ಕು ಕಡಿದುಕೊಡುತ್ತಾಳೆ.ಮಕ್ಕಳು ಸುಲಿದು ಕೊಟ್ಟರೆ ಹಪ್ಪಳ ಮಾಡಲಿಕ್ಕೆ ಏನಾಗಬೇಕು?'
ಅದೇನೋ ನಿಜ ಮಕ್ಕಳಿಗೂ ರಜೆ ಬಂದು ಎರಡು ದಿನವಾಯಿತು. ಲಂಗು ಲಗಾಮಿಲ್ಲದೆ ಅಂಗಳವಿಡೀ ಕುಣಿದು ಉರಿ ಬಿಸಿಲಲ್ಲಿ ಕರಟುತ್ತಿವೆ. ಅವಕ್ಕೆ ರಜೆ ಬಂತೆಂದರೆ ಒಂದು ಸೇರು ಕಾಳು ಮೆಣಸಿನ ಕಷಾಯ ಕುಡಿದರೆ ಆದೀತು ತಾನು. ಮಕ್ಕಳ ಜವಾಬ್ದಾರಿ ಪೂರ ಸರೋಜನಿಗೇ ಸಮ. ಅವಳ ಮಾತಿಗೆ ಒಂಚೂರಾದರೂ ಬೆಲೆ ಕೊಡುತ್ತವೆ. ಆದರೆ ಕೊಯ್ಯಲಿಕೆ ಜನ ಸಿಗಬೇಕಲ್ಲ. ಈಗೇನು ಮುಂಚಿನಂತೆ ಶೂದ್ರರು ಮನೆ ಬಾಗಿಲಿಗೆ ಬರುತ್ತವೆಯೇ? ಅವಕ್ಕೆ ಇರುವ ದೊಡ್ಡಸ್ತಿಕೆ ತಮಗಿಲ್ಲ. ಈ ಸದಿಯ. ಮೊನ್ನೆ ಮೊನ್ನೆ ಹಿತ್ತಿಲಲ್ಲಿ ಗಿಡದ ಬುಡ ಹರಡುತ್ತಿದ್ದವ,ಈಗ ಎರಡೆರಡು ಬೆರಳಿಗೆ ಉಂಗುರವೇನು, ತಲೆಗೆ ಎಣ್ಣೆಯೇನು, ಮೇಲು ಕ್ರಾಪೇನು! ಎಷ್ಟು ಮಾಡಿದರೇನು? ಶೂದ್ರ ಶೂದ್ರನೇ.ಅದು ಅವಕ್ಕೆ ಗೊತ್ತಿಲ್ಲ. ಕರೆದ ಬಾಯಿಗೆ ಗೋವಿಂದನಾದರೂ ಬರುತ್ತಿದ್ದ. ಅವನೂ ಹಂಚಿನ ಕಾರ್ಖಾನೆಗೆ ಜಾರಿಕೊಂಡ.ಹಂಚಿನ ಕಾರ್ಖಾನೆಯೊಂದು ಆಗಿ ಈಗ ಕೂಲಿ ಕೆಲಸಕ್ಕೆ ಜನವಿಲ್ಲ.ಬಚ್ಚ ಘಟ್ಟಕ್ಕೆ ಹೋದ. ಇನ್ನಿನ್ನು ದುಡ್ಡುಕೊಟ್ಟರೂ ಕೆಲಸ ಮಾಡಿಸುವುದು ಕಷ್ಟವೇ. ಈ ಕರಕರೆಗೆ ಕಲ್ಲು ಹಾಕಿತು . ಮರ ಗುತ್ತಿಗೆಗೆ ಕೊಟ್ಟು ಬಿಡುತ್ತೇನೆ ಈ ಸಲ ಎಂದು ಪ್ರತಿವರ್ಷದಂತೆ ಈ ಸಲವೂ ಗೌರಮ್ಮ ಯೋಚನೆ ಮಾಡುತ್ತಾ ಪಾರ್ತಕ್ಕನ ಹತ್ತಿರ ಹೇಳುತ್ತಿದ್ದಾಗ ಬಂದವನು ಮಂಜ.ಮುಂಚಿನಿಂದಲೂ ಹೊಕ್ಕು ಹೊರಡುವವನೇ. ಹೇಳಿದ ಕೆಲಸ ಮಾಡುವವ. ಉಪಕಾರ ಮಾಡಿದರೆ ಮನಸ್ಸಿನಲ್ಲಿ ಇಟ್ಟುಕೊಳ್ಳುವವ. ಘಟ್ಟದ ಚಳಿಗೆ ಹೆದರಿ ಅಲ್ಲಿಗೆ ಹೋಗದೆ ಹಂಚಿನ ಕಾರ್ಖಾನೆಗೆ ಮನಸ್ಸು ಒಪ್ಪದೆ ಊರು ಮನೆಯಲ್ಲಿಯೇ ಇದ್ದುಕೊಂಡು ಹಾರೆ, ತೆಂಗಿನ ಬುಡ, ತಲೆ, ಹಲಸಿನಮರ ಹೂವಿನ ಗುತ್ತಿಗಳ ಸನಿಹದಲ್ಲಿಯೇ ತನ್ನ ಬದುಕು ಕಳೆಯುವವ.

ಮುಂದುವರಿಯುವುದು...

- ವೈದೇಹಿ.

0 comments:

Post a Comment