ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಸ್ಪೆಷಲ್"ನಾನು ಬಹಳ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ...ತಾವೆಲ್ಲರೂ ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂಬ ನಂಬಿಕೆ ನನಗಿದೆ... "ನ್ಯೂಸ್ ಆಫ್ ದಿ ವರ್ಲ್ಡ್ ನೂರ ಅರವತ್ತೆಂಟು ವರುಷಗಳ ಭವ್ಯ ಇತಿಹಾಸವನ್ನು ಹೊಂದಿ ಇಂದಿಗೂ ಅಸ್ತಿತ್ವದಲ್ಲಿರುವ ಪ್ರಪಂಚದ ಏಕೈಕ ಪತ್ರಿಕೆ. ಪ್ರಪಂಚದಾದ್ಯಂತ ಆಂಗ್ಲ ಪತ್ರಿಕೆಗಳಲ್ಲಿ ಅತ್ಯಂತ ಹೆಚ್ಚು ಓದುಗರನ್ನು ಹೊಂದಿರುವ ಹೆಗ್ಗಳಿಕೆ ಈ ನಮ್ಮ ಪತ್ರಿಕೆಯದು. ಪತ್ರಿಕೋದ್ಯಮಕ್ಕೆ ಇದು ನೀಡಿದ ಕೊಡುಗೆ ಅಪಾರ. ಇಡೀ ಬ್ರಿಟನ್ನಲ್ಲಿ ಅತ್ಯಧಿಕ ಜಾಹೀರಾತುಗಳನ್ನು ಹೊಂದಿರುವ ಪತ್ರಿಕೆಯೆಂದರೆ ಅದು "ನ್ಯೂಸ್ ಆಫ್ ದಿ ವಲ್ಡ್. ಸಮಾಜದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿ ನೈತಿಕತೆಯನ್ನು ಎತ್ತಿ ಹಿಡಿದ ಇಂತಹ ಪತ್ರಿಕೆಯನ್ನು ಮುಚ್ಚುವುದೆಂದರೆ ನನಗೆ ಅದು ಕಷ್ಟಸಾದ್ಯ. ಆದರೆ ನಮ್ಮ ಸಂಸ್ಥೆಯಲ್ಲಿ ಕಮಿಟ್ಮೆಂಟ್ ಬಹಳ ಮುಖ್ಯ ...ಅದನ್ನು ಕಳೆದುಕೊಂಡವರಿಗೆ ಇಲ್ಲಿ ಜಾಗವಿಲ್ಲ... ನ್ಯೂಸ್ ಆಫ್ ದಿ ವಲ್ಡ್ ಇದೇ ರವಿವಾರ ತನ್ನ ಕೊನೆಯ ಪ್ರಕಟಣೆಯನ್ನು ಕಾಣಲಿದೆ. ಮುಂದೆಂದೂ ಅದು ನಮ್ಮೊಂದಿಗಿರುವುದಿಲ್ಲ"... ನ್ಯೂಸ್ ಕಾರ್ಪೋರೇಷನ್ನ ಅದ್ಯಕ್ಷ ಜೇಮ್ಸ್ ಮುರ್ಡಾಕ್ ಮೊನ್ನೆ ( 10 ಜುಲೈ) ತಾನೇ ಮುಚ್ಚಲ್ಪಟ್ಟ ತನ್ನ ನೆಚ್ಚಿನ ಟಾಬ್ಲಾಯ್ಡ್ ಪತ್ರಿಕೆ " ನ್ಯೂಸ್ ಆಫ್ ದಿ ವಲ್ಡ್" ಕುರಿತಾಗಿ ಪತ್ರಿಕಾಗೋಷ್ಟಿಯಲ್ಲಿ ಆಡಿದ ಮಾತುಗಳಿವು.

"ದಿ ನ್ಯೂಸ್ ಆಫ್ ದಿ ವರ್ಲ್ಡ್ ಪತ್ರಿಕೆಯ ವರದಿಗಾರರು ಸುದ್ಧಿಗಾಗಿ ಬ್ರಿಟನ್ನ ಖಾಸಗಿ ಪತ್ತೇದಾರರ ಸಹಾಯದಿಂದ ಹಲವಾರು ಸೆಲೆಬ್ರಿಟಿಗಳ ದೂರವಾಣಿ ಕರೆಗಳನ್ನು ಹ್ಯಾಕ್ ಮಾಡುತ್ತಿರುವ ವಿಚಾರ 2007 ರಲ್ಲೇ ಬಹಿರಂಗಗೊಂಡಿತ್ತು. ಪತ್ರಿಕೆಯ ಆಗಿನ ಬಾತ್ಮೀದಾರ ಕ್ಲೈವ್ ಗುಡ್ಮೆನ್ ತಮ್ಮ ಸುದ್ಧಿಗಾಗಿ ರಾಜಮನೆತನದ ಸದಸ್ಯರ ದೂರವಾಣಿ ಕರೆಗಳನ್ನು ಹ್ಯಾಕ್ ಮಾಡಿದ ಅಪರಾಧಕ್ಕಾಗಿ ಸೆರೆಮನೆ ಸೇರಿದಾಗ ಈ ಪತ್ರಿಕೆಯ ಸುದ್ಧಿ ಮೂಲಗಳ ಬಗ್ಗೆ ದೇಶದೆಲ್ಲೆಡೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ ಬರೇ ಕ್ಲೈವ್ ಗುಡ್ಮೆನ್ ಸೆರೆಯಿಂದ ಈ ಪ್ರಕರಣ ಕೊನೆಗಾಣಲಿಲ್ಲ. 2011 ರಲ್ಲಿ ಸುಮಾರು ಹನ್ನೊಂದು ಸಾವಿರ ಜನರ ದೂರವಾಣಿ ಕರೆಗಳನ್ನು ಹ್ಯಾಕ್ ಮಾಡಿ ಅವರ ಖಾಸಗಿ ಜೀವನದ ಹಕ್ಕನ್ನು ಕಸಿದುಕೊಂಡ ಆರೋಪಕ್ಕೆ ನ್ಯೂಸ್ ಆಫ್ ದಿ ವಲ್ಡ್ ಪತ್ರಿಕೆ ಗುರಿಯಾಯಿತು. 2002ರಲ್ಲಿ ಕೊಲೆಯಾದ ಮಿಲ್ಲಿ ಡೆಲ್ಲರ್ ಎಂಬ ಶಾಲಾ ಬಾಲಕಿಯ ವಾಯ್ಸ್ ಮೇಲನ್ನು ಅನಧೀಕೃತವಾಗಿ ಹ್ಯಾಕ್ ಮಾಢಿದ ಆರೋಪಕ್ಕೂ ನ್ಯೂಸ್ ಆಫ್ ದಿ ವಲ್ಡ್ ವರದಿಗಾರರು ಒಳಗಾಗಬೇಕಾಯಿತು.

ಈ ಎಲ್ಲಾ ಆರೋಪಗಳು ಸಾರ್ವಜನಿಕ ವಲಯದಲ್ಲಿ ಪತ್ರಿಕೆಯ ಪ್ರತಿಷ್ಟೆಯನ್ನು ಕುಗ್ಗಿಸಿದವು. ಜಾಹೀರಾತುದಾರರು ಪತ್ರಿಕೆಗೆ ಜಾಹೀರಾತುಗಳನ್ನು ನೀಡಲು ಹಿಂಜರಿದರು. ನ್ಯೂಸ್ ಕಾರ್ಪೋರೇಶನ್ ಮೇಲೆ ಹಣ ಹೂಡಿದ ಶೇರುದಾರರು ಅವನ್ನು ಹಿಂಪಡೆಯತೊಡಗಿದರು. ಈ ಎಲ್ಲಾ ಘಟನೆಗಳು ಮುರ್ಡಾಕ್ ನ್ನು ಮಾನಸಿಕವಾಗಿ ಹಿಂಸಿಸಿದ್ದವು. 2010ರ ಫೆಬ್ರವರಿ ತಿಂಗಳಲ್ಲಿ ಬ್ರಿಟನ್ನ ಪ್ರತಿಷ್ಟಿತ ಮೂರು ಮೊಬೈಲ್ ಕಂಪನಿಗಳು ತಮ್ಮ ನೂರಾರು ಗ್ರಾಹಕರ ದೂರವಾಣಿ ಕರೆಗಳನ್ನು ಯಾರೋ ಅನಧಿಕೃತವಾಗಿ ಹ್ಯಾಕ್ ಮಾಡುತ್ತಿರುವ ಬಗ್ಗೆ ದೂರು ಸಲ್ಲಿಸಿದವು. ಆ ಆರೋಪವೂ ಈ ಪತ್ರಿಕೆಯ ಮೇಲೆ ಬಿತ್ತು. ಪತ್ರಿಕೆಯ ಕೆಲ ವರದಿಗಾರರು ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾಯಿತು. ಇದೇ ಜುಲೈ ತಿಂಗಳಲ್ಲಿ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರಾನ್ ಪ್ರಕರಣದ ಸಂಪೂರ್ಣ ತನಿಖೆಗೆ ಆದೇಶವನ್ನು ನೀಡಿದರು. ಪತ್ರಿಕೆಯ ಮಾಜಿ ಸಂಪಾದಕ ಆಂಡಿ ಕೌಲ್ಸನ್ ಬಂಧಿತರಾದರು.

ಅಕ್ಟೋಬರ್ 1, 1843ರಲ್ಲಿ ಜಾನ್ ಬ್ರವ್ನ್ ಬೆಲ್ ಪ್ರಾರಂಭಿಸಿದ್ದ 'ದಿ ನ್ಯೂಸ್ ಆಫ್ ದಿ ವಲ್ಡ್' ಸುಮಾರು 168 ವರುಷಗಳ ದೀರ್ಘ ಇತಿಹಾಸವನ್ನು ಹೊಂದಿರುವ ಪತ್ರಿಕೆ. ಆಗಿನ ಅತ್ಯಂತ ಅಗ್ಗದ ಪತ್ರಿಕೆ ಎಂಬ ಖ್ಯಾತಿಗೆ ಒಳಗಾದ 'ದಿ ನ್ಯೂಸ್ ಆಫ್ ದಿ ವಲ್ಡ್' ಅಂದು ಮಧ್ಯಮ ವರ್ಗದ ಓದುಗರನ್ನು ಅತಿಯಾಗಿ ಆಕರ್ಷಿಸಿತ್ತು. ಅಂದಿನಿಂದ ಮೊನ್ನೆಮೊನ್ನೆಯವರೆಗೂ ಕೇವಲ ರವಿವಾರದಂದು ಮಾತ್ರಾ ಪ್ರಕಟಗೊಳ್ಳುತ್ತಿದ್ದ ಈ ವಾರ ಪತ್ರಿಕೆ ಬ್ರಿಟನ್ನಲ್ಲಿ ದಿನಪತ್ರಿಕೆಗಳಿಂದ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಹಲವಾರು ಒಡೆತನಗಳನ್ನು ಕಂಡ ಈ ಪತ್ರಿಕೆಯನ್ನು ರೂಪರ್ಟ್ ಮುರಡಾಕ್ 1969ರಲ್ಲಿ ತನ್ನದಾಗಿಸಿಕೊಂಡರು. ಈ ಮೂಲಕ 'ದಿ ನ್ಯೂಸ್ ಆಫ್ ದಿ ವಲ್ಡ್' ಪತ್ರಿಕೆ ಪ್ರಪಂಚದ ಬೃಹತ್ ಮಾಧ್ಯಮ ಸಂಸ್ಥೆ "ನ್ಯೂಸ್ ಕಾರ್ಪೋರೇಶನ್'ನ್ನು ಸೇರಿಕೊಂಡಿತು.

ಕೊಲಿನ್ ಮೆಯ್ಲರ್ ಸಂಪಾದಕತ್ವದಲ್ಲಿ ಪತ್ರಿಕೆ ಜನಪ್ರಿಯಗೊಂಡಿತಾದರೂ ಹಲವಾರು ಆರೋಪಗಳಿಗೆ ಗುರಿಯಾಯಿತು. ಮೊದಲು ಬ್ರಾಡ್ ಶೀಟ್ನಲ್ಲಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆ ಬಳಿಕ ಟಾಬ್ಲಾಯ್ಡ್ ಆಕಾರವನ್ನು ತಾಳಿತು. ವಿಶ್ವಾಸಾರ್ಹ ತನಿಖಾ ವರದಿಗಳನ್ನು ನೀಡುವ ಮೂಲಕ ಇದು ಓದುಗರನ್ನು ತನ್ನತ್ತ ಆಕರ್ಷಿಸತೊಡಗಿತು. ಸಮಾಜದಲ್ಲಿ ನಡೆಯುತ್ತಿದ್ದ ಅನೈತಿಕ, ಕಾನೂನು ಬಾಹಿರ ವಿಚಾರಗಳನ್ನು ಮುಕ್ತವಾಗಿ ಓದುಗರ ಮುಂದಿಡುತ್ತಿದ್ದ ಅಂದಿನ ವರದಿಗಾರರು 'ದಿ ನ್ಯೂಸ್ ಆಫ್ ದಿ ವರ್ಲ್ಡ್ಡನ್ನು ಜಾಗತಿಕ ಮಟ್ಟದ ಪತ್ರಿಕೆಯನ್ನಾಗಿಸಿದ್ದರು. 2002ರಲ್ಲಿ ವೇಲ್ಸ್ನ ಅಪ್ರಾಪ್ತ ವಯಸ್ಸಿನ ರಾಜಕುಮಾರ ಪ್ರಿನ್ ಹ್ಯಾರಿ ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾದ ಪ್ರಕರಣದ ಬಗ್ಗೆ ಪತ್ರಿಕೆ ಮಾಡಿದ ತನಿಖಾ ವರದಿ ಗಮನಾರ್ಹ.


ತನ್ನ ನೇರ- ದಿಟ್ಟ ನುಡಿಗೆ ಹೆಸರುವಾಸಿಯಾದ 'ದಿ ನ್ಯೂಸ್ ಆಫ್ ದಿ ವರ್ಲ್ಡ್ ಹಲವಾರು ದಶಕಗಳ ಕಾಲ ಬ್ರಿಟನ್ನ ಓದುಗರ ಕಣ್ಮಣಿಯಾಗಿತ್ತು. ಕಳೆದ ತಿಂಗಳು ಪತ್ರಿಕೆಯ ಕೆಲ ವರದಿಗಾರರು ಹ್ಯಾಕಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾದ ಬಳಿಕವೂ ಪತ್ರಿಕೆಯ ಓದುಗರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಆದರೆ ಮುರ್ಡಾಕ್ ಪತ್ರಿಕೆಗೆ ಜೀವದಾನ ನೀಡಲಿಲ್ಲ. ಪತ್ರಿಕೋದ್ಯಮದಲ್ಲಿ ನಿಷ್ಟೆ ಮುಖ್ಯ. 'ನ್ಯೂಸ್ ಕಾರ್ಪೋರೇಶನ್' ಆ ನಿಷ್ಟೆಯನ್ನು ಎತ್ತಿ ಹಿಡಿದ ಸಂಸ್ಥೆ. ಆ ಸಂಸ್ಥೆಯ ಅಂಗವಾಗಿದ್ದು ಪತ್ರಿಕೆಯ ವರದಿಗಾರರು ಮಾಡಿದ್ದು ಅಕ್ಷಮ್ಯ ಅಪರಾಧ ಎಂಬುವುದು ಜೇಮ್ಸ್ ಮುರ್ಡಾಕ್ ಅಭಿಪ್ರಾಯ. ಹಾಗಾಗೇ ಪ್ರಪಂಚದಾದ್ಯಂತ ಸುಮಾರು 7.5 ಮಿಲಿಯನ್ ಓದುಗರನ್ನು ಹೊಂದಿದ್ದ, ಮಿಲಿಯನ್ ಡಾಲರ್ಗಳಷ್ಟು ಲಾಭ ತರುತ್ತಿದ್ದ ಪತ್ರಿಕೆಯನ್ನು ಮುಚ್ಚುವ ನಿರ್ಧಾರವನ್ನು ಅವರು ತಳೆದರು.

ಕೊನೆಯ ಪ್ರತಿ

ಇದೇ ಜುಲೈ 10ರಂದು ದಿ ನ್ಯೂಸ್ ಆಫ್ ದಿ ವಲ್ಡ್ ತನ್ನ ಕೊನೆಯ ದಿನವನ್ನು ಕಂಡಿತು. 168 ವರುಷದ ತನ್ನ ಸುದೀರ್ಘ ಬದುಕಿಗೆ ಕೊನೆಗೂ ವಿದಾಯ ಹಾಡಿತು. ಪತ್ರಿಕೆಯ ಕೊನೆಯ ದಿನದ ಪ್ರತಿಗಳು ಎಲ್ಲಿಲ್ಲದ ಬೇಡಿಕೆಯನ್ನು ಕಂಡವು. ಪತ್ರಿಕೆಯ ಕೊನೆಯ ದಿನದ ಗಳಿಕೆಯನ್ನು ಸಾಮಾಜಿಕ ಕಾರ್ಯಗಳಿಗಾಗಿ ವ್ಯಯಿಸಲಾಗುವುದೆಂದು ಮುರ್ಡಾಕ್ ಘೋಷಿಸಿದರು. ಕೊನೆಯ ಪ್ರತಿಯ ಜಾಹೀರಾತು ಸ್ಥಳವನ್ನು ಚ್ಯಾರಿಟಿ ಸಂಸ್ಥೆಗಳಿಗೆ ನೀಡಲಾಯಿತು. " ಥಾಕ್ಯೂ ..ಗುಡ್ ಬ್ಯಾ" ಎಂಬ ಶೀರ್ಷಿಕೆಯೊಂದಿಗೆ ಮಾರುಕಟ್ಟೆಗೆ ಬಂದ "ದಿ ನ್ಯೂಸ್ ಆಫ್ ದಿ ವಲ್ಡ್"ನ ಕೊನೆಯ ಪ್ರತಿ ಓದುಗರ ಕಣ್ಣುಗಳನ್ನು ಹನಿಗೂಡಿಸಿತು.

ಭವಿಷ್ಯದಲ್ಲಿ ಮಾಧ್ಯಮ ರಂಗದಲ್ಲಿ ನಿಷ್ಟೆಯನ್ನು ಮರೆತು ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಪತ್ರಕರ್ತನಿಗೂ ಈ ಪತ್ರಿಕೆಯ ಕೊನೆ ನೆನಪಾಗದೇ ಇರಲಾರದು. ಈ ಪತ್ರಿಕೆಯನ್ನು ಮುಚ್ಚುವ ಮೂಲಕ ಮುರ್ಡಾಕ್ ಮಾಧ್ಯಮ ರಂಗದಲ್ಲಿ ಪ್ರಾಮಾಣಿಕತೆಯ ಪ್ರಾಮುಖ್ಯತೆ ಏನೆಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಸುದ್ಧಿಗಾಗಿ ಎಂತಹ ಕೀಳು ಮಟ್ಟಕ್ಕೂ ಇಳಿಯಲು ಹೇಸದ ಈಗಿನ ಮಾಧ್ಯಮಗಳಿಗೆ ಇದೊಂದು ಎಚ್ಚರಿಕೆ! ತಮ್ಮ ರೀಡರ್ ಶಿಪ್ ಹಾಗೂ ಟಿ.ಆರ್.ಪಿಗಳನ್ನು ಹೆಚ್ಚಿಸಿಕೊಳ್ಳಲು ಹರಸಾಹಸ ಪಡುವ, ಅನೈತಿಕತೆಯ ಗೂಡಾಗಿರುವ ಇಂದಿನ ಮಾಧ್ಯಮ ರಂಗ "ದಿ ನ್ಯೂಸ್ ಆಫ್ ದಿ ವರ್ಲ್ಡ್ ನ ಕೊನೆಯಿಂದಾದರೂ ಎಚ್ಚೆತ್ತುಕೊಳ್ಳಲಿ.....ಹ್ಯಾಟ್ಸಾಫ್ ಮುರ್ಡಾಕ್!.

ವಿಶಾಖಾ

0 comments:

Post a Comment