ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಗೋಕರ್ಣ: ಇಂದು ನಾವು ಬಳಸುತ್ತಿರುವ ಆಹಾರವೆಲ್ಲವೂ ರಾಸಾಯನಿಕಯುಕ್ತವಾಗಿದ್ದು ಅಕ್ಷರಶಃ ನಾವು ವಿಷವನ್ನೇ ತಿನ್ನುತ್ತಿದ್ದೇವೆಂದರೆ ಅತಿಶಯೋಕ್ತಿಯ ಮಾತಲ್ಲ.ಸಂಪೂರ್ಣ ವಾತಾವರಣವೂ ಕಲಷಿತಗೊಂಡಿದ್ದು ನಾವು ಉಪಯೋಗಿಸುವ ಹೆಚ್ಚಿನ ವಸ್ತುಗಳು ಒಂದೋ ಕೃತಕ ಅಥವಾ ರಾಸಾಯನಿಕಯುಕ್ತ. ಆಹಾರವು ಕೇವಲ ಹೊಟ್ಟೆಯನ್ನು ತುಂಬಿಸುವ ವಸ್ತು ಮಾತ್ರವಲ್ಲ ಬದಲಾಗಿ ಅದು ಶುದ್ಧವಾಗಿದ್ದರೆ ಮಾತ್ರ ಅದರಿಂದ ಪರಿಶುದ್ಧಮನಸ್ಸು ರೂಪುಗೊಳ್ಳುತ್ತದೆ.ಆದ್ದರಿಂದಲೇ ನಮ್ಮ ಪ್ರಾಚೀನರು ಭಗವತ್ಪ್ರಸಾದವಾದ ಅನ್ನವನ್ನು ಉಣ್ಣುವ ಕ್ರಿಯೆಗೆ ಯಜ್ಞಸ್ವರೂಪವನ್ನು ಕೊಟ್ಟರು.ಇನ್ನಾದರೂ ನಾವು ಎಚ್ಚತ್ತು ನಮ್ಮ ಆಹಾರಸ್ವರೂಪದಲ್ಲಿ ಬದಲಾವಣೆಯನ್ನು ತರಬೇಕಿದೆ ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ತಿಳಿಹೇಳಿದರು.


ಗೋಕರ್ಣದ ಅಶೋಕೆಯಲ್ಲಿ ತಮ್ಮ ಹದಿನೆಂಟನೆಯ ಚಾತುರ್ಮಾಸ್ಯವ್ರತವನ್ನು ಸ್ವೀಕರಿಸಿ ಧರ್ಮಸಭೆಯಲ್ಲಿ ಶಿಷ್ಯಭಕ್ತರಿಗೆ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಮಹಿಳೆಯರು ಮೊದಲು ತಮ್ಮ ಅಡಿಗೆಮನೆಯನ್ನು ವಿಷಮುಕ್ತವನ್ನಾಗಿ ಮಾಡಿ ಈ ವಿಚಾರವನ್ನು ಆಂದೋಲನವನ್ನಾಗಿ ಮಾಡಬೇಕಿದೆ ಎಂದು ನುಡಿದರು.

ಈ ಉದ್ದೇಶದಿಂದಲೇ ಪರಿವರ್ತನೆಯು ನಮ್ಮಿಂದಲೇ ಪ್ರಾರಂಭವಾಗಲೆಂದು ಈ ಚಾತುರ್ಮಾಸ್ಯದಲ್ಲಿ ಸಾವಯವವಸ್ತುಗಳನ್ನೇ ಬಳಸಲಾಗುತ್ತಿದೆ. ರೋಗಮುಕ್ತವಾದ ಸ್ವಸ್ಥಬದುಕನ್ನು ಹೊಂದಲು ಇದು ಅತ್ಯಗತ್ಯ ಎಂದರು.ಚಾತುರ್ಮಾಸ್ಯವು ಯತಿಗಳಿಗೆ ಉತ್ಸವವಿದ್ದಂತೆ. ಸದಾ ಸಂಚಾರವನ್ನು ಮಾಡುತ್ತಿರುವ ಸನ್ಯಾಸಿಗಳು ಮಳೆಗಾಲದ ಈ ಕಾಲದಲ್ಲಿ ಒಂದೆಡೆ ನಿಂತು ಅಂತರ್ಮುಖಿಗಳಾಗಿ ಸ್ವಾತ್ಮಧ್ಯಾನಪಾರಾಯಣರಾಗಬೇಕು. ಇದೊಂದು ಯತಿವಿಧಿ.ಒಂದು ರೀತಿಯಲ್ಲಿ ಇದೊಂದು ಬಂಧನವೇ ಆದರೂ ಬಿಡುಗಡೆಯನ್ನು ನೀಡುವ ಬಂಧನವೆಂದೇ ಇದು ಎಲ್ಲರಿಗೂ ಪ್ರಿಯ.ಅಲ್ಲದೆ ಈ ಕಾಲದಲ್ಲಿ ನೊಂದವರ ಬಾಳಿಗೆ ಬೆಳಕಾಗುವ ಆರ್ತರಿಗೆ ಸಾಂತ್ವನ ನೀಡುವ ಗ್ರಹಯಾಗವು ಪ್ರತಿನಿತ್ಯವೂ ಆಯೋಜಿತವಾಗಿದೆ.ವೇದಗಳ ಕಣ್ಣೆಂದೇ ಪ್ರಸಿದ್ಧವಾದ ಜ್ಯೋತಿಷಶಾಸ್ತ್ರವನ್ನು ಆಧರಿಸಿ ಬದುಕಿನಲ್ಲಿ ಬಂದೆರಗಿದ ಕಷ್ಟ,ನಷ್ಟಗಳಿಗೆ ಪರಿಹಾರವನ್ನು ನೀಡುವ ಪ್ರಕ್ರಿಯೆಯಿದು.ಎಲ್ಲಕ್ಕೂ ಶಿಖರಪ್ರಾಯವಾಗಿ ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಬದುಕಿನ ತತ್ವ,ಆದರ್ಶಗಳನ್ನು ಶ್ರೀರಾಮಕಥೆಯ ಮೂಲಕ ಸಾದರಪಡಿಸಲಿದ್ದು ಪ್ರವಚನ,ರೂಪಕ,ನೃತ್ಯ,ಗೀತ ಹಾಗೂ ವಾದ್ಯ,ಚಿತ್ರಗಳೇ ಮೊದಲಾದ ಎಲ್ಲ ಮಾಧ್ಯಮಗಳ ಮುಖಾಂತರ ಈ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ.ನೂರಾರು ರಾಮಾಯಣಗಳ ಮಧ್ಯೆ ನೈಜವಾದ ವಾಲ್ಮೀಕಿವಿರಚಿತವಾದ ರಾಮಾಯಣವು ಮರೆಯಾಗಿದೆ.


ಶ್ರೀರಾಮನ ಕಾಲದಲ್ಲಿದ್ದು ಸ್ವತಃ ಶ್ರೀರಾಮರಾಜ್ಯವನ್ನು ಕಂಡು ಅನುಭವಿಸಿದ ವಾಲ್ಮೀಕಿಯ ಅನುಭವದ ನಿರೂಪಣೆಯಿರುವ ಈ ರಾಮಾಯಣ ನಮ್ಮ ಬದುಕಿಗೆ ತೀರ ನಿಕಟವಾಗಿದೆ ಹಾಗೂ ಅನುಸರಣೀಯವಾಗಿದೆ ಎಂದು ನುಡಿದ ಶ್ರೀಗಳು ಸಮಸ್ತವಿಶ್ವದಲ್ಲಿಯೇ ಮೊದಲಬಾರಿಗೆ ಗೋವಿನಕುರಿತಾಗಿ ಜಾಗೃತಿಯು ಮೂಡಲಿಕ್ಕೆ ಪ್ರೇರಣೆ ನಮ್ಮ ಮಠದಲ್ಲಿ ಸಂತನಂತೆ ಬಾಳಿ ಇತ್ತಿಚೆಗೆ ಪಂಚತ್ವನ್ನು ಹೊಂದಿದ ಮಹಾನಂದಿ ಎಂಬ ವೃಷಭರಾಜ.ಅದು ಎಂದು ನಮ್ಮ ಕಣ್ಣಿಗೆ ಬಿದ್ದು ನಮ್ಮ ಶ್ರೀಮಠವನ್ನು ಪ್ರವೇಶಿಸಿತೋ ಅಂದಿನಿಂದಲೇ ಮಠದಲ್ಲಿ ಹಾಗೂ ಪರಿಸರದಲ್ಲಿ ಗೋವಿನ ವಿಷಯವಾಗಿಮಹಾ ಆಂದೋಳನವೇ ನಡೆಯುವಂತಾಯಿತು.

ಈ ಪುಣ್ಯಚೇತನದ ಸಂಸ್ಮರಣೆಗಾಗಿಯೇ ಈ ವರ್ಷವನ್ನು ಗೋವರ್ಷವನ್ನಾಗಿಆಚರಿಸಲು ಸಂಕಲ್ಪಿಸಿದ್ದೇವೆ. ಎಲ್ಲ ರೀತಿಯಲ್ಲಿ ಗವ್ಯೋತ್ಪನ್ನಗಳಿಗೆ ಪ್ರಾಶಸ್ತ್ಯವನ್ನು ನೀಡುವಮೂಲಕ ಮಹಾನಂದಿಯನ್ನು ನಮ್ಮ ಮನದಾಳದಲ್ಲಿ ಶಾಶ್ವತವಾಗಿಟ್ಟುಕೊಳ್ಳುವ ಹಂಬಲ ನಮ್ಮದು ಎಂದು ಹೇಳಿದ ಪೂಜ್ಯ ಶ್ರೀಗಳು ಗವ್ಯೋತ್ಪನ್ನಗಳನ್ನು ಬಳಸುವಮೂಲಕ ಗೋ ಆಧಾರಿತ ಬದುಕಿಗೆ ನಾಂದಿಯಾಗಬೇಕಿದೆಯೆಂದು ಅಭಿಪ್ರಾಯಪಟ್ಟರು.


ಈಸಂದರ್ಭದಲ್ಲಿ ಜ್ಯೋತಿಯನ್ನು ಬೆಳಗುವ ಮೂಲಕ ಗೋವರ್ಷದ ಉದ್ಘಾಟಿಸಿದರು.ಚಾತುರ್ಮಾಸ್ಯ ನಿರ್ವಹಣಾ ಸಮಿತಿಯ ಎಂ.ಕೆ.ಹೆಗಡೆ ದಂಪತಿಗಳಿಂದ ಸಭಾಪೂಜೆಯು ನಡೆಯಿತು. ಗೋವರ್ಷದಕುರಿತಾಗಿ ಡಾ.ಕೃಷ್ಣಮೂರ್ತಿ ಹಾಗೂ ಶ್ರೀಮಠದ ಗುರುಕುಲದ ಕುರಿತಾಗಿ ಶ್ರೀ ಪ್ರಮೋದಪಂಡಿತ್, ಚಾತುರ್ಮಾಸ್ಯದ ಬಗ್ಗೆ ಪ್ರಾಸ್ತಾವಿಕವಾಗಿ ಕಾರ್ಯದರ್ಶಿ ನಿಸ್ರಾಣಿ ರಾಮಚಂದ್ರ ಮಾತನಾಡಿದರು.


ಮುಂಬಯಿ,ಮದ್ರಾಸ್,ಮ್ಯಸೋರು ಮೊದಲಾದ ಹೊರಪ್ರದೇಶಗಳಿಂದಲೂ ಬಂದ ಶಿಷ್ಯಭಕ್ತರೂ ಸೇರಿದಂತೆ ಎರಡುಸಾವಿರಕ್ಕೂ ಮಿಕ್ಕಿದ ಭಕ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಬರುವ ಸೆಪ್ಟೆಂಬರ್ ಹನ್ನೆರಡರಂದು ಸೀಮೋಲ್ಲಂಘನದೊಂದಿಗೆ ಚಾತುರ್ಮಾಸ್ಯವು ಸಮಾಪ್ತಗೊಳ್ಳಲಿದೆ.

ವರದಿ:ಸತ್ಯನಾರಾಯಣ ಶರ್ಮ

0 comments:

Post a Comment