ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗುವುದಕ್ಕಿಂತಲೂ ಮೊದಲು ಅವರದ್ದೊಂದು ಪುಸ್ತಕ ಸುದ್ಧಿಯಗಿತ್ತು.``ಇಂಡಿಯಾ-2020.ಎ ವಿಷನ್ ಫಾರ್ ನಿವ್ ಮಿಲೇನಿಯಮ್ ''ಎಂಬ ಆ ಪುಸ್ತಕವನ್ನು ಅಬ್ದುಲ್ ಕಲಾಂ ಬರೆದಿದ್ದಗ ಅವರು ಭಾರತ ರತ್ನ ಮತ್ತು ಪೋಖರಾಣ್ ಹೀರೋ.ಪುಸ್ತಕದ ಇನ್ನೋರ್ವ ಲೇಖಕ ವೈ.ಎಸ್.ರಾಜನ್ ತಂತ್ರಜ್ನಾನ ಸುದ್ಧಿ ಮತ್ತು ಪ್ರಸಾರ ಮಂಡಲಿಯಲ್ಲಿ ಕಾರ್ಯಕಾರಿ ನಿರ್ದೇಶಕರಾಗಿದ್ದರು.ಬಾಹ್ಯಾಕಾಶ ಸಂಶೋಧನೆಯಲ್ಲಿ ಇಸ್ರೇಲಿನಲ್ಲಿ ದುಡಿದಿದ್ದ ಅವರು ಸಂಪರ್ಕ ಉಪಗ್ರಹ ಪೋಗ್ರಾಮ್ ಗಲಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು.ಇಬ್ಬರೂ ವಿಜ್ಞಾನಿಗಳು.ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಭಾರತ ಬೆಳೆಯಬೇಕು ಎಂದು ಹಂಬಲಿಸಿದವರು.ದೇಶದ ಪ್ರಗತಿಗೆ ಇಬ್ಬರೂ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದವರು.ಇಬ್ಬರೂ ವಿಜ್ಞಾನಕ್ಕೆ ಅರ್ಥಪೂರ್ಣ ವ್ಯಖ್ಯಾನಗಳನ್ನು ನೀಡಿದವರು.ಮೇಲಾಗಿ ವಿಜ್ಞಾನವೇ ಸುಜ್ಞಾನ ಎಂದು ತೋರಿಸಿಕೊಟ್ಟವರು.ಒಟ್ಟ್ಟಾರೆ ಇವರಿಬ್ಬರೂ ಆಧುನಿಕ ಭಾರತದ ಬಗ್ಗೆ ಕನಸ್ಸು ಕಂಡವರು.ತಮ್ಮ ಕನಸನ್ನು ದೇಶಕ್ಕೆ ಕೊಟ್ಟವರು.ಭಾರತದ ನಾಳೆಗಳ ನೀಲಿನಕ್ಷೆಯನ್ನು ರೂಪಿಸಿದ ಮಹಾವ್ಯಕ್ತಿಗಳು.


ಕ್ರಿ.ಶ.2020ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶ ಎನ್ನುವ ಸ್ಥಾನಮಾನ ಗಳಿಸಲು ಖಂಡಿತಾ ಸಾಧ್ಯ ಎನ್ನುವ ಆತ್ಮವಿಶ್ವಾಸದೊಂದಿಗೆ ಭಾರತದ ಪ್ರಗತಿ ,ಹಾಲಿ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಭವಿಷ್ಯದಲ್ಲಿ ಮಾಡಿಕೊಳ್ಳಬೇಕಾದ ಹೊಂದಾಣಿಕೆ-ತಿದ್ದುಪಡಿಗಳ ಬಗ್ಗೆ ವಿವರವಾಗಿ ಅವರು ಈ ಪುಸ್ತಕದಲ್ಲಿ ಬರೆದಿದ್ದಾರೆ.ದಶಕದ ಹಿಂದೆಯೇ ಪ್ರಕಟವಾದ ಈ ಪುಸ್ತಕ ಅಂದು ಸುದ್ದಿ ಮಾಡಿತು. ಮತ್ತು ಅಂದು ಎಲ್ಲೆಲ್ಲೂ ನಿರಾಸೆಯೇ ತುಂಬಿರುವಾಗ ಭಾರತದ ಭವಿಷ್ಯದ ಬಗ್ಗೆ ಆತ್ಮವಿಶ್ವಾಸವನ್ನು ಮೂಡಿಸಿತ್ತು.ಅನಂತರ ಅಬ್ದುಲ್ ಕಲಾಂ ರಾಷ್ಟ್ರಪತಿಗಳಾದರು.ರಾಷ್ಟ್ರಪತಿಗಳಾದರೂ ಅವರು ಮಾತಾಡುತ್ತಿದ್ದುದು ಇದೇ 2020 ಅನ್ನು.ಭಾರತದ ಭವಿಷ್ಯವನ್ನು , ಭಾರತದ ಕನಸನ್ನು ಕ್ರಿ.ಶ.2020ರ ಹೊತ್ತಿಗೆ ಯಾರಿರುವರೋ,ಇಲ್ಲದಿರುವರೋ.ಆದರೆ ಆ ಒಂದು ಭರವಸೆಯನ್ನು ಅಂದು ಜನ ಇಟ್ಟುಕೊಂಡಿದ್ದರು.ಅಬ್ದುಲ್ ಕಲಾಂ ಎಂಬ ವಿಜ್ಞಾನಿ ದೇಶಕ್ಕೆ ಮಹಾ ಸಂವೇದನೆಯನ್ನು ಕೊಟ್ಟಿದ್ದರು.ಜನ ಅದನ್ನು ಸಮ್ರದ್ಧವಾಗಿ ಅನುಭವಿಸಿದ್ದರು.

ಬಾಹ್ಯಾಕಾಶ ರಂಗದಲ್ಲೂ 1947 ರಲ್ಲಿ ಶೂನ್ಯದಿಂದ ಕೆಲಸ ಆರಂಭಿಸಿದ ಭಾರತ ಇಂದು ತನ್ನದೇ ಪೂರ್ಣ ಸ್ವದೇಶಿ ನಿರ್ಮಿತ ,ಉನ್ನತ ತಂತ್ರಜ್ಞಾನದ ಸಂಪರ್ಕ,ಉಪಗ್ರಹಗಳನ್ನು ನಿರ್ಮಿಸಿ ಬಾಹ್ಯಕಾಶಕ್ಕೇರಿಸಿದೆ ಎಂಬ ಅವರ ಅನುಭವವೇ ರಾಷ್ಟ್ರದ ಅಭಿವೃದ್ಧಿಯ ಹೊಳಹು ಆಗುವಾಗ ಸಂವೇದನೆ ಉಧ್ಬವವಾಗದಿರಲು ಹೇಗೆ ತಾನೇ ಸಾಧ್ಯ? 2020ರ ವೇಳೆಗೆ ಭಾರತ ಸಿರಿವಂತ ರಾಷ್ಟ್ರಗಳ ಸಾಲಿಗೆ ಸೇರುವ ಕನಸು ಖಂಡಿತಕ್ಕೂ ಅವಾಸ್ತವಿಕವಲ್ಲ ಎಂದಿರುವ ಅವರು ದೇಶದ ಅಭಿವೃದ್ಧಿಯನ್ನು ಚುರುಕುಗೊಳಿಸುವ ಹಲವಾರು ಸುಧಾರಣೆಗಳನ್ನು ಹಾಗೂ ದಿಕ್ಕುಗಳನ್ನು ಸೂಚಿಸಿದ್ದರು.ತನ್ನ ಜನರಿಗೆ ಮರ್ಯಾದೆಯಿಂದ ಜೀವನ ಸಾಗಿಸಲು ಬೇಕಾದ ಉತ್ತಮ ಜೀವನ ಮಟ್ಟ ಒದಗಿಸಲು ಭಾರತಕ್ಕೆ ಶೀಘ್ರದಲ್ಲೇ ಸಾಧ್ಯವಾಗಲಿದೆ ಎಂದಿದ್ದರು.ಆಹಾರದಲ್ಲಿ ಸ್ವಾವಲಂಬಿಯಾಗಲು ಭಾರತ ಸ್ವಾವಲಂಬಿಯಾಗಲೇ ಬೇಕು ಎಂದಿದ್ದರು.

ಔಧ್ಯಮಿಕ ,ಶಿಕ್ಷಣ,ಪ್ರಯೋಗ,ಆಡಳಿತ,ಸಾಮಾಜಿಕ ಇತ್ಯಾದಿ ರಂಗಗಳ ಮಂಡಳಿಗಳಿಗೆ ನೀಡಿದ ಮಾಹಿತಿ,ಸಲಹೆ,ಸೂಚನೆಗಳನ್ನೆಲ್ಲಾ ಅಧ್ಯಯನ ಮಾಡಿ ಭಾರತದ ಉನ್ನತಿಗೆ ಪರಿಹಾರೋಪಾಯಗಳನ್ನು ಗುರುತಿಸಿದ್ದರು.ಅವರು ಬುದ್ಧಿವಾದ ಹೇಳುವ ಶೈಲಿಯಲ್ಲಿ ಬರೆಯದೆ ,ಅದರ ಗೊಡವೆಗೂ ಹೋಗದೆ ಆಧಾರಸಹಿತವಾದ ,ವಾಸ್ತವಕ್ಕೆ ಸಮೀಪದ ನಿರ್ದಿಷ್ಟ ಧೋರಣೆಯಿಂದ ಬರೆದರು.ಹಾಗಾಗಿ ದೇಶಕ್ಕೆ ದೇಶವೇ 2020ನ್ನು ಎದುರುನೋಡಿತು. ಆದರೇನು ಮಾಡುವುದು?ಈ ವಿಜಾನಿಗಳಿಗೇನು ಗೊತ್ತು ಪಾಪ,ಭಾರತದ ಆಡಳಿತ ಹೀಗೇ ಎಂದು ?ಅವರೇನೋ ತರ್ಕಬದ್ದ ,ಆಧಾರಸಹಿತ ವಿಷಯಗಳನ್ನು ಮಂಡಿಸಿದ್ದರು.ಆದರೆ ರಾಜಕಾರಣಿಗಳು?ಅವರೆಂದ 2020ರ ಕನಸನ್ನು ನಾವೂ ಕಾಣೋಣ .ಆದರೆ ಹೇಗೆ?ಈ ಪರಿಸ್ಥಿತಿಯಲ್ಲಿ ಮುಂದೇನು ಎಂದು ದೇಶ ಕೆಲವೇ ವರ್ಷಗಳಲ್ಲಿ ಅಂದುಕೊಂಡಂತಾಗಿದ್ದು ಒಂದು ಘೋರ ದುರಂತ.ಇನ್ನೇನು 2020ಕ್ಕೆ ಕಾಲ ಹತ್ತಿರ ಬರುತ್ತಿದೆ.ಆದರೆ ಅಬ್ದುಲ್ ಕಲಾಂ ಹೇಳಿದಂತೆ ಅದರ ಮುನ್ಸೂಚನೆಯೇನೂ ಕಾಣುತ್ತಿಲ್ಲವಲ್ಲ.ಅದರ ಕುರುಹುಗಳೇನು ಕಾಣುತ್ತಿಲ್ಲವಲ್ಲಾ.ನಿಜ ಭಾರತದಲ್ಲಿ ಜಾಗತೀಕರಣದ ಅನಂತರ ಮಧ್ಯಮವರ್ಗದ ಸಂಖ್ಯೆ ಹೆಚ್ಚಾಗಿದೆ.ಆದರೆ ಹಾಗೆ ಹೆಚ್ಚಾದ ಮಧ್ಯಮ ವರ್ಗದ ಪರಿಸ್ಥಿತಿ ಇಂದಿಗೂ ಹಾಗೇ ಇದೆ.ಅವರು ಆರಕ್ಕೇರಲಿಲ್ಲ.ಮೂರಕ್ಕೇರಲಿಲ್ಲ.ಅಂದಿನಿಂದಲೂ ಅವರದ್ದು ಹೋರಾಟದ ಬದುಕೇ.ಜೊತೆಗೆ ಅಂದಿನಿಂದಲೂ ಬಡವರ ಸಂಖ್ಯೆ ಹೆಚ್ಚಾಗುತ್ತಾ ಶೀಮಂತರ ಅಬ್ಬರ ಏರುತ್ತಾ ವಿಚಿತ್ರ ಸಮಾಜವೊಂದರ ನಿರ್ಮಾಣವಾಗುತ್ತದೆ.

ಉತ್ತಮ ಜೀವನ ಮಟ್ಟ ಅಂದು ಮರೀಚಿಕೆಯಾಗಿದ್ದವರಿಗೆ ಇಂದೂ ಮರೀಚಿಕೆಯಾಗಿಯೇ ಇದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಂದಿಗೆ 20 20ರ ಹೊಸ ಶಕೆಯ ಕುರುಹುಗಳು ಈ ಹೊತ್ತಿಗೆ ಕಾಣಿಸಬೇಕಿತ್ತು. ಅಂದರೆ 2011ಕ್ಕೇ ಜನಸಂಖ್ಯೆಯಲ್ಲಿ ಇಳಿತ ಕಂಡು, ಆಹಾರದಲ್ಲಿ ಸ್ವಾವಲಂಬನೆಯಾಗಿ, ಅಕ್ಷರಸ್ಥರ ಪ್ರಮಾಣ ಹೆಚ್ಚಾಗಿ, ಕೊಳಗೇರಿಗಳ ಪ್ರಮಾಣ ಕಡಿಮೆಯಾಗಿ, ಲಾಭಾಂಶ ಹೆಚ್ಚಾಗಿ, ಅಹಾರ ಬೆಳೆದವನೇ ಗಣ್ಯನಾಗಿ ಕಂಡುಬರಬೇಕಿತ್ತು. ಆದರೆ ಬದಲಾವಣೆ ಆ ಪರಿಯಲ್ಲಿ ಗೋಚರಿಸಲಿಲ್ಲ. ಬದಲಿಗೆ ಎಲ್ಲವೂ ಉಲ್ಟಾ ಹೊಡೆದವು.
ಪುನಃ ನೆನಪಾಗುವುದು ಅದೇ ಜಾಗತೀಕರಣದ ಅನಂತರದ ಮಧ್ಯಮ ವರ್ಗ. ಆರ್ಥಿಕ ಸ್ಥಿತ್ಯಂತರಗಳಿಲ್ಲ. ಇಂತಹ ಬೃಹತ್ ಸಂಖ್ಯೆಯ ವರ್ಗ ನಿರ್ಮಾಣಗೊಂಡಿತ್ತು. ಬಡತನದ ಕುಟುಂಬಗಳಿಂದ ಬಂದಿದ್ದ ಯುವಕರು ಕಂಪ್ಯೂಟರ್, ಇಂಗ್ಲಿಷ್ ಮಾತ್ರದ ಬಂಡವಾಳದಿಂದಲೇ ಕುಟುಂಬವನ್ನು ಸಲಹಿದರು. ಪಾರ್ಶ್ವ ಪರಿಣಾಮಗಳು ಏನೇ ಇರಲಿ, ಒಂದಷ್ಟು ಬಡತನ ನೀಗಿದ್ದಂತೂ ಸತ್ಯ. ಈ ಮಧ್ಯಮ ವರ್ಗದಲ್ಲಿ ಆರ್ಥಿಕ ಕಾರಣಗಳನ್ನು ಹೊರತುಪಡಿಸಿ ನೋಡಿದರೆ ಅವು ವಿಪರೀತ ಕೀಳರಿಮೆಯನ್ನು ಬೆಳೆಸಿಕೊಂಡೇ ಬೆಳೆದವು. ಎಡಬಿಡಂಗಿಗಳಂತೆ ವರ್ತಿಸಿದವು. ಬ್ರ್ಯಾಂಡಿನ ಹುಚ್ಚು, ವಿದೇಶೀ ವ್ಯಾಮೋಹ ತನ್ನ ಸಹಜತೆಯನ್ನು ಕೊಲ್ಲುತ್ತಾ ಬಂತು. ಸ್ವದೇಶಿಯಾದರೂ ವರ್ತನೆ ವಿದೇಶೀಯಾಗಿ `ಮಧ್ಯಮ ವರ್ಗದ ನೈತಿಕತೆ ' ಹುಟ್ಟಿಕೊಂಡಿತು. ಊರಲ್ಲೇ ಬೆಳೆದವರು ಪೇಟೆ ಕಂಡಾಗ ಅಹಂಕಾರ ಮೆತ್ತಿಕೊಂಡಿತು. ಅಬ್ದುಲ್ ಕಲಾಂ ಭರವಸೆ ಇಟ್ಟಿದ್ದ ಯುವ ಜನಾಂಗದ ಬಹುಪಾಲು ಅವಸ್ಥೆ ಇಂದು ಹೀಗೇ ಇದೆ. ಇಂತಹ ಜನಾಂಗಕ್ಕಿಂದು ಸಮಷ್ಟಿ ಪ್ರಜ್ಞೆಯ ಕೊರತೆ ಇದೆ.

ಅವರು ಕಾರು-ಮನೆ-ಹೆಂಡತಿ ಎಂಬ ಬದುಕು ಭದ್ರಗೊಳಿಸಿಕೊಳ್ಳುವ ಧಾವಂತದಲ್ಲಿದ್ದಾರೆ. ಅಲ್ಲದೆ ಇವರ ಮೂಲ ಬೇರುಗಳೆಲ್ಲವೂ ಹಳ್ಳಿಗಳಲ್ಲಿವೆ. ಅವರು ಹಳ್ಳಿಗಳತ್ತ ಬೆನ್ನುಹಾಕಿದ್ದಾರೆ. ತಮ್ಮ ಮೂಲ ವೃತ್ತಿ, ಪರಂಪರೆಯ ಬಗ್ಗೆ ತಾತ್ಸಾರ ಹೊಂದಿದವರಾಗಿದ್ದಾರೆ. ಹಾಗಾಗಿ ಹಳ್ಳಿಗಳು ಸಮಸ್ಯೆಯ ಆಗರವಾಗಿ, ಕೃಷಿ ಎಂಬುದು ಕೈಹತ್ತದ ವೃತ್ತಿಯಾಗಿ, ಹಳ್ಳಿಯವರು ಚಲಾವಣೆಯಲ್ಲಿರದ ನಾಲ್ಕಾಣೆಯಂತಾಗಿರುವುದು ಸುಳ್ಳಲ್ಲ. ಸ್ತ್ರೀ-ಪುರುಷರ ಅಸಮತೋಲನ ಅನುಪಾತಗಳಿಂದ ಹಿಡಿದು ಬದುಕುವ ಸಕಲ ಹೋರಾಟವನ್ನೂ ಅನುಭವಿಸುವ ಹಳ್ಳಿಗಳನ್ನು ಬಿಟ್ಟು ದೇಶ 2020ರಲ್ಲಿ ಮಹಡಿ ಕಟ್ಟಲಾಗುವುದೇ? ದೇಶದ ಯುವಜನರನ್ನು ಆಕರ್ಷಿಸಬಲ್ಲ ಹಲವು ಕ್ರಿಯಾಯೋಜನೆಗಳನ್ನು ಹುಟ್ಟುಹಾಕಿ ಅವರಲ್ಲಿ ಭವಿಷ್ಯದ ಬಗ್ಗೆ ಆಶಾಭಾವನೆಯನ್ನು ಮೂಡಿಸಬಲ್ಲ ಮಾರ್ಗಗಳನ್ನು ನೀಡಬೇಕು ಎಂಬ ಆಶಾವಾದ ಅಬ್ದುಲ್ ಕಲಾಂರಲ್ಲಿತ್ತು. ಆದರೆ ಆಶಾಭಾವನೆ ಮೂಡಿಸಬಲ್ಲ ಯೋಜನೆಯನ್ನು ಕಾರ್ಯಗತಗೊಳಿಸಲು ಮಾರ್ಗಗಳನ್ನು ಯಾವ ಸರ್ಕಾರಗಳು ಹಮ್ಮಿಕೊಂಡಿವೆ? ಕಲಾಂ ಚಿಂತನೆಗಳನ್ನು ಯಾವ ಪಕ್ಷಗಳು ಪ್ರಣಾಳಿಕೆಯಲ್ಲಿ ಸೇರಿಸಿವೆ? ಹಾಗಾದರೆ 2020ರ ಹೊತ್ತಿನ ಇದಕ್ಕಿಂತ ಘೋರವಾಗಿರುವುದೇ? ಅದರ ಸುಳಿವುಗಳು ಈಗಲೇ ಗೋಚರವಾಗುತ್ತಿವೆ.

ಅಂದಿನ ದಾರ್ಶನಿಕರ ನಿಲುವುಗಳು ಒಂದಾಗಿದ್ದರೆ ಇಂದಿನ ಆಡಳಿತಗಾರರ ತಂತ್ರ ಇನ್ನೊಂದಾಗಿದೆ. ಅಂದು ಕಲಾಂ ಭಾರತ ಸಶಕ್ತವಾಗುವುದು ಎಂದು ನುಡಿದಿದ್ದರೆ ಇಂದು ಚುನಾವಣೆಗಳ ಹುಯಿಲುಗಳಲ್ಲಿ ಅವು ಹೂತುಹೋಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಇನ್ನೇನು ತಾನೇ ನಡೆದಿದೆ? ಕಲಾಂ ಚಿಂತನೆ ಆಧಾರದಲ್ಲಿ ಬೆಳೆಯಲು ಶುರುವಾದುದ್ದೆಲ್ಲಾ ಅಂತ್ಯವಾಗಿದ್ದು ಭ್ರಮನಿರಸನಗಳಲ್ಲೇ. ವರ್ಷದ ಹಿಂದಷ್ಟೇ ಏಶ್ಯನ್ ಗೇಮ್ಗಳು ನಡೆದವು. ಭಾರತದ ಯುವಜನಾಂಗದ ಮನಸ್ಸು ಅರಳುವ ಸಮಯವದು. ಆದರೆ ಏನಾಯಿತು? ಆಟದ ಸಲಕರಣೆಗಳ ಹಣವನ್ನೇ ತಿಂದರು. ಏಶ್ಯನ್ ಕೂಟವನ್ನೇ ಸರಿಯಾಗಿ ನಡೆಸದವರು ಒಲಂಪಿಕ್ಸ್ಗಳ ಕನಸ್ಸನ್ನು ಕಾಣುವುದಿನ್ನೆಂದು? ಶಕ್ತಿಶಾಲಿ ಭಾರತ ಕೇವಲ ಆರ್ಥಿಕತೆಯ ಬಲದಲ್ಲಿ ಮಾತ್ರ ನಿಂತಿರುವುದಿಲ್ಲ. ಅದು ಆತ್ಮವಿಶ್ವಾಸದ ಬುನಾದಿಯೂ ಆಗಿರುತ್ತದೆ. ಆರ್ಥಿಕವಾಗಿ ಬಲಶಾಲಿ ಎಂಬುದು ಶಕ್ತಿಶಾಲಿ ರಾಷ್ಟ್ರದ ಪರಿಕಲ್ಪನೆಯೂ ಆಗಿಬಾರದು. ಸ್ವಾವಲಂಬಿ ಎನ್ನುವುದು ಹೇಗೆ ರಾಮರಾಜ್ಯವಾಗುವುದೋ ಮೌಲ್ಯಾಧಾರಿತ ಬದುಕು ಕೂಡ ಬಲಶಾಲಿ ರಾಷ್ಟ್ರವೊಂದರ ತಿರುಳಾಗಿರುತ್ತದೆ. ಅಂತಹ ಚಿಹ್ನೆಗಳು ಸದ್ಯಕ್ಕಂತೂ ಗೋಚರವಾಗುತ್ತಿಲ್ಲ. ಪುಸ್ತಕದಲ್ಲಿ ಲೇಖಕರು ``ನಾಡಿನ ಪ್ರತಿಯೊಬ್ಬ ಪ್ರಜೆಯ ಕಣ್ಣೀರನ್ನು ತೊಡೆದು ಹಾಕಿದಾಗಲ್ಲಷ್ಟೇ ದೇಶ ಅಭಿವೃದ್ಧಿ ಹೊಂದಿದೆ ಎನ್ನಬಹುದು ಎಂದು ಮಹಾತ್ಮಾ ಗಾಂಧಿ ಹೇಳಿದ್ದಾರೆ'' ಎಂಬ ಉಲ್ಲೇಖವನ್ನು ಮಾಡುತ್ತಾರೆ. ಪ್ರಸ್ತುತ ನೆಲೆಯಲ್ಲಿ ನಿಂತು ಈ ವಾಕ್ಯಗಳನ್ನು ನೋಡುವಾಗ ವಿಷಣ್ಣತೆಗಿಂತ ಬೇರೇನೂ ಹೊಳೆಯುವುದಿಲ್ಲ. ಅಧಿಕಾರ ಹೋಯಿತೆಂದು ಕಣ್ಣೀರು ಹಾಕುವವರು, ಅಕಾರಕ್ಕಾಗಿ ಗಾಂಧಿ ಹೆಸರನ್ನು ಬಳಸಿ, ಗಾಂಧಿ ಹಾಕದೇ ಇದ್ದ ಟೋಪಿಯನ್ನೇ ಧರಿಸಿ, ದೇಶಕ್ಕೇ ಟೋಪಿ ಇಡುವವರು ಇರುವಾಗ 2020 ಕನಸೇ ಸರಿ ಎನಿಸುತ್ತದೆ.

ಇತ್ತೀಚಿನ ಘಟನಾವಳಿಗಳನ್ನೆ ಗಮನಿಸಿದರೂ ಅಬ್ದುಲ್ ಕಲಾಮರ ಚಿಂತನೆ ಗೂಡು ಸೇರಿಹೋಯಿತು ಎನಿಸುತ್ತದೆ.ವಿದೇಶದಲ್ಲಿರುವ ಕಪ್ಪು ಹಣವನ್ನು ತನ್ನಿ ಎಂದವರನ್ನೇ ಬಿಡದ ಸರಕಾರಗಳಿರುವಾಗ ಇವರಿಂದ ಏನು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು?ಪ್ರತಿಭಟನೆಯನ್ನೇ ದಮನಿಸುವ ಸರ್ವಾಧಿಕಾರಿಗಳಿರುವಾಗ ಗಾಂಧಿ ರಾಜ್ಯವೆಲ್ಲಿ?ರಾಮರಾಜ್ಯವೆಲ್ಲಿ?ಹಗರಣಗಳ ಮೇಲೆ ಹಗರಣಗಳು,ಭ್ರಷ್ಟರಿಗಿಂತ ದೊಡ್ಡ ಭ್ರಷ್ಟರು. ಇಂಥವರು ದೇಶವನ್ನು 2020ರ ಹೊತ್ತಿಗೆ ಹೊಸ ಶಕೆಯತ್ತ ಕೊಂಡೊಯ್ಯುವರೇ?ಇಂದು ಯಾವ ಕ್ಷೇತ್ರವನ್ನು ಪರಿಶೀಲಿಸಿದರೂ ಹೊಸ ಶಕೆಯ ಕುರುಹುಗಳನ್ನು ನಾವು ಕಾಣಲಾರೆವು.ಪದೇ ಪದೇ ಸಿಡಿಯುವ ಬಾಂಬುಗಳನ್ನೇ ನಿಲ್ಲಿಸಲಾಗುದಿಲ್ಲವೆಂದರೆ ಎಲ್ಲಿಯ ಶಕೆ,ಎಲ್ಲಿಯ ಗುರಿ?ಮಾಳಿಗೆ ಸೋರುತ್ತಿದೆ.ತೇಪೆಹಾಕಲೇ ಸಾಧ್ಯವಾಗುತ್ತಿಲ್ಲ.ಇನ್ನು ಹೊಸ ಕಟ್ಟಡದ ಕನಸೇ? ವಿದೇಶಾಂಗ ನೀತಿಯಿಂದ ಮೊದಲುಗೊಂಡು ಅಡುಗೇ ಅನಿಲದ ವರೆಗೆ ಎಲ್ಲದರಲ್ಲೂ ಭರವಸೆಯ ಅಶಾಕಾರಣಗಳಿಲ್ಲ.ಎಲ್ಲಿ ನೋಡಿದರಲ್ಲಿ ಹರಕು ಧರ್ಮಶಾಲೆಯ ಚಿತ್ರಣವೇ.ಸುತ್ತಲೂ ಶತ್ರುಗಳು,ಒಳಗೆಲ್ಲಾ ಕಾಳಜಿ ಇಲ್ಲದವರು.ಅಬ್ದುಲ್ ಕಲಾಮರ ಹೊಸ ಶಕೆಯತ್ತ ಘೋಷಣೆಯನ್ನು ಇಂದು ಶರದ್ ಪವಾರಂಥವರಿಗೇನಾದರೂ ನೆನಪಿಸಿದರೆ ವರ್ಲ್ಡ್ ಕಪ್ ಗೆದ್ದಮೇಲೆ ಇನ್ನೆಂಥಾ ಹೊಸ ಶಕೆ ಎಂದಾರು.ಕುಗ್ಗಿ ಬೇಸತ್ತುಹೋಗಿರುವ ದೇಶವಾಸಿಗಳ ಸಂಖ್ಯೆ ಇಂದು ಹೆಚ್ಚಾಗುತ್ತಲೇ ಹೋಗುತ್ತಿದೆ.2020ರವರೆಗೆ ದೇಶವನ್ನು ಮುಟ್ಟಿಸಬಲ್ಲವರು ಇಂದು ತುಂಬಾ ಇರಬಹುದು.ಆದರೆ ಹಾಗೆ ಮುಟ್ಟಿದ ದೇಶ ಅಬ್ದುಲ್ ಕಲಾಂ ಎಂದಂತೆ ಇರುವುದಿಲ್ಲ. ದಿಕ್ಕುನ ತಪ್ಪಿಸುವ,ನಾಗರಿಕರ ಕರ್ತವ್ಯಗಳನ್ನೇ ಮರೆಸುವ ನಾಯಕರಿರುವವರೆಗೆ 2020 ಅಲ್ಲ 5020ರವರೆಗೂ ಕಲಾಂ ಅಂದ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ.

- ಸಂತೋಷ್ ತಮ್ಮಯ್ಯ.

0 comments:

Post a Comment