ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
5:14 PM

ಆಸೆ

Posted by ekanasu

ಕಥೆ
ಸಾಹಿತ್ಯಆ ಬೈಲ ಬದಿಯಿಂದ ಒಂದು ಕಟ್ಟ ಹುಲ್ಲು ಕೆರೆಸಿ ತಾರೋ ಗೋಪ. ಹಾ... ಮತ್ತೆ ಹುಲ್ಲಿಗೆ ಹೋಗಿ ಕೇಪುಳ ಹಣ್ಣು ತಿಂತಾ ಅಲ್ಲೇ ಬಾಕಿ ಆಗ್ಬೇಡ. ಬೇಗ ಬಾ... ಇಂದು ತೋಡಿಗೆ ದನಗಳ ಎಬ್ಬಿಕೊಂಡು ನೀರು ಹಾಕ್ಬೇಕು. ಬರ್ತಾ ಅವುಗಳ ಮೈ ಉಜ್ಜಲೆ ಪಾಜಳೆ ಸೊಪ್ಪು ತರುವುದ ಮರೀಬೇಡ.

ಬಾವಿ ಕಟ್ಟೆಯ ಬಳಿ ಕತ್ತು ಬಗ್ಗಿಸಿ ಅನ್ಯಮನಸ್ಕನಂತೆ ಕೂತಿದ್ದ ಗೋಪನಿಗೆ ಕೆಲಸ ಹೊರಿಸಿದರು ಅಪ್ಪ. ಬಾಯಿ ತುಂಬಾ ತುಂಬಿದ್ದ ಕೆಂಪು ರಸ ಉಗುಳಲು ಅಂಗಳಕ್ಕಿಳಿದಾಗಲೂ ಗೋಪ ಅಲ್ಲೇ ಕುಳಿತಿರುವುದು ಕಂಡು ಅಪ್ಪನಿಗೆ ಪಿತ್ತ ನೆತ್ತಿಗೇರಿತು. ರಸ ಬಾಯಿಯಲ್ಲಿ ತುಂಬಿಕೊಂಡೇ `ನೀನು ಇನ್ನೂ ಹೋಗಲಿಲ್ವಾ?.. ಕತ್ತೆ ಬಡವ... ಕೆಲ್ಸ ಹೇಳಿದ್ರೆ ಬಾವಿ ಕಟ್ಟೆ ಮೇಲೆ ಏನು ಮಾಡ್ತಿದ್ದಿ? ಮೂರು ಹೊತ್ತೂ ಗಡದ್ದಾಗಿ ತಿಂದು ಮಲಗೋದು ಮಾತ್ರ ಅಲ್ಲ. ಅದು ಕರಗಬೇಕಾದ್ರೆ ಮೈ ಮುರಿದು ದುಡೀಬೇಕು. ಶಾಲೆಗೆ ರಜೆ ಅಂತ ದಿನ ಇಡೀ ಆಚೆ ಮನೆಗೆ ಹೋಗಿ ಟಿವಿ ನೋಡೋದು, ಇಲ್ಲಿ ಬಂದು ಮರ ಕೋತಿ ಆಡೋದು ಇಷ್ಟೇ ಗೊತ್ತಿರೋದು.. ವಯಸ್ಸು ಕತ್ತೆಗೆ ಆದ ಹಾಗೆ ಆದ್ರೂ ಬುದ್ದಿ ಬಲಿತಿಲ್ಲ' ಅಂತ ವಾಚಮಗೋಚರವಾಗಿ ಬೈಗುಳ ಸುರಿಸುತ್ತಾ ಬಾಯಿಯಲ್ಲಿದ್ದ ಎಲೆ ಅಡಿಕೆಯನ್ನು ಕ್ರಾ... ಅಂತ ತುಪ್ಪಿ ಹೆಂಡತಿ ಪ್ರೀತಿಯಿಂದ ಬೆಳೆಸಿದ್ದ ಸೇವಂತಿಗೆ ಸಸಿ ಮೇಲೆ ಚಿತ್ತಾರ ಹಾಕಿದರು.

ಅಪ್ಪನ ಬೈಗುಳ ಕೇಳಿ ಇನ್ನಷ್ಟು ಮುಖ ದಪ್ಪ ಮಾಡಿಕೊಂಡ ಗೋಪ ತುಟಿಯಲ್ಲೇ ಮಣ ಮಣ ಮಾಡಿಕೊಂಡು ಕತ್ತಿ ಕೈಗೆತ್ತಿಕೊಂಡು ಎದ್ದ. ಬೇಸಿಗೆ ರಜೆ ಮುಗಿದು ಶಾಲೆ ಬಾಗಿಲು ತೆರೆಯಲು ಇನ್ನು ಕೆಲವೇ ದಿನ ಬಾಕಿಯಿದೆ. ಅಷ್ಟರೊಳಗೆ ಏನೆಲ್ಲಾ ಮಾಡಬೇಕು ಅಂತ ಲೆಕ್ಕಾಚಾರ ಹಾಕಿದ್ದ ಅದನ್ನೆಲ್ಲಾ ಮುಗಿಸಿಬಿಡಬೇಕು. ಶಾಲೆ ತೆರೆದರೆ ಮತ್ತೆ ದಿನವೂ ಒಂದೇ ಕಾಯಕ. ಪುಸ್ತಕ, ಮನೆಗೆಲಸ ಬಿಟ್ಟು ಆಚೆ ಈಚೆ ಕಾಲಿಡುವಂತಿಲ್ಲ. ಮಂಗ ಬುದ್ಧಿ ತೋರಿಸಿದರೆ ಅಪ್ಪನ ಕೈಲಿ ಗುದ್ದು ಗ್ಯಾರಂಟಿ.

ಅಲ್ಲದಿದ್ರೂ ಎಷ್ಟು ದಿನದಿಂದ ಆಸೆ ಇತ್ತು ತನಗೆ. ಸಿನಿಮಾಕ್ಕೆ ಹೋಗಬೇಕು ಅಂತ. ಆಚೆ ಮನೆ ಸುಬ್ಬಣ್ಣ ಅವನ ತಂಗಿ, ತಮ್ಮಂದಿರನ್ನೆಲ್ಲಾ ಕರ್ಕೊಂಡು ಹೋಗ್ತಾನಂತೆ ಈವತ್ತು. ಅವರ ಜೊತೆಗೆ ನನಗೂ ಹೋಗಲಿಕ್ಕೆ ಛಾನ್ಸ್ ಇತ್ತು. ನೀನೂ ಬರ್ತಿಯಾ ಅಂತ ಬೆಳಿಗ್ಗೆ ಹಾಲು ಕೊಡಲು ಹೋದಾಗ ಸುಬ್ಬಣ್ಣ ಕೇಳಿದ್ದ. ಆದರೆ 30 ರೂಪಾಯಿ ಕಾಸು ಕೊಡ್ಬೇಕು. ಎಲ್ಲಿಂದ ತರುವುದು? ಅಮ್ಮನ ಡಬ್ಬದಲ್ಲಿ ಹುಡುಕಿದರೂ ಪುಡಿಗಾಸು ಸಿಕ್ಕಿತಷ್ಟೆ. ನನ್ನ ಮರದ ಪೆಟ್ಟಿಗೆಯಲ್ಲಿ ಜೋಪಾನವಾಗಿರಿಸಿದ್ದ ಕರಡಿಗೆಯಲ್ಲಿ ಹೆಂಗೆ ಲೆಕ್ಕ ಹಾಕಿದರೂ 10 ರೂಪಾಯಿ ದಾಟುತ್ತಿಲ್ಲ. ಇನ್ನು ಹಣ ಹೊಂದಿಸೋದು ಹೇಗೆ. ಹಣ ಹೊಂದಿಸುವುದು ಹಾಗಿರಲಿ. ಹಗಲೂ ರಾತ್ರಿ ನನ್ನ ಮೇಲೆಯೇ ಹದ್ದಿನ ಕಣ್ಣು ಹಾಕಿ ಕಾಯುವ ಅಪ್ಪನ ಕಣ್ಣು ತಪ್ಪಿಸಿ ಸಿನಿಮಾಕ್ಕೆ ಹೋಗುವಂತಿಲ್ಲ. ಕಾಸಿಗೂ ಅಪ್ಪನ ಬಳಿ ಕೈ ಚಾಚಬೇಕು. ಅಷ್ಟೆಲ್ಲಾ ಬೇಗ ಕಾಸು ಬಿಚ್ಚುವ ಅಸಾಮಿಯಲ್ಲ ಅಪ್ಪ. ಅವ ನನ್ನ ಮೋರೆ ಸಮಾಧಾನದಿಂದ ನೋಡಬೇಕು ಅಂದ್ರೆ ನಾನು ಮೈ ಮುರಿದು ದುಡೀತಾ ಇರ್ಬೇಕು. ಒಂದು ನಿಮಿಷ ಸುಮ್ಮನೇ ಕೂತದ್ದು ಕಂಡ್ರೆ ಊರಿಗೆಲ್ಲಾ ಕೇಳುವ ಹಾಗೆ ಕಿರುಚಾಡುತ್ತಾರೆ.

ಹಾಗಾಗಿಯೇ ಈವತ್ತು ಬೆಳಿಗ್ಗೆ ಹಾಲು ಕೊಟ್ಟು ಬಂದ ಮೇಲೆ ಯಾವತ್ತಿನ ಹಾಗೆ ಅಮ್ಮನ ಕಾಫಿ, ತಿಂಡಿಗೆ ಕಾಯುತ್ತಾ ಕೂರಲಿಲ್ಲ. ಜಾನುವಾರುಗಳಿಗೆ ಅಕ್ಕಚ್ಚು ಕೊಟ್ಟು, ತೋಟಕ್ಕೆ ಹೋಗಿ ಅಡಿಕೆ, ಹಾಳೆ ಹೆಕ್ಕಿ ಅಪ್ಪನ ಕೆಲಸವನ್ನು ಕೊಂಚ ಹಗುರ ಮಾಡಿದ್ದೆ.
ಅಪ್ಪ ಹಲಸಿನ ಕಾಯಿ ದೋಸೆಗೆ ಜೇನು ಹಾಕಿ ಚಪ್ಪರಿಸುವಾಗ ಮೆಲ್ಲಗೆ ಅಡಿಗೆ ಮನೆಯ ಹೊಸ್ತಿಲ ಮೇಲೆ ಪೀಠಿಕೆ ಹಾಕಲು ಕೂತಿದ್ದೆ. ಎರಡು ದೋಸೆ ತಿಂದು ಮುಗಿದ ಮೇಲೆ ಈಚೆ ತಿರುಗಿದರು ಅಪ್ಪ.. ಏನು? ನಿನ್ನದು ಇನ್ನೂ ಆಗಿಲ್ವಾ? ಅಂತ ಅದೇ ಕೆಂಗಣ್ಣು ಮಾಡಿ ಕೇಳಿದರು. `ಆಯ್ತು' ಎಂದು ಮೆಲ್ಲನೆ ತಲೆಯಾಡಿಸಿದೆ.
`ಮತ್ತೆ ಎಂತಕೆ ಇಲ್ಲಿ ಕೂತದ್ದು? ಅಡಿಕೆ ಹೆಕ್ಕಿದ್ಯಾ?' ದೋಸೆ ತುಂಡು ಕೈಯಲ್ಲಿ ಹಿಡಿದುಕೊಂಡೇ ಅಬ್ಬರಿಸಿದರು. `ಹೂಂ' ಅಂತ ಮೆತ್ತಗೆ ತಲೆಯಾಡಿಸಿದೆ. `ಹಾಗಿದ್ರೆ ಇಲ್ಲಿ ಸೋಮಾರಿಯ ಹಾಗೆ ಕೂರ್ಬೇಡ. ಬೇರೆ ಕೆಲಸ ನೋಡು' ಎಂದರೂ ಮತ್ತೆ ಅಲ್ಲಿಯೇ ಕೂತಿದ್ದವನನ್ನು ನೋಡಿ ಕೆರಳಿದರು. ಆದರೆ ಸಿನಿಮಾ ಆಸೆ... ಬಾಯಿ ಮುಚ್ಚಿ ಕೂದರೆ ಸುಬ್ಬಣ್ಣ ಬಿಟ್ಟು ಹೋದಾನು. ಬೇರೆ ದಾರಿಯಿಲ್ಲ..`ಅದೂ ಮತ್ತೆ... ಮೂ....ವತ್ತು ರೂಪಾಯಿ ಬೇಕಾಗಿತ್ತು...' ಅಷ್ಟು ಹೇಳುವಷ್ಟರಲ್ಲಿ ದೊಡ್ಡ ಬಂಡೆ ಕಲ್ಲು ಒಮ್ಮೆಗೆ ಎತ್ತಿದಷ್ಟು ಕಷ್ಟವಾಯಿತು.

ದುಡ್ಡಿನ ವಿಷ್ಯ ಕೇಳಿದ ಕೂಡಲೇ ತಿಂದದ್ದು ಗಂಟಲಿಗೆ ಸಿಕ್ಕಿ ಹಾಕಿಕೊಂಡವರ ಹಾಗೆ ತಿರುಗಿದರು ಅಪ್ಪ. `ಎಂತ ದುಡ್ಡಾ? ಮನೆಯಲ್ಲೇ ಮೂರು ಹೊತ್ತು ಕೂತಿರುವವನಿಗೆ ದುಡ್ಡು ಯಾಕೆ?'

(ನಾಳೆಗೆ...)

-ಶಾರ್ವರಿ

0 comments:

Post a Comment