ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗೋಕರ್ಣ : ಸಾತ್ವಿಕತೆ ದೈವೀಗುಣ.ಇದು ಲೋಕೋಪಕಾರಕ.ಆದರೆ ಕಾಲದ ಮಹಿಮೆಯಿಂದಲೋ ಅಥವಾ ವ್ಯಕ್ತಿಯ ಪೂರ್ವದೋಷಗಳಿಂದಲೋ ಒಮ್ಮೊಮ್ಮೆ ಸಾತ್ವಿಕಕುಲದಲ್ಲಿ ಹುಟ್ಟಿದ ವ್ಯಕ್ತಿಗಳೂ ಆಸುರೀಸ್ವಭಾವವನ್ನು ಹೊಂದಿ ಲೋಕಕಂಟಕರಾಗಿ ಪರಿವರ್ತನೆಹೊಂದುವುದುಂಟು.ವಿಷ್ಣುವಿನ ಅಂತರಂಗಭಕ್ತರಾಗಿದ್ದೂ ತಮ್ಮ ಅಪರಾಧದಿಂದ ಶಾಪಗ್ರಸ್ತರಾಗಿ ಭೂಮಿಗೆ ಬಿದ್ದು ರಾವಣ,ಕುಂಭಕರ್ಣರಾಗಿ ಜನಿಸಿದ ಜಯವಿಜಯರೇ ಇದಕ್ಕೆ ಉದಾಹರಣೆ.


ತಂದೆ ಪರಮತಪಸ್ವಿಯಾದ ವಿಶ್ರವಸ್.ಅಣ್ಣ ಮಾನವನಾಗಿ ಹುಟ್ಟಿಯೂ ತನ್ನ ಸಾಧನೆಯಿಂದ ದೈವತ್ವವನ್ನು ಪಡೆದು ಲೋಕಪಾಲಸ್ಥಾನವನ್ನು ಗಳಿಸಿದ ವೇದಪ್ರತಿಪಾದ್ಯನಾದ ಕುಬೇರ.ಆದರೂ ಇದೇ ವಿಶ್ರವಸ್ಸಿನಲ್ಲಿ ಜನಿಸಿದ ರಾವಣ,ಕುಂಭಕರ್ಣರು ಮಾತ್ರ ಇಂತಹ ವಂಶದಲ್ಲಿ ಇಂತಹವರೂ ಹುಟ್ಟಲು ಸಾಧ್ಯವೇ ಎಂಬ ವಿಸ್ಮಯಕ್ಕೆ ಕಾರಣರಾದರು.ತಾತ ಸುಮಾಲಿಯ ರಾಕ್ಷಸಕುಲದ ಔನ್ನತ್ಯವನ್ನು ಲೋಕದಲ್ಲಿ ಪುನಃಪ್ರತಿಷ್ಠಾಪಿಸುವ ಕುಟಿಲಧ್ಯೇಯದ ಕಾರಸ್ಥಾನದ ಫಲವಿದು. ಎಂದು ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.


ಗೋಕರ್ಣದ ಸನಿಹದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾದ ಶ್ರೀರಾಮಕಥಾ ಪ್ರವಚನವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ತಂದೆಯಾದ ಸುಮಾಲಿಯು ಮಗಳು ಕೈಕಸಿಯನ್ನು ತನ್ನ ಉದ್ದೇಶಕ್ಕೆ ದಾಳವನ್ನಾಗಿ ಬಳಸಿದ.ನವನಿಧೀಶನಾಗಿ ಪುಷ್ಪಕವಿಮಾನದಲ್ಲಿ ಸಂಚರಿಸುತ್ತಿದ್ದ ಕುಬೇರನನ್ನು ಕಂಡು ಅಸೂಯಾಪರನಾಗಿ ತಾನೂ ಇಂತಹ ಸಂತಾನವನ್ನು ಪಡೆಯಬೇಕೆಂದು ಬಯಸಿ ವಿಶ್ರವಸ್ಸಿನ ಬಳಿಗೆ ಕೆಟ್ಟಕಾಲದಲ್ಲಿ ಮಗಳನ್ನು ಕಳುಹಿಸಿದ. ಇದರ ಫಲವಾಗಿಯೇ ಇಂತಹ ವಿಶ್ವಪೀಡಕರ ಉದಯವಾಯಿತು.ಕುಬೇರನಂತಹ ಸದ್ಗುಣಿಯನ್ನು ಬಯಸದೆ ಅವನ ತಂದೆಯನ್ನು ವರನನ್ನಾಗಿ ವರಿಸಿದ್ದಕ್ಕೆ ಸುಮಾಲಿಯ ಮಹತ್ವಾಕಾಂಕ್ಷೆ ಕಾರಣ.ತಂದೆಯ ಮೇಲಿನ ಗೌರವದಿಂದ ಕೈಕಸಿಯೂ ಅದನ್ನು ವಿರೋಧಿಸದೆ ಮನಸ್ಸಿದ್ದೋ ಇಲ್ಲದೆಯೋ ವಿಶ್ರವಸ್ಸನ್ನು ಸಂತಾನಕ್ಕಾಗಿ ಪ್ರಾರ್ಥಿಸಿ ಅದರಲ್ಲಿಸಫಲಳೂ ಆದಳು.

ಆದರೆ ಅವಳು ಇಚ್ಛಿಸಿದ ಸಮಯ ಅತ್ಯಂತ ಕೆಟ್ಟದಾಗಿದ್ದರಿಂದ ತನ್ನಲ್ಲಿ ಹುಟ್ಟುವ ಮಕ್ಕಳು ಅತ್ಯಂತ ಕ್ರೂರಿಗಳಾಗಿ ಲೋಕಪೀಡಕರಾಗುತ್ತಾರೆಂದು ತಿಳಿದ ಮೇಲೆ ಒಳ್ಳೆಯ ಸಂತಾನ ಬೇಕೆಂದು ಪುನಃ ಪ್ರಾರ್ಥಿಸಿ ಧರ್ಮಾತ್ಮನಾದ ವಿಭೀಷಣನು ಮಗನಾಗಿ ಜನಿಸುವ ವರವನ್ನು ಪಡೆದಳು. ಘೋರವಾದ ಘಟನೆಯೊಂದು ನಡೆಯುವಾಗ ಪ್ರಕೃತಿಯಲ್ಲಿ ಅನಪೇಕ್ಷಿತವಾದ ಬದಲಾವಣೆಗಳು ತೋರಿಬರುವಂತೆ ರಾವಣ ಕುಂಭಕರ್ಣರು ಹುಟ್ಟುವಾಗಲೇ ಎಲ್ಲ ಅಶುಭಶಕುನಗಳು ತೋರಿದ್ದವು.ರಾವಣ ಕೇವಲ ರಾಕ್ಷಸನಲ್ಲ, ಸಮಸ್ತರಾಕ್ಷಸೀಸ್ವಭಾವಕ್ಕೇ ಆತ ಉದಾಹರಣೆ. ನಮ್ಮ ಹೃದಯದಲ್ಲಿನ ರಾಕ್ಷಸ ದೂರಾಗಿ ದೈವೀಸಂಪತ್ತು ಪ್ರಕಾಶಿಸಲು ರಾಮನ ಆಗಮನವಾಗಬೇಕು ಎಂದೂ ಹೇಳಿದ ಪೂಜ್ಯಶ್ರೀಗಳು ಚಾತುರ್ಮಾಸ್ಯದ ಈ ರಾಮಕಥೆಯು ಈ ಜೀವದೇವಸಂಗಮಗಳಿಗೆ ದ್ವಾರವಾಗಲಿ ಎಂದೂ ಆಶಿಸಿದರು.

ಶ್ರೀಪಾದ ಭಟ್ಟ,ಸಂಧ್ಯಾ ಭಟ್ಟ,ವಸುಧಾ ಶರ್ಮಾ ,ಪ್ರೊ.ಶಂಭು ಭಟ್ಟ ಇವರ ಸುಮಧುರ ಗಾಯನ ಹಾಗೂ ಗೋಪಾಲಕೃಷ್ಣ ಹೆಗಡೆಯವರ ತಬಲಾ,ನರಸಿಂಹ ಮೂರ್ತಿಯವರ ಮೃದಂಗ,ಪ್ರಕಾಶ ಕಲ್ಲರೆಮನೆಯವರ ವೇಣುವಾದನ ಇಂದಿನ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿತ್ತು.ವಿದ್ವಾನ್ ಜಗದೀಶ ಶರ್ಮಾ ಅವರ ನಿರ್ದೇಶನದಲ್ಲಿ ಆಯೋಜಿತವಾದ ರಾವಣಜನನ ರೂಪಕವು ತುಂಬ ರೋಚಕವಾಗಿ ಮೂಡಿಬಂದು ಸಭ್ಯರನ್ನು ಅಕ್ಷರಶಃ ಅದ್ಭುತದಕಡಲಲ್ಲಿ ಮುಳುಗಿಸಿತು.

ಗಣಪತಿ ನೀರ್ನಳ್ಳಿಯವರ ಆಶುಚಿತ್ರದ ಜೊತೆ ಮರಳುಶಿಲ್ಪ ಕಲಾವಿದ ಶ್ರೀ ರಾಘವೇಂದ್ರ ಹೆಗಡೆಯವರು ಆಶುಚಿತ್ರವನ್ನು ರಚಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮುಂಬಯಿಯ ದೊಂಬಿವಲಿ ವಲಯದಿಂದ ಇಂದಿನ ಶ್ರೀಗುರುದೇವತಾಸೇವೆಯು ಸಂಪನ್ನಗೊಂಡಿತು.ಪೂಜ್ಯಶ್ರೀಗಳು ಆಶೀರ್ವಚನಮಂತ್ರಾಕ್ಷತೆಯನ್ನು ಅನುಗ್ರಹಿಸಿದರು.ಎಂದಿನಂತೆ ಶ್ರೀಮಠದ ವಿವಿಧಯೋಜನೆಗಳಿಗೆ ಶಿಷ್ಯರಿಂದ ದೇಣಿಗೆಯು ಸಮರ್ಪಿತವಾಯಿತು.ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನಡೆಯಿತು.ಶ್ರೀಸವಾರಿಯ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.

ವರದಿ: ಸತ್ಯನಾರಾಯಣ ಶರ್ಮ

0 comments:

Post a Comment