ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:08 AM

ಅಸ್ಪೃಶ್ಯರು

Posted by ekanasu

ವೈದೇಹಿ ಕಾದಂಬರಿ
ಕಳೆದ ಸಂಚಿಕೆಯಿಂದ...


ಯಂತದದು ಎಂದು ತಿರುಗಿ ನೋಡಿದರೆ ತೋಟಿ! ತಲೆಯ ಮೇಲೆ ಮದಲ ಬಾಲ್ದಿ ಇಟ್ಟುಕೊಂಡು ಹೋಗುತ್ತಿದ್ದಳು. `ಉವ್ವೆ...' ಎಂದ ಪುಟ್ಟ. ಶಿವ ಮೂಗನ್ನು ಬಿಗಿಯಾಗಿ ಮುಚ್ಚಿಕೊಂಡು `ನರನಾತ ಕೇಳೆಂದ' - ಎಂದ. ಮೂಗು ಮುಚ್ಚಿ ಹೇಳಿದ್ದರಿಂದು ಅದು `ನರನಾತ ಕೇಳೆದ್ದ' -ಆಯಿತು. ಉಳಿದವೆಲ್ಲ ಅವನನ್ನು ಅನುಸರಿಸಲು ಸುರುಮಾಡಿದವು. ಗಲಾಟೆ ಜೋರಾದಾಗ `ಮಕ್ಕಳೇ ಬಾಯಿಮುಚ್ಚಿ. ಒಂದು ಮಂಗ ಮಾಡಿದ ಹಾಗೆ ಎಲ್ಲ ಮಂಗಗಳು ಮಾಡುವುದೇ ಅಲ್ಲವೇ?' ಎಂದು ಗದರಿಸಿ `ಯೇ ಸತ್ತವಳೇ, ನಿಂಗೆ ಬೇರೆ ಯಾವ ಹೊತ್ತಿಲ್ಲವೆ ಬರಲಿಕ್ಕೆ? ನಾವು ಸೊಳೆ ಬಿಡಿಸಿ ಇಟ್ಟುಕೊಂಡ ಮೂರ್ತ ಕಂಡೇ ಬಂದಿದ್ದಿಯಲ್ಲ! ಎಲ್ಲರೂ ಹೊಟ್ಟೆ ಮಗಚಿ ವಾಂತಿ ಮಾಡಿಕೊಳ್ಳಲಿ ಅಂತವ?- ಎನ್ನುತ್ತ ಪಾರ್ತಕ್ಕ ಸೊಳೆ ತುಂಬಿದ ಪಾತ್ರೆಗೆ ಅಡ್ಡ ಕುಳಿತರು. `ಅದರ ಕಣ್ಣಿಗೆ ಬಿದ್ದರೆ ಸಾಕು.ಸೊಳೆ ಬೇಯುವ ಆಸೆ ಬಿಟ್ಟಂತೆಯೇ. ರಾವು ಬಡಿದ ಜಾತಿಯಲ್ಲವೇ? ಕೊಳಕು ಜಾತಿ' -
`ಅದು ಹೇಗೆ ಕೊಳಕು?' - ಎಂದು ಕೇಳಿದ ಪುಟ್ಟನಿಗೆ `ಕೊಳಕಲ್ಲದೆ ಪವಿತ್ರವ? ಅದರ ತಲೆಯ ಮೇಲೆ ಯಂತದು ಇರುವುದು? ಯಾರ ಯಾರ ಮನೆ ಪಾಯಿಖಾನೆ! ಎಲ್ಲದರ ಒಟ್ಟು ವಾಸನೆ ನಮ್ಮ ಮೂಗಿಗೆ.ಥು, ನಾ ಮಿಂದು ಕೂಡ ಆಯಿತು'.

ಮಕ್ಕಳಿಗೆ ಹೌದೆನಿಸಿತು. ಹಾಗೆ ದನಿಗೂಡಿಸಿದವು.ಶಿವ `ಮನುಷ್ಯನಿಗೆ ಇಷ್ಟೊಂದು ಅಸಹ್ಯ ಇಲ್ಲದಿರುತ್ತಿದ್ದರೆ! ' -ಎಂದ.` ತೋಟಿ ಕೆಲಸವಿಲ್ಲದೆ ಸಾಯುತ್ತಿತ್ತು' - ಎಂದರು ಪಾರ್ತಕ್ಕ.
ಬಚ್ಚಲ ಹರಿಗೆ ನೀರು ತರುತ್ತಿದ್ದ ರುಕ್ಕು ಆ ಮಾತು ಕೇಳಿ `ಒಂದು ಘನಾ ಜನವನ್ನು ಮದುವೆ ಆದರೆ ಅದು ಹೇಗೆ ಸಾಯುತ್ತದೆ?'- ಎಂದು ಒಂದು ನಮೂನೆಯ ಅಡ್ಡ ನಗೆಯಲ್ಲಿ ಹೇಳಿ ಬಚ್ಚಲೊಳಗೆ ನಡೆದೇ ಬಿಟ್ಟಳು.
ಪಾರ್ತಕ್ಕ ಸರಕ್ಕೆಂದು ಅವಳ ಕಡೆ ನೋಡಿದರು. ಮುಖ ನಿಮಿಷ ಮಾತ್ರದಲ್ಲಿ ಕಂದಿ ಹೋಯಿತು. ರುಕ್ಕುವನ್ನು ಕೆಲಸ ಬಿಡಿಸಬೇಕೆಂದು ಅವರಿಗೆ ಹಲವು ಸಲ ಕಂಡಿತ್ತು. `ಮಹಾ ಅಧಿಕ ಪ್ರಸಂಗಿ. ಆದರೆ ಅವಳನ್ನು ಬಿಡಿಸಿದರೆ ಬೇರೆ ಜನ ಸಿಗಬೇಕಲ್ಲ!'

ಈ ಸಲ ಮಾತ್ರ ಅವಳನ್ನು ಸುಮ್ಮನೆ ಬಿಡಬಾರದು. ಕೆಲಸ ಬಿಟ್ಟರೆ ಬಿಡಲಿ. ತೌಡು ತಿಂಬವ ಹೋದರೆ ಉಮಿ ತಿಂಬವ ಬಂದಾನು ಎಂಬ ಗಾದೆ ಸುಮ್ಮನೆ ಮಾಡಿದ್ದ ಅಂತಂದುಕೊಂಡು ಪಾರ್ತಕ್ಕನಿಂದ ರುಕ್ಕುವಿಗೆ ಮಾತಿನ ಪೂಜೆಯಾಯಿತು.
ಮೊದ ಮೊದಲು ರಪರಪಂತ ಎದುರುತ್ತರ ಕೊಟ್ಟ ರುಕ್ಕುವಿಗೆ ಕಡೆಕಡೆಗೆ ತಾನು ಯಾಕಾದರೂ ಹಾಗೆ ಹೇಳಿದೆ ಎಂಬಷ್ಟಾಯಿತು.
`ಈ ಕ್ಷಣವೇ ನಡೆ ಕೆಲಸ ಬಿಟ್ಟು' - ಎಂದರು ಪಾರ್ತಕ್ಕ. ತನ್ನಷ್ಟಕ್ಕೆ ತಾನು ಮುಸುರೆ ತಿಕ್ಕಿಕೊಂಡು ಬಿದ್ದಿರಬೇಕಾದವಳು ಇಷ್ಟೆಲ್ಲ ಅನಿಸಿಕೊಳ್ಳಬೇಕಾದರೆ ತನ್ನ ಗಿರಾಚಾರವಲ್ಲವೇ? ಇವತ್ತು ಯಾರ ಮುಖ ಕಂಡು ಎದ್ದಿದ್ದೆ ಅಂತ ಹೇಳುತ್ತ ಅಳುತ್ತ ನೀರು ಹೊತ್ತಳು ರುಕ್ಕು.ಚಂದುವಿನಂತೆ ಪೆಟ್ಟೊಂದು ತುಂಡೆರಡು ಗುಣದವಳಲ್ಲ.ಹೇಳಿದ್ದನ್ನೇ ಹೇಳುತ್ತ ಅಳುವಿಗೆ ನೇತಾಡುವವಳು.

ಒಳಗಿದ್ದ ಗೌರಮ್ಮನಿಗೆ ಈ ಗಲಾಟೆಯೆಲ್ಲ ಕೇಳಿಸಿದರೂ ಹೊರಗೆ ಕಾಲಿಡಲಿಲ್ಲ.ಕೆಲಸ ಮಾಡಿ ತಿಂಬವಕ್ಕೆ ಎಷ್ಟು ಚೊಗರು ಹಾಗಾದರೆ!ಯಾಕೆ ಅವಳು ಪಾರ್ತಕ್ಕನಿಗೆ ಹೇಳಬೇಕಿತ್ತು? ಅವಳದ್ದು ತಪ್ಪೇ - ಎಂದು ಒಮ್ಮೆ ಕಂಡರೆ , ಆದರೂ ಪಾರ್ತಕ್ಕ ಈ ಕ್ಷಣ ಕೆಲಸ ಬಿಟ್ಟು ನಡೆ ಎನ್ನುತ್ತಾರಲ್ಲ ಇಲ್ಲಿ ನನ್ನಜ್ಜ ಇದ್ದಾನಾ ಕೆಲಸ ಮಾಡಲಿಕ್ಕೆ? ಚಂದು , ಚಂದು ಬಿಟ್ಟು ನಡೆದಾಯಿತು.ಈಗ ಇವಳೂ ಹಾರಿದರೆ ಯಾರಿದ್ದಾರೆ ಮಾಡಲು? ಈ ಪಾಟಿ ವಸ್ತ್ರನೀರು ಎಲ್ಲ ಇದ್ದ ಮನೆಯಲ್ಲಿ ಕೆಲಸದ ಜನವನ್ನೂ ಓಡಿಸಿ ಇವರು ಒಳ್ಳೇ ಉಪಕಾರ ಮಾಡುತ್ತಿದ್ದಾರೆ! ಎಂದು ಕರಕರೆಯೂ ಆಯಿತು...ಹಾಗೆ ಬಾಯಿಬಿಟ್ಟು ಹೇಳಲುಂಟೇ...ಪಾರ್ತಕ್ಕ ಬೇಜಾರು ಮಾಡಿಕೊಂಡಾರು.ಒಟ್ಟಾರೆ ಇವೆಲ್ಲ ಉಸಿರುಬ್ಬಸದ ವಿಚಾರಗಳು.ನುಂಗಲಿಕ್ಕೂ ಅಲ್ಲ , ಉಗುಳಲಿಕ್ಕೂ ಅಲ್ಲ...

ಮುಂದುವರಿಯುವುದು...

- ವೈದೇಹಿ.

0 comments:

Post a Comment