ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸೂಫಿ ಸಂತರ ಸುಗಂಧ

ಎಲ್ಲರು ಒಟ್ಟಾರೆ ಎಲ್ಲಿಂದಲೋ ಬಂದ ಹಾಗೆ ಇದೆ...! ಖಾನ್ ಸಾಹೇಬರೇ ಬನ್ನಿ ಟೀ ಕುಡಿಯೋಣ.ಮಸೀದಿಗೆ ಹೋಗಿದ್ದೊ...
ಬನ್ನಿ ಎಲ್ಲರು ಟೀ ಕುಡಿದು ಹೋಗಿ.ಕ್ಷಮಿಸಿ ಶಿವಣ್ಣ. ನಾವೆಲ್ಲ ಉಪವಾಸ ಇದ್ದೇವೆ. ಓ...ರಂಜಾನ್ ತಿಂಗಳು ಪ್ರಾರಂಭ ಆಯಿತಲ್ಲವೇ...? ಕ್ಷಮಿಸಿ, ನನಗೆ ಮರತೇ ಹೋಗಿತ್ತು.ಹೌದೂ.....ಈ ಉಪವಾಸ ವ್ರತ ಬರಾಬರಿ ಒಂದು ತಿಂಗಳು ಯಾಕೆ ಆಚರಿಸುತ್ತಾರೆ ಸ್ವಲ್ಪ ಹೇಳಿ ಖಾನ್ ಸಾಹೇಬರೆ..?ಇದು ಒಂದು ರೀತಿಯ ಬಾಹ್ಯ ಮತ್ತು ಆಂತರಿಕ ವ್ಯಕ್ತಿತ್ವ ವಿಕಸನದ ಟ್ರೇನಿಂಗ್ ಶಿವಣ್ಣನವರೆ....ಲೌಕಿಕ ಮತ್ತು ಅಲೌಕಿಕ ಜೀವನದಲ್ಲಿ ಸಮತೋಲನ ಕಾಪಾಡಿಕೊಂಡು ಹೋಗಲೀ ಅಂತ ದೇವರು ನಮಗೆ ಉಪವಾಸ ವ್ರತ ಇಟ್ಟಿದ್ದಾನೆ ನೋಡಿ.ಉಪವಾಸ ಮನುಷ್ಯನ ಬಾಹ್ಯ ಮತ್ತು ಆಂತರಿಕ ಶುದ್ದೀಕರಣಕ್ಕಾಗಿ ಒಂದು ಉತ್ತಮ ಮಾರ್ಗ ಮತ್ತು ಶಿಕ್ಷಣವಾಗಿದೆ. ಉಪವಾಸವಿಡುವುದರಿಂದ ಮಾನವನಿಗೆ ಶಾರೀರಿಕವಾಗಿ ಸಿಗುವ ಲಾಭಗಳು ಹಲವಾರು. ಆರೋಗ್ಯ ಉತ್ತಮವಾಗಿರುತ್ತದೆ. ಆತ್ಮಶಕ್ತಿ ಸಹ ವೃದ್ಧಿಗೊಳ್ಳುತ್ತದೆ. ಎಂತಹ ರುಚಿಕರ ಆಹಾರವೇ ಮುಂದೆ ಬರಲಿ, ನಮಗೆಷ್ಟೇ ಹಸಿವು ದಾಹವಿರಲಿ, ಬೆಳಗಿನಿಂದ ಸಂಜೆಯವರೆಗೆ ನಾವೇನ್ನನ್ನೂ ಸೇವಿಸುವುದಿಲ್ಲ. ಜನರ ಮುಂದೆ ನಾವು ತಿನ್ನದಿರುವುದಲ್ಲ, ಏಕಾಂತದಲ್ಲಿ ನಮ್ಮನ್ನು ಯಾರು ನೋಡುವವರು ಇಲ್ಲದಿರುವಾಗಲೂ ನೀರಿನ ಒಂದು ಹನಿ ಅಥವಾ ಒಂದು ತುತ್ತು ಅನ್ನವನ್ನು ಸೇವಿಸುವುದು ಕೂಡ ನಮಗೆ ಅಸಾಧ್ಯವಾಗುತ್ತದೆ. ಇದು ಎಂತಹ ವಿಷಯ ಎಂಬುದನ್ನು ಸ್ವಲ್ಪ ಯೋಚಿಸಿ ನೋಡಿ. ಇದರ ಬುಡದಲ್ಲಿರುವುದು ಸೃಷ್ಟಿಕರ್ತನ ಪ್ರೀತಿಯಾಗಿದೆ. ಅವನು ಸರ್ವಜ್ಞ, ಸರ್ವವ್ಯಾಪಿಯೂ ಆಗಿರುವನೆಂಬ ದೃಡ ನಂಬಿಕೆಯಾಗಿದೆ.

ಉಪವಾಸ ಪರಿಶುದ್ಧತೆಯ ವ್ರತವಾಗಿದೆ. ಇಡೀ ವಾತಾವರಣದಲ್ಲಿ ಸತ್ಯವಿಶ್ವಾಸ, ದೇವಭಯ,ದೇವಾಜ್ಞೆಗಳ ಅನುಸರಣೆ, ನೈತಿಕ ಪರಿಶುದ್ಧತೆ ಹಾಗೂ ಸತ್ಕರ್ಮಗಳು ವ್ಯಾಪಿಸಿರುತ್ತವೆ. ದುಷ್ಟರು ದುರಾಚಾರದ ಕಾರ್ಯ ಮಾಡಲು ನಾಚಿಕೆಪಟ್ಟುಕೊಳ್ಳುತ್ತಾರೆ. ಶ್ರೀಮಂತರಲ್ಲಿ ಬಡವರಿಗೆ ನೆರವಾಗುವ ಭಾವನೆ ಮೂಡುತ್ತದೆ. ಇವೆಲ್ಲವೂ ನಮಗೆ ಲಭಿಸುವ ಬಾಹ್ಯ ಪ್ರಯೋಜನಗಳು.

ನಮ್ಮನ್ನು ಹಸಿವಿನಿಂದಿರಿಸುವುದರಿಂದ ಸೃಷ್ಟಿಕರ್ತನಿಗೆ ಯಾವ ಲಾಭವೂ ಇಲ್ಲ. ನಮ್ಮಲ್ಲಿ ಬಾಹ್ಯ ಮತ್ತು ಆಂತರಿಕ ಸದ್ಗುಣಗಳು ವೃದ್ದಿಸಲಿ ಎಂದೇ ಉಪವಾಸ ವ್ರತ ಮಾಡಲಾಗಿದೆ. ಆಂತರಿಕವಾಗಿ ನಾವು ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಯಾವುದೇ ರೀತಿಯ ಲೌಕಿಕ ದುರಾಸೆಗಳು ಮನಸ್ಸಿನಲ್ಲಿ ಹುಟ್ಟದಂತೆ ನೋಡಿಕೊಳ್ಳಬೇಕಾಗುತ್ತದೆ. ಬಾಹ್ಯವಾಗಿ ನಾನು ಉಪವಾಸವಿರಬಹುದು. ಆದರೆ ಮನಸ್ಸಿನ ಸ್ಥಿತಿ ಸೃಷ್ಟಿಕರ್ತನಿಗೆ ಬಿಟ್ಟು ಬೇರಾರಿಗೂ ತಿಳಿಯದು.

ಉದಾಹರಣಗೆ ಕಾಮದ ಕಣ್ಣುಗಳಿಂದ ನಾನು ಪರಸ್ತ್ರೀಯನ್ನು ಅಥವಾ ಪರಸ್ತ್ರೀ ಪರಪುರುಷನನ್ನೋ ನೋಡುತ್ತಿರಬಹುದು, ಆಗ ಕಣ್ಣಿನ ಉಪವಾಸ ಮುರಿದು ಹೋಯಿತು ಎಂದಾಗುತ್ತದೆ. ಪರರ ಆಸ್ತಿ ಅಂತಸ್ತು ನೋಡಿ ಮನಸ್ಸಿನಲಿ ಅಸೂಯೆ ಉಂಟಾಯಿತು ಎಂದಿಟ್ಟುಕೊಳ್ಳೋಣ, ಆಗ ಮನಸ್ಸಿನ ಉಪವಾಸ ನಾಶವಾಗಿ ಹೋಯಿತು. ಕೇವಲ ಹಸಿವಿನಿಂದಿರುವುದು ಉಪವಾಸವಲ್ಲ. ಆಂತರಿಕ ಭಾವನೆಗಳ ಪರಿಶುದ್ಧತೆ ಮತ್ತು ಸೃಷ್ಟಿಕರ್ತನ ಗುಣಗಳನ್ನು ಪರಿಶುದ್ಧತೆಯಿಂದ ಕಾಪಾಡಿಕೊಳ್ಳುವುದೇ ನೈಜ ಉಪವಾಸವಾಗಿದೆ. ಮನುಷ್ಯನಿಗೆ ಹಸಿವಾಗುತ್ತದೆ. ಸೃಷ್ಟಿಕರ್ತನಿಗೆ ಹಸಿವಾಗುವುದಿಲ್ಲ. ಮನುಷ್ಯನಿಗೆ ನಿದ್ದೆ ಬರುತ್ತದೆ. ಸೃಷ್ಟಿಕರ್ತ ನಿದ್ದೆ ಮಾಡುವುದಿಲ್ಲ. ಸೃಷ್ಟಿಕರ್ತ ಪ್ರತಿಯೊಂದು ಕಳಂಕದಿಂದ ಪರಿಶುದ್ಧನಾಗಿದ್ದಾನೆ. ಆದರೆ ಮನುಷ್ಯ ಕಳಂಕಗಳ ಕೋಟೆ. ಸೃಷ್ಟಿಕರ್ತನಿಗೆ ಸಂಗಾತಿ ಇಲ್ಲ. ಬಂಧು ಬಳಗ ಇಲ್ಲ. ಮಕ್ಕಳು ಇಲ್ಲ. ನಮಗೆ ಇವೆಲ್ಲಾ ಉಂಟು. ಹಾಗಾದರೆ ಸೃಷ್ಟಿಕರ್ತ ಹೇಗಿರಬಹುದು? ಉಪವಾಸವಿದ್ದರೆ ಆತನ ಕೆಲವು ಗುಣಗಳನ್ನು ಅರ್ಥಮಾಡಿಕೊಳ್ಳಬಹುದು.

ಸೂಫಿ ಸಂತ ಹಜ್ರತ್ ನಿಜಾಮುದ್ದೀನ್ ರಾತ್ರಿಯೆಲ್ಲಾ ಸೃಷ್ಟಿಕರ್ತನ ಪ್ರಾರ್ಥನೆ ಮಾಡಿ, ಹಗಲೆಲ್ಲ ಉಪವಾಸವಿಡುತ್ತಿದ್ದರು. ಉಪವಾಸ ಸೂಫಿ ಸಂತರಿಗೆ ಸುಗಂಧವಿದ್ದಂತೆ. ಉಪವಾಸದ ಅಲೌಕಿಕ ಪರಿಮಳದಲ್ಲಿ ಅವರು ಮುಳುಗಿ ಹೋಗಿರುತ್ತಾರೆ. ಉಪವಾಸ ಲೌಕಿಕ ಮತ್ತು ಅಲೌಕಿಕ ಎರಡೂ ಜೀವನಗಳನ್ನು ಪರಿಶುದ್ಧಗೊಳಿಸುತ್ತದೆ. ಸೃಷ್ಟಿಕರ್ತ ಮತ್ತು ಅವನ ದಾಸನ ನಡುವಿನ ಸಂಬಂಧ ತೀರ ಕಡಿಮೆ ಮಾಡುತ್ತದೆ. ಇಬ್ಬರಲ್ಲಿ ನೆಂಟಸ್ಥಿಕೆ ಹೆಚ್ಚಾಗುತ್ತದೆ. ದಾಸನಿಗೆ ಆಕಾಶ ಭೂಮಿಯೆಲೆಲ್ಲಾ ಸೃಷ್ಟಿಕರ್ತನ ಪ್ರಕಾಶವೇ ಕಾಣಿಸಿಕೊಳ್ಳುತ್ತದೆ.

ಅರ್ಥವಾಯಿತೇ ಶಿವಣ್ಣ...?
ಹೂಂ... ಯೋಚನೆಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಪಂಚೇದ್ರಿಯಗಳ ಮೇಲೆ ನಿಗಾ ಇಡಬೇಕು. ಒಂದು ತಿಂಗಳ ತರಬೇತಿಯನ್ನು ವರ್ಷವಿಡೀ ಕಾಪಾಡಿಕೊಳ್ಳಬೇಕಂತಲ್ಲವೇ...?
ಹೂಂ... ನೋಡಿ. ಆಗಲಿ ಶಿವಣ್ಣ ಮತ್ತೆ ಸಿಗೋಣ.
ಹೊರಡಿ. ಒಳ್ಳೆಯದು.

- ಜಬೀವುಲ್ಲಾ ಖಾನ್

0 comments:

Post a Comment