ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಂಕಷ್ಟದಲ್ಲಿ ತಿರ್ತಗೇರಿ ಕೊಪ್ಪ
ಬೇಡಿಕೆ ಇದೆ ಮಡಕೆಗೆ ಆದರೆ ದುಡಿಯುವ ಕೈಗಳಿಗೆ ಇಲ್ಲ ಇಲ್ಲಿ ಶಕ್ತಿ. . .!

ಪುತ್ತೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪುತ್ತೂರಿನವರಾದ ಡಿ.ವಿ.ಸದಾನಂದ ಗೌಡರು ಆಯ್ಕೆಗೊಂಡಿದ್ದಾರೆ. ತಾಲೂಕಿನಲ್ಲಿ ಮಾತ್ರವಲ್ಲ ಇಡೀ ಜಿಲ್ಲೆಯಲ್ಲೇ ಅತ್ಯಂತ ಹೆಸರುವಾಸಿಯಾದ ಚಾರ್ವಾಕದ ತಿರ್ತಗೇರಿ ಕೊಪ್ಪದ ಮಡಕೆ ಈಗ ಸಂಕಷ್ಟದ ಹಾದಿಯಲ್ಲಿದೆ. ಇಲ್ಲಿನ ಮೂಲಭೂತ ಸಮಸ್ಯೆಗಳ ಕಾರಣದಿಂದಾಗಿ ಜೀವನಾಧಾರವಾದ ಮಡಕೆ ಉದ್ಯಮವು ಅಳಿವಿನಂಚಿನಲ್ಲಿದೆ.ಈ ಬಗ್ಗೆ ತಮ್ಮ ಊರಿನ ಸಮಸ್ಯೆಯ ಬಗ್ಗೆ ನೂತನ ಮುಖ್ಯಮಂತ್ರಿ ಸ್ಪಂದಿಸುತ್ತಾರೆಯೇ...? ಕಾದುನೋಡಬೇಕಾಗಿದೆ.ಹೀಗಾಗಿ ಇಲ್ಲಿನ ಸುಮಾರು 32 ಕುಟುಂಬಗಳು ಇಂದು ಭವಿಷ್ಯದ ಬಗ್ಗೆ ಚಿಂತೆ ಮಾಡುವಂತೆ ಮಾಡಿದೆ.ಇದು ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದ ಕೊಪ್ಪದ ಪ್ರದೇಶದ ಕತೆ. ಇಲ್ಲಿ ಕುಂಬಾರರು ತಯಾರು ಮಾಡುವ ಮಡಕೆಯು ತಾಲೂಕು ಮಾತ್ರವಲ್ಲ ಜಿಲ್ಲೆ , ಹೊರ ಜಿಲ್ಲೆಗಳಲ್ಲೂ ಹಿಂದೊಂದು ಕಾಲದಲ್ಲಿ ಭಾರೀ ಬೇಡಿಕೆ ಇದ್ದ ಹಾಗೂ ಇಂದಿಗೂ ಬೇಡಿಕೆ ಇರುವ ಮಡಕೆಗಳಲ್ಲಿ ಒಂದು. ಇಲ್ಲಿನ ಮಡಕೆಯು ತಿರ್ತಗೇರಿ ಮಡಕೆ ಎಂದೇ ಪ್ರಸಿದ್ಧಿ.


ಈ ಮಡಕೆ ಮಾರುಕಟ್ಟೆಯಲ್ಲಿ ಇದೆ ಎಂದರೆ ಅದಕ್ಕೊಂದು ಬೇಡಿಕೆಯೇ ಬೇರೆ. ಕಾರಣ ಅದು ಬಿದ್ದರೂ ಒಡೆಯುವುದಿಲ್ಲ ಮತ್ತು ಗುಣಮಟ್ಟದಿಂದ ಕೂಡಿದೆ ಎಂಬುದೇ ಪ್ರಮುಖ ಕಾರಣ. ಪರಿಸ್ಥಿತಿ ಹೀಗಿರುವಾಗ ಇಂದು ಮಾತ್ರ ಇಲ್ಲಿನ ಕುಂಬಾರರಿಗೆ ತೀರಾ ಸಂಕಷ್ಟ.ಇಲ್ಲಿ ಒಟ್ಟು 32 ಕುಟುಂಬಗಳು ಕುಂಬಾರರದ್ದೇ ಇದೆ.ಅವುಗಳಲ್ಲಿ ಇಂದು ಸುಮಾರು 10 ಮನೆಗಳವರು ಮಡಕೆ ತಯಾರು ಮಾಡುವ ಉದ್ಯಮ ಮಾಡುತ್ತಿದ್ದಾರೆ. ಉಳಿದ ಕುಟುಂಬಗಳು ಪರ್ಯಾಯ ವೃತ್ತಿಯನ್ನು ಅನಿವಾರ್ಯವಾಗಿ ಮಾಡುತ್ತಿದ್ದಾರೆ. ಜೀವನೋಪಾಯಕ್ಕಾಗಿ ಇದು ಅನಿವಾರ್ಯ ಕೂಡಾ. ಮೂಲಭೂತ ಸೌಲಭ್ಯಗಳ ಕೊರತೆ ಇಂದು ಇಲ್ಲಿ ತೀವ್ರವಾಗಿ ಕಾಡುತ್ತಿದೆ.

ಸಮಸ್ಯೆಗಳ ಸರಮಾಲೆ

ಮಡಕೆ ಮಾಡಲು ಸಮಸ್ಯೆ ಏನು ? ಎಂದು ಕೇಳಿದರೆ ಸಾಕು.ಮಣ್ಣಿನಿಂದ ಹಿಡಿದು ಮಡಕೆ ಬೇಯಿಸುಬಲ್ಲಿಯವರೆಗೆ ಸಮಸ್ಯೆಗಳ ಸರಮಾಲೆಯೇ ಇದೆ ಇಲ್ಲಿ. ಮುಖ್ಯವಾಗಿ ಇವರಿಗೆ ಕಾಡುವುದು ಗುಣಮಟ್ಟದ ಮಣ್ಣಿನ ಕೊರತೆ. ಇಲ್ಲೇ ಸನಿಹದಲ್ಲಿ ಉತ್ತಮ ಗುಣಮಟ್ಟದ ಮಣ್ಣು ಇದ್ದರೂ ಅದನ್ನು ಮುಟ್ಟುವ ಹಾಗಿಲ್ಲ. ಹೀಗಾಗಿ ಮಡಕೆಗೆ ಬೇಕಾದ ಅಂಟು ಮಣ್ಣು ಬೆಳ್ತಂಗಡಿ ತಾಲೂಕಿನ ದಿಡುಪೆ ಬಳಿಯ ಬಂಗಾಡಿಯಿಂದ ಮಣ್ಣನ್ನು ತರಬೇಕಾಗಿದೆ. ಇದಕ್ಕಾಗಿ 2-3 ಕುಟುಂಬಗಳು ಒಟ್ಟು ಸೇರಿ ಲಾರಿಯಲ್ಲೋ ಅಥವಾ ಇನ್ಯಾವುದಾದರೂ ವಾಹನದಲ್ಲಿ ತರಬೇಕಾಗುತ್ತದೆ. ಇನ್ನು ಮಡಕೆ ತಯಾರು ಮಾಡಿ ಬೇಯಿಸಬೇಕು ಎಂದರೆ ಕಟ್ಟಿಗೆ ಸಮಸ್ಯೆ.ಇದಕ್ಕೂ ಜನ ಸಿಗೋದಿಲ್ಲ.ಸಿಕ್ಕರೂ ಕಟ್ಟಿಗೆ ಸಿಗೋದಿಲ್ಲ.ಇನ್ನು ಮಡಕೆ ಒಣಗಿಸುವ ಬಟ್ಟಿ ಶೆಡ್ ಕೂಡಾ 20 ವರ್ಷದಿಂದ ನಾದುರಸ್ಥಿಯಲ್ಲಿದೆ. ಇದೆಲ್ಲಾ ಕಾರಣದಿಂದಾಗಿ ಜೀವನಾಧಾರವಾದ ಮಡಕೆ ಕೆಲಸವನ್ನೇ ಕೈಬಿಡಬೇಕಾದ ಪರಿಸ್ಥಿತಿ ಬಂದಿದೆ ಎನ್ನುವುದು ಇಲ್ಲಿ ಮಡಕೆ ತಯಾರು ಮಾಡುವ ತಿಮ್ಮಪ್ಪ ಕುಂಬಾರರ ಅಳಲು.

ಮಂಜೂರಾದ ನಿವೇಶನವೂ ಈಗ ಇಲ್ಲ . .!

ಇಲ್ಲಿನ ಕುಂಬಾರರಿಗೆಂದು ಗುಣಮಟ್ಟದ ಮಣ್ಣು ಇರುವ ಪ್ರದೇಶವಾದ ಆಲಂಕಾರು ಗ್ರಾಮದ ಬಾರಡ್ಕ ಎಂಬ ಪ್ರದೇಶದಲ್ಲಿ ಸುಮಾರು 12.54 ಎಕ್ರೆ ಭೂಮಿಯನ್ನು ಸರಕಾರವು ಕುಂಬಾರರ ಗುಡಿ ಕೈಗಾರಿಕೆಗೆ ಎಂದು ಮಂಜೂರು ಮಾಡಿತ್ತು. ಈ ಪ್ರದೇಶದಲ್ಲಿ ಗುಣಮಟ್ಟದ ಮಣ್ಣು ಕೂಡಾ ಇದೆ.ಆದರೆ ಈ ಜಾಗ ಮಾತ್ರಾ ಇದುವರೆಗೆ ಕುಂಬಾರರಿಗೆ ಸಿಕ್ಕಿಲ್ಲ.1994 ರವರೆಗೆ ಇಲ್ಲಿ ಯಾವೊಂದು ಅತಿಕ್ರಮಣವೂ ಆಗಿರಲಿಲ್ಲ. ಇದರ ಜೊತೆಗೆ ಆಲಂಕಾರು ಪ್ರದೇಶದ ಕೇಪುಳ ಎಂಬಲ್ಲಿ ಸುಮಾರು 3 ಎಕ್ರೆ ಜಾಗವನ್ನು ಇದೇ ಕೈಗಾರಿಕೆ ಇದೆ ಎಂದು ಹೇಳಲಾಗಿತ್ತಾದರೂ ನಮಗೆ ಯಾವುದೇ ಜಾಗ ಸಿಕ್ಕಿಲ್ಲ ಎನ್ನುವುದು ಇಲ್ಲಿ ಮಡಕೆ ಮಾಡುವ ಆನಂದ ಕುಂಬಾರರ ಅಂಬೋಣ.ಇದರ ಜೊತೆಗೆ ಈಗ ಇರುವ ಚಾರ್ವಾಕದ ಈ ಪ್ರದೇಶಕ್ಕೆ ರಸ್ತೆ ವ್ಯವಸ್ಥೆ ಕೂಡಾ ಸರಿ ಇಲ್ಲ ಎನ್ನುತ್ತಾರೆ ಇವರು.

ಇದೆಲ್ಲಾ ಮಡಿಕೆ ತಯಾರಿಕೆಯ ಸಮಸ್ಯೆಯಾದರೆ ಬಟವರೇ ಇರುವ ಇಲ್ಲಿನ 32 ಕುಟುಂಬಗಳಲ್ಲಿ ಸುಮಾರು 8 ಕುಟುಂಬಗಳಿಗೆ ಮಾತ್ರಾ ಬಿಪಿಎಲ್ ಕಾರ್ಡ್ ಇದೆ.ಉಳಿದವರೆಲ್ಲರೂ ಎಪಿಎಲ್. ಇದೇ ಊರಿನ ಸಚಿವೆ ಶೋಭಾ ಕರಂದ್ಲಾಜೆ ಇಲ್ಲಿಗೆ ಬಂದಾಗ ಈ ಸಮಸ್ಯೆ ಹೇಳಿದಾಗ ಎಲ್ಲವನ್ನೂ ಸರಿ ಮಾಡುತ್ತೇನೆ ಎಂದಿದ್ದರಂತೆ , ಆದರೆ ಇಂದಿಗೂ ಎಪಿಎಲ್ ರೇಶನ್ ಕಾರ್ಡ್ ಇದೆ ಎನ್ನುತ್ತಾರೆ ಚೆನ್ನಪ್ಪ ಕುಂಬಾರ.ಚಾರ್ವಾಕದ ಈ ಮಡಕೆಗೆ ಇಂದಿಗೂ ಬೇಡಿಕೆ ಇದೆ.ಆದರೇನು? ಇಲ್ಲಿ ದುಡಿಯುವ ಕೈಗಳಿಗೆ ವಿವಿಧ ಸಮಸ್ಯೆಯ ಕಾರಣದಿಂದಾಗಿ ಈ ಕಸುಬೇ ಬೇಡವಾಗಿದೆ. ಹಾಗಾಗಿ ಇಂದು ಇಲ್ಲಿ ಕುಂಬಾರಿಕೆ ಮಾಡುವ ಕುಟುಂಬವೂ ಕಡಿಮೆಯಾಗಿದೆ.ಆದರೆ ಈ ಗುಡಿ ಕೈಗಾರಿಕೆ ಒಂದಷ್ಟು ಜನರಿಗೆ ಉದ್ಯೋಗ ನೀಡುವುದಲ್ಲದೆ ನಿರುದ್ಯೋಗ ಸಮಸ್ಯೆಗೂ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಸರಕಾರವು ಗಮನ ಹರಿಸಬೇಕಾಗಿದೆಯಲ್ಲದೆ ಕುಂಬಾರಿಕೆ ಸಂಘಗಳು ಕೂಡಾ ಇಲ್ಲಿನ ಸಮಸ್ಯೆಯತ್ತ ದೃಷ್ಟಿ ಹಾಯಿಸಬೇಕಾಗಿದೆ.


- ಮಹೇಶ್ ಪುಚ್ಚಪ್ಪಾಡಿ

1 comments:

BIDIRE said...

ಉತ್ತಮ ಲೇಖನ ಮಹೇಶ್....

Post a Comment