ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗೋಕರ್ಣ: ತಮ್ಮ ಸತತಸಾಧನೆಯಿಂದ ದಿವ್ಯತೆಯನ್ನು ಪಡೆದು ವೈಕುಂಠಲೋಕವನ್ನು ಪ್ರವೇಶಿಸಿದರೂ ಎಲ್ಲಿಯೋ ಸ್ವಲ್ಪ ಉಳಿದಿದ್ದ ಅಥವಾ ಗಳಿಸಿದ್ದ ದೋಷದ ಪರಿಣಾಮವಾಗಿ ಜಯವಿಜಯರು ಶಾಪಗ್ರಸ್ತರಾಗಿ ಧರೆಗುರುಳಿದರು.ಅಲ್ಲಿಯೂ ಅವರು ಪರಮಾತ್ಮನ ಮಿತ್ರತೆಯನ್ನು ಕೇಳದೆ ಶತ್ರುತ್ವವನ್ನೇ ಪ್ರಾರ್ಥಿಸಿದರು. ರಾವಣ,ಕುಂಭಕರ್ಣರಾಗಿ ಜನಿಸಿ ತಪಸ್ಸನ್ನಾಚರಿಸಿ ವರಪಡೆದರೂ ಅಲ್ಲಿಯೂ ಅವರ ರಾಜಸ ಹಾಗೂ ತಾಮಸೀ ಪ್ರವೃತ್ತಿ ದೂರಾಗಲಿಲ್ಲ. ಬದುಕಿನುದ್ದಕ್ಕೂ ಕ್ರೌರ್ಯ ಹಿಂಸೆಗಳನ್ನೇ ತುಂಬಿಕೊಂಡರು. ಸಾತ್ವಿಕ ಗುಣವು ನಮ್ಮಿಂದ ದೂರಾದರೆ ಶುರುವಾಗುವ ದುರಂತಗಳ ಸರಮಾಲೆಗೆ ಇವರೀರ್ವರೇ ಉದಾಹರಣೆ ಎಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾದ ರಾಮಕಥೆಯಲ್ಲಿ ಪ್ರವಚನವನ್ನು ನೀಡುತ್ತಿದ್ದ ಶ್ರೀಗಳು ಪ್ರತಿಯೋರ್ವ ಜೀವಿಯೂ ಭಗವಂತನ ಒಂದು ಅಂಶವೇ.ಆದರೆ ಮೋಹ ಮಾಯೆಗಳ ಆವರಣದಿಂದಾಗಿ ಅದರ ಅರಿವು ಇರುವುದಿಲ್ಲ. ಮನೆಯೆ ಮೊದಲ ಪಾಠಶಾಲೆ,ಜನನಿ ಮೊದಲ ಗುರು ಎನ್ನುತ್ತಾರೆ.ರಾವಣನಿಗೆ ತಾಯಿ ಕೈಕಸಿಯಿಂದ ಅಸೂಯೆಯ ಪಾಠವನ್ನು ಕಲಿತ.ಅಜ್ಜ ಸುಮಾಲಿಯಿಂದ ಕಲಹ,ಪರದ್ರವ್ಯಾಪಹರಣದಂತಹ ಕುಕೃತ್ಯಗಳನ್ನು ಪಡೆದ. ಅಷ್ಟೇ ಸಾಲದೆಂಬಂತೆ ಅಣ್ಣನಾದ ಕುಬೇರನಿಗೆ ತಂದೆಯಾದ ವಿಶ್ರವಸ್ಸು ನೀಡಿದ್ದ ಲಂಕೆಯನ್ನು ಬಯಸಿ ಹಾಳಾಗಿಹೋಗು ಎಂದು ತಂದೆಯಿಂದ ಶಾಪವನ್ನೂ ಪಡೆದ. ನಿಜವಾದ ಭ್ರಾತೃಭಾವಕ್ಕೆ ವೈಶ್ರವಣನೊಂದು ಸಾರ್ವಕಾಲಿಕ ಉದಾಹರಣೆ.ತಮ್ಮ ಬೇಡಿದನೆಂದು ತತ್ಕ್ಷಣ ಎಲ್ಲವನ್ನೂ ತೊರೆದು ಬೇರೊಂದು ಸ್ಥಳಕ್ಕೆ ಹೊರಟುಹೋದ. ಪರಿಶುದ್ಧಸಾತ್ವಿಕಗುಣವುಳ್ಳಲ್ಲಿ ರಾಜಸ,ತಾಮಸಗಳಿಗೆ ಅವಕಾಶವಿರುವುದಿಲ್ಲ ಎಂಬುದಕ್ಕೆ ಕುಬೇರನು ಪ್ರತೀಕವಾಗುತ್ತಾನೆ ಎಂದು ಹೇಳಿದ ಪೂಜ್ಯಶ್ರೀಗಳು ನಮ್ಮಲ್ಲಿ ದಿವ್ಯತೆಯು ತುಂಬಿದ್ದರೂ ಕೂಡಾ ಅಸೂಯೆ,ಅಹಂಕಾರಗಳಿಂದಾಗಿ ನಾವು ಬದುಕಿನಲ್ಲಿ ಆನಂದಪ್ರಾಪ್ತಿಯಿಂದ ವಂಚಿತರಾಗುತ್ತೇವೆ.ನಾವು ಕೊಡುವುದನ್ನು ಮಾತ್ರ ಪಡೆಯಲು ಸಾಧ್ಯ. ಇನ್ನೊಬ್ಬರಿಗೆ ಕಷ್ಟವನ್ನಿತ್ತು ನಮ್ಮ ಜೀವನದಲ್ಲಿ ಸುಖವನ್ನು ನಿರೀಕ್ಷಿಸುವುದು ವ್ಯರ್ಥ.ಆದ್ದರಿಂದ ಸಾಧ್ಯಾವಾದಷ್ಟು ಸಂತೋಷವನ್ನು ಪರರಿಗೆ ನೀಡಿದರೆ ಪ್ರಕೃತಿಯಿಂದ ಅದನ್ನೇ ಪುನಃ ಸ್ವೀಕರಿಸಲು ಅವಕಾಶ.ಯಾವ ಜೀವಿಯೂ ಎಲ್ಲಕಾಲದಲ್ಲಿಯೂ,ದೋಷಿಯಾಗುವುದಿಲ್ಲ.ಸಮಯ,ಸಂದರ್ಭಗಳಿಂದಾಗಿ ಕೆಲಕಾಲ ಮಾತ್ರ ಅಂತಹ ಗತಿಯನ್ನು ಪಡೆಯುತ್ತದೆ ಎಂದೂ ಹೇಳಿದರು.

ಪ್ರೇಮಲತಾ ದಿವಾಕರ್.ವಸುಧಾ ಶರ್ಮಾ,ಸಂದ್ಯಾ ಭಟ್,ಶ್ರೀಪಾದ ಭಟ್ ಇವರ ಗಾಯನ,ಪ್ರಕಾಶರ ವೇಣುವಾದನ,ನರಸಿಂಹ ಮೂರ್ತಿಯವರ ಮೃದಂಗ,ಗೋಪಾಲಕೃಷ್ಣ ಹೆಗಡೆಯವರ ತಬಲಾ ವಾದನಗಳು ರಾಘವೇಂದ್ರ ಹೆಗಡೆಯವರ ಮರಳುಶಿಲ್ಪ ಗಣಪತಿ ನೀರ್ನಳ್ಳಿಯವರ ಆಶುಚಿತ್ರಗಳು ತುಂಬಾ ಮನೋಹರವಾಗಿದ್ದವು. ಚಿತ್ರಕಾರ ಗಣಪತಿ ನೀರ್ನಳ್ಳಿ ಯವರ ಭಾಗವತಿಕೆಯಲ್ಲಿ ನಿಸ್ರಾಣಿ ರಾಮಚಂದ್,ಮೂರೂರು ವಿಷ್ಣು ಭಟ್.ಮರಳುಶಿಲ್ಪ ಕಲಾಕಾರ ರಾಘವೇಂದ್ರ ಹೆಗಡೆಯವರ ಕುಬೇರ ಸೌಹಾರ್ದಯಕ್ಷರೂಪಕವು ಪ್ರಸ್ತುತವಾಯಿತು. ಇಂದು ಹಬ್ಬು,ಮತ್ತು ಹರಿಕಾಂತ್ರ ಸಮಾಜಗಳ ಶಿಷ್ಯರಿಂದ ಶ್ರೀಗುರುಸೇವಾಸಮರ್ಪಣೆಯು ಸಂಪನ್ನಗೊಂಡಿತು.ಪೂಜ್ಯಶ್ರೀಗಳು ಧರ್ಮಸಭೆಯಲ್ಲಿ ಅನುಗ್ರಹಸಂದೇಶವನ್ನು ನೀಡಿದರು.
-ಸತ್ಯನಾರಾಯಣ ಶರ್ಮ