ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:39 PM

ಆಸೆ

Posted by ekanasu

ಸಾಹಿತ್ಯ
ನಿನ್ನೆಯಿಂದ...

`ಆಚೆ ಮನೆ ಸುಬ್ಬಣ್ಣ ಎಲ್ಲಾ ಸಿನಿಮಾಕ್ಕೆ ಹೋಗ್ತನಡ. ಬರ್ತೀಯಾ ಅಂತ ಕೇಳಿದ್ದಾನೆ. ನಾನೂ ಅವನ ಜೊತೆ ಹೋಗ್ತೇನೆ...' ಅಂತ ತಲೆ ತಗ್ಗಿಸಿ ಹೇಳಿದೆ.`ಸಿನಿಮ ಅಂತೆ ಸಿನಿಮಾ... ಯಾರು ಇದನ್ನೆಲ್ಲಾ ತಲೆಗೆ ತುಂಬಿದ್ದು ನಿನಗೆ. ವಾರಕ್ಕೊಂದು ಸರ್ತಿ ಅವರ ಮನೆಗೆ ಹೋಗಿ ಟಿವಿಯಲ್ಲಿ ನೋಡಿದ್ದು ಸಾಕಾಗಲಿಲ್ವಾ? ಇದಕ್ಕೆಲ್ಲಾ ಖರ್ಚು ಮಾಡಲಿಕ್ಕೆ ನಾನೇನು ದುಡ್ಡಿನ ಗಿಡ ಬೆಳೆಸಿದ್ದೇನಾ? ಮನೆಗೆಲಸ ಹೇಳಿದರೆ ಕಳ್ಳಾಟ ಆಡ್ತಿ. ಇದಕ್ಕೆಲ್ಲಾ ಮೈ ನೆಟ್ಟಗಿದ್ದಾ ನಿನಗೆ? ಊಟಕ್ಕೆ ಕೂತರೆ ಸ್ಟೋರಿನ ಅಕ್ಕಿ ಆಗ. ಬಿಳಿ ಅಕ್ಕಿ ಅನ್ನ ಆಗ... ಏನೆಲ್ಲಾ ಕೋಲ... ಒಂದು ಕೆ.ಜಿ ಒಳ್ಳೆ ಅಕ್ಕಿ ತರಬೇಕಾದರೆ ಎಷ್ಟು ದುಡ್ಡು ಬೇಕಾಗ್ತದೆ ಗೊತ್ತುಂಟಾ ನಿಂಗೆ. ಮತ್ತೆ ಸಿನಿಮಾ ನೋಡಲಿಕ್ಕೆ ದುಡ್ಡು ಬೇಕಂತೆ. ಸಿನಿಮಾಕ್ಕೆ' ಅಂತ ಅಪ್ಪ ಅಬ್ಬರಿಸಿದ ರಭಸಕ್ಕೆ ಒಲೆ ಕಟ್ಟೆ ಮೇಲೆ ಕೂತು ಚಳಿ ಕಾಯಿಸುತ್ತಿದ್ದ ಪುಚ್ಚೆ ಬಾಲ ಮುದುರಿಕೊಂಡು ಹೊರ ಓಡಿತ್ತು.
ಇನ್ನೂ ಅಲ್ಲಿಯೇ ಕೂತರೆ ಒಲೆಯಲ್ಲಿ ಉರಿಯುತ್ತಿದ್ದ ಕೊಳ್ಳಿ ತೆಗೆದು ಬೆನ್ನಿಗಿಟ್ಟರೂ ಇಟ್ಟ ಅಂತ ಹೊರಗೆ ಓಡಿ ಬಂದು ಬಾವಿ ಕಟ್ಟೆಯ ಮೇಲೆ ಕೂತಿದ್ದೆ.ಅಪ್ಪ ಹೇಳಿದ ಕೆಲಸ ಮುಗಿಸಿ ತಡಮ್ಮೆ ದಾಟಿ ಬರುವಾಗ ಚಾವಡಿಯಲ್ಲಿದ್ದ ಗೋಡೆ ಗಡಿಯಾರ ಡಣ್ ಅಂತ 12 ಸಲ ಬಡಿದದ್ದು ಕಿವಿಗೆ ಬಿತ್ತು ಗೋಪನಿಗೆ. ಸಿನಿಮಾಕ್ಕೆ ಹೋಗುವುದಾದರೆ ಇಷ್ಟು ಹೊತ್ತಿಗೆ ಸ್ನಾನ ಮುಗಿಸಬೇಕಿತ್ತು. 12.45ಕ್ಕೆ ಬರುವ `ಸುಪ್ರೀಂ' ಬಸ್ಸು ಹತ್ತದಿದ್ದರೆ ಸಿನಿಮಾ ಟೆಂಟ್ಗೆ ತಲುಪಲಿಕ್ಕೆ ಸಾಧ್ಯವಿಲ್ಲ.

ಸುಬ್ಬಣ್ಣ ಎಲ್ಲಾ ಈಗಲೇ ಹೊರಟಿರ್ತಾನೆ. ನಾನೂ ಹೋಗುತ್ತಿದ್ದರೆ ಇಷ್ಟು ಹೊತ್ತಿಗೆ ರೆಡಿಯಾಗಬಹುದಿತ್ತು. ತಿಂಗಳಿಗೊಮ್ಮೆ ಅಪ್ಪ ಯಕ್ಷಗಾನ ಮೇಳ ಬಂದಾಗ ಎಲ್ಲಾ ಅಲ್ಲೇ ಟೆಂಟು ಹಾಕೋದಿಲ್ವಾ... ಆಗೆಲ್ಲಾ ಒಂದು ಬೀಡಿ ಸೇದಲಿಕ್ಕೆ ಅಂತ ಕಿಸೆಯಿಂದ ಖರ್ಚಾಗುವುದು ದುಡ್ಡಲ್ಲವಾ? ನಾನು ಮಾತ್ರ ಸಿನಿಮಾ ನೋಡುವುದಕ್ಕೆ ಇಷ್ಟೆಲ್ಲಾ ಕೇಳಬೇಕಾ? ಥೂ... ನನಗೆ ಮಾತ್ರ ಈ ಜೀತವೇ ಗತಿ. ಶ್ಶೀ... ಎಂದು ಮಾಸಲು ಅಂಗಿಗೆ ಅಂಟಿದ್ದ ಹುಲ್ಲಿನ ತುಣುಕು ಕೆಡವಿ ನೆಲಕ್ಕೆ ಕಾಲು ಗುದ್ದಿದ ಗೋಪ.

ಸಿಟ್ಟು ತಡೆಯಲಾಗದೆ, ಅಸಹಾಯಕತೆಯಿಂದ ಕಣ್ಣಲ್ಲಿ ನೀರು ತುಂಬಿ ಬಂದಿತ್ತು. ಕೋಪದ ಭರದಲ್ಲಿ ಚಾವಡಿಯ ಕುರ್ಚಿಯ ಮೇಲೆ ದೊಪ್ಪನೆ ಕೂತಾಗ ಮೇಜಿನ ಮೇಲೆ ರೆಡಿ ಮಾಡಿ ಇಟ್ಟಿದ್ದ ಅಪ್ಪನ ಅಂಗಿ, ವಸ್ತ್ರ ಜೊತೆಗೆ ಚಡ್ಡಿ ಕಾಣಿಸಿತ್ತು. ಹಾ....! ನೆನಪಾಯಿತು. ಅಪ್ಪ ಈಗ ಪೇಟೆಗೆ ಹೋಗ್ತಾರೆ. ಬಸ್ಸಿಗೆ ಹೋಗ್ಲಿಕೆ ರೆಡಿಯಾಗ್ತಿದ್ದಾರೆ. ಪಕ್ಕನೆ ಏನೋ ಹೊಳೆದಂತಾಗಿ ವಿಚಿತ್ರ ನಗೆ ಮೂಡಿತು ಗೋಪನ ಮುಖದಲ್ಲಿ. ಸೀದಾ ಎದ್ದವನೇ ಕಳ್ಳ ಹೆಜ್ಜೆ ಹಾಕಿಕೊಂಡು ಚಡ್ಡಿ ಕಿಸೆಗೆ ಕೈ ಹಾಕಿ ನೋಡಿದ. ಅದರಲ್ಲಿ 150 ರೂಪಾಯಿ ಇತ್ತು. ಇದು ಮೊನ್ನೆ ಸಾಮಾನು ತಂದಾಗ ಬಾಬುವಿನ ಅಂಗಡಿಯಲ್ಲಿ ಬಾಕಿ ಇದ್ದ ಹಣ ಕೊಡ್ಲಿಕೆ ಇಟ್ಟದ್ದು. ಇದನ್ನು ಕೊಡ್ಲಿಕೆ ಅಪ್ಪ ಹೋದ್ರೆ ಅಲ್ಲಿ ಹೋದಾಗ ಕಿಸೆಗೆ ಕೈ ಹಾಕಿ ನೋಡಿದ್ರೆ ದುಡ್ಡು ಇರೋದಿಲ್ಲ. ಜನರಿಂದ ತುಂಬಿ ತುಳುಕುತ್ತಿದ್ದ ಬಾಬುವಿನ ಅಂಗಡಿಯಲ್ಲಿ ಅಪ್ಪನ ಮರ್ಯಾದೆ ಹೋಗುವುದು ಖಂಡಿತಾ...ಅಪ್ಪನ ಪೆಚ್ಚು ಮೋರೆ ನೆನೆಸಿಕೊಂಡು ತುಟಿಯಂಚಿನಲ್ಲೇ ನಕ್ಕ. ಮತ್ತೆ ಅಲ್ಲಿ ನಿಲ್ಲಲಿಲ್ಲ. ದುಡ್ಡು ಕೈಯಲ್ಲಿ ಹಿಡಿದುಕೊಂಡು ಕುಂಡೆಗೆ ಕಾಲು ಕೊಟ್ಟು ಹೊರಗೋಡಿದ. ಅಪ್ಪ ಹೊರಟು ಹೋಗುವವರೆಗೂ ಹಟ್ಟಿಯಲ್ಲಿ ಮರೆಯಾಗಿ ನಿಂತು ನೋಡಿದ. ಅಪ್ಪ ಹೋದ ಮೇಲೆ ಮೆತ್ತಗೆ ಮನೆಯೊಳಗೆ ಬಂದ.

ಅಮ್ಮ ಕೊಟ್ಟ ಬಿಸಿ ಊಟ ಉಂಡು ಖುಷಿಯಿಂದಲೇ ಬೆಚ್ಚಗೆ ಮಲಗಿದ. ಎಚ್ಚರವಾದಾಗ ಹೊರಗೆ ಅಪ್ಪ-ಅಮ್ಮನ ಸದ್ದು ಜೋರಾಗಿ ಕೇಳುತ್ತಿತ್ತು. ಬಾಗಿಲ ಸಂದಿಯಿಂದ ಇಣುಕಿ ನೋಡಿದರೆ ಅಪ್ಪ ಈಸಿಚೇರಿನ ಮೇಲೆ ಕಾಲು ಚಾಚಿ ಕೂತಿದ್ದರು.
ಎಲ್ಲಿ ಹೋಯಿತು ಹಾಂಗಿದ್ರೆ ಅಂತಾನೇ ಗೊತ್ತಾಗ್ತಿಲ್ಲ... ನಾನು ಚಡ್ಡಿ ಕಿಸೆಗೆ ಹಾಕಿದ್ದು ನೆನಪಿದೆ. ಇಂದು ಬಸ್ಸಿನಲ್ಲಿ ರಷ್ ಇತ್ತು. ಯಾರು ಎಗರಿಸಿದ್ರೋ... ಥೂ... ಅಂತ ಅಪ್ಪ ಹಳಿತಾ ಇದ್ರೆ.

ಹೊಸ್ತಿಲ ಬಳಿ ಕೂತಿದ್ದ ಅಮ್ಮನ ಕಣ್ಣಲ್ಲಿ ನೀರು ತುಂಬಿ ಬಂದಿತ್ತು. `ಯಾರು ಕದ್ದಿದ್ದೋ... ನೀವೇ ಎಲೆ ಅಡಿಕೆ ತೆಗಿವ ಗೌಜಿಗೆ ಕೆಳಕ್ಕೆ ಹಾಕಿದ್ದೋ, ನಂಗಂತೂ ವರ್ಷಕ್ಕೊಮ್ಮೆ ಸಿಗುವ ಸೀರೆಯೂ ಇಲ್ಲದಾಯ್ತು.. ಇದೇ ಮಾಸಲು ಸೀರೆಲಿ ಎಷ್ಟು ದಿನ ಅಂತ ಇರೋದು. ಇನ್ನು ನೀವು ಮುಂದಿನ ಬೆಳೆ ಬರುವವರೆಗೂ ತೆಗಿಲುಕುಂಟಾ...?' ಅಷ್ಟು ಹೇಳುವಷ್ಟರಲ್ಲಿ ಅಮ್ಮನ ಗಂಟಲು ಕಟ್ಟಿತ್ತು.

ಬಾಗಿಲ ಮರೆಯಲ್ಲಿ ಇಣುಕುತ್ತಿದ್ದ ಗೋಪನ ಮೈಯಲ್ಲಿ ಜಿಲ್ಲನೆ ಬೆವರಿಳಿದಿತ್ತು. ಅಮ್ಮನ ಪಾಪದ ಮುಖ ನೆನಪಾಗಿ ಕಾಲು ಕುಸಿದಂತಾಯ್ತು. ಛೀ.... ನಾನೆಂಥಾ ಕೆಲ್ಸಾ ಮಾಡಿದೆ. ಮೆತ್ತಗೆ ಚಡ್ಡಿ ಕಿಸೆಯೊಳಗೆ ಅಡಗಿಸಿಟ್ಟಿದ್ದ 150 ರೂಪಾಯಿಯ ನೋಟುಗಳತ್ತ ಕೈ ಸರಿದಿತ್ತು. ಅಪ್ಪನಿಗೆ ಸತ್ಯ ಹೇಳಿ ಇದನ್ನು ವಾಪಸ್ ಕೊಡಲೇ...? ಬೇಡಾ.... ನಾನು ಕದ್ದಿದ್ದು ಅಂತ ಗೊತ್ತಾದರೆ ಅಪ್ಪನಿಂದ ಬೀಳುವ ಹೊಡೆತ ನೆನಪಾಗಿ ಕೈಕಾಲು ನಡುಗಿತು. ಅಮ್ಮನ ಮೋರೆ ನೆನಪಾಗಿ ಕಾಲುಗಳು ಕುಸಿದು ನೆಲದ ಮೇಲೆ ಕುಂಡೆ ಕುತ್ತಿದ ತನಗರಿವಿಲ್ಲದಂತೆಯೇ...


-ಶಾರ್ವರಿ

1 comments:

ಪ್ರವೀಣ ಚಂದ್ರ said...

Super Story. I like it. ಕೊನೆಗೆ ಆತ ದುಡ್ಡು ಕೊಟ್ಟಾನಾ ಇಲ್ವಾ ಅಂತ ಓದುಗರು ತೀರ್ಮಾನಿಸಬೇಕಷ್ಟೇ...

Post a Comment