ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಶ್ರಾವಣ ಎಂದರೆ ಹಬ್ಬಗಳ ಮಾಸ. ಶ್ರಾವಣ ಕಾಲಿಡುತ್ತಿದ್ದಂತೆಯೇ ಹಬ್ಬಗಳು ಸರತಿ ಸಾಲಿನಲ್ಲಿ ನಿಲ್ಲುತ್ತವೆ. ಮಳೆ ಹನಿಗಳ ಸಿಂಚನದಿಂದ ಇಳೆ ತಂಪಾಗುತ್ತಿರುವಂತೆಯೇ ವರುಣನ ಆರ್ಭಟವನ್ನು ಹಬ್ಬಗಳೊಂದಿಗೆ ಅನುಭವಿಸುವ ಸಂದರ್ಭ... ನಾಗರ ಪಂಚಮಿ ನಾಡಿಗೆ ದೊಡ್ಡದು. ಇದು ಮೊದಲ ಹಬ್ಬ. ಶಿವನ ಕಂಠಾಭರಣವಾದ, ವಿಷ್ಣುವಿನ ಶಯ್ಯೆಯಾದ ನಾಗರನ ಪೂಜೆ ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಉತ್ತರ ಕರ್ನಾಟಕದಲ್ಲಿ ಈ ಹಬ್ಬದ ವೈಶಿಷ್ಟ್ಯವೇ ಬೇರೆ. ಇದು ಹೆಂಗಳೆಯರ ಹಬ್ಬ.ಮಕ್ಕಳ ಪಾಲಿಗಂತೂ ಸಿಹಿತಿಂಡಿ ಮೆಲ್ಲುವ ಹಬ್ಬ.


ಮದುವೆಯಾಗಿ ಗಂಡನ ಮನೆಗೆ ಹೋದ ಮಗಳು ತವರು ಮನಗೆ ಬರುವುದು ನಾಗರ ಪಂಚಮಿಯ ಶುಭ ದಿನದಂದು. " ಪಂಚಮಿ ಹಬ್ಬ ಉಳಿದಾವ ದಿನ ನಾಕ... ಅಣ್ಣ ಬರಲಿಲ್ಲ ಯಾಕ ಕರಿಯಾಕ..." ಎಂದು ತಂಗಿಯೊಬ್ಬಳು ಅಣ್ಣನ ಬರುವಿಕೆಯನ್ನು ಎದುರುನೋಡುವ ಹಬ್ಬ. ತಂಗಿಯನ್ನು ಹಬ್ಬಕ್ಕೆಂದು ಕರೆತಂದಾಗ ಅವಳ ಆಗಮನದೊಂದಿಗೆ ಹಬ್ಬದ ಆಚರಣೆ ಪ್ರಾರಂಭವಾಗುತ್ತದೆ.ತನ್ಮೂಲಕ ನಾಗರನ ವಿಶೇಷ ಆರಾಧನೆ ನಡೆಯುತ್ತದೆ.

ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಯೆಂದರೆ ಎರಡು ದಿನಗಳ ಹಬ್ಬ. ಮೊದಲ ದಿನ ಅಂದರೆ ಚೌತಿಯಂದು ಮಹಿಳೆಯರಿಂದ ಕಲ್ಲ ನಾಗನಿಗೆ ಹಾಲಭಿಷೇಕ. ಎರಡನೇ ದಿನವಾದ ಪಂಚಮಿಯಂದು ಪುರುಷರು ಮನೆಯೊಳಗಿರಿಸಿ ಪೂಜಿಸಿದ ಮಣ್ಣಿನ ನಾಗನಿಗೆ ಹಾಲೆರೆದು ಪೂಜಿಸುತ್ತಾರೆ. ತಂಬಿಟ್ಟುಂಡೆ, ಶೇಂಗಾ ಉಂಡೆ, ಎಳ್ಳುಂಡೆ, ಅಳ್ಳಿನುಂಡೆ, ಅಳ್ಳಿಟ್ಟು, ಅವಲಕ್ಕಿ ಅಳ್ಳು ಹೀಗೆ ವಿಶೇಷ ತಿನಿಸು ಈ ಹಬ್ಬಕ್ಕೆ ತಯಾರಾಗುತ್ತದೆ.ಎಳ್ಳು ಮತ್ತು ಬೆಲ್ಲ ವಿಶ್ರಮಾಡಿ ತಯಾರಿಸುವ ವಿಶೇಷ ತಿನಿಸು ಈ ದಿನದ ವಿಶೇಷ ನೈವೇದ್ಯ.

ನಾಗರ ಪಂಚಮಿಯಂದು ವಿವಿಧ ಆಟಗಳು ಪ್ರಾಮುಖ್ಯತೆ ಪಡೆಯುತ್ತವೆ. ಹೊಸ ಉಡುಗೆಯುಟ್ಟು ಆಟಕ್ಕೆ ಸಿದ್ಧವಾಗುವ ಪರಿ ಒಂದು ರೋಚಕ.ನಿಂಬೆ ಹಣ್ಣನ್ನು ಉರುಳಿಸುತ್ತಾ ನಿಗಧಿಪಡಿಸಿದ ಗುರಿಯನ್ನು ತಲುಪುವುದು ಒಂದು ವಿಶೇಷ ಆಟವಾದರೆ, ಜೋಕಾಲಿ ಆಟ ಮತ್ತೊಂದು. ಜೋಕಾಲಿ ಮುಂದೆ ಕೊಬ್ಬರಿ ಬಟ್ಟಲನ್ನು ಕಟ್ಟಿರುತ್ತಾರೆ.ಜೋಕಾಲಿಯನ್ನು ಜೀಕಿ ಆ ಕೊಬ್ಬರಿಯ ಬಟ್ಟಲನ್ನು ಕಚ್ಚಿ ಕೊಬ್ಬರಿ ತಿನ್ನಬೇಕು. " ಏ ಬಾರಾ... ಒಂದ್ ಆಟಾ ಜೋಕಾಲಿ ಆಡೋಣ..." ಎಂಬುದು ನಾಗರಪಂಚಮಿಯಂದು ಮಾಮೂಲಿ...
ಬೋಲ್ ಬಗರಿ ಇನ್ನೊಂದು ವಿಶೇಷ ಆಕರ್ಷಣೆ. ಅರ್ಧ ಕೊಬ್ಬರಿಗೆ ಎರಡೆಳೆ ದಾರ ಕಟ್ಟಿ ಅದನ್ನು ಗಿರಗಿಟ್ಲಿ ರೀತಿ ತಿರುಗಿಸಿ ಆಡುವ ವಿಶೇಷ ಆಟ...ಆಟದ ನಂತರ ಕೊಬ್ಬರಿ ಹೊಟ್ಟೆಗೆ...

ಈ ಆಟದ ಜೊತೆಜೊತೆಗೆ ತವರಿಗೆ ಬಂದ ಮಗಳಿಗೆ ಹೊಸ ಸೀರೆ, ಬಳೆ ತೊಡಿಸಿ ಶೃಂಗರಿಸಿ ಹಬ್ಬದ ನಂತರ ಗಂಡನ ಮನೆಗೆ ಕಳುಹಿಸುವುದು ಸಂಪ್ರದಾಯ.
ಆದರೆ ಇಂದಿನ ಆಧುನಿಕ ಯುಗದಲ್ಲಿ ನಾಗರ ಪಂಚಮಿ ತನ್ನ ಸಂಪ್ರದಾಯವನ್ನು ಕಳೆದುಕೊಳ್ಳಲಾರಂಭಿಸಿದೆ.
ಹಬ್ಬಗಳ ಹಿಂದಿರುವ ಆಶಯ, ಸಂಪ್ರದಾಯ, ಸಂಸ್ಕೃತಿಯನ್ನು ಉಳಿಸುವುದು ನಮ್ಮ ಕರ್ತವ್ಯವೂ ಹೌದು...

- ಶ್ರೀ ಗೌರಿ ಶ್ರೀಪಾದ ಜೋಶಿ.
ಗದಗ.

0 comments:

Post a Comment