ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಯಥಾ ರಾಜ ತಥಾ ಪ್ರಜಾ/ಯಥಾ ಪ್ರಜಾ ತಥಾ ರಾಜ

ಅರೇಬಿಯಾ ದೇಶ ಭಾರತ ಭೂಮಿಯಿಂದ ಭಿನ್ನವಾದುದಾದರೂ, ಅವರ ಚರಿತ್ರೆಯನ್ನೂ ಅವರ ಮಹಾಪುರುಷರ ಜೀವನಗಳನೂ ನೋಡಿದರೆ - ನಮ್ಮಂತೆಯೇ ಅವರಿಗೂ ಒಂದು ಸುಖೀ ರಾಜ್ಯದ ಕಲ್ಪನೆಯಿತ್ತೆಂದು ಕಾಣಬಹುದು.ಅರೇಬಿಯಾ ರಾಷ್ಟ್ರವನ್ನು ಕಿರೀಟವಿಲ್ಲದೆ ಆಳಿದವರಲ್ಲಿ ಹಜ್ರತ್ ಉಮರ್(ರ) ಎಂಬ ಎರಡನೇಯ ಖಲೀಫರು. ಖಲೀಫ ಎಂದರೆ ದೇವರ ಪರವಾಗಿ, ಪ್ರಜೆಗಳ ಪರವಾಗಿ ದೇಶವನ್ನು ಧರ್ಮದಿಂದ ಆಳುವ ಪ್ರಜಾ ಪ್ರತಿನಿಧಿ. ಇವರ ಆಳ್ವಿಕೆಯ ಕಾಲ ಕ್ರಿ. ಶ. 636-644. ಆ ಕಾಲದಲ್ಲಿ ಅರೇಬಿಯಾದ ಉತ್ತರ ಭಾಗದ ಕಡೆ ವೀರಕ್ಷಾಮ ಒದಗಿತು. ಕ್ಷಾಮಕ್ಕೆ ಸಿಕ್ಕಿದ ಜನಗಳನ್ನು ಹೇಗೆ ರಕ್ಷಿಸುವುದು ಎಂದು ಹಗಲೂ ರಾತ್ರಿ ಖಲೀಫರಿಗೆ ಅದೇ ಚಿಂತೆಯಾಯಿತು. ಕ್ಷಾಮವೆಲ್ಲ ದೇಶದಲ್ಲಿ ಸುಭಿಕ್ಷ ನೆಲಸುವವರೆಗೂ ನಾನು ಹಾಲು ಮುಟ್ಟುವುದಿಲ್ಲ, ನಾನು ಬೆಣ್ಣೆ ಸವಿಯುವುದಿಲ್ಲ ಎಂದು ಖಲೀಫ ಉಮರ್ ವ್ರತ ಹಿಡಿದರು.ಕ್ಷಾಮವೇನೋ ಕಡಿಮೆಯಾಗುತ್ತಾ ಬಂತು. ಜನ ಚೇತರಿಸಿಕೊಂಡರು ಎನ್ನುವ ಹೊತ್ತಿಗೆ, ಅಸಾಧ್ಯವಾದ ಸಾಂಕ್ರಾಮಿಕ ರೋಗವು ತಲೆದೋರಿತು. ಅದು ಕ್ರಮಕ್ರಮವಾಗಿ ಸಿರಿಯಾ ದೇಶಕ್ಕೂ ಹರಡಿತು.

ಸಿರಿಯಾ ದೇಶದಲ್ಲಿ ಜನರ ಸ್ಥಿತಿಗತಿ ಹೇಗಿದೆಯೋ ಕಂಡು ಬಂದ ಹೊರತು ಮನಸ್ಸಿಗೆ ನೆಮ್ಮದಿಯಿಲ್ಲ ಎಂದು ಖಲೀಫ ಉಮರ್ ಒಂಟೆಯನ್ನು ಹತ್ತಿ ಅಲ್ಲಿಗೆ ಹೋದರು. ಹೋಗಿ ಪರಿಶೀಲನೆಯಲ್ಲ ಮುಗಿದ ಮೇಲೆ, ಮದೀನಾಗೆ ಹಿಂತಿರುಗುವಾಗ ದಾರಿಯ ಪಕ್ಕದಲ್ಲಿ ಒಂದು ಸಣ್ಣ ಗುಡಿಸಲು ಅವರಿಗೆ ಗೋಚರವಾಯಿತು. ಏನೋ ಕುತೂಹಲವಾಗಿ, ಅವರು ಕೆಳಗಿಳಿದು ನೋಡಿದರೆ, ಯಾರೋ ಮುದುಕಿಯೊಬ್ಬಳು ಅಲ್ಲಿ ಕುಳಿತಿದ್ದಳು.
ಖಲೀಫರು ಕೇಳಿದರು - "ಏನಮ್ಮಾ, ಖಲೀಫ ಉಮರನ ವಿಚಾರವೇನಾದರೂ ನಿನಗೆ ಗೊತ್ತೇ?

"ಅದೇನೋ ಅವನು ಸಿರಿಯಾದಿಂದ ಮದೀನಾಗೆ ಹೋಗುತ್ತಿರುವನಂತೆ".

ಆಮೇಲೆ?

"ಅಯ್ಯೋ, ಅವನ ವಿಷಯ ಏನೆಂದು ಮಾತನಾಡುವುದು ಬಿಡು! ಅವನ ಸುದ್ದಿಗೆ ಬೆಂಕಿ ಬಿತ್ತು!"

"ಅದು ಏಕಮ್ಮ ಹಾಗೆ ಹೇಳುತ್ತಿ?"

"ಮತ್ತೆ ಇನ್ನೇನು ಹೇಳಬೇಕು? ಗತಿಯಿಲ್ಲದವಳು ನಾನು ಇಲ್ಲಿ ಇದ್ದೇನಲ್ಲಾ, ಈ ವರೆಗೆ ನನಗೆ ಅವನು ಏನಾದರೂ ಕೊಟ್ಟದ್ದುಂಟೆ?"

"ಅಲ್ಲಮ್ಮ, ಈ ದೂರದಲ್ಲಿ ಈ ಮೂಲೆಯಲ್ಲಿ ನೀನು ಹೀಗೆ ಇರುವೆಯೆಮದು ಅವನಿಗೆ ಹೇಗೆ ತಿಳಿಯಬೇಕು?"

"ತನ್ನ ಪ್ರಜೆಗಳ ವಿಷಯವನ್ನು ತಿಳಿದುಕೊಳ್ಳುಲು ಆಗದಿದ್ದ ಮೇಲೆ ಅವನಿಗೆ ಖಲೀಫರ ಪಟ್ಟ ಏಕೆ? ಮಣ್ಣು ಹುಯಿದುಕೊಳ್ಳುವುದಕ್ಕೆ?"

"ತಾಯಿ, ಈ ದಿವಸ ನೀನು ನನಗೆ ಒಂದು ಪಾಠ ಕಲಿಸಿಕೊಟ್ಟೆ" ಎಂದು ಖಲೀಫರು ಅವಳಿಗೆ ನಮಸ್ಕಾರ ಮಾಡಿದರು. ಅವಳಿಗೆ ಬೇಕಾದ ಅನುಕೂಲಗಳನ್ನು ಮಾಡಿಕೊಟ್ಟರು.

ಎರಡನೇ ಸನ್ನಿವೇಶ
ಒಂದು ರಾತ್ರಿ ಖಲೀಫ ಉಮರ್, ಜೊತೆಗೆ ಒಬ್ಬ ಸಂಗಡಿಗನನ್ನು ಕರೆದುಕೊಂಡು, ಮದೀನಾ ನಗರದಲ್ಲಿ ಸಂಚಾರ ಹೊರಟರು. ವೇಷಾಂತರದಲ್ಲಿ ರಾತ್ರಿ ಹಾಗೆ ತಿರುಗಾಡಿ, ಜನರ ಕಷ್ಟ ಸುಖಗಳನ್ನು ತಿಳಿದು ಬರುವುದು ಅವರ ರೂಢಿ.
ಆ ರಾತ್ರಿ ಅವರು ಒಂದು ಗುಡಿಸಲ ಹತ್ತಿರ ಹಾಯ್ದು ಹೋದಾಗ ಒಳಗೆ ಏನೋ ಗುಸುಗುಸು ಕೇಳಿಸಿತು. ಖಲೀಫರು ಕಿವಿಗೊಟ್ಟರು. ಒಳಗೆ ಒಬ್ಬ ಮುದುಕಿ ತನ್ನು ಮಗಳ ಹತ್ತಿರ ಮಾತನಾಡುತ್ತಿದ್ದಳು.
"ಈ ಹಾಲು ಮಾರಿ ಬರುವ ಹಣ ನಮ್ಮ ಜೀವನಕ್ಕೆ ಸಾಲದಾಗಿದೆ. ಒಂದಿಷ್ಟು ನೀರು ಸೇರಿಸಿ ಮಾರಿದಾದರೂ ಎರಡು ಕಾಸು ಹೆಚ್ಚಿಗೆ ಕೈಗೆ ಬಂದೀತು!"ಎಂದಳು ಮುದುಕಿ.
ಅದಕ್ಕೆ ಹುಡುಗಿ ಹೇಳಿದಳು: "ಏನಮ್ಮ ಖಲೀಫರ ಆಜ್ಞೆಯನ್ನು ನೀನು ಮರೆತು ಬಿಟ್ಟೆಯಾ? ಹಾಲು ಮಾರುವವರು ಯಾರೂ ಹಾಲಿಗೆ ನೀರು ಬೆರೆಸತಕ್ಕದ್ದಲ್ಲ, ಎಂದು ಅವರು ಡಂಗುರವನ್ನು ಹಾಕಿಸಲಿಲ್ಲವೆ?"
"ಅಯ್ಯೋ ಅವರು ಹೇಳುವುದಕ್ಕೇನು! ನಾವು ಇಲ್ಲಿ ನೀರು ಬೆರೆಸುವಾಗ ಯಾರಿದ್ದಾರೆ ಇಣಿಕಿ ನೋಡುವುದಕ್ಕೆ? ಖಲೀಫರೇ? ಅಥವಾ ಅವರ ಅಧಿಕಾರಿಗಳೇ?"
"ಆದರೂ, ಅಮ್ಮ, ಯಾರು ನೋಡಲಿ, ನೋಡದಿರಲಿ, ಖಲೀಫರ ಆಜ್ಞೆಯಂತೆ ನಡೆಯಬೇಕಾದುದು ನಮ್ಮ ಧರ್ಮ. ನಾವು ಮಾಡಿದ್ದನ್ನು ಖಲೀಫರ ಕಣ್ಣು ಕಾಣದಿರಬಹುದಾದರೂ ಅದನ್ನು ದೇವರ ದೃಷ್ಟಿಯಿಂದ ಮರಸಲಾಗುವುದೇ? ಏನು ನೀನು ಹೇಳುವ ಮಾತು!"
ಆ ಹುಡುಗಿಯ ಮಾತಿಗೆ ತುಂಬ ಸಂತೋಷಪಟ್ಟು, ಖಲೀಫರು ಅಲ್ಲಿಂದ ಹೊರಟು ಹೋದರು.

ಈ ಎರಡೂ ಉದಾಹರಣೆಗಳನ್ನು ಯಾಕೆ ಕೊಟ್ಟೆ ಅಂದರೆ ಆಡಳಿತಾಧಿಕಾರಿಗಳೂ ಪ್ರಾಮಾಣಿಕವಾಗಿರಬೇಕು ಮತ್ತು ಪ್ರಜೆಗಳೂ ಸಹ ಪ್ರಾಮಾಣಿಕವಾಗಿರಬೇಕು. ಒಂದು ವಾಹನದ ಎರಡೂ ಚಕ್ರಗಳು ಸರಿಯಾಗಿದ್ದಲ್ಲಿ ಮಾತ್ರ ಆ ವಾಹನ ಸರಿಯಾಗಿ ಚಲಿಸಬಲ್ಲದು.

ಪ್ರಪಂಚದ ಎಲ್ಲಾ ಧರ್ಮಗಳು ಪ್ರಾಮಾಣಿಕತೆಯ ಪಾಠವನ್ನು ಕಲಿಸುತ್ತವೆ. ಅವನ್ನು ಪಾಲಿಸದೆ ಇರುವುದು ನಮ್ಮ ತಪ್ಪು. ಅರ್ಥಶಾಸ್ತ್ರ ಎಂದಾಕ್ಷಣ ಕಣ್ಮುಂದೆ ಬರುವುದು ಹಣದ ಕಂತೆಗಳ ಚಿತ್ರಣ. ಹಣವೆಂದರೆ ಹೆಣವೂ ಏಳುತ್ತದೆ ಎನ್ನುತ್ತಾರೆ. ಪ್ರಾಮಾಣಿಕತೆ ಇಲ್ಲದೆ ಹೋದರೆ ಇನ್ನೇನು ತಾನೆ ಆಗಲು ಸಾಧ್ಯ ಹೇಳಿ?

ನಮ್ಮ ಪರಿಸ್ಥಿತಿಯನ್ನು ಅವಲೋಕಿಸಿಕೊಂಡರೆ ನಮಗೇ ತಿಳಿಯುತ್ತದೆ. ಸರಕಾರಿ ಅಧಿಕಾರಿಗಳು ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಸರಕಾರವನ್ನು ಮೋಸ ಮಾಡುತ್ತಿದ್ದೇವೆ. ಒಂದಲ್ಲಾ ಒಂದು ರೀತಿಯಲ್ಲಿ ಇದು ನಡೆಯುತ್ತಿದೆ. ಹಾಗಾದರೆ ಸುಖಿ ದೇಶದ ಕನಸು ಕಾಣುವುದು ಸರಿಯೇ?

ಜನರನ್ನು ಬದಲಿಸಲು ಸಾಧ್ಯವಿಲ್ಲ. ಸರಿ. ಆದರೆ ನಾವು ಬದಲಾಬಹುದಲ್ಲ. ಹನಿ ಹನಿ ಸೇರಿದರೆ ಸಮುದ್ರ. ನಮ್ಮಂತೆಯೇ ಸಮಾನ ಮನಸ್ಕರು ಈ ದೇಶದಲ್ಲಿ ಎಷ್ಟಿದ್ದಾರೋ..? ಖಂಡಿತವಾಗಿಯೂ ಬದಲಾವಣೆಗಳನ್ನು ತರಬಹುದು. ಪ್ರಾಮಾಣಿಕತೆಯಿಂದ ಪ್ರಯತ್ನ ಮಾಡೋಣ ಅಲ್ಲವೇ..?

"ಅಧಿಕಾರಿಗಳು ಸಾಮಾನ್ಯವಾಗಿ ತಮ್ಮ ವಸ್ತುಗಳ ಉಸ್ತುವಾರಿಗಾಗಿ ಜನರನ್ನು(ಸೇವಕರನ್ನು) ನೇಮಿಸಿಕೊಳ್ಳುತ್ತಾರೆ. ನನ್ನ ನಡವಳಿಕೆ ಮತ್ತು ನನ್ನ ಮೇಲೆ ನಿಗಾ ಇಡಲು ನಾನು ನಿಮ್ಮನ್ನು ನೇಮಿಸಿದ್ದೇನೆ. ನನ್ನ ಮಾತು ಅಥವಾ ಕ್ರಮ ದಲ್ಲಿ ನೀವು ತಪ್ಪು ಕಂಡರೆ ನನ್ನನ್ನು ಉಪದೇಶ ಮಾಡಿ ಮತ್ತು ಅದನ್ನು ಮಾಡುವುದರಿಂದ ತಡೆಯಿರಿ" - ಖಲೀಫ ಅಬ್ದುಲ್ ಅಜೀಜ್. ಮುಂದುವರೆಯುವುದು....

- ಜಬೀವುಲ್ಲಾ ಖಾನ್

0 comments:

Post a Comment