ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಎಲ್ಲವೂ ಹಣವಲ್ಲ ಆದರೆ ಹಣವಿಲ್ಲದೆ ಹೆಣವೂ ಏಳುವುದಿಲ್ಲ

ಮೇಷ್ಟ್ರೆ...! ಮದುವೆ ವಯಸ್ಸಾಯಿತು... ಆದರೂ ಈ ಹುಡುಗರು ಇನ್ನೂ ಯಾವ ಕೆಲಸವನ್ನು ಜವಾಬ್ದಾರಿಯಿಂದ ಸರಿಯಾಗಿ ನಿಭಾಯಿಸುತ್ತಿಲ್ಲ ನೋಡಿ. ಸ್ವಲ್ಪ ನೀವೇ ಏನಾದರು ಇವರಿಗೆ ಹೇಳಿ. ನಾನಂತು ಹೇಳಿ ಹೇಳಿ ಸಾಕಾಯಿತು. ನಾಲ್ಕು ಕಾಸು ಸಂಪಾದನೆ ಮಾಡಿದರೆ ಅಲ್ಲವೇ...
ಯಾಕ್ರಪ್ಪಾ...ನಿಮ್ಮ ತಂದೆ ಮಾತನ್ನು ಸ್ವಲ್ಪ ಕೇಳ್ರೋ...ಹಣಕಾಸು ಪೀಡಿತ ಖಾಯಿಲೆಗಳು ನಮ್ಮ ಕುಟುಂಬಗಳನ್ನು, ಸಂಸ್ಥೆಗಳನ್ನು ಮತ್ತು ದೇಶಗಳನ್ನು ನುಂಗುತ್ತಿವೆ. ಈ ಖಾಯಿಲೆಗಳಿಗೆ ಪ್ರತಿಯೊಬ್ಬರು ಔಷದ ನುಂಗಿದರೆ ಮಾತ್ರ " ಸ್ವಸ್ಥ ಹಣಕಾಸಿನ ವಹಿವಾಟು" ಸಾಧ್ಯ. ಇಲ್ಲವಾದಲ್ಲಿ ಅತಿಯಾಗಿ ಪೀಡಿತವಾಗುವುದು ನಮ್ಮಂತಹ ಮಧ್ಯಮ ವರ್ಗ ಮತ್ತು ಬಡತನದ ರೇಖೆಯ ಕೆಳಗಿರುವ ವರ್ಗಗಳು ಮಾತ್ರ.ಹೆಮ್ಮೆಯಿಂದ ನಿಮ್ಮ ಕೆಲಸ ನೀವು ಮಾಡಿದರೆ, ಅದು ನಿಮ್ಮ ಪ್ರಗತಿಗೆ ದಾರಿಯಾಗುತ್ತದೆ. ನಿಮ್ಮಲ್ಲಿರುವ ನಿಪುಣತೆ ಜನರನ್ನು ನಿಮ್ಮತ್ತ ಆಕರ್ಷಿಸುತ್ತದೆ. ನಿಮ್ಮತ್ತ ಜನ ಬಂದರೆ ಜೊತೆಯಲ್ಲಿ "ಹಣ"ವೂ ಹರಿದು ಬರುತ್ತದೆ. ಮನೆಗಳಿಗೆ ಬಣ್ಣ ಬಳೆಯುವ ಕೆಲಸವಾಗಿರುಬಹುದು, ಕಾರುಗಳನ್ನು ವಾಷ್ ಮಾಡುವುದಾಗಿರಬಹುದು, ನೆಲ ಗುಡಿಸುವುದಾಗಿರಬಹುದು, ಮನೆಗೆಲಸ, ಗಾರೆಕೆಲಸ, ಕಛೇರಿ ಕೆಲಸ, ಟೈಲರಿಂಗ್, ಮೊಬೈಲ್ ಸರ್ವೀಸ್ , ಕಂಪ್ಯೂಟರ್ ಸರ್ವೀಸ್ , ಗಡಿಯಾರ ಸರ್ವೀಸ್, ಎ.ಸಿ. ಸರ್ವೀಸ್, ಮೆಕಾನಿಕ್ ಕೆಲಸ ಅಥವಾ ಇನ್ನಾವುದೋ ಸ್ವಂತ ಕೈಕೆಲಸವಾಗಿರಬಹುದು. ಏನೇ ಕೆಲಸವಾಗಲಿ ನೀವು ಎಷ್ಟು ಶ್ರದ್ಧೆ ಮತ್ತು ಶ್ರಮ ನೀಡುತ್ತೀರೋ ಅದು ಅಷ್ಟೇ ಪ್ರತಿಫಲ ಕೊಡುತ್ತದೆ. ಬೇರೆಯವರು ನಿಮ್ಮನ್ನು ನೀವು ಹೋದ ಮೇಲೆಯೂ ನೆನಸಿಕೊಳ್ಳುತ್ತಾರೆ - "ಇಲ್ಲಿ ಒಬ್ಬ ಕೆಲಸಗಾರನಿದ್ದ, ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದ."

ಸರ್ಕಾರವಾಗಲಿ, ದೇವರಾಗಲಿ ನೇರವಾಗಿ ಬಂದು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುವುದಿಲ್ಲ. ಖಲೀಫ ಹಜ್ರತ್ ಅಲಿ(ರ) ಅವರ ಒಂದು ಮಾತು ನೆನಪಿಗೆ ಬರುತ್ತೆ - "ಕೂದಲಿಗೆ ಕಪ್ಪು ಬಣ್ಣ ಹಚ್ಚಿಕೊಂಡರೆ ಯೌವ್ವನ ಬರಲ್ಲ, ಆಸೆಪಟ್ಟರೆ ಸಂಪತ್ತು ಬರಲ್ಲ". ಸಂಪತ್ತು ನಿಮ್ಮ ಬಳಿಗೆ ಬರಬೇಕಾದರೆ ನೀವು ಕಷ್ಟಪಟ್ಟು ದುಡಿಯಬೇಕು. ನಾನು ಶ್ರೀಮಂತನಾಗಬೇಕಂತ ಬರೀ ಆಸೆ ಪಟ್ಟುಕೊಂಡು ಮನೆಯಲ್ಲೇ ಕುಳಿತರೆ ಹಣ ಬರುತ್ತದೆಯೇ?

ಯಾವುದೇ ಕೆಲಸ ದೊಡ್ಡದು ಅಥವಾ ಚಿಕ್ಕದಾಗಿರುವುದಿಲ್ಲ. ಕೆಲಸ ಕೆಲಸವೇ ಆಗಿರುತ್ತದೆ. ಆದರೆ ಅದನ್ನು ನೋಡುವ ನಮ್ಮ ದೃಷ್ಟಿಕೋನ ಬೇರೆ ಬೇರೆಯಾಗಿರುತ್ತದೆ.

ಬೆಳಕು ಹರಿದಾಕ್ಷಣ ಪಕ್ಷಿಗಳು ತಮ್ಮ ಆಹಾರವನ್ನು ಹುಡುಕಲು ಗೂಡನ್ನು ಬಿಡುತ್ತವೆ. ಅದನ್ನು ನೋಡಿ! ಪ್ರಕೃತಿಯ ನಿಯಮವನ್ನು ಯಾವ ರೀತಿ ಪಾಲಿಸುತ್ತಿವೆ. ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ಹೇಗೆ ಬಾಳಬೇಕೆಂಬುದನ್ನು ನೀವೆ ಯೋಚಿಸಿ ನೋಡಿ...!

ತೋಟದಲ್ಲಿ ಪರಾವಲಂಬಿ ಕಳೆಯನ್ನು ಬುಡಸಮೇತ ಕಿತ್ತು ಹಾಕುತ್ತಾರೆ. ಈ ಸಮಾಜದಲ್ಲಿ ಪರರ ಗುಲಾಮಗಿರಿ ಮಾಡುವವರ ಗತಿಯೂ ಅಷ್ಟೆ. ಕರಬೇವಿನ ಸೊಪ್ಪನ್ನು ಸಾರು ಆಗುವ ತನಕ ಉಪಯೋಗಿಸಿಕೊಂಡು ನಂತರ ಅದನ್ನು ಬಿಸಾಕಿಬಿಡುತ್ತಾರೆ. ನಿಮ್ಮ ಗತಿಯೂ ಹಾಗೆ ಆಗಬೆಕಾ? ಇಲ್ಲ. ಹಾಗಾದರೆ ನೀವು ಸ್ವಾವಲಂಬಿಗಳಾಗಲೇ ಬೇಕು.

ಎಲ್ಲವೂ ಹಣವಲ್ಲ ಆದರೆ ಹಣವಿಲ್ಲದೆ ಹೆಣವೂ ಏಳುವುದಿಲ್ಲ. ರಾತ್ರಿಯ ಒಂದು ಗಂಟೆ. ಆರೋಗ್ಯ ಕೆಟ್ಟು ಹೋಗಿದೆ. ವಾಹನದಲ್ಲಿ ಪೆಟ್ರೋಲ್ ಇಲ್ಲ. ಮೊಬೈಲ್ ಇದೆ ಆದರೆ ಕರೆನ್ಸಿ ಮುಗಿದು ಹೋಗಿದೆ. ಆಸ್ಪತ್ರೆ ದೂರವಿದೆ. ಅಲ್ಲಿ ಎಷ್ಟು ಖರ್ಚಾಗುತ್ತದೋ ಗೊತ್ತಿಲ್ಲ. ಇಂತಹ ನೂರಾರು ಸಂದರ್ಭಗಳು ನಿಮ್ಮ ಜೀವನದಲ್ಲಿ ಬಂದಿರಬಹುದು. ಹಣದ ಮಹಿಮೆ ಏನೆಂದು ಗೊತ್ತಾಯಿತಾ?

ನಾನು ಎಲ್ಲ ಕಲಿತು, ನಿಪುಣತೆ ಪಡೆದು ಕೆಲಸಕ್ಕೆ ಹೋಗುತ್ತೇನೆ. ನಾನು ಸಂಪೂರ್ಣವಾಗಿ ಸಜ್ಜಾಗಿ ಕೆಲಸ ಪ್ರಾರಂಭಿಸುತ್ತೇನೆ ಎಂದು ಕಾಯುತ್ತಾ ಕುಳಿತುಕೊಳ್ಳಬೆಡಿ. ನಿಮ್ಮ ಹತ್ತಿರ ಏನಿದೆ, ಎಷ್ಟಿದೆ ಅದರಿಂದಲೇ ಪ್ರಾರಂಭ ಮಾಡಿ. ಜ್ಞಾನ, ಬುದ್ಧಿ, ನಡತೆ, ಕುಶಲತೆ ಅಥವಾ ಬೇರೇನೋ ಆಗಿರಬಹುದು. ಮುಂದೆ ಸಾಗುತ್ತಾ ಸಾಗುತ್ತಾ ನಿಮ್ಮ ಕುಶಲತೆ ವಿಕಸನಗೊಳ್ಳುತ್ತದೆ. ಹಣ ಹರಿದು ಬರುತ್ತದೆ.

ನೀವು ಶ್ರೀಮಂತರಾದರೆ ದೇಶ ಶ್ರೀಮಂತವಾಗುತ್ತದೆ ಎಂದರ್ಥ. ಅಂದರೆ ದೇಶದ ಅರ್ಥಶಾಸ್ತ್ರದಲ್ಲಿ, ಆರ್ಥಿಕ ಬೆಳವಣಿಗೆಯಲ್ಲಿ ನಿಮ್ಮದೂ ಒಂದು ಪಾಲಿದೆ ಎಂದಾಯಿತು. ಇದು ಸಹ ಒಂದು ರೀತಿಯ ದೇಶ ಸೇವೆಯೇ ಕಣ್ರಪ್ಪಾ....!

- ಜಬೀವುಲ್ಲಾ ಖಾನ್

0 comments:

Post a Comment