ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:17 PM

ಅಸ್ಪೃಶ್ಯರು

Posted by ekanasu

ವೈದೇಹೀ ಕಾದಂಬರಿ
ಹಿಂದಿನ ಸಂಚಿಕೆಯಿಂದ...
ಇದೆಲ್ಲ ತಾನು ಬೇಕಾಗಿಯೇ ತಂದುಕೊಂಡ ಸ್ಥಿತಿಯಲ್ಲವೇ? ಅಂತ ಅನಿಸುತ್ತದೆ. ಸಮಯ ನೋಡಿ ರುಕ್ಕುವಿಗೆ ಹೇಳಬೇಕು.ಪಾರ್ತಕ್ಕನ ಮಗ ಅಂಥದ್ದು ಮಾಡಿದ್ದಕ್ಕೆ ರುಕ್ಕು ಹಾಗೆ ಹೇಳಲು ಚಡಿ ಸಿಕ್ಕಿತು. ಇಲ್ಲವಾದರೆ ರುಕ್ಕುವಿಗಾದರೂ ಬಾಯಿ ಇರುತ್ತಿತ್ತಾ? ಅವಳಿಗೆ ಬಯ್ದು ಪ್ರಯೋಜನ ಉಂಟಾ? ರತ್ನ ಕೂಡ ಬಾಣಂತಿ ಕೋಣೆಯ ಕಂಡಿಯಿಂದ ಇಣುಕಿ ಜಗಳ ಕಾಣುತ್ತಿದ್ದಳು. ಸರೋಜ ಮಾತ್ರ ಈ ಜಗಳ ತನ್ನ ಕಿವಿಗೇ ಬೀಳಬಾರದು ಎಂಬಂತೆ ಅಚ್ಯುತಾಷ್ಟಕವನ್ನು ಜೋರಾಗಿ ಹೇಳುತ್ತಾ ಮಜ್ಜಿಗೆ ಕಡೆಯುತ್ತಿದ್ದಳು. ಸೊಳೆ ಬೇಯುತ್ತಿದೆ. ನಾವು ಕರೆಯುವವರೆಗೆ ಬೇಕಾದರೆ ಆಡಿಕೊಂಡಿರಿ ಎಂದದ್ದಕ್ಕೆ ಮಕ್ಕಳೆಲ್ಲ ಸಣ್ಣ ಉಪ್ಪರಿಗೆಯ ಕೆಳಗಿದ್ದ ಸಣ್ಣ ಕೋಣೆ ಸೇರಿದರು.ಗೌರಮ್ಮ ಬಾಣಂತಿ ಕೋಣೆಯಲ್ಲಿ ರತ್ನನ ಹತ್ತಿರ `ಬಾಣಂತಿ ಮನೆಯಲ್ಲಿ ಭೂತದ ಕತೆ ಯಾಕಪ್ಪ ಹೇಳಬೇಕು'?ಈ ಪಾರ್ತಕ್ಕನಿಗೆ ವರ್ಷವಾದದ್ದು ದಂಡಕ್ಕೆ.ಭೂತ ಮೆಟ್ಟಿಕೊಳ್ಳುವುದೇ ಹಸಿ ಬಾಣಂತಿಯರನ್ನು, ಚೂರಿ ಇಟ್ಟುಕೊಂಡಿದ್ದಿಯಲ್ಲ?'


`ಹ್ಹುಂ' - ಎಂದಳು ರತ್ನ,
ಸ್ವರದಲ್ಲಿ ತ್ರಾಣವೆಂಬುದಿರಲಿಲ್ಲ. ಹೆದರಿ ಹರಡಿಕೊಂಡಿತ್ತು.
`ಬಚ್ಚಲಿಗೆ, ಪಾಯಿಖಾನೆಗೆ ಎಲ್ಲಿ ಹೋಗುವುದಾದರೂ ಅದನ್ನು ಮಡಚಿ ಕೈಯಲ್ಲಿ ಇಟ್ಟುಕೊಂಡಿರು. ಅದೊಂದು ಮುಟ್ಸು ' -ಎಂದರು.
`ಹ್ಹುಂ'
ಅಲ್ಲಿಯೇ ಮಗುವಿನ ಬಟ್ಟೆ ಮಡಚುತ್ತ ಕುಳಿತಿದ್ದ ಸರೋಜನಿಗೆ ನಗೆ ಬಂತು.
`ಅಕ್ಕ, ಅಷ್ಟು ಹೆದರುವುದು ಯಾಕೆ? ಅಮ್ಮನೇನೋ ಹೇಳಿದಳು. ಆ ವಾತಾವರಣದಲ್ಲಿ ಬೆಳೆದು ಬಂದವಳು. ನೀನಾದರೂ ವಿಚಾರ ಮಾಡಬಹುದಲ್ಲ?'
ರತ್ನ ಕಣ್ಣು ಬಿಟ್ಟು ಸರೋಜನನ್ನು ನೋಡಿದಳೇ ವಿನಾ ಉಪ್ಪು ಉಪ್ಪಿನ ಕಲ್ಲೆನ್ನಲಿಲ್ಲ. ಬಿಟ್ಟ ಕಣ್ಣಲ್ಲಿ `ನೀನೂ ಒಂದು ದಿನ ಮಗುವನ್ನು ಹೆತ್ತು ಅರೆ ತ್ರಾಣಿಯಾಗಿ ಬಿಳಿಚಿಕೊಂಡು ಮಂಚದ ಮೇಲೆ ಮಲಗಿರು.ಆಗ ಅಂತಹದೆಲ್ಲ ಹೆದರಿಕೆ ಆಗತ್ತದೆಯ ಇಲ್ಲವ ನೋಡುತ್ತೇನೆ ' -ಎಂದು ... ಸರೋಜ ಮತ್ತೆ ನಕ್ಕಳು.
`ಸರೋಜ ದೊಡ್ಡ ಸಂಗ್ತಿಯಂತೆ ಮಾತಾಡುತ್ತಾಳೆ. ಎಲ್ಲ ಭಾಸ್ಕರಣ್ಣನ ನಕಲು ಹೊಡೆಯಲು ನೋಡುತ್ತಾಳೆ. ಸ್ವಂತ ಬುದ್ಧಿ ಇಲ್ಲ' - ಎಂದು ರತ್ನ ಸ್ವಲ್ಲ ಹೊತ್ತಿನ ಮೇಲೆ ಗೌರಮ್ಮನ ಹತ್ತಿರ ದೂರುಕೊಟ್ಟದ್ದಕ್ಕೆ `ನಂಗೆ ಗೊತ್ತಾಗುವುದಿಲ್ಲ ಅಂತ ಮಾಡಿದೆಯ? ಎಲ್ಲ ಗೊತ್ತಾಗುತ್ತದೆ.ಅದಕ್ಕೆ ತಾನೊಂದು ದೊಡ್ಡ ಜನ ಅಂತ ಮನಸ್ಸಿನಲ್ಲಿ ಹೊಕ್ಕಿಕೊಂಡಿದೆ. ಭಾಸ್ಕರ ಹಾಗೆ ಮಾಡಿದರೆ ಅವನಿಗೆ ಒಪ್ಪೀತು. ಇದಕ್ಕೆ ಒಪ್ಪುತ್ತದೆಯೇ?ಇದು ಪೂರ ಆಚೆಗೂ ಅಲ್ಲ, ಈಚೆಗೂ ಅಲ್ಲ.ಒಟ್ಟಾರೆ ಯಾರ ಕೈ ಮೇಲಾದರೂ ಇದನ್ನು ಹಾಕಿದನೇ ನಾ ಗೆದ್ದೆ' -ಎಂದರು.

ಮುಂದುವರಿಯುವುದು...

- ವೈದೇಹಿ.

0 comments:

Post a Comment