ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಸಮಕಾಲೀನ ಮಹಿಳಾ ಬರಹಗಾರರಲ್ಲಿ ಸಮಾಜದ ಹತ್ತು ಹಲವು ಸ್ತರಗಳ ಜನಗಳ ಬದುಕನ್ನು ಪದರ ಪದರವಾಗಿ ಜಗತ್ತಿಗೆ ತೆರೆದಿಡುವವರಲ್ಲಿ ಬಂಗಾಳೀ ಲೇಖಕಿ ಮಹಾಶ್ವೇತಾದೇವಿಯವರು ಪ್ರಮುಖರು. ಝಾನ್ಸಿ ರಾಣೀ ಲಕ್ಷ್ಮೀ ಬಾಯೀ ಅವರ ಕುರಿತಾದ ಕೃತಿಯಂತಹ ಐತಿಹಾಸಿಕ ಕಥೆಗಳಿಂದ ಶುರುವಾದ ಬರಹಗಾರಿಕೆಯನ್ನು ವಾಸ್ತವಿಕ ಸಮಸ್ಯೆಗಳತ್ತ ಕೇಂದ್ರೀಕರಿಸಿದ್ದು ಗಮನಾರ್ಹ . ಸಮಕಾಲೀನ ನೈಜ ಘಟನೆಗಳನ್ನಾಧರಿಸಿದ ಅವರ ಬರಹಗಳಲ್ಲಿ "ಅರಣ್ಯೇರ್ ಅಧಿಕಾರ್?","ದೊಪ್ದಿ","ರುಡಾಲಿ", "ಸ್ಥನದಾಯಿನಿ ಮತ್ತು ಇತರ ಕಥೆಗಳು" ಸಮಾಜದ ವಿವಿಧ ಮುಖ ಪರಿಚಯಿಸುವುದರಲ್ಲಿ ಯಶಸ್ವಿಯಾದವುಗಳು.


ಅರಣ್ಯೇರ್ ಅಧಿಕಾರ್ ಅಥವಾ ಯಾರದೀ ಕಾಡು ಮಹಾಶ್ವೇತಾದೇವಿ ಅವರ ಒಂದು ಮಹತ್ವದ ಕಾದಂಬರಿ. ಜ್ವಲಂತ ಸಮಸ್ಯೆಗಳಾದ ಬಡತನ, ಉಚ್ಛ ವರ್ಗದ ಜನರು ಇತರ ಜನಾಂಗದವರ ಮೇಲೆ ನಡೆಸುವ ದೌರ್ಜನ್ಯ ಮಿಶನರಿಗಳಿಂದಾದ ಮತಾಂತರ, ವಸಾಹತು ವ್ಯವಸ್ಥೆ - ಸ್ಯಮಸ್ಯೆ, ಇವೆಲ್ಲದರ ನಡುವೆ ಬಳಲುವ ಬುಡಕಟ್ಟು ಜನರ ಬದುಕನ್ನು "ಅರಣ್ಯೇರ್ ಅಧಿಕಾರ್" ಅನಾವರಣಗೊಳಿಸುತ್ತಾ ಹೋಗುತ್ತದೆ

ಉತ್ತರ ಭಾರತದ ಕೆಲವೇ ಬುಡಕಟ್ಟು ಜನಾಂಗಗಳಲ್ಲಿ "ಮುಂಡಾ" ಬುಡಕಟ್ಟು ಜನಾಂಗವೂ ಒಂದು. ಈ ಜನರಲ್ಲಿ ಪ್ರಮುಖವಾಗಿ ಕಂಡು ಬರುವುದು ವಲಸೆ ಹೋಗುವ ಪ್ರವೃತ್ತಿ. ಪ್ರಕೃತಿಯನ್ನು ಪೂಜಿಸುತ್ತಾ ಬದುಕುವ ಜನರ ಆರಾಧ್ಯ ದೈವ "ಸಿಂಬಾಡ" (ಸೂರ್ಯ). ಅನಾದಿ ಕಾಲದಿಂದ ಕಾಡನ್ನು ನಂಬಿ ಜೀವನ ನಡೆಸುವವರಿಗೆ ಸರಕಾರದ ರೀತಿ ನೀತಿಗಳು, ಹೊಸ ಕಾಯ್ದೆಗಳು ನುಂಗಲಾರದ ತುತ್ತಾಗುತ್ತವೆ.
ಇಡೀ ಕಾದಂಬರಿಯ ಉದ್ದಕ್ಕೂ ಮುಂಡಾ ಜನರ ಮುಗ್ಧತೆ ಹಾಗೂ ಆತಂಕದ ಬದುಕಿನ ವಿವಿಧ ಮಜಲುಗಳು ತೆರೆದುಕೊಳ್ಳುತ್ತವೆ.


ಮುಂಡಾ ಬುಡಕಟ್ಟಿಗೆ ಸೇರಿದ ನಾಯಕನ ಕಥೆ ಇಲ್ಲಿದೆ. ಬಿರ್ಸಾ ಮುಂಡಾ ನಾಯಕನ ಹೆಸರು. ಈ ಜನಾಂಗದವರ ಪ್ರಕಾರ ಈತನ ವಂಶಜಕೇ ಮುಂಡಾ ಜನಾಂಗದ ಮೂಲ ಪುರುಷರು.ಈ ನಾಯಕ ಒಂದು ಒಂದು ಶತಮಾನದ ಹಿಂದೆಷ್ಟೇ ಬದುಕಿದವನು. `ಉಲ್ ಗುಲಾನ್' ಚಳುವಳಿಯ ಹರಿಕಾರ. ತನ್ನ ಜನಾಂಗಕ್ಕಾಗಿ ಇಡೀ ಬದುಕನ್ನು ಧಾರೆಯೆರೆದ ಅಪ್ರತಿಮ ಹೋರಾಟಗಾರ. ಅದಕ್ಕಾಗಿ ಬ್ರಿಟಿಷರ ಆಡಳಿತವನ್ನು ವಿರೋಧಿಸಿ ನಡೆಸಿದ ಹೋರಾಟದಲ್ಲಿ ಕುತಂತ್ರಕ್ಕೆ ಬಲಿಯಾಗಿ ಅನ್ಯಾಯವಾಗಿ ಸೆರೆಮನೆಯಲ್ಲೇ ಕೊಲೆಯಾದವನು. ಮುಂಡಾ ಜನರ ಪಾಲಿಗೆ ಈತ ದೇವರು.

ಇಡೀ ಕಾದಂಬರಿ ಬಿರ್ಸಾ ಮುಂಡಾನ ಹೋರಾಟವನ್ನು ನಿರೂಪಿಸುತ್ತದೆಯಾದರೂ ಸಮಕಾಲೀನ ಜಗತ್ತಿನಲ್ಲಿ ಮುಂಡಾದಂತಹ ಅನೇಕ ಬುಡಕಟ್ಟು ಜನಾಂಗದವರ ಬವಣೆಯನ್ನು ತೆರೆದಿರಿಸುತ್ತದೆ. ಇತರ ನಾಯಕ ಪ್ರಧಾನ ಕಾದಂಬರಿಗಳಲ್ಲಿ ಕಾಣಸಿಗುವ ರೋಚಕತೆಯನ್ನು ಕಾದಂಬರಿ ಗಾರ್ತಿ ವಿಶಿಷ್ಟ ರೀತಿಯಲ್ಲಿ ಬಳಸಿ ವಿಭಿನ್ನ ನಿರೂಪಣಾ ಶೈಲಿಯನ್ನೂ ರೂಢಿಸಿಕೊಂಡಿರುವುದು ಶ್ಲಾಘನಾರ್ಹ. ರೋಚಕ ಕಾದಂಬರಿಗಳಲ್ಲಿ ಕಂಡುಬರುವ `ಉತ್ಕಟತೆ', ಐತಿಹಾಸಿಕ ಕಾದಂಬರಿಗಳಲ್ಲಿ ಕಂಡುಬರುವ `ಪ್ರಾಚೀನತೆ' ಇವೆರಡಕ್ಕೂ ಮೀರಿದ ವಿಭಿನ್ನತೆ ಇಲ್ಲಿ ಲಭ್ಯವಾಗಿದೆ.

ಎಷ್ಟೋ ಕಾಲದಿಂದ ಕಾಡಿನೊಂದಿಗೆ ಬದುಕುತ್ತಿರುವ `ಮುಂಡಾ'ದಂತಹ ಅನೇಕ ಜನಾಂಗದವರ ಅಳಲನ್ನು `ಯಾರದೀ ಕಾಡು' ಬಿಚ್ಚಿಡುತ್ತದೆ. ಅಧಿಕಾರಶಾಹಿಯ ಸ್ವಾರ್ಥ ಧೋರಣೆ, ಅರಣ್ಯ ಸಂಪತ್ತನ್ನೆಲ್ಲಾ ಹಣವಂತ ಕಂಟ್ರಾಕ್ಟರುಗಳಿಗೇ ಮಾರುವ ಹೊಣೆಗೇಡಿತನ ಈ ಜನರ ಬದುಕನ್ನು ಕಳೆಗುಂದಿಸುತ್ತದೆ. ಇವೆಲ್ಲವನ್ನೂ ಮೀರಿ ಇಡೀ ಕಾದಂಬರಿ ಪ್ರತಿಯೊಬ್ಬ ಓದುಗನಲ್ಲೂ ಪ್ರಶ್ನೆಯನ್ನುಳಿಸುತ್ತದೆ ಯಾರದೀ ಕಾಡು...?

- ಸೌಮ್ಯ ಸಾಗರ.

0 comments:

Post a Comment