ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗೋಕರ್ಣ: ನಮ್ಮ ಜೀವನ ಹಾವು-ಏಣಿಯಾಟದಂತೆ.


ಒಮ್ಮೆ ಸತತಪರಿಶ್ರಮದಿಂದ ಮೇಲಕ್ಕೆ ಹೋದರೆ ಯಾವುದೋ ಕಾರಣದಿಂದ ಒಮ್ಮೊಮ್ಮೆ ನೇರವಾಗಿ ಕೆಳಕ್ಕೆ ಬರುತ್ತೇವೆ.ಉನ್ನತಿಯನ್ನು ಹೊಂದುವುದಕ್ಕಿಂತಲೂ ಪಡೆದ ಔನ್ನತ್ಯವನ್ನು ಕಾಪಾಡಿಕೊಳ್ಳುವುದು ಅದಕ್ಕಿಂತ ಕಷ್ಟ.ಅದಕ್ಕೆ ಭಗವಂತನ ಅನುಗ್ರಹವೂ ಅಗತ್ಯ.ಸತತಸಾಧನೆಯ ಜೊತೆ ಪರಮಾತ್ಮನ ಸ್ಮರಣೆಯೂ ಸೇರಿದ್ದರೆ ಬದುಕಿನಲ್ಲಿ ಸಾರ್ಥಕತೆ ಸಾಧ್ಯ ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.


ಅಶೋಕೆಯಲ್ಲಿ ಆಯೋಜಿತವಾಗಿರುವ ಚಾತುರ್ಮಾಸ್ಯದ ನಿಮಿತ್ತ ನಡೆಯುತ್ತಿರುವ ರಾಮಕಥಾದ ಶ್ರಾವಣಪರ್ವದ ಪ್ರವಚನಮಾಲಿಕೆಯಲ್ಲಿ ರಾಮಾಯಣಕ್ಕೆ ಕಾರಣವಾದ ರಾವಣಜನ್ಮವನ್ನು ಕುರಿತು ಮಾತನಾಡುತ್ತಿದ್ದ ಪೂಜ್ಯಶ್ರೀಗಳು ರಾವಣನ ಪೂರ್ವಜ ಸುಮಾಲಿ ವಿಷ್ಣುದ್ವೇಷದಿಂದಾಗಿ ಪ್ರತೀಕಾರಕ್ಕಾಗಿ ದೇವತಾಶಕ್ತಿ ಹಾಗೂ ರಾಕ್ಷಸರ ಬುದ್ಧಿಯನ್ನು ಹೊಂದಲು ಪ್ರಯತ್ನಿಸಿದ. ಅವನ ದೇವತಾವಿರೋಧಕ್ಕೆ ಮಗಳಾದ ಕೈಕಸಿಯನ್ನು ದಾಳವನ್ನಾಗಿ ಬಳಸಿದ. ಅದೇ ರಾವಣನಂತಹ ಲೋಕಕಂಟಕನಾದ ಪರಾಕ್ರಮಿಯ ಜನನಕ್ಕೆ ಕಾರಣವಾಯಿತು. ಸಂಗಮ ಬೇರೆ,ಸಂಕರ ಬೇರೆ. ಹಾಲು ಜೇನುಗಳು ಸೊಗಸಾಗಿ ಸಂಯೋಗ ಹೊಂದುತ್ತವೆ. ಹಾಗೆಂದು ಪಾಯಸಕ್ಕೆ ಇಂಗನ್ನುಬಳಸಿದರೆ ಅಡಿಗೆಯ ರುಚಿ ಹಾಳಾಗುವುದಷ್ಟೇ ಅಲ್ಲ ಅದು ದೂಷಿತವಾದ ಆಹಾರವಾಗುತ್ತದೆ.ನಮ್ಮ ಬದುಕಿನಲ್ಲಿ ಉತ್ತಮಗುಣಗಳ ಸಂಗಮವಿರಬೇಕೇ ಹೊರತು ಸಾಂಕರ್ಯವಿರಬಾರದು ಎಂದೂ ಹೇಳಿದರು.


ಒಮ್ಮೊಮ್ಮೆ ಉನ್ನತಸ್ಥಾನದಲ್ಲಿರುವವರ ಅನುಕರಣೆ ಅಥವಾ ಅವರನ್ನು ಮೀರುವ ಪ್ರಯತ್ನವೂ ಕೂಡಾ ಅವನತಿಗೆ ಸಾಧನವಾಗುತ್ತದೆ.ಧನಾಧಿಪತಿಯಾದ ಕುಬೇರನು ತನ್ನ ತಪೋಬಲದಿಂದ ಸಂಪಾದಿಸಿದ ಪುಷ್ಪಕವಿಮಾನವನ್ನು ಕಂಡ ಸುಮಾಲಿ ಅಸೂಯಾಪರನಾಗಿ ತನ್ನ ವಂಶದವರೂ ಅದೇರೀತಿಯಲ್ಲಿ ಸೌಭಾಗ್ಯವಂತರಾಗಬೇಕೆಂದು ಬಯಸಿದ. ಆದರೆ ಅದನ್ನು ಸಾಧಿಸಲು ಅಡ್ಡದಾರಿ ಹಿಡಿದ. ಜೀವನದಲ್ಲಿ ಗುರಿಯು ಮುಖ್ಯವಾಗಿರುವಂತೆ ಗುರಿಯತ್ತ ಸಾಗುವ ದಾರಿಯೂ ಅಷ್ಟೇ ಮುಖ್ಯ ಎಂಬ ವಿಚಾರಕ್ಕೆ ಸುಮಾಲಿಯ ವೃತ್ತಾಂತ ಸಂಕೇತವಾಗುತ್ತದೆ. ಬದುಕಿಗೆ ಮಾರ್ಗದರ್ಶನ ಮಾಡುವ ಇಂತಹ ಅನೇಕ ವಿಷಯಗಳನ್ನು ಮಹರ್ಷಿ ವಾಲ್ಮೀಕಿ ತುಂಬ ರೋಚಕವಾಗಿ ರಾಮಾಯಣದಲ್ಲಿ ಪಡಿಮೂಡಿಸಿದ್ದಾರೆ ಎಂದೂ ಪೂಜ್ಯಶ್ರೀಗಳು ತಿಳಿಸಿದರು.


ಚಾತುರ್ಮಾಸ್ಯ ಸ್ವಾಗತಸಮಿತಿಯ ಅಧ್ಯಕ್ಷ ವೇ.ಶ್ರೀಧರ ಭಟ್ಟದಂಪತಿಗಳು ರಾಮಾಯಣಗ್ರಂಥಕ್ಕೆ ಪಷ್ಪಾರ್ಚನೆ ಸಲ್ಲಿಸಿದರು.ಶ್ರೀಪಾದಭಟ್ಟ,ವಸುಧಾ ಶರ್ಮಾ ,ಸಂಧ್ಯಾ ಭಟ್,ಇವರ ಗಾಯನ ಡಾ.ಕೆ.ಗಣಪತಿ ಭಟ್ಟರ ಶ್ಲೋಕವಾಚನ,ಪ್ರಕಾಶ್ ಕಲ್ಲಾರೆಮನೆ ಇವರ ವೇಣುವಾದನ,ಗೋಪಾಲಕೃಷ್ಣ ಹೆಗಡೆಯವರ ತಬಲಾ ನರಸಿಂಹ ಮೂರ್ತಿಯವರ ಮೃದಂಗವಾದನಗಳು ಕಾರ್ಯಕ್ರಮಕ್ಕೆ ಕಳೆ ನೀಡಿದವು.


ವಿದ್ವಾನ್ ಜಗದೀಸ ಶರ್ಮಾ ನೇತೃತ್ವದಲ್ಲಿ ಪುಷ್ಪಕದರ್ಶನ ರೂಪಕ ಮತ್ತು,ಗಣಪತಿ ನೀರ್ನಳ್ಳಿಯವರ ಆಶುಚಿತ್ರ ರಚನೆಯ ಜೊತೆ ಗೋಕರ್ಣ ಪರಿಸರದಲ್ಲಿ ಇದೇ ಮೊದಲಬಾರಿಗೆ ಖ್ಯಾತ ಕಲಾವಿದ ಶ್ರೀ ರಾಘವೇಂದ್ರ ಹೆಗಡೆಯವರ ಮರಳುಶಿಲ್ಪ ಪ್ರದರ್ಶನವೂ ಸಂಪನ್ನವಾಯಿತು.
ಇಂದು ಸಿದ್ಧಾಪುರಮಂಡಲದ ತಾಳಗುಪ್ಪ.ಇಡುವಾಣಿ,ಅಂಬಾಗಿರಿಮೊದಲಾದ ನಾಲ್ಕುವಲಯಗಳ ಶ್ರೀಗುರುದೇವತಾಸೇವೆಯು ಸಮರ್ಪಿತವಾಯಿತು.ಚಾತುರ್ಮಾಸ್ಯದ ಈ ಶುಭಸಂದರ್ಭದಲ್ಲಿ ಶಿರಸಿಯ ಪೂಜ್ಯ ಸ್ವಾಮೀ ಅಂಬಿಕಾನಂದರು ಪೂಜ್ಯಶ್ರೀಗಳನ್ನ ಸಂದರ್ಶಿಸಿದರು. ಶ್ರೀಗಳವರು ಸೇವಾಕರ್ತರನ್ನುದ್ದೇಶಿಸಿ ಅನುಗ್ರಹಸಂದೇಶವನ್ನು ನೀಡಿದರು.

ವರದಿ: ಸತ್ಯನಾರಾಯಣ ಶರ್ಮ

0 comments:

Post a Comment