ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅದೇ ನಾಲಿಗೆ ಅದೇ ಹೃದಯ, ಆದರೆ...!

ಹಜ್ರತ್ ಲುಖ್ಮಾನ್(ಅ) ಸುಂದರವಾಗಿಲ್ಲದಿದ್ದರೂ ಮಹಾರಾಜ ಅವರನ್ನು ಬಹಳ ಪ್ರೀತಿಸುತ್ತಿದ್ದ. ಅವರಿಬ್ಬರು ಆತ್ಮೀಯತೆಯಿಂದಿದ್ದರು. ಹಜ್ರತ್ ಲುಖ್ಮಾನ್ ಅವರ ಚತುರತೆಯೂ ಸಹ ಇದಕ್ಕೆ ಒಂದು ಮುಖ್ಯ ಕಾರಣವಾಗಿತ್ತು. ಒಂದು ದಿನ ಮಹಾರಾಜ ಹಜ್ರತ್ ಲುಖ್ಮಾನ್ ಅವರಿಗೆ - "ಈ ಕುರಿಯನ್ನು ತೆಗೆದುಕೊಂಡು ಹೋಗಿ, ಇದರ ಅತ್ಯುನ್ನತ ಎರಡು ವಸ್ತುಗಳನ್ನು ಆರಿಸಿಕೊಂಡು ತನ್ನಿ" ಎಂದ. ಆಗ ಹಜ್ರತ್ ಲುಖ್ಮಾನ್ ಕುರಿಯನ್ನು ತೆಗೆದುಕೊಂಡು ಹೋಗಿ, ಅದನ್ನು ಜುಬಾಹ್ ಮಾಡಿ ಅದರ ನಾಲಿಗೆ ಮತ್ತು ಹೃದಯವನ್ನು ತಂದು ಮಹಾರಾಜನ ಮುಂದಿಟ್ಟರು.ಮಾರನೇ ದಿನ ಮಹಾರಾಜ ಪುನಃ ಇನ್ನೊಂದು ಕುರಿಯನ್ನು ಕೊಟ್ಟು - "ಇದನ್ನು ತೆಗೆದುಕೊಂಡು ಹೋಗಿ, ಇದರ ಅತ್ಯಂತ ಎರಡು ಕೆಟ್ಟ ವಸ್ತುಗಳನ್ನು ತನ್ನಿ" ಎಂದ. ಆಗ ಹಜ್ರತ್ ಲುಖ್ಮಾನ್ ಕುರಿಯನ್ನು ತೆಗೆದುಕೊಂಡು ಹೋಗಿ, ಅದನ್ನು ಜುಬಾಹ್ ಮಾಡಿ ಅದರ ನಾಲಿಗೆ ಮತ್ತು ಹೃದಯವನ್ನು ತಂದು ಮಹಾರಾಜನ ಮುಂದಿಟ್ಟರು.

ಮಹಾರಾಜ ಕೇಳಿದ - "ಲುಖ್ಮಾನ್, ನಾನು ಅತ್ಯುನ್ನತ ಎರಡು ವಸ್ತುಗಳನ್ನು ಕೇಳಿದಾಗ, ನೀವು ನಾಲಿಗೆ ಮತ್ತು ಹೃದಯ ತಂದಿರಿ. ನಾನು ಅತ್ಯಂತ ಕೆಟ್ಟ ಎರಡು ವಸ್ತುಗಳನ್ನು ಕೇಳಿದಾಗಲೂ ನನ್ನ ಮುಂದೆ ನಾಲಿಗೆ ಮತ್ತು ಹೃದಯವನ್ನು ತಂದಿಟ್ಟಿರಿ. ಏನು ವಿಷಯ....?"

ಲುಖ್ಮಾನ್ ಹೇಳಿದರು - "ನಾಲಿಗೆ ಮತ್ತು ಹೃದಯ" - ಇವೆರಡು ಹತೋಟಿಯಲ್ಲಿದ್ದರೆ ಎಲ್ಲವೂ ಹತೋಟಿಯಲ್ಲಿದ್ದಂತೆ. ಇವೆರಡು ಹತೋಟಿಯಲ್ಲಿಲ್ಲದಿದ್ದರೆ ಏನೂ ಹತೋಟಿಯಲ್ಲಿಲ್ಲದಂತೆ.

ಮನಸ್ಸು ಮತ್ತು ನಾಲಿಗೆ ಶುದ್ಧವಾಗಿದ್ದರೆ ಮಾನವನಿಂದ ಸತ್ಕಾರ್ಯಗಳು ಜರಗುತ್ತವೆ. ಅವೆರಡೂ ಅಶುದ್ದವಾಗಿದ್ದರೆ ಮಾನವ ತಪ್ಪು ದಾರಿ ತುಳಿಯುತ್ತಾನೆ. ನಾಲಿಗೆಗೆ ಸುಳ್ಳು ಮತ್ತು ಸತ್ಯ - ಎರಡನ್ನೂ ಹೇಳುವ ಕ್ಷಮತೆ ಇದೆ. ನಾಲಿಗೆ ಮನಸ್ಸುಗಳನ್ನು ಮುರಿಯುತ್ತದೆ ಮತ್ತು ಮುರಿದ ಮನಸ್ಸುಗಳನ್ನು ಜೋಡಿಸುವ ಶಕ್ತಿ ಸಹ ಹೊಂದಿದೆ. ಕತ್ತಿಯಿಂದ ಏಟು ತಿಂದರೆ ಆ ಗಾಯ ವಾಸಿಯಾಗಬಹುದು. ನಾಲಿಗೆಯಿಂದ ಗಾಯಗೊಂಡ ಮನಸ್ಸಿಗೆ ಪ್ರಪಂಚದ ಯಾವುದೇ ವೈದ್ಯನ ಬಳಿಯೂ ಔಷಧಿ ಸಿಗಲಾರದು. ನಾಲಿಗೆಯನ್ನು ಹೊಗಳಲು ಅಥವಾ ತೆಗಳಲೂ ಸಹ ಬಳಸಿಕೊಳ್ಳಬಹುದು.

ಹೃದಯ ಮತ್ತು ನಾಲಿಗೆಗೆ ನೇರ ಸಂಬಂಧವಿದೆ. ಮನಸ್ಸಿನಲ್ಲಿರುವುದು ನಾಲಿಗೆಯ ಮೇಲೆ ಬಂದೇ ಬರುತ್ತದೆ. ನಾಲಿಗೆ ಹೃದಯದ ಚಾವಿ ಇದ್ದಂತೆ. ಬಾಯಿ ತೆರೆದರೆ, ಹೃದಯ ತೆರೆದಂತೆ. ಒಳ್ಳೆಯ ಅಥವಾ ಕೆಟ್ಟ ಸಂಭಾಷಣೆ ಹೊರ ಬೀಳಬಹುದು. ಮಂದಿರ ಮಸೀದಿಗಳನ್ನು ಒಡೆದು ಕಟ್ಟಬಹುದು. ಆದರೆ ಮನಸ್ಸು ಒಡೆದು ಹೋದರೆ ಅದನ್ನು ಪುನಃ ಸರಿಪಡಿಸುವುದು ಬಹಳ ಕಷ್ಟ.

ಟಿಪ್ಪು ಸುಲ್ತಾನ್ ಒಂದು ಮಾತನ್ನು ಹೇಳಿದ್ದಾರೆ - "ಜೊ ಅಖಲ್ ಕಾ ಗುಲಾಮ್ ಹೊ ವೊ ದಿಲ್ ನ ಕರ್ ಕಬೂಲ್" (ಯಾವ ಹೃದಯ ಬುದ್ದಿಯ ಗುಲಾಮನಾಗಿರುತ್ತದೋ, ಅದನ್ನು ಅಂದರೆ ಅದರ ಮಾತನ್ನು ಸ್ವೀಕರಿಸಬೇಡ). ಟಿಪ್ಪು ರಣರಂಗದಿಂದ ಓಡಿ ಹೋಗುಲು ಅನೇಕ ಅವಕಾಶಗಳಿದ್ದವು. ಅವರ ಬುದ್ದಿ ಹೇಳಿತು - ಪ್ರಾಣ ಅತ್ಯಮೂಲ್ಯ. ಓಡಿ ಹೋಗು. ಪ್ರಾಣ ಉಳಿಸಿಕೊ. ಹೃದಯ ಹೇಳಿತು - ದೇಶಕ್ಕಾಗಿ ಪ್ರಾಣ ಕೊಡು. ಕೆಲವೊಮ್ಮೆ ನೀವು ಈ ಡೈಲಾಗ್ ಕೇಳಿರಬಹುದು - ನಾನು ಹೃದಯದ ಮಾತು ಕೇಳಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಅಂದರೆ ಬುದ್ಧಿ ಕೇವಲ ಸ್ವಾರ್ಥ ಮತ್ತು ಲಾಭ ನೋಡುತ್ತೆ ಆದರೆ ಹೃದಯ ಹಾಗಲ್ಲ.

ಒಟ್ಟಾರೆ ಹೇಳುವುದಾದರೆ ನಾಲಿಗೆ ಮತ್ತು ಹೃದಯದ ಲೀಲೆ ಮತ್ತು ಪ್ರಭಾವ ಅವರ್ಣನೀಯ. ಅದು ಒಳ್ಳೆಯದು ಅಥವಾ ಕೆಟ್ಟದ್ದಾಗಿರಬಹುದು. ನಾವೇಕೆ ಒಳ್ಳೆಯದನ್ನೇ ಬಯಸಬಾರದು? ನಾಲಿಗೆ ಮತ್ತು ಹೃದಯವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಾದರೆ ತರಬೇತಿ ಅಗತ್ಯ. ಪ್ರತಿದಿನ ಅಭ್ಯಾಸ ಮಾಡುತ್ತಾ ಮಾಡುತ್ತಾ ಅವೆರಡನ್ನು ಆದಷ್ಟು ಹತೋಟಿಯಲ್ಲಿಟ್ಟುಕೊಳ್ಳಬಹುದು. ನಾಲಿಗೆ ಮತ್ತು ಹೃದಯದ ಸರಿಯಾದ ಬಳಕೆ ನಿಮ್ಮ ವ್ಯಕ್ತಿತ್ವಕ್ಕೆ ಗೌರವವನ್ನು ತಂದು ಕೊಡುತ್ತದೆ. ವ್ಯಕ್ತಿತ್ವ ವಿಕಸನದ ಇದೊಂದು ಬಹಳ ಮುಖ್ಯವಾದ ಅಂಶವಾಗಿದೆ.

- ಜಬೀವುಲ್ಲಾ ಖಾನ್

0 comments:

Post a Comment