ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಅಣ್ಣಾ ಹಜಾರೆಗೆ ಬೆಂಬಲ

ಕುಂದಾಪುರ : ಭ್ರಷ್ಟಾಚಾರದಲ್ಲಿ ದೇಶ ನಂಬರ್ ಒನ್..! ಆದರೆ ಭ್ರಷ್ಟಾಚಾರ ವಿರೋಧದಲ್ಲಿ ಕುಂದಾಪುರ ನಂಬರ್ ತ್ರೀ...
ಅಚ್ಚರಿಯಾದರೂ ಹೌದು. ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಧರಣಿಯಲ್ಲಿ ಕುಂದಾಪುರ ಅಹೋರಾತ್ರಿ ಧರಣಿ ನಡೆಸುವ ಮೂಲಕ ನಂಬರ್ ಮೂರರ ಪಟ್ಟ ಅಲಂಕರಿಸಿದೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರು ಕುಂದಾಪುರಕ್ಕೆ ಭೇಟಿ ನೀಡಿದ ಸವಿ ಸವಿ ನೆನಪು ಪರಿಸರದಲ್ಲಿ ಹಸಿಯಾಗಿರುವ ಹಾಗೆ ಭ್ರಷ್ಟಾಚಾರ ವಿರೋಧದ ಮೂಲಕ ಅಣ್ಣಾ ಹಜಾರೆ ಬೆಂಬಲಕ್ಕೆ ಕುಂದಾಪುರ ನಾಗರಿಕರು ನಿಲ್ಲುವ ಮೂಲಕ ಗಾಂಧೀ ಅವರ ಭೇಟಿ ನೆನಪುಗಳನ್ನು ಮತ್ತೆ ಮತ್ತೆ ಮೆಲಕು ಹಾಕುತ್ತಿದ್ದಾರೆ.


ಮೂರನೇ ಸ್ಥಾನ ಹೇಗೆ : ಬಲಿಷ್ಠ ಜನಲೋಕಪಾಲ್ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ, ಕಿರಣ್ ಬೇಡಿ, ಅರವಿಂದ ಕೇಜ್ರಿವಾಲ, ಪ್ರಶಾಂತ್ ಭೂಷಣ್ ಮತ್ತು ಶಾಂತಿ ಭೂಷಣ್ ಅವರ ಅಸಂಖ್ಯಾತ ಬೆಂಬಲಿಗರ ಜೊತೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹಾಗೆ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ಮುಂದಾಳತ್ವದಲ್ಲಿ ಧರಣಿ ನಡೆಯುತ್ತಿದೆ.

ಉಡುಪಿ ಪ್ರಗತಿಪರ ಚಿಂತಕರ ವೇದಿಕೆ ಕುಂದಾಪುರ ತಾಲೂಕ್ ಸಮಿತಿ ಆಶ್ರಯದಲ್ಲಿ ಕಳೆದ ಆರು ದಿನದಿಂದ ಕುಂದಾಪುರ ಶಾಸ್ತ್ರಿ ವೃತ್ತದ ಸಮೀಪ ಅಹೋರಾತ್ರಿ ಧರಣಿ ನಡೆಯುತ್ತಿದೆ. ಅನಿರ್ಧಿಷ್ಠಾವಧಿ ಧರಣಿ ದೆಹಲಿ, ಬೆಂಗಳೂರು ಮತ್ತು ಕುಂದಾಪುರ ಬಿಟ್ಟರೆ ಮತ್ತೆಲ್ಲೂ ನಡೆಯುತ್ತಿಲ್ಲ. ಹಾಗಾಗಿ ಕುಂದಾಪುರಕ್ಕೆ ನಂಬರ್ ತ್ರೀ ಸ್ಥಾನ ಲಭ್ಯ.

ಹಾಗಂತ ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ಮತ್ತೆಲ್ಲೂ ಧರಣಿ ನಡೆಯುತ್ತಿಲ್ಲ ಎಂಬ ಅರ್ಥವಲ್ಲ. ದೇಶದ ಮೂಲೆ ಮೂಲೆಯಲ್ಲಿ ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ನಾಗರಿಕರು ಬೀದಿಗೆ ಇಳಿದಿದ್ದಾರೆ. ಆದರೆ ಒಂದೇ ಸ್ಥಳದಲ್ಲಿ ಪಟ್ಟಾಗಿ ಧರಣಿ ನಡೆಯುತ್ತಿಲ್ಲ. ಭ್ರಷ್ಟಾಚಾರ ವಿರೋಧಿ ಅಂದೋಲನದಲ್ಲಿ ಕುಂದಾಪುರಕ್ಕೂ ಒಂದು ಸ್ಥಾನ ಸಿಕ್ಕಿದ್ದು ಪರಿಸರದ ನಾಗರಿಕರಿಗೆ ಗರ್ವ ತಂದಿದೆ.

ಎತ್ತಣ ಮಾಮರ ಎತ್ತಣ ಕೋಗಿಲೆ : ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು ಸೇರಿದರೆ ರುಚಿಕಟ್ಟಾದ ಉಪ್ಪಿನಕಾಯಿ ಆಗುವ ಹಾಗೆ ಕುಂದಾಪುರದಲ್ಲಿ ನಡೆಯುತ್ತಿರುವ ಧರಣಿಗೆ ಬಿಜಾಪುರದ ಮಂದಿ ಸಾಥ್ ನೀಡಿದ್ದಾರೆ. ಬಿಜಾಪುರ ನಂದಿ ಶುಗರ್ ಕಾರ್ಖಾನೆ ಸರಹದ್ದಿನ ಗಲಿಗಲಿ ಎಂಬ ಪುಟ್ಟ ಊರಿನ ಮಂದಿ ಕುಂದಾಪುರದಲ್ಲಿ ಕೂತು ಅಣ್ಣಾ ಹಜಾರೆ ಅವರಿಗೆ ಜೈ ಅಂದಿದ್ದಾರೆ. ಜನ ಲೋಕಪಾಲ್ ಮಸೂದೆ ಆಗ್ರಹಿಸಿ ಘೋಷಣೆ ಕೂಗಿದ್ದಾರೆ.
ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಹೊರಟ ಇವರು ಧರಣಿ ನಡೆಯುತ್ತಿರುವ ಸ್ಥಳದಲ್ಲಿ ಅಣ್ಣಾ ಹಜಾರೆ ಅವರ ಭಾವ ಚಿತ್ರಕಂಡು ವೇದಿಕೆ ಏರಿ ತಮ್ಮ ಆಕ್ರೋಶ ವ್ಯಕ್ತಿ ಪಡಿಸಿದ್ದಾರೆ. ತಾವು ಊರಿಗೆ ಮರಳುವುದರೊಳಗೆ ಧರಣಿ ನಿಂತು ಹೋದರೆ ಸತ್ಯಾಗ್ರದಲ್ಲಿ ಭಾಗವಹಿಸಲು ಆಗಲಿಲ್ಲವಲ್ಲಾ ಎಂಬ 'ಗಿಲ್ಟಿ' ಕಾಡಬಾರದು ಎಂಬ ಹಿನ್ನೆಲೆಯಲ್ಲಿ ಇವರು ವೇದಿಕೆ ಹತ್ತಿ ಕುಳಿತಿದ್ದಾರೆ. ಭಾರತೀಯತೆ ಜನರನ್ನು ಬೆಸುಗೆ ಹಾಕುತ್ತದೆ ಎನ್ನೋದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಾ. ಅದಕ್ಕೆ ಹೇಳಿದ್ದು, ಎತ್ತಣ ಮಾಮರ ಎತ್ತಣ ಕೋಗಿಲೆ ಅಂತ.

ಪ್ರಗತಿಪರ ವೇದಿಕೆ ಕಥೆಯೇನು : ಕುಂದಾಪುರ ಪ್ರಗತಿಪರ ಚಿಂತಕರ ವೇದಿಕೆಗೆ ಅದರದ್ದೇ ಆದ ಸ್ಥಾನವಿದೆ. ಮಂದಾರ್ಥಿ ದೇವಸ್ಥಾನದಲ್ಲಿ ಬಿಲ್ಲವ ಕಲಾವಿದರಿಗೆ ಯಕ್ಷಗಾನ ಮೇಳದಲ್ಲಿ ಜಾತಿ ಹೆಸರಲ್ಲಿ ಅವಕಾಶ ನಿರಾಕರಣೆಯಾದಾಗ ಅವರ ಬೆನ್ನಿಗೆ ನಿಂತಿದ್ದು ಪ್ರಗತಿಪರ ಚಿಂತಕರ ವೇದಿಕೆ. ಕೊನೆಗೂ ಬೆಂಗಳೂರು ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುವ ಮೂಲಕ ಬಿಲ್ಲವ ಕಲಾವಿದರಿಗೆ ನ್ಯಾಯ ಒದಗಿಸಿಕೊಟ್ಟಿದ್ದು ಒನ್ಸ್ ಎಗೇನ್ ಪ್ರಗತಿಪರ ಚಿಂತಕರ ವೇದಿಕೆ.
ಹಾಗೆ ವೀಣಾಧರಿ ಅವರನ್ನು ಹೊರ ಪ್ರಪಂಚಕ್ಕೆ ಪರಿಚಯಿಸಿದ್ದೂ ಕೂಡಾ ಪ್ರಗತಿ ಪರ ಚಿಂತಕರ ವೇದಿಕೆ. ವೀಣಾಧರಿ ಅವರು ಬಹಿರಂಗವಾಗಿ ತಾನೂ ಎಚ್ಐವಿ ಭಾದಿತೆ ಎನ್ನೊ ಮೂಲಕ ಎಚ್ಐವಿ ಬಗ್ಗೆ ಇದ್ದ ಭಯವನ್ನು ತೊಡೆದು ಹಾಕಿ ಎಚ್ಐವಿ ಸೋಂಕಿಗೆ ಒಳಗಾದವರೂ ಎಲ್ಲರಂತೆ ಬದುಕಬಹುದು ಎನ್ನೋದನ್ನ ತೋರಿಸಿದರು. ಇವರಿಂದ ಪ್ರಭಾವಿತರಾದವರು ಬಯಲಿಗೆ ಬಂದು ನಿರ್ಭೀತವಾಗಿ ಜೀವನ ಕಟ್ಟಿಕೊಳ್ಳುವ ಸಾಹಸ ಮಾಡಿದರು. ಈ ಸಾಹಸದ ಹಿಂದೆ ಪ್ರಗತಿಪರ ಚಿಂತಕರ ವೇದಿಕೆ ಇದೆ ಎನ್ನೋದು ಅಷ್ಟೇ ಸತ್ಯ.

ಹತ್ತು ಹಲವು ಸಮಾಜಮುಖಿ ಕೆಲಸವನ್ನು ಮಾಡಿದ ಹೆಗ್ಗಳಿಗೆ ವೇದಿಕೆಗೆ ಇದೆ. ಹಾಗಾಗಿ ಕುಂದಾಪುರದಲ್ಲಿ ವೇದಿಕೆ ಅಣ್ಣಾ ಹಜಾರೆ ಅವರಿಗೆ ಬೆಂಬಲ ಸೂಚಿಸಿ ಧರಣಿ ನಡೆಸಲು ಕೂತಿತು. ಹತ್ತು ಹಲವು ವೈವಿಧ್ಯಗಳ ಮೂಲಕ ಧರಣಿ ನಡೆಸುವ ಮೂಲಕ ಧರಣಿಯನ್ನೂ ಹೀಗೂ ಮಾಡುಬಹುದು ಎನ್ನೋದನ್ನು ವೇದಿಕೆ ನಿರೂಪಿಸಿದೆ.
ಸುಮಾರು ಒಂದು ದಶಕದ ಹಿಂದೆ ವೇದಿಕೆ ಅಸ್ತಿತ್ವಕ್ಕೆ ಬಂತು. ಅಂದಿನಿಂದ ಇಂದಿನವರೆಗೆಗೂ ವೇದಿಕೆ ಸಾಗಿದ ಹಾದಿ ಬಲು ದೂರು. ವೇದಿಕೆ ಜನಪರ ಕಾಳಜಿಗೆ ಸ್ಪಂಧನವಾಗಬೇಕು ಎನ್ನೋದು ಉಡುಪಿ ಜಿಲ್ಲಾ ಪ್ರಗತಿಪರ ಚಿಂತಕರ ವೇದಿಕೆ ಜಿಲ್ಲಾ ಸಂಚಾಲಕ ಕೇಶವ ಕೋಟೇಶ್ವರ ಅವರ ಆಶಯ. ಹಾಗೆ ತಾಲೂಕ್ ಸಂಚಾಲಕ ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ಸಮಾಜಕ್ಕೆ ಏನನ್ನಾದರೂ ಕೊಡುವ ಉಮೇದಿದೆ. ವೇದಿಕೆ ಹಿಂದೆ ಸಾಹಿತಿ ಎ.ಎಸ್.ಎನ್ ಹೆಬ್ಬಾರ್. ನ್ಯಾಯವಾದಿಗಳಾದ ಟಿ.ಬಿ.ಶೆಟ್ಟಿ, ಚರಣ್ ನಾವುಡ ಹಾಗೂ ಹಳ್ಳಿಯಲ್ಲಿ ಅಂಗನವಾಡಿ ತೆರೆದ ಶಿಕ್ಷಣ ಸೇವೆಗೆ ಮುಂದಾದ ಚಂದ್ರಶೇಖರ್ ವೇದಿಕೆ ಬೆನ್ನಿಗೆ ನಿಂತಿದ್ದಾರೆ. ಇವರೊಟ್ಟಿಗೆ ಕುಂದಾಪುರ ನಾಗರಿಕರು ಕೈಜೋಡಿಸಿದ್ದಾರೆ. ಒಟ್ಟಾರೆ ವಿಶಿಷ್ಟ ಕಾರ್ಯಕ್ರಮದ ಮೂಲಕ ವೇದಿಕೆ ಹೊಸ ದಿಕ್ಕುದಿಶೆ ಕಡೆಗೆ ಗಮನ ಹರಿಸಿದೆ. ರಾಜಕೀಯೇತರ ವೇದಿಕೆಯಾಗಿ ಸಮಾಜದ ತುಡಿತಕ್ಕೆ ಸ್ಪಂದಿಸುವ ಗುಣ ವೇದಿಕೆಯ ಯಶಸ್ಸಿ ಕಾರಣ.

- ಶ್ರೀಪತಿ ಹೆಗಡೆ ಹಕ್ಲಾಡಿ.

0 comments:

Post a Comment