ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅಗ್ರಲೇಖನ

ಸಂವಿಧಾನದ ನಾಲ್ಕನೇ ಅಂಗ ಎಂದೇ ಗುರುತಿಸಲ್ಪಟ್ಟ ಮಾಧ್ಯಮಗಳಲ್ಲಿ ಭಾಷಾಗೊಂದಲಗಳು ಅತಿಯಾಗುತ್ತಿವೆ.ಪ್ರಾದೇಶಿಕತೆಗೆ ತಕ್ಕಂತೆ ಭಾಷಾ ಬದಲಾವಣೆಗಳು ಆಗುತ್ತಿರುವುದು ಸಹಜವಾದರೂ "ಕೃತಘ್ನತೆಗಳು" -"ಕೃತಜ್ಞತೆಗಳು" , ಜ್ಞಾನ - ಘ್ನಾನ ಪದಬಳಕೆಯಲ್ಲಿ ಉಂಟಾಗುತ್ತಿರುವ ಗೊಂದಲ ಇನ್ನೂ ನಿವಾರಣೆಯಾಗಿಲ್ಲ. ಅಲ್ಪ ಪ್ರಾಣ ಮಹಾಪ್ರಾಣಗಳು ದೊಡ್ಡ ವಿಷಯ ಎಂದೆನಿಸಿಕೊಳ್ಳುತ್ತಿಲ್ಲ. ಇದು ಇಂದಿನ ಮಾಧ್ಯಮಗಳಲ್ಲಿ ಭಾಷಾ ಬಳಕೆಯ ಸ್ಥಿತಿಯಾಗಿದೆ.


ಸಮಾಜದ ಡೊಂಕನ್ನೆಲ್ಲ ತಿದ್ದುತ್ತೇವೆ ಎಂಬಂತೆ ಅಥವಾ ಸಮಾಜದಲ್ಲಿ ನಾವೇ ಶ್ರೇಷ್ಠ ಉಳಿದಿನ್ನಾರೂ ಶ್ರೇಷ್ಠ ವ್ಯಕ್ತಿಗಳೇ ಇಲ್ಲ ಎಂಬಂತಹ ಒಂದು "ಭ್ರಮೆ"ಯಲ್ಲಿ ಮುಳುಗಿರುವ ಮಾಧ್ಯಮ ಲೋಕ ಅದರಲ್ಲಿರುವ ಬಹುತೇಕ "ಉದ್ಯೋಗಿ"ಗಳು(ಸಾವ್ರತ್ರಿಕವಾಗಿ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿಲ್ಲ. ಆ ಭ್ರಮೆಯೂ ನನಗಿಲ್ಲ.) ಸಮಾಜದೆದುರು ತೆರೆದುಕೊಳ್ಳುತ್ತಿರುವ ರೀತಿಗೂ, ಏತನ್ಮಧ್ಯೆ ಆ ಮಾಧ್ಯಮಗಳಿರಲಿ, ಆ ಉದ್ಯೋಗಿಗಳಿರಲಿ "ತಮ್ಮ ತಟ್ಟೆಯಲ್ಲಿ ಹೆಗ್ಗಣವನ್ನಿಟ್ಟು ಉಳಿದವರ ತಟ್ಟೆಯಲ್ಲಿರುವ ನೊಣದ ಬಗ್ಗೆ ಮಾತನಾಡುವ ರೀತಿ" ನಿಜಕ್ಕೂ ಅಸಹ್ಯ ಹುಟ್ಟಿಸುತ್ತದೆ. ಇದು ಇಂದಿನ ಮಾಧ್ಯಮಗಳ ವಸ್ತುಶಃ ಸ್ಥಿತಿಯಾಗಿದೆ. ಮಾಧ್ಯಮ ಅಂದರೆ ನಾನಿಲ್ಲಿ ಸಮೂಹ ಮಾಧ್ಯಮಗಳನ್ನು ಉಲ್ಲೇಖಿಸುತ್ತಾ ಈ ಮಾಧ್ಯಮಗಳಲ್ಲಿ ಕಂಡುಬರುವ ಭಾಷಾ ಬಳಕೆಯ ವಿಚಾರವನ್ನಷ್ಟೇ ಉಲ್ಲೇಖಿಸಲು ಇಷ್ಟಪಡುತ್ತಿದ್ದೇನೆ.

ನಿನ್ನೆ ನನ್ನ ಆತ್ಮೀಯ ಗೆಳೆಯರೋರ್ವರು ಕನ್ನಡ ಪತ್ರಿಕೆಗಳನ್ನು ಕೈಗೆತ್ತಿಕೊಂಡು ಮಾತೊಂದನ್ನು ಹೇಳಿದರು. ನಿಜಕ್ಕೂ ಅದು ಮಾರ್ಮಿಕವಾಗಿತ್ತು. "ಪತ್ರಿಕೆಗಳಲ್ಲಿ ಬರುವ ಶೀರ್ಷಿಕೆಗಳು ಆಕರ್ಷಕವಾಗಿರಬೇಕೆಂಬ ಗೀಳು ಅತಿಯಾಗಿದೆ. ಆಂಗ್ಲಪದಗಳ ಬಳಕೆ ಅತಿಯಾಗುತ್ತಿದೆ. ಕನ್ನಡದ ಪತ್ರಿಕೆಗಳಲ್ಲಿ ರಾರಾಜಿಸುತ್ತಿರುವ ಶೀರ್ಷಿಕೆಗಳಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಪದಗಳಲ್ಲಿರುತ್ತವೆ!" ನಿಜಕ್ಕೂ ಅಚ್ಚರಿ.ಆದರೆ ಈ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕು.

ಇಂದಿನ ಕನ್ನಡ ಭಾಷಾ ಪತ್ರಿಕೆಗಳ ಮುಖ್ಯ ಶೀರ್ಷಿಕೆಗಳತ್ತ ಕಣ್ಣು ಹಾಯಿಸಿದರೆ ಅಲ್ಲಿ ಆಕರ್ಷಣೆಗೆ ಪ್ರಾಧಾನ್ಯತೆ ನೀಡಲಾಗುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಎಷ್ಟೋ ಬಾರಿ ಗಂಭೀರ ವಿಷಯಗಳಿಗೂ ಕೇವಲ ವ್ಯಂಗ್ಯವಾಡುವ ರೀತಿಯಲ್ಲೋ, ಹಾಸ್ಯಾಸ್ಪದ ರೀತಿಯಲ್ಲೋ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ ಹಾಡುಗಳ ಯಾವುದೋ ಒಂದು ಗೆರೆ ಇಂದು ಶೀರ್ಷಿಕೆಯಾಗುತ್ತಿದೆ. ಅನೇಕ ಬಾರಿ ಅದು ಹಿಂದಿ, ಆಂಗ್ಲಭಾಷೆಯ ಎರವಲನ್ನು ಪಡೆದು ಪ್ರಸ್ತಾಪಿಸಲ್ಪಡುತ್ತದೆ. ಎಷ್ಟೋ ಬಾರಿ ಸುದ್ದಿಗೂ ಶೀರ್ಷಿಕೆಗಳಿಗೂ ಅರ್ಥವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತಿರುತ್ತವೆ.

ಯಾವುದೋ ಒಂದು ಪ್ರಮುಖ ವರದಿಯನ್ನೇ ತೆಗೆದುಕೊಳ್ಳೋಣ. ಇಡೀ ವರದಿಗಳಲ್ಲಿ ವ್ಯಾಕರಣ ದೋಷಗಳು, ಅಪಭ್ರಂಶಗಳು ಅತಿಯಾಗುತ್ತಿದೆ.
ಕನ್ನಡದ ಪದಗಳಲ್ಲಿರುವ ಸಾಧ್ಯತೆಗಳನ್ನು ಗುರುತಿಸುವಲ್ಲಿ ವಿಫಲರಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ಎಷ್ಟೋ ಸಂದರ್ಭಗಳಲ್ಲಿ ಅನವಶ್ಯಕ "ವಿಶೇಷಣ" ಬಳಸಲಾಗುತ್ತದೆ. ಅದರಿಂದಾಗಿ ಆ ಇಡೀ ಸುದ್ದಿ ಒಂದೋ ವಿಭಿನ್ನ ಅರ್ಥಕ್ಕೆ ಕಾರಣವಾಗಿ ಪೇಚಿಗೆ ಸಿಲುಕುವ ಸಂದರ್ಭಗಳೂ ಇಲ್ಲದಿಲ್ಲ. ಸಂಪಾದಕೀಯ ಪುಟದಲ್ಲಿ ಪ್ರಕಟಗೊಳ್ಳುವ ಸಂಪಾದಕೀಯ ಲೇಖನದಲ್ಲೇ ತಪ್ಪುಗಳಾಗುತ್ತಿರುವುದು ಸೋಜಿಗ!

ನನ್ನನ್ನೂ ಸೇರಿಸಿಕೊಂಡಂತೆ ಇಂದು ನಾವೆಷ್ಟರಮಟ್ಟಿಗೆ ಕನ್ನಡಕ್ಕೆ ಸೂಕ್ತ ಸ್ಥಾನಮಾನ ಕೊಡುತ್ತಿದ್ದೇವೆ? ಕನ್ನಡವನ್ನು ಆಪ್ತವಾಗಿ ಅನುಸರಿಸುತ್ತೇವೆ; ಅದಕ್ಕಿಂತಲೂ ಮುಖ್ಯವಾಗಿ ಅಚ್ಛಕನ್ನಡದಲ್ಲಿ ಮಾತನಾಡುವ ಪ್ರಯತ್ನವನ್ನಾದರೂ ಮಾಡುತ್ತೇವೆ ಎಂಬ ಬಗ್ಗೆ ಮೊಟ್ಟ ಮೊದಲಾಗಿ ಆತ್ಮವಿಮರ್ಷೆ ಮಾಡಿಕೊಳ್ಳಬೇಕು. ಒಂದೊಮ್ಮೆ ನಾವು ಸಭ್ಯರಾಗಿ ಕನ್ನಡದ ಪತ್ರಿಕೆಗಳು ಅಥವಾ ಮಾಧ್ಯಮಗಳಲ್ಲಿ ಕೇವಲ ಕನ್ನಡವನ್ನು ಅದರಲ್ಲೂ ಅಚ್ಛ ಕನ್ನಡವನ್ನು ಬಿಟ್ಟು ಬೇರೇನಿದ್ದರೂ ನಾನು ಸ್ವೀಕರಿಸಲಾರೆ ಎಂಬಂತಹ ದೃಢ ನಿರ್ಧಾರವನ್ನು ಪ್ರಜ್ಞಾವಂತ ಕನ್ನಡಿಗರೆಲ್ಲರೂ ಮಾಡಿದ್ದೇ ಆದಲ್ಲಿ ಇಂದು ಕನ್ನಡದ ಅಷ್ಟೂ ಮಾಧ್ಯಮಗಳು ಕನ್ನಡಕ್ಕೆ ಸೂಕ್ತ ನ್ಯಾಯ ನೀಡುತ್ತಿದ್ದರೋ ಏನೋ...

ಮಾಧ್ಯಮಗಳು ಒಂದಷ್ಟು ಮಟ್ಟಿಗೆ ಪರಭಾಷೆಯನ್ನು ತಮ್ಮ ತಮ್ಮ ಮಾಧ್ಯಮಗಳಲ್ಲಿ ತುರುಕುವುದಕ್ಕೆ ಅಥವಾ ಕನ್ನಡವನ್ನು ವಿರೂಪಗೊಳಿಸುವುದಕ್ಕೆ ಓದುಗರೂ ಕಾರಣರಾಗುತ್ತಿದ್ದೇವೆ. ಇದು ಹೌದು.

ಇತ್ತೀಚಿನ ಕೆಲವು ದಿನಗಳ ಕನ್ನಡ ಪತ್ರಿಕೆಗಳ ಮುಖಪುಟಗಳನ್ನು ಗಮನಿಸಿ. ಅದರ ಶೀರ್ಷಿಕೆಗಳತ್ತ ನೋಡಿದಾಗ ಗಮನ ಸೆಳೆದ ಕೇವಲ ಎರಡು ಉದಾಹರಣೆಗಳನ್ನು ಇಲ್ಲಿ ನೀಡಲಿಚ್ಛಿಸುತ್ತೇನೆ.
ಪತ್ರಿಕೆಯೊಂದರ ಶೀರ್ಷಿಕೆ ಹೀಗಿತ್ತು.ಇಂದಿನ ರಾಜ್ಯ ರಾಜಕೀಯದ ವಿಷಯಕ್ಕೆ ಪೂರಕವಾದಂತಹ ಸುದ್ದಿಯ ಶೀರ್ಷಿಕೆ. ಸಾಕು ಕುರ್ಛೀ ಬಿಡಿ(ಅಲ್ಲಿ "ಛೀ" ಎಂಬ ಅಕ್ಷರವನ್ನು ವರ್ಣರಂಜಿತವಾಗಿ ತೋರಿಸಲಾಗಿತ್ತು ) . ಆಕರ್ಷಕ ಶೀರ್ಷಿಕೆ. ಸಕಾಲಿಕವೂ ಹೌದು.
ಡಿ.ವಿ.ಸದಾನಂದ ಗೌಡ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುದ್ದಿಗೆ ಕನ್ನಡದ ಪತ್ರಿಕೆಯೊಂದು ನೀಡಿದ ಶೀರ್ಷಿಕೆ ಹೀಗಿತ್ತು. "ಡೀವಿ* - ಠೀವಿ"!. ಇದನ್ನು ನೋಡುವಾಗ ಜಾಹೀರಾತುಗಳಲ್ಲಿ "*" ಚಿಹ್ನೆಯನ್ನು ಹಾಕಿ ಜಾಹೀರಾತಿನ ಕೊನೆಯಲ್ಲಿ "ಕಂಡೀಷನ್ಸ್ ಅಪ್ಲಾಯ್" ಎಂಬ ಕಂಡೂ ಕಾಣದ ವಾಕ್ಯವನ್ನು ಬರೆಯುತ್ತಾರಲ್ಲ ಅದು ನೆನಪಿಗೆ ಬಂತು.

ಆದರೆ ಒಂದಂಶವನ್ನು ಗಮನಿಸಬೇಕು ಈ ಆಕರ್ಷಣೆಯ ಹೆಸರಲ್ಲಿ ಅನೇಕ ಬಾರಿ ಅಲ್ಪ ಪ್ರಾಣ ಮಹಾಪ್ರಾಣಕ್ಕೆ ಬೆಲೆಯೇ ನೀಡದೆ ಕೇವಲ "ಆಶಯ" ಗಳನ್ನಷ್ಟೇ ಜನತೆಗೆ ತಿಳಿಸುವ ಉದ್ದೇಶ ಇಂದು ಮಾಧ್ಯಮಗಳಲ್ಲಿ ನಡೆಯುತ್ತಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ.ಸಾರ್ವತ್ರಿಕ ಅಭಿಪ್ರಾಯವಾಗಿ ಇದನ್ನು ಪರಿಗಣಿಸಬೇಕೆಂದೇನಿಲ್ಲ. ಇದು ಕೇವಲ ಉದಾಹರಣೆಯಷ್ಟೇ. ಶೀರ್ಷಿಕೆಯಲ್ಲಿ ಆಟವಾಡುವ ಮೂಲಕ ಓದುಗರನ್ನು ಆಕರ್ಷಿಸುವ ತಂತ್ರಗಾರಿಕೆಯ ನಡುವೆ ಕನ್ನಡದ ಮಾಧ್ಯಮಗಳು ಇಂದು ತಮ್ಮ ಜವಾರಿಯನ್ನು ಒಂದಷ್ಟರಮಟ್ಟಿಗೆ ಕಳೆದುಕೊಳ್ಳುತ್ತಿದೆ. ನಾವು ಪ್ರಕಟಿಸಿದ್ದೆಲ್ಲವೂ ಅಥವಾ ನೀಡುತ್ತಿರುವುದೆಲ್ಲವೂ ಸತ್ಯ. ಅದನ್ನೇ ನೀವು ಓದಿ /ಕೇಳಿ/ನೋಡಿ ಎಂಬಂತಹ ಧೋರಣೆಯ ರೀತಿಯಲ್ಲಿ ಇಂದಿನ ಕನ್ನಡದ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ.

ಮಾಧ್ಯಮಗಳ ವೇಘಯುತ ಬೆಳವಣಿಗೆ, ಸ್ಪರ್ಧೆಗಳ ಓಘವೋ ಗೊತ್ತಿಲ್ಲ. ಹೇಗಾದರೂ ಮಾಡಿ ನನ್ನ ಮಾಧ್ಯಮ ಜನಪ್ರಿಯತೆಯನ್ನು ಗಳಿಸಬೇಕೆಂಬ ಹಂಬಲವೋ, ಅತಿ ಆಸೆಯೋ ಗೊತ್ತಿಲ್ಲ. ಒಟ್ಟಾರೆಯಾಗಿ ಅದನ್ನು "ನಾನು ಹೇಗೆ" ಪ್ರಸ್ತುತ ಪಡಿಸಿದರೆ ಚೆನ್ನಾಗಿರುತ್ತದೆ ಎಂಬಂತಹ "ವೈಯಕ್ತಿಕ" ಚಿಂತನೆ ಒಟ್ಟಾರೆಯಾಗಿ ಎಲ್ಲಾ ಮಾಧ್ಯಮಗಳಲ್ಲೂ ವ್ಯಕ್ತವಾಗುತ್ತಿದೆ.

ರಾಜಕೀಯ ಅಲ್ಲೋಲ ಕಲ್ಲೋಲಗಳಿರಲಿ, ಲೋಕಾಯುಕ್ತ ವರದಿ ಸಲ್ಲಿಕೆಯಿರಲಿ, ಅಧಿವೇಶನಗಳಿರಲಿ, ರಾಜ್ಯ ಮುಂಗಡ ಪತ್ರ ಮಂಡನೆಯಿರಲಿ, ಅಥವಾ ಇತ್ತೀಚೆಗೆ ತಿರುವನಂತಪುರದ ಅನಂತ ಪದ್ಮನಾಭ ಕ್ಷೇತ್ರದಲ್ಲಿ ಲಭಿಸಿದ ಅಪಾರ ಸಂಪತ್ತಿನ ವಿಚಾರವಿರಲಿ, ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ರಾಜ್ಯ ಕಾಜಕೀಯವಿರಲಿ ನಮ್ಮ ಕನ್ನಡ ಭಾಷೆಯ ಮಾಧ್ಯಮಗಳು ಅದರಲ್ಲೂ ಮುದ್ರಣ ಮಾಧ್ಯಮಗಳು ನೀಡಿರುವ ಅತಿ ವೈಭವೀಕರಣ ವಿಪರೀತಕ್ಕೆ ಹೋಗುತ್ತಿವೆ.ಹೋಗಿವೆ.ಕನ್ನಡದ ಪತ್ರಿಕೆಗಳು ಶೀರ್ಷಿಕೆಯಿಂದ ಹಿಡಿದು ವರದಿ, ಅಲ್ಲಿ ಬರುವ ವರದಿಗಳನ್ನು ವರ್ಣರಂಜಿತಗೊಳಿಸಿ ಪ್ರಸ್ತುತ ಪಡಿಸುವ ಪರಿ, ಪೂರಕ ಶೀರ್ಷಿಕೆಗಳು ಎಲ್ಲವೂ ಇಂದು ಕೇವಲ ಕನ್ನಡ ವಾಗಿ ಉಳಿದಿಲ್ಲ.ಬದಲಾಗಿ ಅವೆಲ್ಲವೂ ಮಿಶ್ರಭಾಷೆಯಿಂದ ಕೂಡಿದ್ದು ಕನ್ನಡಕ್ಕಿಂತಲೂ ಇತರೆ ಭಾಷೆಗಳೇ ಹೆಚ್ಚು ಪರಿಣಾಮಕಾರಿಯಾಗುತ್ತಿದೆಯೋ ಎಂಬ ಭಾವನೆ ಮೂಡಿಸುವುದರಲ್ಲಿ ಸಂದೇಹವಿಲ್ಲ.

ಕನ್ನಡದ ಸುದ್ದಿವಾಹಿನಿಗಳು ಹಾಗೂ ಕನ್ನಡದ ಮನೋರಂಜನಾ ವಾಹಿನಿಗಳತ್ತ ಒಂದಷ್ಟು ಗಮನ ಹರಿಸೋಣ. ಸುದ್ದಿ ವಾಹಿನಿಗಳು ಸುದ್ದಿಯನ್ನು ತಾಮುಂದು - ನಾ ಮುಂದು ಎಂಬಂತೆ ಭಿತ್ತರಿಸುವ ಪೈಪೋಟಿಯಲ್ಲಿ ಹೆಚ್ಚು ಎಡವಟ್ಟುಗಳನ್ನು ಮಾಡುತ್ತಿವೆ. ಇಲ್ಲಿ ಸುದ್ದಿ ಮೌಲ್ಯಗಳ ಬಗ್ಗೆ ನಾನು ಪ್ರಾಸ್ತಾಪಿಸಲು ಹೋಗುತ್ತಿಲ್ಲ. ಬದಲಾಗಿ ಸುದ್ದಿವಾಹಿನಿಗಳ ವರದಿಗಾರರು, ನಿರೂಪಕರು, ವಾರ್ತಾ ವಾಚರಕು ನಿರಂತರವಾಗಿ ಕನ್ನಡ ಬಳಕೆಯಲ್ಲಿ ಎಡವಟ್ಟು ತೋರಿಸುತ್ತಿರುವುದರ ಬಗ್ಗೆ ನನ್ನ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿದ್ದೇನೆ.

ಒಂದು ಗಂಟೆಯ ವಾರ್ತೆಯನ್ನು ಓರ್ವ ವೀಕ್ಷಕನ ನೆಲೆಯಿಂದ ನೋಡಿದ್ದೇ ಆದಲ್ಲಿ ಈ ವಾಹಿನಿಗಳು ಹೆಸರಿಗಷ್ಟೇ "ಕನ್ನಡ ವಾಹಿನಿ" ಎಂಬ ಹಣೆಪಟ್ಟಿ ಹೊತ್ತಿವೆ ಎಂಬ ಸತ್ಯ ಬಯಲಾಗುತ್ತವೆ!
ವಾರ್ತೆಯ ಉದ್ದಕ್ಕೂ ಬಳಸಲ್ಪಡುವ ಆಂಗ್ಲ ಹಾಗೂ ಪರಭಾಷಾ ಪದಗಳು, ವರದಿಗಾರರು ನೀಡುವ ನೇರ ವರದಿಗಳಲ್ಲಿ ಕನ್ನಡಕ್ಕಿಂತಲೂ ಅಧಿಕವಾಗಿ ಆಂಗ್ಲಭಾಷಾ ಪದಬಳಕೆ, ವಾಹಿನಿಗಳಲ್ಲಿ ಆಗಿಂದಾಗೇ ಏನೋ ಆಕಾಶವೇ ಕಳಚಿಕೊಂಡಿತೋ ಎಂಬಂತೆ ದೊಡ್ಡ ದೊಡ್ಡದಾಗಿ ತೋರಿಸಲ್ಪಡುವ "ಬ್ರೇಕಿಂಗ್", ಬಿಗ್, ಎಸ್ಕ್ಲೂಸಿವ್ ' ಶೀರ್ಷಿಕೆಗಳು ಎಲ್ಲವೂ ಆಂಗ್ಲಪದಗಳಲ್ಲೇ ರಾರಾಜಿಸುತ್ತಿವೆ. ಆದರೂ ಇಂತಹ ವಾಹಿನಿಗಳು , ವಾಹಿನಿಗಳ ವರದಿಗಾರರು ಉಸಿರುಗಟ್ಟಿ ಇನ್ನೇನು ತನ್ನ ಪ್ರಾಣವೇ ಹೋಯಿತು ಎನ್ನುವಂತೆ ಗಂಟಲು ಹರಿದುಕೊಳ್ಳುತ್ತಲೇ ಹೇಳುವ ಸುದ್ದಿಗಳು ನಮಗೆ ಇಷ್ಟವಾಗುತ್ತವೆ.

ಅದು ಬಿಟ್ಟು ಅಚ್ಛ ಕನ್ನಡವನ್ನು ಬಳಸಿ, ಸುಲಲಿತವಾಗಿ , ನಿರರ್ಗಳವಾಗಿ, ಸ್ಪಷ್ಟ ಉಚ್ಛಾರದೊಂದಿಗೆ ಮಾಹಿತಿ ನೀಡುವ ದೂರದರ್ಶನ ಚಂದನ ವಾಹಿನಿ ನಮಗೆ ಅಪ್ಯಾಯಮಾನವಾಗುವುದೇ ಇಲ್ಲ. ದೂರದರ್ಶನ ವಾಹಿನಿಗಳಲ್ಲಿ ಬರುವ ಭಾಷಾ ವಿಚಾರಗಳಿರಬಹುದು, ಸಾಂದರ್ಭಿಕ ಸುದ್ದಿಗಳಿರಬಹುದು, ಕಾರ್ಯಕ್ರಮ ವೈವಿಧ್ಯಗಳಿರಬಹುದು ಅವೆಲ್ಲವೂ ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆಯೇ ಹೊರತು ಭಾಷೆಯನ್ನು ವಿಕೃತಿಗೊಳಿಸುವ ಯಾವೊಂದು ಕಾರ್ಯಗಳನ್ನೂ ಮಾಡಿಲ್ಲ.ಮಾಡುತ್ತಿಲ್ಲ. ಕೆಲವೊಂದು ಒಪ್ಪುತಪ್ಪುಗಳು ಇವೆ ಎಂಬುದನ್ನು ಬಿಟ್ಟರೆ ಒಟ್ಟಿನಲ್ಲಿ ಕನ್ನಡ ಭಾಷೆಯನ್ನು ಕೊಲೆ ಮಾಡುತ್ತಿಲ್ಲ.ಖಾಸಗೀ ವಾಹಿನಿಗಳಲ್ಲಿ ತೋರುವ ರೀತಿಯ ಭಾಷಾ ಅಪಭ್ರಂಶವು ಈ ವಾಹಿನಿಯಲ್ಲಿ ಕಡಿಮೆ ಎಂದೇ ಹೇಳಬಹುದು.

ಸುದ್ದಿವಾಹಿನಿಗಳಲ್ಲಿ ರಾಜಕೀಯ ಹಾಗೂ ಇತರೆ ವ್ಯಂಗ್ಯ ಕಾರ್ಯಕ್ರಮಗಳ ಹೆಸರಿನಲ್ಲಿ ಇಂದು ಭಿತ್ತರಗೊಳ್ಳುವ ಕಾರ್ಯಕ್ರಮಗಳಲ್ಲಿ ಭಾಷೆಯ ಕಗ್ಗೊಲೆಯಾಗುತ್ತಿದೆ. ಕನ್ನಡವನ್ನು ವಿಕೃತ ರೀತಿಯಲ್ಲಿ ಬಳಸಲಾಗುತ್ತಿದೆ. ಭಾಷೆಯ ಬಗೆಗಿನ ಅಭಿಮಾನ ಇಂದು ವಾಹಿನಿಗಳಲ್ಲಿ ಕಡಿಮೆಯಾಗುತ್ತಿದೆ. ನೇರಾನೇರ ಇಂದು ಪರಭಾಷೆಯನ್ನು ಅನುಸರಿಸುವ ಅನುಕರಣೆ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿವೆ. ಪರಭಾಷಾ ವ್ಯಾಮೋಹ ಆ ರೀತಿಯ ಅನುಕರಣೆಯಿಂದಾಗಿ ಕನ್ನಡ ಭಾಷಾ ವಾಹಿನಿಗಳಲ್ಲಿ ಕೆಲಸ ಮಾಡುವ ನಿರೂಪಕರಿಗೆ ಅಥವಾ ಸುದ್ದಿ ವಾಚಕರಿಗೆ ತಾವು ಕಾರ್ಯನಿರ್ವಹಿಸುತ್ತಿರುವುದು ಕನ್ನಡ ಭಾಷಾ ವಾಹಿನಿಯಲ್ಲಿ ಎಂಬ ಅಂಶ ಮರೆತು ಹೋದಂತೆ ಭಾಸವಾಗುತ್ತಿದೆ. ಅಥವಾ ಭಾಷೆಯ ಬಗೆಗಿನ ಕನಿಷ್ಠ ಜ್ಞಾನವೂ ಇವರಿಗೆಲ್ಲ ಇಂದು ಇಲ್ಲವಾಗಿದೆಯೋ ಎಂಬ ಸಣ್ಣ ಸಂದೇಹ ಹುಟ್ಟಲಾರಂಭಿಸುತ್ತವೆ.

ಇನ್ನು ಕನ್ನಡ ಭಾಷೆಯ ಮನೋರಂಜನಾ ವಾಹಿನಿಗಳತ್ತ ಗಮನಹರಿಸುವುದಾದರೆ ; ಇವು (ಕೆಲವೊಂದು ಸುದ್ದಿ ಹಾಗೂ ಮನೋರಂಜನೆ ಎರಡನ್ನೂ ನೀಡುವ ವಾಹಿನಿಗಳೂ ಈ ಸಾಲಿಗೆ ಸೇರುತ್ತವೆ.)ನೀಡುವ ಪ್ರದರ್ಶನಗಳು "ರಿಯಾಲಿಟೋ ಶೋ" ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡಿರುತ್ತವೆ. ನಿಜಕ್ಕೂ ನಾಚಿಕೆಯಾಗಬೇಕು. ಇವರೆಲ್ಲ ಇಂಗ್ಲೆಂಡೋ, ಅಮೆರಿಕಾ ದೇಶದಿಂದ ಇಳಿದು ಬಂದಿದ್ದಾರೋ ಎಂಬಂತೆ ಈ ಪ್ರದರ್ಶನಗಳನ್ನು ನೋಡುವಾಗ ಅನುಮಾನ ಕಾಡುತ್ತದೆ. ಅಲ್ಲಿ ವಾಹಿನಿಗಳ ಕಾರ್ಯಕ್ರಮ ನಿರೂಪಕರಿಗೆ ಒಂದು ವಾಕ್ಯ ಪೂರ್ತಿಗೊಳಿಸಬೇಕಾದರೆ ಕನಿಷ್ಠ ಆ ವಾಕ್ಯದ ಮೂರನೇ ಎರಡಂಶದಷ್ಟು ಆಂಗ್ಲ ಪದ ಬಳಕೆಯಾಗಲೇ ಬೇಕು. ಇದ್ಯಾವ ಲೆಕ್ಕಾಚಾರವೋ ಗೊತ್ತಿಲ್ಲ. ಇನ್ನು ಅದರಲ್ಲಿ ಭಾಗವಹಿಸುವ ಸ್ಪಧರ್ಿಗಳು ಅವರ್ಯಾರೂ ಕನ್ನಡ ನಾಡಿನ ಮಕ್ಕಳೇ ಅಲ್ಲವೋ ಎಂಬಷ್ಟರ ಮಟ್ಟಿಗೆ ಕನ್ನಡದ ಕೊಲೆ ಮಾಡುತ್ತಿದ್ದಾರೆ. ಇವರಿಗೆಲ್ಲ ಕನ್ನಡದ ಭಾಷೆಯ ಬಗೆಗಿನ ವ್ಯಾಮೋಹ ಒಂದಿಷ್ಟೂ ಇಲ್ಲವಲ್ಲವೇ...ಇದನ್ನು ಭಿತ್ತರಿಸುವ ವಾಹಿನಿಗಳು ಇಂದು ಕೇವಲ "ಹಣ ಮಾಡುವುದೇ ನಮ್ಮ ಮುಖ್ಯಗುರಿ" ಎಂಬುದನ್ನು ಪ್ರತಿಯೊಂದು ಪ್ರದರ್ಶನದಲ್ಲೂ ಸಾಬೀತುಪಡಿಸುತ್ತಿರುವುದು ಸ್ಪಷ್ಟ.

ನೇರವಾಗಿ ಕನ್ನಡದ ಕಗ್ಗೊಲೆ ಮಾಡುತ್ತಿರುವ ಅಗ್ರಗಣ್ಯಸ್ಥಾನಕ್ಕೆ ಸಿಗುವ ಪ್ರಮುಖ ಮಾಧ್ಯಮವೆಂದರೆ ಇಂದಿನ ಖಾಸಗೀ ರೇಡಿಯೋಗಳು. ಖಾಸಗೀ ರೇಡಿಯೋಗಳಲ್ಲಿ ನಿರೂಪಣೆ ಮಾಡುವ ಮಂದಿ ಅದ್ಯಾವ ಭ್ರಮೆಯನ್ನಿಟ್ಟುಕೊಂಡಿರುತ್ತಾರೋ ಗೊತ್ತಿಲ್ಲ. ಅಚ್ಛ ಕನ್ನಡದಲ್ಲಿ ಮಾತನಾಡಿದರೆ ಅದೇನೋ ಅಸ್ಪೃಶ್ಯತೆ ಮೂಡುತ್ತದೆ ಎಂಬಂತೆ ಅತ್ತ ಆಂಗ್ಲಭಾಷೆಯೂ ಅಲ್ಲ ಇತ್ತ ಕನ್ನಡವೂ ಅಲ್ಲ. ಅದೇನೋ ವಿಚಿತ್ರವಾದ ಕನ್ನಡ + ಆಂಗ್ಲ ಮಿಶ್ರವಾದ ಭಾಷೆಯೊಂದರ ಸೃಷ್ಟಿಗೆ ಕಾರಣರಾಗಿದ್ದಾರೆ.

ಅದು "ಮಿಲನ" ಎಂಬ ಕನ್ನಡ ಚಿತ್ರ ಇರಬೇಕು. ಅದರಲ್ಲಿ ಪುನೀತ್ ಇದೇ ರೀತಿ ಖಾಸಗೀ ರೇಡಿಯೋ ವಾಹಿನಿಯಲ್ಲಿ ನಿರೂಪಕ. ಆತ ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡ ನಾಡು ಭಾಷೆ ಸಂಸ್ಕೃತಿಯ ಬಳಕೆ, ಬೆಳೆಸುವಿಕೆಯ ಬಗ್ಗೆ ಹೇಳುತ್ತಾನೆ.ಕನ್ನಡದ ಬಗ್ಗೆ ಅಭಿಮಾನದ ಮಾತು ಹೇಳುತ್ತಾನೆ. ಅಂತಹ ಒಂದಷ್ಟು ರೇಡಿಯೋ(ಬಾನುಲಿ ನಿರೂಪಕರು) ನಿರೂಪಕರು ಇಂದು ಬರಬೇಕಾಗಿದೆ. ರೇಡಿಯೋ ಒಂದು ಪ್ರಭಲ ಮಾಧ್ಯಮ ಈ ಮಾಧ್ಯಮದಲ್ಲಿ ಕನ್ನಡದ ಕೊಲೆಯಾಗುವ ಬದಲಾಗಿ ಕನ್ನಡದ ಸಮರ್ಪಕ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಯೋಚಿಸುತ್ತಿರುವಾಗ ಸರಕಾರಿ ರೇಡಿಯೋ ಅಂದರೆ ಆಕಾಶವಾಣಿ ಉಲ್ಲೇಖಿಸಲು ಇಷ್ಟಪಡುತ್ತೇನೆ. ಅಲ್ಲಿ ಭಾಷೆಯನ್ನು ದುಡಿಸಿಕೊಳ್ಳುವ ರೀತಿಯನ್ನು ಖಾಸಗೀ ರೇಡಿಯೋ ನಿರೂಪಕರು ಅರ್ಧೈಸಿಕೊಳ್ಳಬೇಕು. ಇಂದಿನ ನವ ಮಾಧ್ಯಮ (ವೆಬ್ ಸೈಟ್) ಅಂತರ್ಜಾಲ ಮಾಧ್ಯಮಗಳೂ ಕನ್ನಡವನ್ನು ಉಳಿಸುವತ್ತ ಚಿಂತನೆ ನಡೆಸುತ್ತಿವೆ.ಕನ್ನಡದಲ್ಲಿ ಸಾಕಷ್ಟು ಅಂತರ್ಜಾಲ ಮಾಧ್ಯಮಗಳಿವೆಯಾದರೂ ಅವುಗಳಲ್ಲಿಯೂ ಲಿಪಿದೋಷಗಳು ಕಂಡುಬರುತ್ತಿವೆ.

ಮಾಧ್ಯಮಗಳ ಸಾಲಿಗೆ ಸೇರುವ ಚಲನಚಿತ್ರಗಳತ್ತ ಅವಲೋಕಿಸಹೊರಟರೆ ಅಲ್ಲೂ ಕನ್ನಡದ ವಿಕೃತ ಬಳಕೆಯಾಗುತ್ತಿದೆ. ಆಂಗ್ಲ ಭಾಷಾ ಮಿಶ್ರಿತ ಕನ್ನಡವನ್ನು ಹೇಳುವ ಪರಿಪಾಠ ನಾವು ಗಮನಿಸಬಹುದು. ಸಿನೆಮಾ ತಾರೆಯರೆಲ್ಲರೂ ಮುಖ್ಯವಾಗಿ ನಟಿಯರು ಹುಟ್ಟುತ್ತಲೇ ಆಂಗ್ಲಭಾಷೆಯಲ್ಲೇ ಅಳುತ್ತಾ ಹುಟ್ಟಿರುತ್ತಾರೆಯೋ ಎಂಬ ಸಂದೇಹ ಮೂಡುವುದು ಸಹಜ. ಯಾಕೆಂದರೆ ಯಾವುದೇ ಕನ್ನಡ ಭಾಷೆಯ ನಟಿಯರು ಅಚ್ಛಕನ್ನಡದಲ್ಲಿ ಮಾತನಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡಿರುವುದನ್ನು ಮೇಲ್ನೋಟಕ್ಕೆ ಕಾಣುವುದು ವಿರಳ. ತನ್ನ ಮಾತಿನುದ್ದಕ್ಕೂ ಸೋ...ಬಟ್, ಯಸ್... ಮೊದಲಾದ ಠಸ್ ಪುಸ್ ಆಂಗ್ಲ ಪದಗಳು, ಅರ್ಧಂಬರ್ಧ ಆಂಗ್ಲ ವಾಕ್ಯಗಳು ...ಆದರೂ ಇವರೆಲ್ಲ ಕನ್ನಡವನ್ನು ಉಳಿಸುವ ಮಹಾನ್ ವ್ಯಕ್ತಿಗಳಾಗಿ "ಕನ್ನಡ ಸಮ್ಮೇಳನಗಳಲ್ಲಿ" ವೇದಿಕೆಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ!

ಕೇವಲ ಮಾಧ್ಯಮಗಳೆಂದರೆ ಮುದ್ರಣ, ವಿದ್ಯುನ್ಮಾನ, ನವ ಮಾಧ್ಯಮಗಳಷ್ಟೇ ಅಲ್ಲ ಅದಕ್ಕಿಂತಲೂ ಪರಿಣಾಮಕಾರಿಯಾಗಿರುವುದು ಜಾನಪದ ಮಾಧ್ಯಮಗಳು. ಇಂದಿನ ಯಕ್ಷಗಾನ, ರಂಗಭೂಮಿ, ಜಾನಪದ ಹಾಡುಗಳು ಇವೆಲ್ಲವೂ ಇಂದು ಭಾಷಾ ಬೆಳವಣಿಗೆಗೆ ಪೂರಕವಾದಂತಹ ಅತ್ಯಪೂರ್ವ ಕೊಡುಗೆಗಳನ್ನು ನೀಡುತ್ತಿವೆ ಎಂಬುದನ್ನು ಮರೆಯುವಂತಿಲ್ಲ. ಆದರೆ ಈ ಮಾಧ್ಯಮಗಳಲ್ಲೂ ಇಂದು ಪರ ಭಾಷಾ ಪ್ರಭಾವಗಳು ಅದರ ಗಾಳಿ ಬೀಸುತ್ತಿರುವುದು ಕಾಣಬಹುದು. ಯಾವುದೋ ಯಕ್ಷಗಾನವೊಂದರಲ್ಲಿ ಅರ್ಥಗಾರಿಕೆ ಸಂದರ್ಭದಲ್ಲಿ ಆಂಗ್ಲಪದಗಳ ಬಳಕೆಯಾಗುತ್ತಿರುವುದು, ಹರಿಕಥೆ ಮಾಡುವ ಸಂದರ್ಭದಲ್ಲಿ ಗೊತ್ತಿಲ್ಲದೆ ಆಂಗ್ಲಪದದ ನುಸುಳುವಿಕೆ! ಇದನ್ನು ನಾವು ಗಮನಿಸಬಹುದು.

ಅಲ್ಪಭಾಗದ ಜಗತ್ತನ್ನು ನೋಡಿ ನಾವು ಇಡೀ ಜಗತ್ತನ್ನೇ ನೋಡಿದ್ದೇವೆಂಬುದು ಇಂದಿನ ಪ್ರತಿಯೊಬ್ಬನ ಒಂದು ನಂಬಿಕೆಯಾಗಿದೆ. ಅದು ನನ್ನನ್ನೂ ಹೊರತುಪಡಿಸಿಲ್ಲ. ನಾವೆಷ್ಟೇ ತಿಳಿದುಕೊಂಡಿದ್ದರೂ ಅದರಾಜೆ ಇನ್ನೂ ಹತ್ತು ಪಟ್ಟು ಇದ್ದೇ ಇದೆ ಎಂಬ ಸತ್ಯ ನಮಗೆ ಗೊತ್ತಿರಬೇಕು. ಆ ಕಾರಣಕ್ಕೇ ಸಾಯುವ ತನಕವೂ ಕಲಿಯುವಿಕೆ ಇದೆ ಎಂಬುದು. ಕಲಿಯುವಿಕೆ ನಿರಂತರ ಪ್ರಕ್ರಿಯೆ. ಅದಕ್ಕೆ ನಾನು ನೀವು ಹೊರತಲ್ಲ. ನಾನೇನೋ ದೊಡ್ಡ ಅನ್ವೇಷಣೆ ಮಾಡಿದ್ದೇನೆ. ಇಡೀ ಸಮಾಜದಲ್ಲಿ ಹೊಸ ಕ್ರಾಂತಿ ಮಾಡಿದ್ದೇನೆಂಬಂತೆ ತೋರಿಸುವ ಪ್ರಯತ್ನ ಈ ಲೇಖನದ ಉದ್ದೇಶವಲ್ಲ. ಒಟ್ಟಾರೆಯಾಗಿ ಮಾಧ್ಯಮಗಳು ತಮ್ಮ ಭಾಷೆಯ ಬಗೆಗೆ ಪ್ರೇಮವನ್ನು ಹೊಂದಿರಬೇಕು. ಕನ್ನಡ ಭಾಷೆಯ ಮಾಧ್ಯಮಗಳು ಕನ್ನಡಕ್ಕೆ ನಿಜವಾದ ಒಂದು ನ್ಯಾಯವನ್ನು ಪರಿಣಾಮಕಾರಿಯಾಗಿ ನೀಡಬೇಕು. ಇತರ ಭಾಷೆಗಳಿಗೆ ಆಯಾಯ ಭಾಷೆಗಳಲ್ಲಿ ಮಾಧ್ಯಮಗಳಿರುವಾಗ ಕನ್ನಡದ ಮಾಧ್ಯಮಗಳು ಇತರೆ ಭಾಷೆಯ ಸ್ಥಾನವನ್ನು ತುಂಬುವ ಪ್ರಯತ್ನ ಮಾಡಬೇಕಾಗಿಲ್ಲ.

- ಹರೀಶ್ ಕೆ.ಆದೂರು.

2 comments:

jagadeesh said...

ಉತ್ತಮ ಪ್ರಯತ್ನ ನಿಮ್ಮದು.ನಮ್ಮ ಶುಭ ಹಾರೈಕೆಗಳು

Anonymous said...

naijate ide dhanyavadagalu

Post a Comment