ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸ್ವಾತಂತ್ರ್ಯೋತ್ಸವ ವಿಶೇಷ

ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಮುಖ್ಯವಾಗಿ ಕಾಣುವುದು ಪ್ರತಿಯೊಂದಕ್ಕೂ "ಉಪವಾಸದ"ಮೊರೆ ಹೋಗಿರುವ ನಮ್ಮ ರಾಜಕೀಯ ಮುಖಂಡರು, ಅವರ ಕರಾಳ ಮುಖಗಳು!. ಕೆಲವೊಂದು ಉಪವಾಸ, ನಿರಶನದ ಹಿಂದೆ ಅನೇಕ ಉದ್ದೇಶಗಳಿರಬಹುದು. ಆದರೆ ಸದುದ್ದೇಶಕ್ಕಿಂತಲೂ ಕೇವಲ ಪ್ರಚಾರದ ದೃಷ್ಟಿಯಿಂದಲೇ ಇಂದು "ಉಪವಾಸ" ಸತ್ಯಾಗ್ರಹಗಳು ನಡೆಯುತ್ತಿವೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು.
ಸ್ವಾತಂತ್ರ್ಯೋತ್ಸವದ ಈ ಶುಭಾವಸರದಲ್ಲಿ "ಉಪವಾಸಗಳಿರಲಿ" , "ಸತ್ಯಾಗ್ರಹಗಳಿರಲಿ" ಇಂದು ತಮ್ಮ ಉದ್ದೇಶಗಳನ್ನು ಮರೆತು ಕಲುಷಿತಗೊಳ್ಳುತ್ತಿವೆ ಎಂಬ ಕಹಿ ಸತ್ಯವನ್ನು ಕಷ್ಟವಾದರೂ ಅರಗಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಅನಾವರಣಗೊಳ್ಳುತ್ತಿದೆ.ಇದು ದುರ್ದೈವ!

ಏತನ್ಮಧ್ಯೆ ದೇಶದಲ್ಲಿ ಅನೇಕ ಪ್ರಮುಖ ಘಟನೆಗಳು ಉಪವಾಸ ಸತ್ಯಾಗ್ರಹದ ಸುತ್ತಲೇ ಇಂದು ಹೆಣೆದುಕೊಂಡಿವೆ. ಅಣ್ಣಾ ಹಜಾರೆ, ಬಾಬಾ ರಾಮ್ ದೇವ್ ಮೊದಲಾದವರಿಂದ ಹಿಡಿದು ಕುಮಾರ ಸ್ವಾಮಿಯ ತನಕವೂ ಉಪವಾಸ ಸತ್ಯಾಗ್ರಹವೆಂಬ ಅಸ್ತ್ರವನ್ನು ಬಳಸಿಕೊಂಡವರೇ ಅಧಿಕ.

ಇಂದು ಉಪವಾಸ ಸತ್ಯಾಗ್ರಹದ ಸದುದ್ದೇಶಗಳನ್ನೇ ಗಾಳಿಗೆ ತೂರಿ ದುರುದ್ದೇಶದಿಂದ ಈ ಸತ್ಯಾಗ್ರಹ ಎಂಬ ನಾಟಕವನ್ನಾಡುತ್ತಿರುವುದು ಅತ್ಯಂತ ವಿಷಾಧನೀಯ ಸಂಗತಿ.ಗಬ್ಬೆದ್ದು ಹೋದ ರಾಜಕೀಯ ಕ್ಷೇತ್ರವಂತೂ ಈ ಪವಿತ್ರ ಉಪವಾಸ ಸತ್ಯಾಗ್ರಹಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದೆ. ಇದರಿಂದಾಗಿ ನಿರಶನ ಸತ್ಯಾಗ್ರಹದ ಪ್ರಾಧಾನ್ಯತೆ ಕಳೆದು ಹೋಗತೊಡಗಿದೆ. ರಾಜಕೀಯ ದುರುದ್ದೇಶಕ್ಕೆ ನಡೆಸುವ ಸತ್ಯಾಗ್ರಹಗಳೇ ಇಂದು ದೊಡ್ಡ ಜಳವಳಿ ಅಥವಾ ಸತ್ಯಾಗ್ರಹ ಎಂಬ ಕುರುಡು ನಂಬಿಕೆ ಸಮಾಜದಲ್ಲಿ ಮೂಡತೊಡಗಿವೆ.ಇದು ಖಂಡನಾರ್ಹ.

ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರಿಂದಾಗಿ ಈ ಉಪವಾಸ ಸತ್ಯಾಗ್ರಹಕ್ಕೆ ಒಂದು ಅರ್ಥಪೂರ್ಣ ಇತಿಹಾಸ ಲಭ್ಯವಾಗಿದೆ. ಬ್ರಿಟಿಷರ ದಾಸ್ಯದಿಂದ ನಮ್ಮ ದೇಶವನ್ನು ಮುಕ್ತಿಗೊಳಿಸಲು ಸಾವಿರಾರು ದೇಶಭಕ್ತರು ಅನೇಕ ರೀತಿಯ ಹೋರಾಟ ನಡೆಸಿದ್ದಾರೆ. ಕೆಲವೊಂದು ಸಾತ್ವಿಕ ಹೋರಾಟವಾದರೆ ಇನ್ನುಕೆಲವು ತೀವ್ರ ಸ್ವರೂಪದ್ದು.


ಇಂತಹ ಹೋರಾಟದ ಫಲ ಇಂದು ದೇಶ ಬ್ರಿಟಿಷರಿಂದ ಮುಕ್ತಿಹೊಂದಿದೆ.ಈ ಶುಭ ದಿನವನ್ನು ಸ್ವಾತಂತ್ರ್ಯೋತ್ಸವವೆಂದು ಕರೆಯಲಾಗುತ್ತಿದೆ. ಇದು ವರ್ಷದಲ್ಲೊಂದು ಬಾರಿಯಾದರೂ "ನಾವು ಭಾರತೀಯರು -ನಾವು ಸ್ವತಂತ್ರರು" ಎಂಬ ಜಾಗೃತಿಯನ್ನು ಮತ್ತೆ ನಮ್ಮಲ್ಲಿ ಮೂಡಿಸುವ ಸುಧಿನ.ಈ ದಿನವನ್ನು ಕಾಶ್ಮೀರದಿಂದ ತೊಡಗಿ ಕನ್ಯಾಕುಮಾರಿಯ ತನಕವೂ ಅತ್ಯಂತ ಗೌರವದಿಂದ ಆಚರಿಸಲಾಗುತ್ತದೆ. ದೇಶ ಪ್ರೇಮ, ದೇಶ ಭಕ್ತಿ ನಮ್ಮಲ್ಲಿರಲಿ. ಕೀಳು ರಾಜಕೀಯ, ರಾಜಕಾರಣಕ್ಕೆ ಸತ್ಯಾಗ್ರಹಗಳು ಬೇಡ. ಬದಲಾಗಿ ಉತ್ತಮ ಸಮಾಜ ನಿರ್ಮಾಣದ ಕನಸು ಕಟ್ಟೋಣ...ದೇಶ ಕಟ್ಟೋಣ...

- ಸೌಮ್ಯ ಸಾಗರ.0 comments:

Post a Comment