ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ರಾಜ್ಯ - ರಾಷ್ಟ್ರ
ಗೋಕರ್ಣ: ನೂರು ಕಾನೂನುಗಳಿಂದ ತಪ್ಪಿಸಲು ಸಾಧ್ಯವಾಗದ ಕುಕೃತ್ಯವನ್ನು ಒಂದು ಪಾಪಭೀತಿ ತಡೆಯುತ್ತದೆ.ಅಂತಸ್ಸಾಕ್ಷಿಯಿಲ್ಲದ ಯಾವವ್ಯಕ್ತಿಯೂ ಇಲ್ಲ.ಸಾಮಾನ್ಯವಾಗಿ ತಾನು ಮಾಡಿದ ಪಾಪಪ್ರಜ್ಞೆಯು ವ್ಯಕ್ತಿಯನ್ನು ಕಾಡದೇ ಇರದು.ನಮ್ಮ ಪ್ರಾಚೀನರು ವ್ಯಕ್ತಿಯ ಅಭ್ಯುದಯ ಹಾಗೂ ಸಮಾಜದ ಸ್ವಾಸ್ಥ್ಯದ ಉದ್ದೇಶದಿಂದಲೇ ಹತ್ತು ಹಲವು ನಿಯಮಗಳನ್ನು ರೂಪಿಸಿ ಅವನ್ನು ಬದುಕಿನಲ್ಲಿ ಅಳವಡಿಸಿದರು.ಆದ್ದರಿಂದಲೇ ಹಿಂದಿನಕಾಲದಲ್ಲಿ ಇಂದು ನಾವು ಕಾಣುತ್ತಿರುವ ಸಮಾಜಘಾತುಕಕೃತ್ಯಗಳು ಸಂಭವಿಸುತ್ತಿರಲಿಲ್ಲ.


ಜನರಲ್ಲಿ ಪಾಪಭೀತಿ ಹಾಗೂ ಅದರಿಂದ ಉಂಟಾಗುವ ನರಕಭಯವು ಇದಕ್ಕೆ ಕಾರಣವಾಗಿತ್ತು.ಆ ಮನೋಭಾವವು ಮುಂದುವರೆದಿದ್ದರೆ ಇಂದು ಇಷ್ಟೊಂದು ಸಂಖ್ಯೆಯ ಆರರಕ್ಷಕರಾಗಲೀ,ರಕ್ಷಣಾವ್ಯವಸ್ಥೆಯಾಗಲೀ ಅಗತ್ಯವಿರುತ್ತಿರಲಿಲ್ಲ. ಮನುಷ್ಯನಾದವನಿಗೆ ತಾನುಮಾಡುವ ಕಾರ್ಯದಲ್ಲಿ ಧರ್ಮಪ್ರಜ್ಞೆ ಹಾಗೂ ಪಾಪಭೀತಿ ಅಗತ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾಗಿದ್ದ ರಾಮಕಥೆಯ ಶ್ರೀಕೃಷ್ಣಪರ್ವದ ಸಮಾರೋಪದಲ್ಲಿ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಈ ಲೋಕದಲ್ಲಿ ಹುಟ್ಟಿದವನಿಗೆ ಮರಣವು ನಿಶ್ಚಿತ.ಅದನ್ನು ತಪ್ಪಿಸಲು ಅಸಾಧ್ಯ.ಮೃತ್ಯುವೆಂದರೆ ಭಯಪಡಬೇಕಾಗಿಲ್ಲ. ಮರಣವು ಬೇರೊಂದು ಲೋಕಕ್ಕೆ ಬೇರೊಂದು ಪಾತ್ರಕ್ಕೆ ನಮ್ಮನ್ನು ಕರೆದೊಯ್ಯುವ ಮಿತ್ರ. ಹುಟ್ಟನ್ನು ಸಂತೋಷದಿಂದ ಸ್ವಾಗತಿಸುವಂತೆ ಸಾವನ್ನೂ ಸಂತೋಷದಿಂದ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು.ಯಮನೆಂದರೆ ಧರ್ಮರಾಜ.ಲೋಕದ ಎಲ್ಲ ಜೀವಿಗಳ ಪಾಪಪುಣ್ಯಗಳನ್ನು ಆಧರಿಸಿ ಅವರನ್ನು ಪರಿಶುದ್ಧರನ್ನಾಗಿ ಮಾಡುವ ಕಾಯಕವು ಆತನದು.ಪಕ್ಷಪಾತವಿಲ್ಲದೆ ಸಮಚಿತ್ತದಿಂದ ವರ್ತಿಸುವ ಯಮನೂ ಕೂಡಾ ಲೋಕನಿಯಮಕ್ಕೆ ಬದ್ಧ. ನಿಯಮ ಎಂಬ ಪದವು ಬಂದಿದ್ದೇ ಯಮನಿಂದ ಎಂದು ಹೇಳಿ ಪುರಾಣಗಳಲ್ಲಿ ವರ್ಣಿತವಾದ ವಿವಿಧ ನರಕಗಳು ಹಾಗೂ ಪಾಪಿಗಳು ಅನುಭವಿಸುವ ಶಿಕ್ಷೆಗಳನ್ನು ರಾಮಾಯಣದ ತಾತ್ವಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರು.ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ಎಂತಹವ್ಯಕ್ತಿಯೂ ಗೌರವಿಸಬೇಕಾದಂತಹ ಯಮನ ಅದ್ಭುತವ್ಯಕ್ತಿತ್ವವನ್ನು ತುಂಬ ರೋಚಕವಾಗಿ ನಿರೂಪಿಸಿದ್ದಾರೆ.


ರಾಮಾಯಣದ ಯಮನನ್ನು ಕಂಡರೆ ಯಾರಿಗೂ ಭಯಬರುವಂತಿಲ್ಲ.ಎಂದು ಹೇಳಿ ರಾವಣನು ಅಕಾಲಿಕವಾಗಿ ತಾನು ಸಾಯಬಾರದೆಂಬ ಉದ್ದೇಶದಿಂದ ಎಲ್ಲರಿಗೂ ಮೃತ್ಯುವಾದ ಯಮನನ್ನೇ ಗೆದ್ದುಬಿಟ್ಟರೆ ಮುಂದೆಂದೂ ತನಗೆ ಸಾವಿನಭಯವಿರದೆಂದು ಯಮಲೋಕದಮೇಲೆ ಧಾಳಿ ಮಾಡಿದ್ದನ್ನು ಹಾಗೂ ರಾವಣನನ್ನು ಸಂಹರಿಸಲು ಯಮ ಶಕ್ತನಾಗಿದ್ದರೂ ಬ್ರಹ್ಮದೇವರ ವರಕ್ಕೆ ಲೋಪಬರಬಾರದೆಂಬ ಒಂದೇ ಉದ್ದೇಶದಿಂದ ರಾವಣನನ್ನು ಕೊಲ್ಲದೆ ಬಿಟ್ಟನೆಂಬ ರಾಮಾಯಣದ ಪ್ರಸಂಗದ ಸಾಂಕೇತಿಕತೆಯನ್ನು ಹಾಗೂ ಅದರ ಅಂತರಾರ್ಥವನ್ನು ವಿವರಿಸಿ ನಮ್ಮ ಬದುಕಿನಲ್ಲಿ ಪಾಪಭೀತಿ ಹಾಗೂ ಧರ್ಮಪ್ರಜ್ಞೆ ಅತ್ಯಗತ್ಯ ಎಂದೂ ನುಡಿದರು.


ಪ್ರೇಮಲತಾ ದಿವಾಕರ್.ವಸುಧಾ ಶರ್ಮಾ , ಶ್ರೀಪಾದ ಭಟ್ ಸಂಧ್ಯಾ ಭಟ್ ಇವರ ಗಾಯನ,ಪ್ರಕಾಶರ ವೇಣುವಾದನ,ನರಸಿಂಹ ಮೂರ್ತಿಯವರ ಮೃದಂಗ,ಗೋಪಾಲಕೃಷ್ಣ ಹೆಗಡೆಯವರ ತಬಲಾ ವಾದನಗಳು ರಾಘವೇಂದ್ರ ಹೆಗಡೆಯವರ ಮರಳುಶಿಲ್ಪ ಗಣಪತಿ ನೀರ್ನಳ್ಳಿಯವರ ಆಶುಚಿತ್ರಗಳು ಕಲಾರಸಿಕರನ್ನು ಆಕರ್ಷಿಸಿದವು.

ಡಿ.ವಿ.ಶಿವರಾಮಯ್ಯನವರ ನಿರ್ದೇಶನದಲ್ಲಿ ವೈಶ್ರವಣಯಮಸಂಗ್ರಾಮ ಎಂಬ ರೂಪಕವು ಪ್ರಸ್ತುತವಾಯಿತು. ಖ್ಯಾತ ಕಲಾವಿದರಾದ ಶ್ರೀಪಾದ ಹೆಗಡೆ ಹಡಿನಬಾಳ, ವಿಷ್ಣು ಭಟ್ ಮೂರೂರು, ಜಿ.ಎಲ್.ಹೆಗಡೆ ಕುಮುಟಾ ಮೊದಲಾದ ಕಲಾವಿದರು ಈ ರೂಪಕದಲ್ಲಿ ಪಾಲ್ಗೊಂಡಿದ್ದರು.

ವರದಿ: ಸತ್ಯನಾರಾಯಣ ಶರ್ಮ


0 comments:

Post a Comment