ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

"ಈ ಕ್ಷಣ ನಾನು ನಿಮಗೇನಾದರೂ ಒಂದು ಕೋಟಿ ರೂಪಾಯಿ ಮೊತ್ತದ ನಗದನ್ನು ಕೊಟ್ಟರೆ ನೀವೇನು ಮಾಡುತ್ತೀರಿ?", ಬಚ್ಚನ್ ಸಾಹೇಬರ 'ಕೌನ್ ಬನೇಗಾ ಕರೋಡ್ ಪತಿ' ಕೆಲವು ವರ್ಷಗಳ ಹಿಂದೆ ಹೊಸದಾಗಿ ತೆರೆಗೆ ಬಂದಾಗ ಹುಟ್ಟಿಕೊಂಡ ಟೈಂ ಪಾಸ್ ಪ್ರಶ್ನೆಯಿದು. ಕೋಟಿ ಸಿಕ್ಕ ಅದೃಷ್ಟವಂತ ಜಾಹೀರಾತಿನ ಜಡಿಮಳೆಯ ನಡುವೆ ನಿಮಿಷಾರ್ಧದಲ್ಲಿ ಎಲ್ಲೋ ಮರೆಯಾಗಿದ್ದರೆ ಮೂರ್ಖರ ಪೆಟ್ಟಿಗೆಯ ಮುಂದೆ ಕಾಲಕಳೆಯುವ ತರಲೆಗಳಿಗೆ ಈ ಪ್ರಶ್ನೆ ಕೇಳುವುದರಲ್ಲಿ ಮತ್ತು ಉತ್ತರಿಸುವುದರಲ್ಲಿ ಏನೋ ಖುಷಿ. ಹಾಟ್ ಸೀಟ್, ಪ್ರಶ್ನೆಗಳ ಜುಗಲ್ ಬಂದಿ, ಬಚ್ಚನ್ ಸಾಹೇಬರ ಸಮ್ಮೋಹಕ ಗಡಸುದನಿ ಎಲ್ಲಾ ಹಾರಿಯೋಯಿತು ಈ ಕೋಟಿಯ ಕೋತಿ ಚೇಷ್ಟೆಯ ಮಧ್ಯೆ. ಒಂದು ಕೋಟಿಯನ್ನು ನಮ್ಮ ಕಣ್ಣ ಮುಂದೆಯೇ ಇಟ್ಟಂತೆ ಎಷ್ಟು ಯೋಚಿಸಿ ಉತ್ತರಿಸುತ್ತಿದ್ದೆವು ನಾವು. ಕೈಯಲ್ಲಿ ಹತ್ತರ ನೋಟು ಇದ್ದಾಗ ಸರಿಯಾಗಿ ಅದನ್ನು ಉಪಯೋಗಿಸಿಕೊಳ್ಳುತ್ತಿವೋ ಇಲ್ಲವೋ ಎಂಬುದನ್ನೂ ಇಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಕ್ಕಿಲ್ಲ.


ಇಷ್ಟೆಲ್ಲಾ ಯಾಕಾಗಿ ಹೇಳಬೇಕಾಯಿತೆಂದರೆ, ಮೊನ್ನೆ ನನ್ನ ಹಿತೈಷಿಯೊಬ್ಬರು ಹೀಗೆ ಕೇಳಿದರು ನನಗೆ, "ನೀವೊಬ್ಬ ವಿಐಪಿ ಸೆಲೆಬ್ರಿಟಿಯೆಂದು ಒಂದು ನಿಮಿಷ ಅಂದುಕೊಳ್ಳಿ. ಹೇಗನಿಸುತ್ತಿದೆ ನಿಮಗೆ? ಜನರನ್ನು ತನ್ನೆಡೆ ಸೆಳೆದುಕೊಳ್ಳಲು ನೀವೇನು ಮಾಡಬಯಸುತ್ತೀರಿ?". ಪ್ರಚಾರಕ್ಕಾಗಿ ಹಾತೊರೆಯುವ ಹಲವು ಸಾಮಾನ್ಯ ಮತ್ತು ಅಸಾಮಾನ್ಯರ ಬಗೆಗಿನ ಟೈಂ ಪಾಸ್ ಹರಟೆಯಲ್ಲಿ ನನ್ನೆಡೆಗೆ ತೂರಿ ಬಂದ ವಾಗ್ಬಾಣವಿದು. ಏನೂ ತಿರುಳಿಲ್ಲದ ಬಾಲಿಶ ಒಣಪ್ರಶ್ನೆಯಾದರೂ ನಿಮಿಷಾರ್ಧಕ್ಕೆ ಏನೆಂದು ಉತ್ತರಿಸಲೂ ಆಗದೆ ನನ್ನನ್ನು ಈ ಪ್ರಶ್ನೆ ಮೂಕನನ್ನಾಗಿಸಿತು. ಕಾರಣವೇನೆಂಬುದನ್ನು ಸಮರ್ಥನೀಯವಾಗಿ ನಾನು ಹೇಳುವುದು ಕಷ್ಟವಾದರೂ ಸೆಲೆಬ್ರಿಟಿ ಮತ್ತು ಪಬ್ಲಿಸಿಟಿ ಎಂಬ ಒಂದು ನಾಣ್ಯದ ಎರಡು ಮುಖಗಳ ಸ್ಪಷ್ಟ ವ್ಯಾಖ್ಯಾನ, ಇನ್ನೂ ತನಗೆ ಅರಿವಾಗದ ಸತ್ಯ ಎಂದು ಖಂಡಿತವಾಗಿಯೂ ಇಲ್ಲಿ ಹೇಳಬಲ್ಲೆ.

ಮೊದಲಾಗಿ ಹೇಳುವುದಾದರೆ ಯಾರನ್ನು ಸೆಲೆಬ್ರಿಟಿಯೆಂದು ಕರೆಯುವುದೇ ಒಂದು ದೊಡ್ಡ ಸಮಸ್ಯೆ. ತೊಂಭತ್ತು ಪ್ರತಿಶತ ಭಾರತೀಯರು ತಮಗೆ ಗೊತ್ತಿರುವಂತೆ ಕೆಲ ಚಲನಚಿತ್ರ ನಟ-ನಟಿಯರನ್ನು, ಕ್ರಿಕೆಟ್ ಪಟುಗಳನ್ನು ಮತ್ತು ಕೆಲ ರಾಜಕಾರಣಿಗಳನ್ನು ತಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಸೆಲೆಬ್ರಿಟಿಯೆಂಬ ಹಣೆಪಟ್ಟಿ ಅಂಟಿಸಿ ತಮಗಿಂತ ಒಂದು ಮಣ ಮೇಲಿನ ಆಸನದಲ್ಲಿ ಸಾರ್ವಕಾಲಿಕವಾಗಿ ಪ್ರತಿಷ್ಠಾಪಿಸಿದ್ದಾರೆ. ಇನ್ನುಳಿದ ಪ್ರತಿಭಾವಂತ ಮಹಾಶಯರಿಗೆ, ಆರೋಗ್ಯದ ಕಾರಣದಿಂದ ನೇಪಥ್ಯಕ್ಕೆ ಸರಿದ ಮಾಜಿ ಸೆಲೆಬ್ರಿಟಿಗಳಿಗೆ, ಅದೃಷ್ಟದ ಬಲವಿಲ್ಲದೆ ತೆರೆಮರೆಗೆ ಸೇರಿದ ಎಲೆಮರೆಕಾಯಿಗಳಿಗೆ, ಮಿಂಚಿನಂತೆ ಒಮ್ಮೆ ಮಿಂಚಿ ಮಿಂಚಿನಷ್ಟೇ ವೇಗವಾಗಿ ಮಾಯವಾದ ಸೆಲೆಬ್ರಿಟಿಗಳಿಗೆ ಹೀಗೆ ಎಲ್ಲರಿಗೂ ಇದರ ಬಗ್ಗೆ ಒಂದು ಹೇಳಲಾರದ ಅಸಮಧಾನವಿದೆ. ಜೀವನದ ಹಾವು ಏಣಿಯ ಆಟದಲ್ಲಿ ಈ "ಇಮೇಜ್" ಎನ್ನುವ ಒಂದು ಗುಂಗು ಹೇಗೋ ಸ್ವಾಭಾವಿಕವಾಗಿ ಬೇರು ಬಿಟ್ಟುಹೋಗಿದೆ. ಹೀಗೆ ಪ್ರಚಾರವೆಂಬ ಸಣ್ಣ ಕ್ಷಣಿಕ ಆಶ್ರಯವನ್ನು ಬಯಸಿ ತನ್ನ ಇರುವಿಕೆಯನ್ನು ತೋರಿಕೊಳ್ಳಬಯಸುವ ಈ ಕಸರತ್ತು ಕೊಂಚ ಹಾಸ್ಯಾಸ್ಪದವಾದರೂ ತನ್ನದೇ ಆದ ಪ್ರಾಮುಖ್ಯತೆಯನ್ನು ಇದು ಉಳಿಸಿಕೊಂಡಿರುವ ಪರಿಯಂತೂ ವಿಶಿಷ್ಟ.


ಯಾರಿಗೆ ಪ್ರಚಾರ ಬೇಡ ಹೇಳಿ! ಮಾಧ್ಯಮ ವಿದ್ಯಾರ್ಥಿಯೊಬ್ಬ ಕ್ಯಾಮೆರಾ ಬೆಳಕಿನ ಬಿಸಿಗೆ ಬೆವತು ಹೋದರೂ ನಾನು ಟಿ.ವಿ ನಿರೂಪಕನಾಗಬಯಸುತ್ತೇನೆ ಎನ್ನುತ್ತಾನೆ. ನಾಲ್ಕಾರು ಪುಸ್ತಕಗಳನ್ನೋದಿ ಅಲ್ಲಲ್ಲಿಂದ ಕೆಲ ವಾಕ್ಯಗಳನ್ನು ಪೋಣಿಸಿ ಒಬ್ಬ ಓದುಗ ಏನೋ ಬರೆಯಲಾರಂಭಿಸಿ ದಿನಬೆಳಗಾಗುವುದರ ಮೊದಲೇ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ತನ್ನನ್ನು ಕಾಣಲು ಹಾತೊರೆಯುತ್ತಾನೆ. ಲೆಕ್ಕವಿಲ್ಲದಷ್ಟು ಮಂದಿ ಸಿನಿಮಾ ಜಗತ್ತಿನ ನಾಯಕ ನಾಯಕಿಯರಾಗಿ ಮಿಂಚುವ ಕನಸು ಕಂಡು ಎಲ್ಲಾ ಬಿಟ್ಟು ಸಿನಿಮಾ ಜಗತ್ತಿಗೆ ಕಾಲಿರಿಸಿ ಜೂನಿಯರ್ ಕಲಾವಿದರಾಗಿ ಹಿನ್ನೆಲೆಯಲ್ಲಿ ಕುಣಿಯುತ್ತಾ ಇದ್ದೂ ಇಲ್ಲವಾಗುತ್ತಾರೆ. ಪ್ರಾದೇಶಿಕ ಸಮಾಚಾರದ ಪತ್ರಿಕಾ ಗೋಷ್ಠಿಗಳಲ್ಲಿ ಏನೋ ಬಡಬಡಿಸುವ ಶಾಸಕನ ಸುತ್ತಲೂ ಹಿಂಬಾಲಕರು ಸುತ್ತುವರಿದು ತಾವೂ ಶಾಸಕರಷ್ಟೇ ಪ್ರಮುಖರೆಂದು ಕ್ಯಾಮೆರಾಗೆ ಮೂಗು ತೋರಿಸುತ್ತಾರೆ.

ಎಲ್ಲಿಂದಲೋ ಎರವಲು ಪಡೆದ, ತಲೆಬುಡವಿಲ್ಲದ ಜೋಕನ್ನು ಫೇಸ್ ಬುಕ್ ನಂತಹ ಸೋಷಿಯಲ್ ನೆಟ್ ವರ್ಕಿಂಗ್ ವಾಲ್ ಮೇಲೆ ಬರೆದು ಒಬ್ಬ ನೆಟ್ಟಿಗ ಅದನ್ನು ಎಷ್ಟು ಜನ ಇಷ್ಟಪಟ್ಟರು ಎಂಬುದನ್ನು ಕೆಲಸದ ನಡುವೆಯೂ ದಿನಕ್ಕೆ ಹತ್ತು ಬಾರಿ ನೋಡುತ್ತಾನೆ. ಇನ್ನು ಸೆಲೆಬ್ರಿಟಿಯೊಬ್ಬ ತಮ್ಮೂರಿಗೆ ಬಂದನೆಂದರೆ ಆಕಾಶದಿಂದ ಭಗವಂತನೇ ಇಳಿದು ಬಂದನೇ ಎಂಬಂತೆ ಅಭಿಮಾನಿಗಳು ಸೆಲೆಬ್ರಿಟಿಯೊಂದಿಗೆ ನಿಂತು ಒಂದು ಫೋಟೋ ತೆಗೆದುಕೊಳ್ಳಲೋ, ಕೈ ಕುಲುಕಲೋ ಹಾತೊರೆಯುತ್ತಾರೆ. ಆ ಮಹಾನುಭಾವನ ಹಸ್ತಾಕ್ಷರವನ್ನು ವರ್ಷಗಳ ಕಾಲ ಸಂರಕ್ಷಿಸಿಡುತ್ತಾರೆ. ಒಂದು ಸಾಮಾನ್ಯ ಮರದ ಕೊರಡು ಸಚಿನ್ ತೆಂಡುಲ್ಕರ್ ಹಸ್ತಸ್ಪರ್ಷವಾದೊಡನೆಯೇ ಹೂವಿನೊಂದಿಗೆ ದಾರವೂ ದೈವತ್ವವನ್ನು ಪಡೆದಂತೆ ಕ್ಷಣಾರ್ಧದಲ್ಲಿ ಬಹುಕೋಟಿ ಬೆಲೆಬಾಳುತ್ತದೆ. ಹೀಗೆ ಸಾಮಾನ್ಯ-ಅಸಾಮಾನ್ಯ, ಪ್ರಖ್ಯಾತ-ಕುಖ್ಯಾತ, ಮಾನವ-ಪಶುವೆಂಬ ಜಂತುಭೇದವಿಲ್ಲದೆ ಎಲ್ಲರೂ ಪ್ರಚಾರ ಪ್ರಿಯರು. ಪ್ರಚಾರ ದೇವೋಭವ!

ಇನ್ನು ಪ್ರಚಾರಕ್ಕಾಗಿ ಬಳಸುವ ಒಂದೊಂದು ನೆಪಗಳೂ, ಸನ್ನಿವೇಶಗಳು ಒಂದಕ್ಕಿಂತ ಒಂದು ಅದ್ಭುತ. ಅತ್ತ ಸಂಪೂರ್ಣ ನಟಿಯೂ ಅಲ್ಲದ ಇತ್ತ ಮಾಡೆಲ್ ಆಗಿ ನೆಲೆಯನ್ನೂ ಉಳಿಸಿಕೊಳ್ಳದ ರಾಖಿ ಸಾವಂತ್ ಮುಂಜಾನೆ ರಾಹುಲ್ ಗಾಂಧಿಯೇ ನನ್ನ ಕನಸಿನ ರಾಜಕುಮಾರ ಎಂದು ಹೇಳಿ ಸಂಜೆಯಾಗುವ ಹೊತ್ತಿಗೆ ಯೋಗಗುರು ಬಾಬಾ ರಾಮದೇವ ಸಕ್ಕತ್ ಹಾಟ್ ಎಂದು ಹಲ್ಲು ಕಿರಿಯುತ್ತಾಳೆ. ಅರುಂಧತಿ ರಾಯ್ರಂತಹ ಸೃಜನಶೀಲ ಲೇಖಕರು ಅಲ್ಲೊಮ್ಮೆ ಇಲ್ಲೊಮ್ಮೆ ಕೋಮುವಾದ, ಸಲಿಂಗಕಾಮಿ ವಿವಾಹ ಹೀಗೆ ನೆನೆಗುದಿಗೆ ಬಿದ್ದಿದ್ದ ವಿವಾದಕ್ಕೀಡಾಗುವ ವಿಷಯದ ಬಗ್ಗೆಯೇ ಮಾತನಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ.

ರಾಮ್ ಗೋಪಾಲ್ ವರ್ಮಾರಂತಹ ಪ್ರತಿಭಾವಂತ ನಿರ್ದೇಶಕರು ತಮಗೆ ಸಂಬಂಧವೇ ಇಲ್ಲದ ಕೊಲೆ ಕೇಸು, ಫ್ಯಾಶನ್ ಷೋಗಳ ಬಗ್ಗೆ ಮಾತನಾಡಿ ಪ್ರಚಾರದೊಂದಿಗೆಯೇ ಅಧಿಕ ಪ್ರಸಂಗಿ ಎನಿಸಿಕೊಳ್ಳುತ್ತಾರೆ. ಆಮಿರ್ ಖಾನರಂತಹ ಬಹುಮುಖ ಪ್ರತಿಭೆ ದೆಲ್ಲಿ-ಬೆಲ್ಲಿಯಂತಹ ಚಿತ್ರ-ವಿಚಿತ್ರವನ್ನು ಜನರ ಮುಂದಿರಿಸಿ ಕುಟುಂಬವೊಂದು ಒಟ್ಟಾಗಿ ಕುಳಿತು ಸಿನಿಮಾ ನೋಡಲೂ ಕೂಡ ಹಿಂದು ಮುಂದು ನೋಡಬೇಕಾದ ಪರಿಸ್ಥಿತಿಯನ್ನು ಸಾದರಪಡಿಸುತ್ತಾರೆ. ನಟಿ ಕಿಮ್ ಕಾರ್ಡಿಶಿಯನ್ ಅದ್ದೂರಿ ಮದುವೆ ಆಮಂತ್ರಣ ಪತ್ರಿಕೆ ಒಂದೆಡೆ ರಾರಾಜಿಸಿದರೆ ಗಾಯಕಿ ಜೆನ್ನಿಫರ್ ಲೋಪೆಝ್ ಮತ್ತು ಆಂಟನಿಯ ಮುರಿದು ಬಿದ್ದ ಸಂಬಂಧವೂ ಒಂದು ಸುದ್ದಿಯಾಗುತ್ತದೆ. ಆಸೀಸ್ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ತಮ್ಮ ವಿಕೆಟ್ ಉದುರಿಸಿದ ಅದ್ಭುತ ಅಂಕಿಅಂಶಗಳಿಂದ ವಿಸ್ಡನ್ ನಂತಹ ಕ್ರಿಕೆಟ್ ಪತ್ರಿಕೆಗಳಿಗಿಂತಲೂ ನಟಿ ಎಲಿಜಬೆತ್ ಹರ್ಲ್ ಜೊತೆಗಿನ ಒಡನಾಟದಿಂದ ಟಾಬ್ಲಾಯ್ಡ್ ಗಳಲ್ಲಿ ತುಸುಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತಾರೆ.

ಕೆಲವೇ ವರ್ಷಗಳ ಹಿಂದೆ ನಡೆದ ಹಾಲಿವುಡ್ ನಟಿ ಎಲಿಜಬೆತ್ ಮತ್ತು ಭಾರತೀಯ ಮೂಲದ ಉದ್ಯಮಿ ಅರುಣ್ ನಾಯರ್ ಜೋಡಿಯ ಕಂಡುಕೇಳದಂತಹ ಅದ್ದೂರಿ ಮದುವೆ ಕೇಟ್-ರಾಜಕುಮಾರ ಪ್ರಿನ್ಸ್ ವೈಭವೋಪೇತ ಮದುವೆಯ ಸಮಾರಂಭದ ಹಿಂದೆ ಮುರಿದುಬಿದ್ದ ಸಂಬಂಧದಂತೆಯೇ ಮಂಕಾಗುತ್ತದೆ. ಕೆಂಪು ಕಪ್ಪು ಮಣ್ಣೆಂಬ ಭೇದವಿಲ್ಲದೆ ಒಂದಾದರ ನಂತರ ಇನ್ನೊಂದು ಪ್ರಶಸ್ತಿಯ ಗರಿಯನ್ನು ಮುಡಿಗೇರಿಸುತ್ತಾ ಆಂಡ್ರೆ ಅಗಾಸಿ, ರಫೆಲ್ ನಡಾಲರಂತಹ ಆಟಗಾರರು ತಮ್ಮ ಆಕ್ರಮಣಶೀಲ ಆಟದಿಂದ ಮೈನವಿರೇಳಿಸಿದರೆ, ರೋಜರ್ ಫೆಡರರ್ ನಂತಹ ಶಾಂತಮೂರ್ತಿಯೂ ತಾನೂ ಏನೂ ಕಮ್ಮಿಯಿಲ್ಲವೆಂಬಂತೆ ಸಡ್ಡುಹೊಡೆದು ನಿಂತು ಚಾಕಚಕ್ಯತೆಯ ಆಟದಿಂದ ಮನಸೂರೆಗೊಳ್ಳುತ್ತಾರೆ.

ಪಾಕಿಸ್ತಾನದ ವಿದೇಶ ಮಂತ್ರಿ ಹೀನಾ ರುಬೀನಾ ಖಾನ್ ಭಾರತ-ಪಾಕಿಸ್ತಾನದ ಅಂತಾರಾಷ್ಟ್ರೀಯ ಸಾಮರಸ್ಯಕ್ಕಿಂತಲೂ ತಮ್ಮ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಹ್ಯಾಂಡ್ ಬ್ಯಾಗ್ ನಿಂದಲೋ, ಹೈ ಹೀಲ್ಡ್ ಚಪ್ಪಲಿಯ ಗ್ಲಾಮರ್ನಿಂದಲೋ ಹೆಡ್ ಲೈನ್ ನಲ್ಲಿ ಗುರುತಿಸಿಕೊಳ್ಳುತ್ತಾರೆ. ಜಗತ್ತಿನಾದ್ಯಂತ ಪಸರಿಸಿದ ಸ್ಲಟ್ ವಾಕ್ ಭಾರತಕ್ಕೆ ಬಂದು ಸಂಚಲನವನ್ನುಂಟುಮಾಡಿದರೂ ಭಾರತ-ನೇಪಾಳ ಗಡಿಭಾಗದಲ್ಲಿ ನಡೆದ ಅಮಾಯಕ ಬೌದ್ಧ ಭಿಕ್ಕುವಿನ ಮೇಲೆ ನಡುರಾತ್ರಿಯಲ್ಲಿ ನಡೆದ ಬಸ್ ಚಾಲಕ ಮತ್ತು ಕಂಡಕ್ಟರ್ ನಡೆಸಿದ ಬರ್ಬರ ಅತ್ಯಾಚಾರ ಹೇಳಹೆಸರಿಲ್ಲದಂತೆ ಮೂಲೆ ಸೇರುತ್ತದೆ. ಅಣ್ಣಾ ಹಜಾರೆಯ ಸತ್ಯಾಗ್ರಹದ ನಡುವೆಯೂ ಲೋಕಪಾಲ್ ಸಮಿತಿಯನ್ನು ಸೇರಿ ಅವರೊಂದಿಗೆ ಪ್ರಚಾರ ಗಿಟ್ಟಿಸಿಕೊಳ್ಳಲು ಕಾಣದ ಮುಖಗಳು ಪ್ರಯತ್ನಿಸುತ್ತವೆ. ಪರಲೋಕ ಸೇರಿದರೂ ಎಮ್. ಎಫ್. ಹುಸೇನರ ತೈಲಚಿತ್ರಗಳ ಬಗ್ಗೆ ಪತ್ರಿಕೆಯಲ್ಲಿ ಜರಿಯುತ್ತಾ ಕೆಲ ವಿಮರ್ಶಕರು ಪತ್ರಿಕೆಗಳಲ್ಲಿ ತಾವೇ ಶ್ರೇಷ್ಠರೆಂದು ಮೂಗು ತೂರಿಸುತ್ತಾರೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಪುಟಗಳಷ್ಟು ಈ ಬಿಟ್ಟಿ ಪ್ರಚಾರದ ಗುಂಗು ಹನುಮಂತನ ಬಾಲದಂತೆ ಮುಂದುವರಿಯುತ್ತದೆ.

ಈ ಬಿಟ್ಟಿ ಪ್ರಚಾರ ಹಲವು ಬಾರಿ ಐಶಾರಾಮಿ ಜೀವನ ಶೈಲಿಯ ಶೋಕಿಗಳಲ್ಲೂ, ತಮ್ಮ ವಿಚಿತ್ರ ನಡವಳಿಕೆಗಳಿಂದಲೂ ದಶಕಗಳಿಂದ ದೇಶ ಕಾಲವೆಂಬ ಭೇದವಿಲ್ಲದೆ ಹರಿದುಬಂದಿದೆ. ಮೂಕಿ ಹಾಸ್ಯಚಿತ್ರಗಳ ದಂತಕಥೆ ಚಾರ್ಲಿ ಚಾಪ್ಲಿನ್ ನೋಡಲು ಸಣಕಲು ಜೋಕರ್ ನಂತಿದ್ದರೂ ಮಹಾ ಸ್ತ್ರೀಲೋಲನಾಗಿದ್ದ. ಪೆಪ್ಸಿ ಕಂಪೆನಿಯ ಜಾಹೀರಾತೊಂದರ ಚಿತ್ರೀಕರಣದಲ್ಲಿ ನಡೆದ ಸಣ್ಣ ಬೆಂಕಿಯ ದುರ್ಘಟನೆಯ ನೆಪವನ್ನಿಟ್ಟು ಪಾಪ್ ದೊರೆ ಮೈಕಲ್ ಜಾಕ್ಸನ್ ಕೇವಲ ಬಿಟ್ಟಿ ಪ್ರಚಾರಕ್ಕಾಗಿ ಕಂಪೆನಿಯ ವಿರುದ್ಧ ಕೇಸು ದಾಖಲಿಸಿ ಮಿಲಿಯನ್ ಗಟ್ಟಲೆ ಪರಿಹಾರಧನವನ್ನು ಎಂಭತ್ತರ ದಶಕದಲ್ಲೇ ಪಡೆದುಕೊಂಡಿದ್ದ. ಒಡಿಸ್ಸಿ ನೃತ್ಯಗಾರ್ತಿ ಪ್ರೊತಿಮಾ ಬೇಡಿ ತನ್ನ ಹರೆಯದ ವಯಸ್ಸಿನಲ್ಲಿ ತನ್ನ ಮಾದಕ ದವ್ಯಗಳ ವ್ಯಸನದಂಥಾ ದುಶ್ಚಟಗಳಿಂದಲೇ ಕುಖ್ಯಾತಿಯನ್ನು ಗಳಿಸಿ ತನ್ನ ವಿಫಲ ಮಾಡೆಲಿಂಗ್ ಜಗತ್ತಿಗೆ ಕಾಲಿರಿಸಿದ್ದರು.

ಗಾಯಕಿ ಲೇಡಿ ಗಾಗಾ ತಮ್ಮ ವಿಚಿತ್ರ ಉಡುಗೆ ತೊಡುಗೆಗಳಿಂದಲೇ ಸುದ್ದಿಯಾಗುತ್ತಾರೆ. ಇನ್ನೋರ್ವ ಗಾಯಕಿ ಲಿಂಡ್ಸೇ ಲೋಹನ್ ಪೀಳಿಗೆ ಮುಗಿಯದಷ್ಟು ಸಂಪತ್ತು ಕೂಡಿಹಾಕಿದ್ದರೂ ಯಾವುದೋ ಸಣ್ಣ ಪುಟ್ಟ ವಸ್ತುಗಳನ್ನು ಅಂಗಡಿಗಳಿಂದ ಕದ್ದು ಕೋರ್ಟು ಮೆಟ್ಟಿಲೇರುತ್ತಾರೆ. ಓಪ್ರಾ ವಿನ್ಫ್ರೇ ತನ್ನ ಅಸಾಮಾನ್ಯ ಮಾತಿನ ಕೌಶಲ್ಯದಿಂದಲೂ, ಸೃಜನಶೀಲ ಕಾರ್ಯಕ್ರಮಗಳಿಂದಲೂ ಯಾರಿಗೂ ತನಗೂ ಬೇಜಾರಾಗದ ರೀತಿಯಲ್ಲಿ ಸಕಾರಾತ್ಮಕ ಪ್ರಭೆಯಲ್ಲಿ ಮನೆಮಾತಾಗುತ್ತಾರೆ. ಗದ್ದಾಫಿಯಂತಹ ಸರ್ವಾಧಿಕಾರಿ ತನ್ನ ಸುಂದರಿ ಅಂಗರಕ್ಷಕಿಯರೊಂದಿಗೆ ಲಲ್ಲೆ ಹೊಡೆದು ವರ್ಣರಂಜಿತ ಜೀವನ ಶೈಲಿಯ ಗುಸುಗುಸು ನೈಜ ಸುದ್ದಿ ಅಚ್ಚರಿ ಮೂಡಿಸುವುದರ ಜೊತೆಯೇ ಒಸಾಮಾ ಉಳಿದುಕೊಂಡಿದ್ದ ಮನೆಯ ಕೋಣೆಗಳಲ್ಲಿ ಪೋರ್ನೋಗ್ರಫಿಯ ಸಿ.ಡಿಗಳು ಪತ್ತೆಯಾಗುತ್ತವೆ. ಸ್ವಾಮಿ ನಿತ್ಯಾನಂದ ಮಾನ ಮರ್ಯಾದೆ ಮೂರಾಬಟ್ಟೆಯಾದರೂ ಆಶ್ರಮಗಳಲ್ಲಿ ತನ್ನ ಭಕ್ತರಿಗೆ ಅಭಯವನ್ನು ಹಸನ್ಮುಖಿ ಭಾವ ಮುದ್ರೆಯಲ್ಲಿ ನೀಡುತ್ತಾ ಏನೂ ಆಗಲೇ ಇಲ್ಲದಂತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾನೆ. ಎಲ್ಲಾ ಮುಗಿದರೂ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಯಾಕೋ ಎನೋ ಜೋಕರ್ ರೂಪದಲ್ಲೇ ಉಳಿದುಹೋಗುತ್ತಾರೆ. ಲೀವಿಂಗ್ ರಿಲೇಷನ್ ಶಿಪ್ ನಲ್ಲೇ ದಿನ ದೂಡುತ್ತಿರುವ ಬ್ರಾಡ್ ಪಿಟ್ ಮತ್ತು ಆಂಜೆಲಿನಾ ಜೋಲಿಯ ಆರು ಮಕ್ಕಳೊಂದಿಗಿನ ತುಂಬಿದ ಕುಟುಂಬ ಗಣೇಶನ ಮದುವೆಯ ಆಧುನಿಕ ಉದಾಹರಣೆಯಂತೆ ಚಿತ್ರಿಸಿಕೊಳ್ಳುತ್ತದೆ. ದಶಕಗಳ ಸರಣಿ ಸಾಧನೆಯ ಹೊರತಾಗಿಯೂ ಒಂದು ತಪ್ಪಿನ ಬೆಲೆತೆತ್ತು ಗಾಲ್ಫ್ ವೀರ ಟೈಗರ್ ವುಡ್ ಮಾರುಕಟ್ಟೆಯಲ್ಲಿ ತನ್ನ ಇಮೇಜ್ ಉಳಿಸಿಕೊಳ್ಳಲು ಹೆಣಗಾಡುತ್ತಾರೆ. ಕೆಲವರಿಗೆ ಪ್ರಚಾರದ ಅಗತ್ಯ ಜೀವಜಲದಷ್ಟಿದ್ದರೆ ಇನ್ನು ಕೆಲವರಿಗೆ ಕಾಣಿಕೆಯಾಗಿ ಬೇಡವೆನ್ನುವಷ್ಟು ಸಾಕಾಗಿಹೋಗಿದೆ. ಅಂತಹ ಮಾಯೆಯಿದು!

ವಿಶ್ವವಿಖ್ಯಾತ ಟೆನ್ನಿಸ್ ಆಟಗಾರ ಆಂಡ್ರೆ ಅಗಾಸಿ ತನ್ನ ಆತ್ಮಕಥೆ "ಓಪನ್" ಕೃತಿಯಲ್ಲಿ ಹೀಗೆ ಬರೆಯುತ್ತಾರೆ. "ಇಷ್ಟೆಲ್ಲಾ ಪ್ರಶಸ್ತಿಯ ಗರಿ, ಪ್ರಚಾರದ ಭರಾಟೆ ಇವೆಲ್ಲಾ ಹೇಗನಿಸುತ್ತದೆ ಎಂದು ಪತ್ರಕರ್ತ ಸಂದರ್ಶನವೊಂದರಲ್ಲಿ ನನ್ನ ಬಳಿ ಕೇಳುತ್ತಾನೆ. ಬಹಳ ಖುಷಿಯಾಗುತ್ತದೆಂದು ನಾನು ಅವನಿಗೆ ಉತ್ತರಿಸುತ್ತೇನೆ. ಯಾಕೆಂದರೆ ಪತ್ರಕರ್ತ ಅದನ್ನೇ ನನ್ನಿಂದ ಕೇಳಲು ಬಯಸುತ್ತಾನೆ". ಈ ಮಾತು ನಿರಾಳ ನೀರಸ ಖಾಲಿತನವೆಂಬ ಭಾವ, ಪ್ರಚಾರದ ಅಬ್ಬರದ ಪರಮಾವಧಿಯೇ ಎನ್ನುವಂತೆ ಭಾಸವಾಗುತ್ತದೆ. ಆದರೂ ಈ ಮಾಯೆ ಬಹುಸಂಖ್ಯಾತ ಮನಗಳಲ್ಲಿ ತನ್ನನ್ನು ತಾನು ತೋರಿಸಿಕೊಳ್ಳಲು ಬಡಿದೆಬ್ಬಿಸುತ್ತದೆ. ಓದುಗರೂ ಕೂಡ ಈಗ ತಮ್ಮನ್ನು ಸೆಲೆಬ್ರಿಟಿಯ ಸ್ಥಾನದಲ್ಲಿ, ಅಸಂಖ್ಯಾತ ಕ್ಯಾಮೆರಾದ ಫ್ಲ್ಯಾಷ್ ಬೆಳಕುಗಳ ಮಧ್ಯದಲ್ಲಿ, ಕೋಟ್ಯಾಂತರ ಜನರ ಟೆಲಿವಿಷನ್-ಅಂತರ್ಜಾಲದ ಕಿಟಕಿಗಳಲ್ಲಿ ಒಂದು ಕ್ಷಣ ತಮ್ಮನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಅಚ್ಚರಿಯೇನಿಲ್ಲ. ಆಟದ ಚೆಂಡು ಈಗ ನಿಮ್ಮ ಅಂಗಳದಲ್ಲಿದೆ. "ಹೇಗನಿಸುತ್ತದೆ" ಪ್ರತಿಕ್ರಯಿಸಿ.

ಪ್ರಸಾದ್
ಬಿ. ಟೆಕ್. ಸಿವಿಲ್ ಎಂಜಿನಿಯರ್
ವಾಪ್ಕೋಸ್ ಲಿಮಿಟೆಡ್,ಗುರ್ಗಾಂವ್, ಹರಿಯಾಣ.

0 comments:

Post a Comment