ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
"ಸಮಯ ಎಲ್ಲಾ ಗಾಯಗಳನ್ನು ತುಂಬಿ ಬಿಡುತ್ತದೆ"

ಮನಸ್ಸಿಗೆ ಬಹಳವಾಗಿ ಪೀಡಿಸುವ ವಿಷಯವೆಂದರೆ ತನ್ನವರು ನಮ್ಮನ್ನು ಅಗಲಿ ಹೋದಾಗ, ತಲೆ ಮೇಲೆ ಬೆಟ್ಟವೇ ಉರುಳಿ ಬಿದ್ದ ಹಾಗೆ ಆಗುತ್ತದೆ. "ನಾನು ಏನು ಪಾಪ ಮಾಡಿದ್ದೆ? ದೇವರು ನನಗೆ ಈ ಶಿಕ್ಷೆ ಕೊಟ್ಟ. ಅವರ ಬದಲು ನಾನು ಹೊರಟು ಹೋಗಬಾರದಿತ್ತೆ" ಎಂದು ಬಿಕ್ಕಿ ಬಿಕ್ಕಿ ಅಳುತ್ತೇವೆ. ಆ ದುಃಖವೇ ಅಂತಹದ್ದು. ಯಾವ ಕಡೆ ನೋಡಿದರೂ ಕತ್ತಲು. ಬೆಳಕ್ಕಿದ್ದರೂ ಆ ಮನಃಸ್ಥಿತಿಗೆ ಬೆಳಕು ಕಾಣುವುದಿಲ್ಲ. ಬೇಸರ, ಕೊರಗು, ಜೀವನದಿಂದ ಜಿಗುಪ್ಸೆ, ಯಾರ ಜೊತೆಯು ಮಾತನಾಡಲು ಸಹ ಇಷ್ಟವಾಗುವುದಿಲ್ಲ.


ಆಕೆಯ ಮದುವೆಯಾಗಿ ಸರಿಯಾಗಿ 6 ತಿಂಗಳು ಸಹ ಕಳೆದಿರಲಿಲ್ಲ. ಗಂಡ ಅಪಘಾತದಲ್ಲಿ ತೀರಿಕೊಂಡನು. ಆಕೆ ಸಮಾಧಾನ ಮಾಡಲು ಹೋದೆ.

ಮೇಷ್ಟ್ರೆ... ಏನು ಮಾಡಬೇಕೆಂದು ದಾರಿಯೇ ತೋಚುತ್ತಿಲ್ಲ. ಪ್ರಾರ್ಥನೆ,ಧ್ಯಾನ,ಯೋಗ ಮನಃಶಾಂತಿ ತಂದುಕೊಡಬಹುದು. ಆದರೆ ನನ್ನ ಗಂಡನನ್ನು ತಂದು ಕೊಡುತ್ತದೆಯೇ ಎಂಬ ಸತ್ಯವಾದ ಪ್ರಶ್ನೆ ಕೇಳಿದಳು.

"ಸಮಯ ಎಲ್ಲಾ ಗಾಯಗಳನ್ನು ತುಂಬಿ ಬಿಡುತ್ತದೆ" ಎಂದು ಹೇಳುವುದನ್ನು ಬಿಟ್ಟರೆ ನನ್ನ ಹತ್ತಿರ ಹೇಳಲು ಏನು ಉಳಿದರಲಿಲ್ಲ್ಲ. ಆದರೂ ಈ ಕಥೆಯನ್ನು ಹೇಳಿದೆ -

ಬಡಪಾಯಿ ಗೌತಮಿ ಶ್ರೀಮಂತರ ಮನೆಗೆ ಮದುವೆಯಾಗಿ ಹೋದಳು. ಆದರೆ ಆಕೆಗೆ ಕೆಲಕಾಲ ಮಕ್ಕಳ ಭಾಗ್ಯವೇ ಲಭಿಸಲಿಲ್ಲ. ಸಮಾಜ ಬಂಜೆ ಮಹಿಳೆಗೆ ತನ್ನ ಚಚ್ಚು ಮಾತುಗಳಿಂದ ಎಷ್ಟು ಮಾನಸಿಕ, ಕೆಲವೊಮ್ಮೆ ಶಾರೀರಿಕ ತೊಂದರೆಗಳನ್ನು ಕೊಡುತ್ತದೆ ಎನ್ನುವುದು ನಮಗೆ ಗೊತ್ತು. ಆ ಕಾಲದಲ್ಲೂ ಅದೇ ಆಯಿತು. ಆದರೆ ದೈವ ಕೆಲಕಾಲದ ನಂತರ ಆಕೆಗೆ ಗಂಡು ಮಗುವನ್ನು ಕೊಟ್ಟ. ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ವಿಧಿ ಈ ರೀತಿ ಆಟ ಆಡುತ್ತದೆಂದು ಆಕೆಗೆ ತಿಳಿದಿರಲಿಲ್ಲ. ಆಕೆಯ ಮಗು ಕೆಲ ತಿಂಗಳ ನಂತರ ಪ್ರಪಂಚ ತ್ಯಜಿಸಿತು.

ತನ್ನ ಮಗು ಸತ್ತು ಹೋಗಿದೆ ಎಂದು ನಂಬಲು ಆಕೆ ಸಿದ್ಧಳಿಲ್ಲ. ಏನೋ ಅನಾರೋಗ್ಯದಿಂದ ಮಲಗಿಕೊಂಡಿದೆ ಎಂಬ ವಾದ. ತನ್ನ ಕಂದನಿಗೆ ಔಷಧಿ ಕೊಡಿ ಅಂತ ಊರೆಲ್ಲಾ ಅಲೆದಾಟ. ಊರಿನ ಜನ ಹುಚ್ಚಿ ಎಂಬ ಬಿರುದು ಕೊಟ್ಟಾಯಿತು. ಕೊನೆಯದಾಗಿ ಬುದ್ಧನ ಹತ್ತಿರ ಬಂದಳು. ನನ್ನ ಕಂದನಿಗೆ ಔಷಧಿ ಕೊಡಿ ಎಂದಾಗ ಬುದ್ಧ ಆಕೆಗೆ "ಸಾವಿಲ್ಲದ ಮನೆಯ ಸಾಸುವೆ ತಂದು ಕೊಡು" ಎಂದರು. ಆಕೆಯ ಅಲೆದಾಟ ಶುರುವಾಯಿತು. ಪ್ರತಿ ಮನೆಯಲ್ಲಿಯೂ ಅಪ್ಪ, ಅಮ್ಮ, ಅಜ್ಜಿ, ತಾತ, ಮಕ್ಕಳು - ಹೀಗೆ ಯಾರಾದರೊಬ್ಬರು ತೀರಿ ಹೋಗಿದ್ದಾರೆ. ಸಾವು ವಿಶ್ವದ ಪ್ರಾಕೃತಿಕ ನಿಯಮ. ಪ್ರತಿ ಪ್ರಾಣಿ ಇಲ್ಲಿ ಮೃತ್ಯುವಿನ ರುಚಿ ಕಾಣಲೇ ಬೇಕು. ನನ್ನ ಕಂದ ಒಬ್ಬನೇ ಅಲ್ಲ. ಹುಟ್ಟಿದ ಮೇಲೆ ಇವತ್ತಲ್ಲ ನಾಳೆ ಸಾಯಲೇ ಬೇಕು ಎಂದು ಆಕೆಗೆ ಅರಿವಾಯಿತು. ಆಕೆ ಬುದ್ಧನ ಬಳಿ ಹತ್ತಿರ ಮರಳಿ ಬಂದಾಗ, ಸಾಸುವೆ ತಂದೆಯಾ ಗೌತಮಿ? ಎಂದು ಬುದ್ಧ ಕೇಳಿದಾಗ - ಇಲ್ಲ. ನನಗೆ ದೀಕ್ಷೆ ಕೊಡಿ ಎಂದು ಬೇಡಿಕೊಂಡಳು.

ಏನೋ ಘಟನೆ ನಡೆದು ಹೋಯಿತು. ಸಮಾಧಾನ ಮಾಡಿಕೊಳ್ಳಿ. ಅತಿಯಾಗಿ ಕೊರಗುವುದರಿಂದ ಆರೋಗ್ಯ ಕೆಡುತ್ತದೆ. ಧೈರ್ಯ ಕಳೆದುಕೊಳ್ಳಬೇಡಿ. ನಿಮಗಾಗಿ, ನಿಮ್ಮನ್ನು ನಂಬಿದವರಿಗಾಗಿ ಬಾಳಿ ಬದುಕಿ. ಬೇರೆ ಬೇರೆ ಕೆಲಸ ಕಾರ್ಯಗಳಲ್ಲಿ ಸಂಪೂರ್ಣವಾಗಿ ನಿಮಗೆ ನೀವು ತೊಡಗಿಸಿಕೊಳ್ಳಿ. ಸಾಮಾನ್ಯ ಜೀವನ ನಡೆಸಲು ಸುಗಮವಾಗುತ್ತದೆ. ಬೇರೆಯವರ ಶಾಂತಿಗೆ ಪಾತ್ರರಾಗಿ. ಆಗ ನಿಮಗೂ ಸಹ ಸ್ವಲ್ಪ ಶಾಂತಿ ಸಿಗುತ್ತದೆ.

ಬರ್ಲೇ....ಆಗಲಿ ಮೇಷ್ಟ್ರೇ ಹೋಗಿ ಬನ್ನಿ...
ನಾ ಹೇಳಿದನ್ನು ಮರೆಯ ಬೇಡ...ಸರಿನಾ....
ಆಗಲಿ ಮೇಷ್ಟ್ರೆ....

- ಜಬೀವುಲ್ಲಾ ಖಾನ್.

0 comments:

Post a Comment