ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈಕನಸು ಅವಾರ್ಡ್
ನಮ್ಮ ಜನಪ್ರತಿನಿಧಿಗಳಿಗೆ ಸರ್ಕಾರದಿಂದ ಬರುವ ಹಣವನ್ನು ಹೇಗಾದರೂ ಮಾಡಿ ಖಾಲಿ ಮಾಡುವುದೊಂದೇ ಗುರಿ ಎನ್ನಿಸುತ್ತದೆ ಎಂದು ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಬೈಯುತ್ತಿರುವ ದೃಶ್ಯ ಸಾಮಾನ್ಯವಾಗಿಬಿಟ್ಟಿದೆ. ಜನರ ಬೈಗುಳಕ್ಕೆ ಪುಷ್ಠಿ ನೀಡಬಲ್ಲ ಒಂದು ಉದಾಹರಣೆ ಇಲ್ಲಿದೆ...ಯಲ್ಲಾಪುರದಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಕವಡಿಕೆರೆಯ ಸಮೀಪ ಈ ಉದಾಹರಣೆ ನಿಮಗೆ ಗೋಚರಿಸುತ್ತದೆ. ರಸ್ತೆಯ ಒಂದೆಡೆಯಲ್ಲಿ 10-15 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಹಳೆಯ ಬಸ್ ಸ್ಟ್ಯಾಂಡ್ ಇದ್ದರೆ ಅದರ ಎದುರಿಗೇ ಮತ್ತೊಂದು ಬಸ್ ಸ್ಟ್ಯಾಂಡ್ ಕಳೆದ ವರ್ಷವಷ್ಟೇ ತಲೆ ಎತ್ತಿದೆ. 15 ವರ್ಷಗಳ ಹಿಂದೆ ನಿರ್ಮಿಸಲಾದ ಬಸ್ ಸ್ಟ್ಯಾಂಡ್ ಸುಸಜ್ಜಿತವಾಗಿರುವಾಗಲೇ ಮತ್ತೊಂದು ಬಸ್ ಸ್ಟ್ಯಾಂಡನ್ನು ನಿರ್ಮಿಸಿರುವುದಾದರೂ ಏಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಕವಡಿಕೆರೆಗಿಂತ 2 ಕಿ.ಮೀ ಹಿಂದೆ ಹಳೆಯ ಬಸ್ ಸ್ಟ್ಯಾಂಡೊಂದು ಇದ್ದು ಅದು ಪಳೆಯುಳಿಕೆಯಂತಾಗಿದೆ.ಅಲ್ಲಿ ನಿಜವಾಗಿ ಬಸ್ ಸ್ಟ್ಯಾಂಡೊಂದರ ಅಗತ್ಯತೆಯಿದೆ.ಆದರೆ ನಮ್ಮ ಜನಪ್ರತಿನಿಧಿಗಳು ಅದರತ್ತ ಗಮನ ಹರಿಸಲಿಲ್ಲ. ಸರ್ಕಾರದ ಸೌಲಭ್ಯ ಅವಶ್ಯಕತೆ ಇರದ ಕಡೆ ತಲುಪುವುದೇ ಹೆಚ್ಚು ಎಂಬುದಕ್ಕೆ ಈ ಎರಡು ಬಸ್ ಸ್ಟ್ಯಾಂಡುಗಳು ಸಾಕ್ಷಿಯಾಗಿದೆ.ಹೊಸದಾಗಿ ನಿರ್ಮಿಸಿರುವ ಬಸ್ ಸ್ಟ್ಯಾಂಡ್ ನಿರ್ಮಾಣ ಹಂತದಲ್ಲಿರುವಾಗಲೇ ಕಟ್ಟೆಯೊಂದು ಕಿತ್ತು ಬಿದ್ದಿತ್ತು. ಅದನ್ನು ಮರು ನಿರ್ಮಿಸಲಾಗಿತ್ತು. ಆದರೆ ಇದೀಗ ಬಸ್ ಸ್ಟ್ಯಾಂಡ ನಿರ್ಮಿಸಿ ಒಂದು ವರ್ಷ ಪೂರೈಸುವ ಮುನ್ನವೇ ಅದೇ ಕಟ್ಟೆ ಮತ್ತೆ ಕಿತ್ತಿದೆ. ಇದು ಕಾಮಗಾರಿ ಎಷ್ಟು ಕಳಪೆ ಮಟ್ಟದ್ದು ಎನ್ನುವುದಕ್ಕೆ ಉತ್ತಮ ನಿದರ್ಶನ. ಒಟ್ಟಿನಲ್ಲಿ ಇದನ್ನು ನಿರ್ಮಿಸಿದ ಜನಪ್ರತಿನಿಧಿಗಳ ಉದ್ದೇಶ ಕೇವಲ ಹಣ ಪೋಲು ಮಾಡುವುದು ಮಾತ್ರ. ಹಣವನ್ನು ಯಾವ ರೀತಿ ಪೋಲು ಮಾಡಲಾಗಿದೆ ಎಂಬುದು ಇಲ್ಲಿನ ಕಾಮಗಾರಿಯನ್ನು ನೋಡಿದ ಎಂಥವರಿಗಾದರೂ ತಿಳಿಯುತ್ತದೆ.

ಕವಡಿಕೆರೆಯಲ್ಲಿ ಮಾರುಕಟ್ಟೆಯನ್ನು ನಿರ್ಮಿಸಲು ಹಣ ಮಂಜೂರು ಮಾಡಲಾಗಿತ್ತು. ಆದರೆ ಹಳ್ಳಿಯಲ್ಲಿ ಮಾರುಕಟ್ಟೆಯ ಅವಶ್ಯಕತೆ ಇಲ್ಲವೆಂದು ಜನಪ್ರತಿನಿಧಿಗಳು ಬಸ್ ಸ್ಟ್ಯಾಂಡ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿ ಬಸ್ ಸ್ಟ್ಯಾಂಡ್ ನಿರ್ಮಿಸುವ ಬದಲು ಅಗತ್ಯತೆ ಇದ್ದಲ್ಲಿ ಇದೇ ಹಣದಿಂದ ಬಸ್ ಸ್ಟ್ಯಾಂಡ್ ನಿರ್ಮಿಸಬಹುದಿತ್ತು ಎಂಬುದು ಸಾರ್ವಜನಿಕರ ವಾದ. ಸರಕಾರದ ಹಣವನ್ನು ಪೋಲು ಮಾಡುವುದನ್ನು ಬಿಟ್ಟು ಸದುಪಯೋಗ ಮಾಡುವ ಕುರಿತು ಜನಪ್ರತಿನಿಧಿಗಳು ಯೋಚಿಸಿದರೆ ಉತ್ತಮ.

ಬರಹ: ಶ್ರೀಧರ ಅಣಲಗಾರ
ಪತ್ರಿಕೋದ್ಯಮ ವಿದ್ಯಾರ್ಥಿ, ಯಲ್ಲಾಪುರ

0 comments:

Post a Comment