ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗೋಕರ್ಣ: ನಾವು ನಮ್ಮ ಬದುಕಿನಲ್ಲಿ ನಾವು,ನಮ್ಮ ಶರೀರ,ಬಳಗ,ನಮ್ಮ ಕುಟುಂಬ ಎಂಬ ಸೀಮಿತವಾದ ಬೇಲಿಯನ್ನು ಹಾಕಿಕೊಂಡು ಜೀವಿಸುತ್ತೇವೆ.ಆದರೆ ಈ ಸೀಮೆಯನ್ನು ದಾಟಿ ಹೋಗಿ ಸಮಾಜದತ್ತ ಕಣ್ಣು ಹೊರಳಿಸಿದರೆ ನಮ್ಮಾತ್ಮದ ವಿಸ್ತಾರವನ್ನು ಮಾಡಿಕೊಂಡು ವಿಶ್ವಕುಟುಂಬಿಯಾಗುವ ಪ್ರಯತ್ನವನ್ನು ಮಾಡಿದರೆ ಆಗುವ ಅನುಭೂತಿಯೇ ಬೇರೆ ಎಂದು ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಎಲ್ಲರನ್ನೂ ನಮ್ಮವರೆಂದುಕೊಂಡು ವ್ಯವಹರಿಸಿದಾಗ ಆಗುವ ಸಂತೋಷ ಅನಿರ್ವಚನೀಯವಾದದ್ದು. ಸೀಮೋಲ್ಲಂಘನವು ಯತಿಗಳಿಗೆ ಮಾತ್ರ ವಿಧಿಯಾಗದೆ ಸಂಸಾರಿಗಳೂ ಲೋಕದಲ್ಲಿ ತಾದಾತ್ಮ್ಯತೆಯನ್ನು ಬೆಳೆಸಿಕೊಳ್ಳುವ ಮೂಲಕ ಜೀವನದಲ್ಲಿ ಸೀಮೋಲ್ಲಂಘನವನ್ನು ಮಾಡಬೇಕುಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ಧಾರೆ. ಅಶೋಕೆಯಲ್ಲಿ ತಮ್ಮ ಹದಿನೆಂಟನೆಯ ಚಾತುರ್ಮಾಸ್ಯ ವ್ರತದ ಸೀಮೋಲ್ಲಂಘನವನ್ನು ಮಾಡಿ ಧರ್ಮಸಭೆಯಲ್ಲಿ ಶಿಷ್ಯರಿಗೆ ಅನುಗ್ರಹಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಈ ಅಶೋಕೆಯಲ್ಲಿ ಇಷ್ಟುದಿನಗಳಕಾಲ ರಾಮಕಥೆಯು ನಡೆಯುತ್ತಿತ್ತು.ಇದು ಅಕ್ಷರಶಃ ಅಯೋಧ್ಯೆಯಾಗಿ ಪರಿವರ್ತಿತವಾಗಿತ್ತು.ಹೇಗೆ ಪ್ರಭು ಶ್ರೀರಾಮಚಂದ್ರನ ಕಾಲದಲ್ಲಿ ಸಮಸ್ತಭೂಮಂಡಲಕ್ಕೇ ಅಯೋಧ್ಯೆಯು ರಾಜಧಾನಿಯಾಗಿತ್ತೋ ಶ್ರೀರಾಮನು ಏಕಚ್ಛತ್ರಾಧಿಪತಿಯಾಗಿ ಆಳಿದನೋಅದೇ ರೀತಿಯಲ್ಲಿ ನಮ್ಮ ಶ್ರೀಮಠದ ಆರಾಧ್ಯ ದೇವತೆಯಾದ ಶ್ರೀರಾಮಚಂದ್ರನು ಈ ಪ್ರದೇಶದಿಂದ ಆಕರ್ಷಿತನಾಗಿ ಆದಿಶಂಕರಾಚಾರ್ಯರ ಮೂಲಕ ದೂರದ ಅಯೋಧ್ಯೆಯಿಂದ ಇಲ್ಲಿಗೆ ಬಂದು ನೆಲೆಸಿದ. ಇದು ಒಂದು ಅದ್ಭುತ ಘಟನೆಯೇ.ಅಶೋಕೆಯು ಹಲವು ವಿಸ್ಮಯಗಳ ತಾಣ. ಸಮೀಪದ ಗೋಕರ್ಣದವರಲ್ಲಿಯೇ ಅನೇಕ ಜನರು ನೋಡದಿದ್ದ ಈ ಅಶೋಕೆಯಲ್ಲಿ ಕಳೆದ ವರ್ಷದಿಂದ ಜನಪ್ರವಾಹವೇ ಹರಿಯುತ್ತಿದೆ. ಅನೇಕ ಅಘಟಿತ ಘಟನೆಗಳಿಗೆ ಈ ಭೂಮಿ ಸಾಕ್ಷಿಯಾಗಿದೆ.ಶ್ರೀರಾಮಮುದ್ರಿಕೆ ಯನ್ನು ನಂಬಿ ಬದುಕಿ.ಇದು ನಮ್ಮ ಪೂರ್ವಪೀಠಾಧೀಶರಾಗಿದ್ದ ಎಂಟನೆಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ತಮ್ಮ ಇಹಲೋಕವ್ಯಾಪಾರವನ್ನು ಮುಗಿಸಬಯಸಿ ಮಠವನ್ನು ಬಿಟ್ಟು ಮುಕ್ತಿಕ್ಷೇತ್ರವೆಂಬ ಗೋಕರ್ಣಕ್ಕೆ ಬರುವಾಗ ಮಠದಲ್ಲಿದ್ದ ತಮ್ಮ ಉತ್ತರಾಧಿಕಾರಿಗಳಿಗೆ ಆದೇಶಿಸಿದ ವಾಕ್ಯ.


ನಮ್ಮ ಪರಂಪರೆಯವರೆಲ್ಲರೂ ಅವರು ಹೇಳಿದಂತೆ ಶ್ರೀರಾಮಚಂದ್ರನ ನೆರಳಿನಲ್ಲಿಯೇ ಬಾಳಿಬದುಕಿದವರು. ಇಂದು ನಾವು ಹೇಳುವುದೂ ಈ ಮಾತನ್ನೇ.ರಾಮನನ್ನು ನಂಬಿ ಬದುಕುವವರಿಗೆ ಬೇರಾವುದರ ಅಗತ್ಯವೂ ಇಲ್ಲ ಎಂದು ಹೇಳಿದ ಪೂಜ್ಯಶ್ರೀಗಳು ಶಿಷ್ಯರು ನದಿಗಳಾದರೆ ಗುರು ಸಮುದ್ರದಂತೆ.ವರ್ಷವಿಡೀ ಸಂಚರಿಸುತ್ತ ಸಮಾಜಕ್ಕೆ ಧರ್ಮಮಾರ್ಗವನ್ನು ಬೋಧಿಸುವ ಯತಿಗಳು ಚಾತುರ್ಮಾಸ್ಯಕಾಲದಲ್ಲಿ ಒಂದೆಡೆ ನಿಂತು ಅಂತರ್ಮುಖಿಗಳಾಗುತ್ತಾರೆ. ಇದು ಶಿಷ್ಯರೆಂಬ ನದಿಗಳು ಗುರುರೂಪವಾದ ಸಮುದ್ರವನ್ನು ತನ್ನೊಳಗಿಟ್ಟುಕೊಳ್ಳುವ ಅದರಲ್ಲಿ ಸೇರಿಹೋಗುವ ಪರಿ.ಇದೇ ರೀತಿಯಲ್ಲಿ ಸಮಾಜವು ಸಂಕುಚಿತವಾಗದೆ ತನ್ನ ನೈಜ ಆತ್ಮವಿಸ್ತಾರವನ್ನು ಪಡೆಯುವಂತಾಗಲಿ ಎಂದು ಆಶಿಸಿದರು.

ವಾರ್ಷಿಕವಾಗಿ ಚಾತುರ್ಮಾಸ್ಯದ ಸೀಮೋಲ್ಲಂಘನದ ಧರ್ಮಸಭೆಯಲ್ಲಿ ನೀಡಲಾಗುವ ಪ್ರತಿಷ್ಠಿತ ಚಾತುರ್ಮಾಸ್ಯ ಪ್ರಶಸ್ತಿಯನ್ನು ರಾಣಿಬೆನ್ನೂರಿನ ಉದ್ಯಮಿ ಶ್ರೀಮಠದ ನಿಕಟಶಿಷ್ಯ ವಾಸುದೇವ ಹೆಬ್ಬಾರ್ ಅವರಿಗೆ ನೀಡಿ ಸಮ್ಮಾನಿಸಲಾಯಿತು.ಶ್ರಿಮಠದ ಮಾಧ್ಯಮ ವಿಭಾಗದ ಮೋಹನ ಭಾಸ್ಕರ ಹೆಗಡೆ ಸಮ್ಮಾನಿತರ ಪರಿಚಯವನ್ನು ನೀಡಿ ಅಭಿನಂದಿಸಿದರು ವಾಸುದೇವ ಹೆಬ್ಬಾರರು ಈ ಪ್ರಶಸ್ತಿಯು ಸಮಸ್ತ ಉತ್ತರಕರ್ನಾಟಕಕ್ಕೆ ಸಂದ ಪ್ರಶಸ್ತಿಯೆಂದು ಸ್ವೀಕರಿಸುವುದಾಗಿ ಹೇಳಿದರು. ದೇವಶ್ರವ ಶರ್ಮಾ ದಂಪತಿಗಳಿಂದ ಸಭಾಪೂಜೆ, ಎಮ್.ಕೆ.ಹೆಗಡೆಯವರಿಂದ ಚಾತುರ್ಮಾಸ್ಯದ ಅವಲೋಕನ ಸಂಪನ್ನಗೊಂಡಿತು.

ಈ ಧರ್ಮಸಭೆಯಲ್ಲಿ ವಿಶ್ವಹಿತಮ್,ಕುಟುಂಬದರ್ಶಿನಿ ಎಂಬ ಅಂತರ್ಜಾಲ ತಾಣಗಳು ಹಾಗೂ ಆರ್ಯಪ್ರಭಾ ಪತ್ರಿಕೆಯ ವಿಶೇಷಸಂಚಿಕೆಗಳೂ ಲೋಕಾರ್ಪಣೆಗೊಂಡವು.ವಿದ್ಯಾವಿಭಾಗದ ಪ್ರಮೋದ ಪಂಡಿತ್ ಸಭೆಯನ್ನು ನಿರ್ವಹಿಸಿದರು.ಇದೇ ಸಂದರ್ಭದಲ್ಲಿ ಅಶೋಕೆಯಲ್ಲಿ ಲೋಕಕಲ್ಯಾಣಾರ್ಥವಾಗಿ ನಿರಂತರವಾಗಿ ಎರಡುತಿಂಗಳಿನಿಂದ ಉಪಾಧಿವಂತಮಂಡಲದ ಸದಸ್ಯರಿಂದ ನಡೆಯುತ್ತಿದ್ದ ಧಾರ್ಮಿಕ ಯಾಗಗಳು ಇಂದಿನ ಸಹಸ್ರಚಂಡೀಯಾಗದ ಪೂರ್ಣಾಹುತಿಯೊಂದಿಗೆ ಸಮಾಪ್ತಗೊಂಡವು.

ಬೆಂಗಳೂರಿನ ಉದ್ಯಮಿ ಎಮ್.ಎನ್.ಭಟ್ ದಂಪತಿಗಳಿಂದ ಗುರುದೇವತಾಸೇವೆಯು ಸಮರ್ಪಿತವಾಯಿತು.ಪೂಜ್ಯಶ್ರೀಗಳು ಕ್ಷೇತ್ರದೇವತೆಯಾದ ಭದ್ರಕಾಳೀ,ದೇವರಭಾವಿಯ ಕೆಂಗಳಾಪರಮೇಶ್ವರೀ ದೇವಾಲಯಗಳಿಗೆ ಸಂದರ್ಶನ ನೀಡಿ ಸೀಮೋಲ್ಲಂಘನವಿಧಿಯನ್ನು ಪೂರೈಸಿದರು.ಸಂಜೆ ಪೂಜ್ಯಶ್ರೀಗಳು ಶ್ರೀಕ್ಷೇತ್ರ ಗೋಕರ್ಣ ಉಪಾಧಿವಂತಮಂಡಲದವರು ಆಯೋಜಿಸಿದ್ದ ಮೆರವಣಿಗೆಯಲ್ಲಿ ಗೋಕರ್ಣದ ಶ್ರೀ ವೆಂಕಟರಮಣದೇವಾಲಯದಿಂದ ಹೂವಿನಹಾಸಿನಲ್ಲಿ ಸಾಗಿ ಶ್ರೀಕ್ಷೇತ್ರದೇವತೆಗಳ ಸಂದರ್ಶನ ಮಾಡಿದರು.
ವರದಿ: ಸತ್ಯನಾರಾಯಣ ಶರ್ಮ

0 comments:

Post a Comment