ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಅದೃಷ್ಟವೋ? ದುರದೃಷ್ಟವೋ? ಯಾರಿಗೆ ಗೊತ್ತು?

ಓರ್ವ ಮುದಿ ರೈತ ತನ್ನ ಕುದುರೆಯಿಂದ ಹೊಲವನ್ನು ಹೂಳುತ್ತಿದ್ದ. ಒಂದು ದಿನ ಆ ಕುದುರೆ ತಪ್ಪಿಸಿಕೊಂಡು ಬೆಟ್ಟಗುಡ್ಡಗಳಲ್ಲಿ ಮರೆಯಾಗಿ ಹೋಯಿತು. "ಪಾಪ ನಿನ್ನ ಜೊತೆ ಹೀಗಾಗಬಾರದಿತ್ತು. ನಿನ್ನ ದುರದೃಷ್ಟ" - ಎಂದು ನೆರೆಹೊರೆಯವರೆಲ್ಲ ದುಃಖ ವ್ಯಕ್ತಪಡಿಸಿದರು. ರೈತ ಹೇಳಿದ - ದುರದೃಷ್ಟವೋ? ಅದೃಷ್ಟವೋ? ಯಾರಿಗೆ ಗೊತ್ತು? ಒಂದು ವಾರದ ನಂತರ ಆ ಕುದುರೆ ಬೆಟ್ಟಗುಡ್ಡಗಳಿಂದ ಕಾಡು ಕುದುರೆಗಳನ್ನು ಜೊತೆಯಲ್ಲಿ ಕರೆ ತಂದಿತು. ಆಗ ಆತನ ನೆರೆಹೊರೆಯವರು - "ನಿನ್ನ ಅದೃಷ್ಟ ಚೆನ್ನಾಗಿದೆ" ಎಂದರು. ರೈತ ಹೇಳಿದ - ಅದೃಷ್ಟವೋ? ದುರದೃಷ್ಟವೋ? ಯಾರಿಗೆ ಗೊತ್ತು?ನಂತರ, ರೈತನ ಮಗ ಒಂದು ಕಾಡು ಕುದುರೆ ಹತ್ತಲು ಹೋಗಿ, ಜಾರಿಬಿದ್ದು, ಕಾಲನ್ನು ಮುರಿದುಕೊಂಡ. ಆಗ ನೆರೆಹೊರೆಯವರು ಹೇಳಿದರು - "ಛೆ! ಬಹಳ ದುರದೃಷ್ಟದ ಸಂಗತಿ." ರೈತ ಹೇಳಿದ - ದುರದೃಷ್ಟವೋ? ಅದೃಷ್ಟವೋ? ಯಾರಿಗೆ ಗೊತ್ತು?

ಕೆಲವು ವಾರಗಳ ನಂತರ ಸೇನಾಧಿಕಾರಿಗಳು ಬಂದು, ಯೋಗ್ಯ ಪುರುಷರನ್ನು ಸೈನ್ಯದಲ್ಲಿ ಭರ್ತಿ ಮಾಡಿಕೊಳ್ಳಲು ಹುಡುಕಾಟ ನಡೆಸಿದರು. ರೈತನ ಮಗನ ಕಾಲು ಮುರಿದಿರುವುದರಿಂದ ಆತನನ್ನು ಆರಿಸಿಕೊಂಡು ಹೋಗಲಿಲ್ಲ. ಆಗಲೂ ನೆರೆಹೊರೆಯವರು ಹೇಳಿದರು - "ಒಬ್ಬನೇ ಪ್ರೀತಿಯ ಮಗ. ಈಗ ನಿನ್ನ ಜೊತೆಯೇ ಇರುತ್ತಾನೆ. ಬಹಳ ಒಳ್ಳೆಯ ಅದೃಷ್ಟ ನಿನ್ನದು." ರೈತ ಹೇಳಿದ - ಅದೃಷ್ಟವೋ? ದುರದೃಷ್ಟವೋ? ಯಾರಿಗೆ ಗೊತ್ತು? ವಿಧಿ ಬರಹ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅತಿಯಾದ ಸಂತೋಷ, ಅತಿಯಾದ ದುಃಖ - ಇವೆರಡೂ ಒಳ್ಳೆಯದಲ್ಲ. ಇವೆರಡೂ ಶಾಶ್ವತವಲ್ಲ. ಸಿಹಿಕಹಿ ಘಟನೆಗಳು ನಡೆದಾಗ ಮಾನಸಿಕ ಸಮತೋಲನ ಕಾಪಾಡಿಕೊಳ್ಳಬೇಕು. ಅಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಣ್ಣಪುಟ್ಟ ಘಟನೆಗಳಿಂದ ಅಭ್ಯಸಿಬೇಕು. ಮುಂದೆ ಜೀವನದಲ್ಲಿ ಎಂತಹ ಘಟನೆ ನಡೆದರೂ ಅದನ್ನು ಸಹಿಸುವ ಗುಣ ಬೆಳೆಯುತ್ತದೆ. ಇಲ್ಲವಾದಲ್ಲಿ ಒಂದು ಸಣ್ಣ ದುಃಖ ಸಹ ನಮ್ಮನ್ನು ಖಿನ್ನತೆಗೆ ಒಳಪಡಿಸಿ ಬಿಡುತ್ತದೆ.

ಚೀನಾ ದೇಶದ ಈ ಒಂದು ಹಳೆ ಕಥೆಯಿಂದ ಎಷ್ಟೊಂದು ಪಾಠ ಕಲಿಯುವುದಿದೆ ನೋಡಿ!

- ಜಬೀವುಲ್ಲಾ ಖಾನ್

0 comments:

Post a Comment