ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:43 PM

ಇದು ದೇವರ ಶಾಪವಾ?

Posted by ekanasu

ವಿಶೇಷ ವರದಿ
ನಿಯಾಮಕನ ಆಟಕ್ಕೆ ತತ್ತರಿಸುತ್ತದೆ ಕುಟುಂಬ


ಬೈಂದೂರು : ದೇವರ ಶಾಪವಾ.. ನಿಯಾಮಕನ ಕಣ್ಣಾಮುಚ್ಚಾಲೆ ಆಟವಾ.. ಅನಾರೋಗ್ಯದ ಪರಿಣಾಮವಾ. ಒಟ್ಟಿನಲ್ಲಿ ಜವರಾಯನ ಹೊಡೆತಕ್ಕೆ ಕುಟುಂಬ ತತ್ತರಿಸಿದೆ. ಬೆನ್ನುಬೆನ್ನಿಗೆ ಸರತಿಯಂತೆ ಸಾವು ಸಂಭವಿಸಿದೆ!


ಕುಟುಂಬದ ಆಧಾರ ಸ್ಥಂಭದಂತಿದ್ದ ಮೂವರು ಕಳಚಿಬಿದಿದ್ದಾರೆ. ವಿಧಿಯಾಟಕ್ಕೆ ಲಿಂಗಬೇಧವಿಲ್ಲದೆ ವಿಧಿ ಎಲ್ಲರನ್ನೂ ಆಪೋಶನ ತೆಗೆದುಕೊಂಡಿದೆ. ಕಳೆದ ಆರು ತಿಂಗಳೊಳಗೆ ಮೂವರು ವಿಧಿ ವಶರಾಗಿದ್ದಾರೆ. ಮತ್ತೊಬ್ಬರ ಸ್ಥಿತಿಕೂಡಾ ಆಶಾದಾಯಕವಾಗಿಲ್ಲ. ಇದರೊಟ್ಟಿಗೆ ವಿಧಿಯ ವಕ್ರದೃಷ್ಟಿ ಚಿಕ್ಕ ಹೆಣ್ಣು ಮಗುವಿನ ಎರಡೂ ಕಾಲನ್ನು ಕಿತ್ತುಕೊಂಡಿದೆ.

ಇದ್ಯಾವುದೋ ಸಿನಿಮಾದಲ್ಲಿ ಬರುವ ಒನ್ ಲೈನ್ ಕತೆಯಲ್ಲ. ವಾಸ್ತವ ಜೀವನದ ಸತ್ಯ ಸಂಗತಿ. ಕುಟುಂಬದ ಸದಸ್ಯರಲ್ಲಿ ಯಾರಾದರೊಬ್ಬರು ಅಕಾಲ ಮೃತ್ಯುವಿಗೆ ಒಳಗಾದರೆ ಅದನ್ನ ಮರೆಯೋದು ಅಷ್ಟು ಸುಲಭವಲ್ಲ. ಅಂತಾದ್ದರಲ್ಲಿ ಒಂದರ ಹಿಂದೆ ಒಂದರಂತೆ ಸಾವು ಸಂಭವಿಸಿದರೆ ಸುಧಾರಿಸಿ ಕೊಳ್ಳೋದಾದರೂ ಹೇಗೆ? ಈ ಎಲ್ಲಾ ಅನಾಹುತಕ್ಕೆ ದೇವರ ಶಾಪವಾ ವಿಧಿನಿಯಮ ಕಾರಣವಾ ಎಂಬ ಗೊಂದಲ ಹುಟ್ಟಿಕೊಂಡಿದೆ ಕುಟುಂಬದಲ್ಲಿ.

ಮೃತ್ಯು ಸರಮಾಲೆ
ಕುಂದಾಪುರ ತಾಲ್ಲೂಕ್ ಬಳ್ಳೂರು ಕಂಬಳಗದ್ದೆ ಮನೆ ಜವರಾಯನ ಹೊಡೆತಕ್ಕೆ ಸಿಕ್ಕಿ ಕಂಗೆಟ್ಟಿದೆ. ಮೊಟ್ಟಮೊದಲು ಮನೆಯ ಹಿರಿಯ ವ್ಯಕ್ತಿ ಮಂಜು ಶೆಟ್ಟ್ಟಿಗಾರ್ (65) ವಿಧಿವಶರಾದರು. ನಂತರದ ಮಂಜು ಶೆಟ್ಟಿಗಾರ್ ಅವರ ಹಿರಿಯ ಪುತ್ರ ವಿಜಯ ಶೆಟ್ಟಿಗಾರ್ (42). ಇವರ ಬೆನ್ನಿಗೆ ನಾರಾಯಣ ಶೆಟ್ಟಿಗಾರ್ ಅವರ ಮಗಳು ದೀಪ (19) ಬೆಂಕಿ ಆಕಸ್ಮಿಕದಲ್ಲಿ ವಿಧಿ ನುಂಗಿಹಾಕಿತು. ಇಷ್ಟಕ್ಕೂ ವಿಧಿಗೆ ಕರುಣೆ ಬರಲಿಲ್ಲ. ಮಂಜು ಶೆಟ್ಟಿಗಾರ್ ಅವರ ಸೊಸೆ ಶೈಲಾ (38) ಅವರನ್ನು ಬ್ರೈನ್ ಟ್ಯೂಮರ್ ನುಂಗಿಹಾಕಿತು. ಇದೆಲ್ಲವೂ ಮಂಜು ಶೆಟ್ಟಿಗಾರ್ ಮರಣದ ನಂತರ ನಡೆದ ಸರಣಿ ಮರಣ.

ಇಷ್ಟಾದರೂ ವಿಧಿಗೆ ಮರಣ ದಾಹ ತಗ್ಗಿಲ್ಲ.ಮಂಜು ಶೆಟ್ಟಿಗಾರ್ ಅವರ ಮತ್ತೊಬ್ಬ ಪುತ್ರ ಪ್ರಭಾಕರ ಶೆಟ್ಟಿಗಾರ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇವರ ತಬ್ಬಲಿ ಮಗಳು ವೀಣಾ ತನ್ನ ಎರಡೂ ಕಾಲನ್ನ ಕಳೆದುಕೊಂಡಿದ್ದಾಳೆ. ಊರುಗೋಲಿಲ್ಲದೆ ಹೆಜ್ಜೆಯಿಡಲೂ ಸಾಧ್ಯವಿಲ್ಲ.
ಪ್ರಭಾಕರ ಶೆಟ್ಟಿಗಾರ್ ಹೆಂಡತಿಸತ್ತ ನಂತರ ಖಿನ್ನರಾದರು. ಇದ್ದಕಿದ್ದ ಹಾಗೆ ಹಾಸಿಗೆ ಹಿಡಿದರು. ದಿನೇ ದಿನೇ ಅವರ ಹೊಟ್ಟೆ ದೊಡ್ಡದಾಗುತ್ತಲೇ ಸಾಗಿತು. ಸಧ್ಯದ ಪರಿಸ್ಥಿತಿಯಲ್ಲಿ ಹೊಟ್ಟೆ ಒಡೆಯುವ ಹಂತ ಮುಟ್ಟಿದೆ. ಕೆಲ ವೈದ್ಯರು ಲಿವರ್ ಸಮಸ್ಯೆ ಅಂತಾರೆ. ಮತ್ತೆ ಕಲೆ ಡಾಕ್ಟರ್ಗಳು ಜಲೋಧರ ಅಂತಾರೆ. ಶೀಘ್ರ ಪ್ರಭಾಕರ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಇವರನ್ನು ಆಸ್ಪತ್ರೆಗೆ ದಾಖಲಿಸಲು ಹಣ ಅಡ್ಡಿ ಬಂದಿದೆ. ಈಗಾಗಲೇ ಈ ಕುಟುಂಬ ಅನಾರೋಗ್ಯಕ್ಕೆ ಒಳಗಾದವರ ಆರೋಗ್ಯಕ್ಕಾಗಿ ಬರೋಬ್ಬರಿ ಏಳು ಲಕ್ಷ ರೂ. ಸುರಿದಿದೆ. ಕುಟುಂಬದ ಸದಸ್ಯರು ರೊಕ್ಕವನ್ನೂ ಕಳೆದುಕೊಂಡರು. ಜೊತೆಗೆ ಅಮೂಲ್ಯ ಜೀವವನ್ನೂ ಬಲಿಕೊಡಬೇಕಾಗಿ ಬಂದಿದ್ದು ವಿಪರ್ಯಾಸ.

ವೀಣಾ ಕತೆಯೇನು

ಪ್ರಭಾಕರ ಶೆಟ್ಟಿಗಾರ್ ಮತ್ತು ದಿ.ಶೈಲಾ ಶೆಟ್ಟಿಗಾರ್ ದಂಪತಿಗಳ ಇಬ್ಬರು ಮಕ್ಕಳಲ್ಲಿ ವೀಣಾ ಒಬ್ಬರು. ಮತ್ತೊಬ್ಬ ಪುತ್ರ ಪ್ರವೀಣ್ ಹೊಟ್ಟೆಪಾಡಿಗಾಗಿ ಬಾಗಲುಕೋಟೆಯಲ್ಲಿ ಬೀಡಾ ಅಂಗಡಿ ನಡೆಸುತ್ತಿದ್ದಾನೆ.
ವೀಣಾ ಜನನದ ನಂತರ ಎಲ್ಲಾ ಮಕ್ಕಳಂತೆ ಇದ್ದಳು. ಹುಟ್ಟಿದ ಐದು ವರ್ಷದ ನಂತರ ವೀಣಾ ಅವಳ ಕಾಲು ವಶ ಕಳೆದುಕೊಳ್ಳತೊಡಗಿತು. ಪ್ರಸಕ್ತ ಕಾಲು ಹಿಂದುಮುಂದಾಗಿದೆ. ಎರಡೂ ಕಾಲು ಸಂಪೂರ್ಣ ಬಲಕಳೆದುಕೊಂಡಿದೆ. ಆಡಿ ನಲಿವ ವಯಸ್ಸಲ್ಲಿ ಕಂಕಳಿನಲ್ಲಿ ಊರುಗೋಲು ಹಿಡಿದು ನಡೆವ ವೀಣಾ ಕಂಡರೆ ಕರಳು ಚುರುಕ್ ಎನ್ನುತ್ತಿದೆ. ವೀಣಾ ಕಾಲಿಗಾಗಿ ಆಸ್ಪತ್ರೆಗೆ ಸುರಿದ ಹಣ ಸರಿಸುಮಾರು 2.5 ಲಕ್ಷ ರೂ. ವೀಣಾಳನ್ನು ಬೇರೆ ವೈದ್ಯರಿಗೆ ತೋರಿಸುವ ಬಲವೂ ಈ ಕುಟುಂಬಕ್ಕಿಲ್ಲ.

ಏನಂದರೆ ಏನೂ ಇಲ್ಲದಿ.ಮಂಜು ಶೆಟ್ಟಿಗಾರ್ ಕುಟುಂಬಕ್ಕೆ ಏನೆಂದರೆ ಏನೂ ಇಲ್ಲ. ಎರಡು ಮುಡಿ ಗದ್ದೆ ಬಿಟ್ಟರೆ ಹೊಟ್ಟೆಪರಿಗೆ ಕೆಲಸ ಮಾಡಬೇಕಾದ ಅನಿವಾರ್ಯತೆಯಿದೆ. ಯಾರೂ ಹೆಚ್ಚು ಓದಿಕೊಂಡವರಲ್ಲ. ಮಂಜು ಶೆಟ್ಟಿಗಾರ್ ಅವರ ಕಿರಿಯ ಪುತ್ರ ರಾಘವೇಂದ್ರ ಶೆಟ್ಟಿಗಾರ್ ಕುಂದಾಪುರದಲ್ಲಿ ಬಸ್ ಏಜೆಂಟ್ ಕೆಲಸ ಮಾಡುತ್ತಾರೆ. ಇವರ ದುಡಿಮೆಯಲ್ಲಿ ಮನೆ ನಡೆಯಬೇಕು. ಜ್ವರಜಾಪತ್ತಿಗೆ ದಾರಿಯಾಗಬೇಕು. ಅಣ್ಣನ ಅನಾರೋಗ್ಯಕ್ಕೆ ಮದ್ದು ಮಾಡುವ ಮನಸ್ಸಿದ್ದರೂ ರಾಘು ಅಸಹಾಯಕ. ರಾಘುವಿಗೂ ಹೆಂಡತಿ ಮಕ್ಕಳಿದ್ದಾರೆ. ಹಾಗಾಗಿ ರಾಘು ಕೈಚಲ್ಲಿ ಕೂತಿದ್ದಾರೆ. ಅಸಹಾಯಕ ರಾಘು ನೆರವಿಗೆ ಮಾನವೀಯತೆಯ ಸಹಕಾರ ಬೇಕಾಗಿದೆ. ಸಹಾಯ ಮಾಡುವವರು ಕುಂದಾಪುರ ವಡೇರ ಹೋಬಳಿ ಎಸ್ಸಿಡಿಸಿ ಬ್ಯಾಕ್ ಅಕೌಂಟ್ ನಂಬರ್ 1659ಕ್ಕೆ ಕಳುಹಿಸಬಹುದು.

ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment