ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಹೌದು ರಂಗಭೂಮಿಯೆಂದರೆ ಬಹಳಷ್ಟು ಬೇಗ ನೆನಪಾಗುವುದು ದೊಡ್ಡ ದೊಡ್ಡ ಕಲಾವಿದರ ಹೆಸರುಗಳು. ಆದರೆ ಪ್ರಾಮಾಣೀಕತೆಗೆ ಉಸಿರುಗೊಟ್ಟು ದುಡಿಯುವ ಕಲಾವಿದರ ಪರಿಚಯವಿರುವುದು ವಿರಳವೇ. ಅಂತಹದೆ ಅಪ್ಪಟ ಕಲಾವಿದ ರಂಗಭೂಮಿಯೇ ತನ್ನ ಮನೆ ರಂಗಶಿಕ್ಷಣ ನಾಟಕವೇ ತನ್ನ ಉಸಿರನ್ನಾಗಿ ಪರಿವರ್ತಿಸಿಕೊಂಡ ಯುವ ಉತ್ಸಾಹಿ ನಟ ನಮ್ಮೆಲ್ಲರ ಹಿತೈಷಿ ಇಪ್ಪತ್ತೊಂಬತ್ತರ ಹರೆಯದ ನವೀನ್ ಎಡಮಂಗಲ ಈಗ ನಮ್ಮೆಲ್ಲರ ಕಣ್ಣಿನಿಂದ ಕಣ್ಮರೆಯಾದ ಈ ಅನರ್ಘ್ಯ ರತ್ನ ವಿಧಿ ಬಳಿ ಸಾಗಿ ಒಂದು ವರ್ಷ ಸಂದಿತು.


ನಾಟಕ ನಿರ್ದೇಶನದಲ್ಲಿ ತೊಡಗಿದರೆಂದರೆ ಅವರ ಲಕ್ಷ್ಯವೆಲ್ಲಾ ಅದರ ಕಡೆಯೇ, ಸಮಯದ ಅರಿವೂ ಅವರಿಗಿರುತ್ತಿರಲಿಲ್ಲ. ಒಬ್ಬ ಉತ್ತಮ ಕಲಾವಿದನಾಗಿ ತಾನೇನು ಮಾಡಬೇಕು ಎಂಬುದನ್ನು ಅವರ ಮನಬಲ್ಲದು. ಅದರ ಸಲುವಾಗಿಯೇ ಮಧ್ಯರಾತ್ರಿಯಾದರೂ ನಾಟಕ ನಿರ್ದೇಶನ ತರಬೇತಿಯಲ್ಲಿ ತೊಡಗುತ್ತಿದ್ದರು. ಆ ನಾಟಕ ಪ್ರದರ್ಶನ ಯಶಸ್ವಿಯ ನಂತರವೇ ನೆಮ್ಮದಿಯ ನಿಟ್ಟುಸಿರು ಬಿಡುವುದು.

ಆನಂದ ಗೌಡ ಮತ್ತು ರತ್ನಾವತಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಚೊಚ್ಚಲ ಪುತ್ರರಾದ ಇವರು ಜನಿಸಿದ್ದು 25-12-1981ರಂದು ಸುಳ್ಯ ತಾಲೂಕಿನ ಎಡಮಂಗಲವೆಂಬ ಪುಟ್ಟ ಗ್ರಾಮದ ಕೃಷಿಕ ಕುಟುಂಬದಲ್ಲಿ ತಂದೆ-ತಾಯಿ, ತಾತ ಮಾಜಿ ಸೈನಿಕ 99 ವರ್ಷ ಪ್ರಾಯದ ಲಿಂಗಪ್ಪ ಗೌಡ ಮತ್ತು ದಿಲ್ಲಿಯಲ್ಲಿರುವ ತಮ್ಮನಾದ ಪ್ರವೀಣ್ ಕುಮಾರ್ ಜೊತೆ ಸರಳ ಜೀವನ ಇವರದು.

ಎಳವೆಯಲ್ಲೇ ತುಂಬಾ ಸರಳ ವ್ಯಕ್ತಿತ್ವ ಮತ್ತು ಮಿತಭಾಷಿಯಾದ ಇವರು ತನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಎಡಮಂಗಲದಲ್ಲಿ ಮುಗಿಸಿ ಫೌಢಶಿಕ್ಷಣವನ್ನು ಬಾಳಿಲದಲ್ಲಿ ಮುಗಿಸಿದರು. ಆಗಲೇ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಣಿಯೂರು ಇಲ್ಲಿ ಪಿಯುಸಿ ಮುಗಿಸಿ ಪದವಿ ಶಿಕ್ಷಣಕ್ಕಾಗಿ ಕೆ.ಎಸ್.ಎಸ್. ಸುಬ್ರಹ್ಮಣ್ಯದತ್ತ ವಾಲಿದರು. ಅವರು ಕಲಾಸಕ್ತಿಗೆ ಪ್ರಭಾವಿತರಾಗಿದ್ದುದು ಇಲ್ಲೇ. ಇವರು ಸುಬ್ರಹ್ಮಣ್ಯದ ನಾಟಕ ತಂಡ 'ಕುಸುಮ ಸಾರಂಗ'ಜದ ಕುಡಿ. ಇಲ್ಲಿಯೇ ಅವರ ಆಸಕ್ತಿಯು ಸಹಿತ ಚಿಗುರೊಡೆದಿರುವುದು. ಐ.ಕೆ. ಬೊಳುವಾರು ಅವರ 'ಜಾಗತಿಕ ವೀರನ ಕಥೆ' ಇವರಚೊಚ್ಚಲ ಪ್ರಯತ್ನ ಮತ್ತು ಗೆಲುವು. ನಂತರ 'ಮಹಾಮಾಯಿ'ಯಲ್ಲಿ ಮುಖ್ಯ ನಟನಾಗಿ ಅಭಿನಯಿಸಿದರು. ಇದು ಅವರ ಆಸಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸಿತ್ತು. ಜನಜಾಗೃತಿಗಾಗಿ ಮಾಡಿದ ಬೀದಿ ನಾಟಕಗಳಲ್ಲಿ ಅಭಿನಯಿಸಿದ ಕೀರ್ತಿ ಅವರ ಪಾಲಿಗಿತ್ತು ಜೊತೆಗೆ ದ.ಕ. ಜಿಲ್ಲೆಯಾದ್ಯಂತ ಜನಜಾಗೃತಿ ಮೂಡಿಸಿದ ಹೆಮ್ಮೆಯ ಕಲಾವಿದ. ಜೊತೆಗೆ ವಿದ್ಯಾರ್ಥಿಯಾಗಿದ್ದಾಗಲೇ ನಿರ್ದೇಶನದಲ್ಲಿ ತೊಡಗಿ ಸಾಕಷ್ಟು ನಾಟಕಗಳಿಗೆ ಜೀವ ತುಂಬಿದ್ದಾರೆ.

ಇವರು ಒಂದು ಪಾತ್ರವಾಗಿ ಅಭಿನಯಿಸಿದರೆಂದಾದರೆ ಆ ಪಾತ್ರವೇ ತಾನಾಗಿ ಬಿಡುತ್ತಿದ್ದರು. ಅದೇ ಪಾತ್ರಕ್ಕೆ ಗೆಲುವಾಗಿ ಜೀವ ತುಂಬುವ ಉತ್ಸಾಹಿ ನಟರಾಗಿದ್ದರು. ಇಲ್ಲಿ ಇವರು ಪ್ರಭಾವಿತರಾದುದು ತುಕರಾಂ ಏನೆಕಲ್ಲು, ಐ.ಕೆ. ಬೊಳುವಾರು, ಎಸ್,ಎಸ್. ಗೋವಿಂದ ಅವರಿಂದ. ಇವರೆಲ್ಲರೂ ಅವರ ಆಸಕ್ತಿಗೊಂದು ಅಡಿಗಲ್ಲು. ಹೆಜ್ಜೆ-ಹೆಜ್ಜೆಗೂ ಕಲಾಸಕ್ತಿಯನ್ನು ಹೆಚ್ಚಿಸಿ ಮುನ್ನಡೆಯುವಂತೆ ಪ್ರೋತ್ಸಾಹಿಸಿದವರು. ಪ್ರೋತ್ಸಾಹದ ಹಿಂದೆಯೇ ಅವರ ಗೆಲುವು ಮುನ್ನಡೆಯಿತು. ನಂತರ ತೆರಳಿದ್ದು ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್ ನತ್ತ. ಇದನ್ನು ಕೇಳಿದಾಗಲೇ ನಮಗೆ ಅರಿವಾಗುವುದು ಅವರ ಕಲಾಸಕ್ತಿ ಎಷ್ಟಿತ್ತೆಂಬುದು. ಇದನ್ನು ಮುಗಿಸಿ ಕೆಲವು ವರ್ಷಗಳ ಕಾಲ ರಂಗಶಿಕ್ಷಣ ತರಬೇತಿ ಹೆಗ್ಗೋಡು ಇಲ್ಲಿ ನಟನಾಗಿ ನಿರ್ದೇಶಕನಾಗಿ ದುಡಿದರು. ಇವರ ಗುರು ವೃಂದದವರಲ್ಲಿ ಅಕ್ಷರ, ಕೆ.ವಿ. ಸುಬ್ಬಣ್ಣ, ರಘುನಂದನ್, ಜಂಬೆ ಮುಂತಾದವರು ಪ್ರಮುಖರು ಮುಖ್ಯ ನಟನಾಗಿ ರಂಗಭೂಮಿ ಕಲಾವಿದನಾಗಿ ನಿನಾಸಂನಲ್ಲಿ ಮೂರು ವರ್ಷಗಳ ಕಾಲ ತಿರುಗಾಟ ನಡೆಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.


ಜೊತೆಗೆ ಕಿರುತೆರೆ ನಟ ನವೃತ್ತಿ ಪ್ರಾಧ್ಯಪಕರು ಆದ ಜಿ.ಕೆ. ಗೋವಿಂದ ರಾವ್ ಅವರ ಜೊತೆ ನಿಕಟವರ್ತಿಯಾಗಿ ಮತ್ತು ಉತ್ತಮ ನಡೆ-ನುಡಿಯಿಂದ ತನ್ನ ಕಲಾಸಕ್ತಿಯನ್ನು ಇಮ್ಮಡಿಗೊಳಿಸಿದರು. ಮೈಸೂರಿನಲ್ಲಿ ರಂಗಶಿಕ್ಷಣ ತರಬೇತಿ ಶಿಕ್ಷಕನಾಗಿ ಎರಡು ವರ್ಷಗಳ ಕಾಲ ತನ್ನ ಅಮೂಲ್ಯ ಸೇವೆ ಸಲ್ಲಿಸಿದರು. ಅಲ್ಲಿಯೇ ತೆರೆದ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದರು.
2009ರಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ರಂಗಶಿಕ್ಷಣ ತರಬೇತಿ ಶಿಕ್ಷಕನಾಗಿ ದುಡಿದಿದ್ದು ಕೇವಲ 1 ವರ್ಷ 2 ತಿಂಗಳು ಅಷ್ಟೆ. ಈ ಕೆಲವೇ ಸಮಯದಲ್ಲಿ 4 ನಾಟಕಗಳನ್ನು ನಿರ್ದೇಶಿಸಿ ವಿಶ್ವವಿದ್ಯಾನಿಲಯ ಪ್ರಶಸ್ತಿ, ಪುರಸ್ಕಾರ ಮತ್ತು ಕಾಲೇಜಿನ ಕೀರ್ತಿ ಪತಾಕೆ ಗಗನಕ್ಕೇರುವಲ್ಲಿ ಇವರ ಪಾತ್ರ ಬಹಳ ಗೌರವಯುತವಾದುದು.

ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ತುಳುನಾಡಿನ ತುಳುಮಗನಾಗಿ ಇವರ ಪಾತ್ರ ಶ್ಲಾಘನೀಯ. ಅಲ್ಲಿ ಇವರು ಗಾಂಧೀಜಿಯ ಪಾತ್ರದಲ್ಲಿ ಮಿಂಚಿದ್ದರು. ಕೋಟ್ಯಾಂತರ ಜನಾಕರ್ಷಣೆ ಪಡೆದ ತುಳುಗ್ರಾಮ ನಿರ್ಮಿಸುವಲ್ಲಿ ಇವರ ಸಾಧನೆ ಅಪಾರವಾದುದು. ಪ್ರಾಮಾಣಿಕ ಮತ್ತು ನೇರ ನಡೆ-ನುಡಿಯ ಕಲಾವಿದನಿಗೆ ಇನ್ನೊಂದು ಹೆಸರೇ ಈ ನವೀನ್. ರಂಗಭೂಮಿ, ರಂಗಶಿಕ್ಷಣವೇ ತನ್ನ ಜೀವವೆಂದು ತಿಳಿದು ಸದ್ದಿಲ್ಲದೇ ಸುದ್ದಿ ಮಾಡಿದ ವ್ಯಕ್ತಿ.


ನನ್ನ ಜೀವ ಇರುವುದು ನಾಟಕಕ್ಕಾಗಿಯೇ. ಇದು ನನಗೆ ಅನ್ನ ನೀಡುತ್ತದೆ. ನಾನು ನಾಟಕಕ್ಕಾಗಿಯೇ ಸಾಯುತ್ತೇನೆ. ನಾಟಕವೇ ನನ್ನುಸಿರು. ಎಂಬ ಅವರ ಮಾತಿನಂತೆ ಜೀವನವೆಂಬ ನಾಟಕದ ಪಾತ್ರಕ್ಕೆ ಕೊನೆಹಾಡಿ, ನಾಟಕ ಪ್ರದರ್ಶನಕ್ಕೆ ತೆರಳಿರುವ ಸಂದರ್ಭದಲ್ಲಿ ವಾಹನ ಅಪಘಾತಕ್ಕೆ ಸಿಲುಕಿ ವಿಧಿಯ ಕ್ರೂರ ಲೀಲೆಗೆ ಬಲಿಯಾದರು. ಸೆ.11ಕ್ಕೆ ವರ್ಷ 1 ಸಂದರೂ ಅವರ ನೆನಪುಗಳು ನಮ್ಮ ಮನದಾಳದಲ್ಲಿ ಅಚ್ಚಳಿಯದೇ ಉಳಿದಿದೆ. ಅಂತಹ ಕಲಾವಿದ ಇನ್ನೊಮ್ಮೆ ಹುಟ್ಟಿ ಬರುವಂತಾಗಲಿ. ಅವರ ಅಲ್ಪ ಸಮಯದ ಆದರ್ಶ ಜೀವನವೇ ನಮಗೆ ಉಸಿರಾಗಲಿ, ಜೊತೆಗೆ ದಾರಿದೀಪವೂ ಆಗಲಿ.

ಬರಹ:ವಿಸ್ಮಿತ ಎಡಮಂಗಲ
ತೃತೀಯ ಪತ್ರಿಕೋದ್ಯಮ
ಎಸ್.ಡಿ.ಎಂ. ಕಾಲೇಜು ಉಜಿರೆ

0 comments:

Post a Comment