ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮಕ್ಕಳಿಗೆ ಬೇಡವಾದ ಪೋಷಕರಿಗೆ ಇಲ್ಲಿದೆ ಆಶ್ರಯ
ವಿಶೇಷ ವರದಿ
ಬೈಂದೂರು : ಬೇರೆ ಬೇರೆ ಕಾರಣದಿಂದ ಮಕ್ಕಳು ಹಾಗೂ ಬಂಧು ಬಳಗದವರಿಂದ ದೂರವಾದ ಮುಸ್ಸಂಜೆ ಬದುಕಿಗೆ ಜಾರಿಕೊಂಡ ಅಸಹಾಯಕ ಜೀವಿಗಳಿಗೆ 'ಅನಘ' ಪುನರ್ವಸತಿ ಕೇಂದ್ರ ಬೆಚ್ಚನೆ ಗೂಡು. ಕೂಡು ಕುಟುಂಬದೊಟ್ಟಿಗೆ ಜೀವನದ ಯಾತ್ರೆಯ ಅಂತಿಮ ಘಟ್ಟದಲ್ಲಿರುವ ಹಿರಿಯರಿಗೆ ಅನಘದಲ್ಲಿ ನೂರಾರು ಮೊಮ್ಮಕ್ಕಳ ಪ್ರೀತಿ ಸಿಕ್ಕಿದೆ. 'ಸ್ಫೂರ್ತಿ ಧಾಮ'ದ ಮಕ್ಕಳಿಗೆ ಅಜ್ಜಿಯಂದಿರ ಅಕ್ಕರೆ ಸಿಗುತ್ತಿದೆ. ಅನಘದಲ್ಲಿ ಪ್ರೀತಿಯ ಹಂಚಿಕೆ ನಿರಂತರ. ಕೊಟ್ಟುಕೊಳ್ಳುವ ಸುಖದಲ್ಲಿ ಎಳೆಯರು ಮತ್ತು ಮುಪ್ಪಡರಿದ ಹಿರಿಯ ಜೀವಿಗಳು ಖುಷಿ ಹಂಚಿಕೊಳ್ಳುತ್ತಿದ್ದಾರೆ.


ಎಲ್ಲಿದೆ ಅನಘ ಆಶ್ರಮ

ಕುಂದಾಪುರ ತಾಲೂಕ್ ಬೇಳೂರು ಗ್ರಾಮ ಪಂಚಾಯಿತಿ ಸರಿಹದ್ದಿನಲ್ಲಿ ಅನಘ ಪುನರ್ವಸತಿ ಕೇಂದ್ರ ಬರುತ್ತದೆ. 'ಸ್ಪೂರ್ತಿ ಗ್ರಾಮೀಣ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ' ಆಶ್ರಯದಲ್ಲಿ ಅನಘ ನಡೆಯುತ್ತಿದೆ.
'ಸ್ಪೂರ್ತಿ ಅನೌಪಚಾರಿಕ ವಸತಿ ಶಿಕ್ಷಣ ಕೇಂದ್ರದಲ್ಲಿ ಕಲಿಯುತ್ತಿರುವ ಸುಮಾರು 130ಕ್ಕೂ ಮಿಕ್ಕ ಬೇರೆ ಬೇರೆ ಪ್ರದೇಶದ ಮಕ್ಕಳಿಗೆ ಅನಘ ಆಶ್ರಮದ ಹಿರಿಯ ಜೀವಿಗಳು ಅಜ್ಜ ಅಜ್ಜಿರು. ಕುಟುಂಬ ಸುಖದಿಂದ ವಂಚಿತರಾದ ಅನಘದ ಹಿರಿಯ ಜೀವಿಗಳೂ ಶಿಕ್ಷಣ ಕೇಂದ್ರದ ಮಕ್ಕಳನ್ನು ತಮ್ಮ ಮಮ್ಮೊಕ್ಕಳಂತೆ ಮುದ್ದಿಸುತ್ತಾರೆ. ಆಶ್ರಮದ ಹಿರಿಯರು ಶಿಕ್ಷಣ ಕೇಂದ್ರ ಮಕ್ಕಳ ತೆಕ್ಕೆಯಲ್ಲಿ ಹಳೆಯ ನೆನಪುಗಳಿಗೆ ಜಾರಿಕೊಳ್ಳುತ್ತಿದ್ದಾರೆ.

ಅನಘ ಪುನರ್ವಸತಿ ಕೇಂದ್ರ ಜ.1, 2011ರಲ್ಲಿ ಅರಂಭವಾಯಿತು. 12 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕರ ಸಹಕಾರದಲ್ಲಿ ಪುನರ್ವಸತಿ ಕೇಂದ್ರ ನಿರ್ಮಾಣವಾಯಿತು. ಕೇವಲ ಆರು ತಿಂಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ವೃದ್ಧರ ಸೇವೆಗೆ ಒದಗಿದ್ದು, ಅನಘದ ಹೆಚ್ಚುಗಾರಿಕೆ. ಸಾರ್ವಜನಿಕರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಅನಘ ಪುನರ್ವಸತಿ ಕೇಂದ್ರ.

ಎಲ್ಲೆಲ್ಲಿಂದಲೋ ಬಂದವರು
ಅನಘದಲ್ಲಿ ಪ್ರಸಕ್ತ 16 ಜನ ಹಿರಿಯರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಬಿಹಾರ, ಗುಲ್ಬರ್ಗ, ಬೆಳಗಾಂ, ಬ್ರಹ್ಮಾವರ, ಮಲ್ಪೆ, ಮಣಿಪಾಲ, ಕುಂದಾಪುರ, ವಕ್ವಾಡಿ, ಕೋಟ ಪರಿಸರದ 12 ಜನ ಮಹಿಳೆಯರು 4 ಜನ ಪುರುಷರು ಅನಘದ ಮಾಡಿನಡಿಯಲ್ಲಿ.
ಇವರೊಟ್ಟಿಗೆ ಮಾನಸಿಕ ಹಿಡಿತ ಕಳೆದುಕೊಂಡ ಕರುಣಾಕರ ಮತ್ತು ಸುಧಾಕರ ಅವರನ್ನೂ ಅನಘ ಪೊರೆಯುತ್ತಿದೆ. ಕರುಣಾಕರ ಅವರಂತೂ ಪೊಲಿಟಿಕಲ್ ಸೈನ್ಸ್ನಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಪ್ರಸಕ್ತ ಈ ಇಬ್ಬರೂ ತಮ್ಮ ಮನಸ್ಸಿನ ಹಿಡಿತ ಪಡೆದುಕೊಳ್ಳುತ್ತಿದ್ದಾರೆ. ನೀಟ್ ಎಂಡ್ ಕ್ಲೀನಾಗಿದ್ದಾರೆ.

ಆಶ್ರಮದಲ್ಲಿ ಇರೋರು ಆಶ್ರಮದ ವಾಸ ಬಯಸಿಬಂದಿದ್ದಲ್ಲ. ಬೇರೆ ಬೇರೆ ಕಾರಣಗಳಿಂದ ಕುಟುಂಬದ ಅವಜ್ಞೆಗೆ ಈಡಾದವರು ಆಶ್ರಮದ ಬಾಗಿಲಗೆ ಬಂದಿದ್ದಾರೆ. ಮತ್ತೆ ಕೆಲವರು ರಸ್ತೆಯಿಂದ ಆಶ್ರಮಕ್ಕೆ ಶಿಷ್ಟ್ ಆಗಿದ್ದಾರೆ. ಮತ್ತೆ ಕೆಲವರನ್ನು ಪೊಲೀಸರು ಆಶ್ರಮಕ್ಕೆ ಬಿಟ್ಟು ಹೋಗಿದ್ದಾರೆ. ಒಂದು ಕಾಲದಲ್ಲಿ ನಾಟಕ ರಂಗದಲ್ಲಿ ನರ್ತನದ ಮೂಲಕ ಹೆಸರು ಮಾಡಿದ ಕಲಾವಿದೆ ಕೂಡಾ ಆಶ್ರಮ ವಾಸಿ!

ಆಶ್ರಮದಲ್ಲಿರುವ ಹಿರಿಯ ಜೀವಿಗಳಿಗೆ ವೃದ್ಧಾಶ್ರಮದಲ್ಲಿದ್ದೇವೆ ಎಂಬ ನೋವು ಕಾಡೋದಿಲ್ಲ. ಇದಕ್ಕೆ ಕಾರಣ ಶಿಕ್ಷಣ ಕೇಂದ್ರದ ಮಕ್ಕಳ ಕಲರವ ಮೇಳ. ಈ ಮಕ್ಕಳಲ್ಲಿ ತಮ್ಮ ತಮ್ಮ ಮಕ್ಕಳು,ಮರಿಯನ್ನು ಕಂಡುಕೊಳ್ಳುವ ಪ್ರಯತ್ನ ಹಿರಿಯರು ಮಾಡುತ್ತಿದ್ದಾರೆ. ಮಕ್ಕಳು ಕೂಡಾ ಹಿರಿಯ ಜೀವಿಗಳ ಸೇವೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಒಟ್ಟಾರೆ ಇಲ್ಲಿ ಎಲ್ಲರೂ ಕ್ಷೇಮ ಎಲ್ಲವೂ ಸಸೂತ್ರ. ಯಾರೂ ಇಲ್ಲದವರಿಗೆ ದೇವರಿದ್ದಾನೆ ಎಂಬ ನಾಣ್ನುಡಿಯನ್ನು ಆಶ್ರಮ ಸತ್ಯ ಮಾಡಹೊರಟಿದೆ.

ಅನಘ ಆಶ್ರಮ ವಿಳಾಸ : ಅನಘ ಪುನರ್ ವಸತಿ ಕೇಂದ್ರ, ಬೇಳೂರು, ಕುಂದಾಪುರ ತಾಲೂಕ್, ಉಡುಪಿ ಜಿಲ್ಲೆ. ಮೋಬೈಲ್ 948984119.

ಉಚಿತವಾಗಿ ಅತ್ಯಂತ ಬಡವರಿಗೆ, ಅವಕಾಶ ವಂಚಿತರಿಗೆ ಕನಿಷ್ಠ ಬದುಕು ಕೊಡುವ ಉದ್ದೇಶದಲ್ಲಿ ಅನಘ ಪುನರ್ವಸತಿ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರ ಸಹಕಾರದಲ್ಲಿ ಅನಘ ನಡೆಯುತ್ತಿದೆ.
ಹಣ ಕೊಟ್ಟು ವೃದ್ಧಾಶ್ರಮಕ್ಕೆ ಪೋಷಕರನ್ನು ತಂದು ಬಿಡೋರಿಗೆ ಆಶ್ರಮ ಅವಕಾಶ ನೀಡೋದಿಲ್ಲ. ಆಶ್ರಮಕ್ಕೆ ಬರುವ ಹಿರಿಯ ಜೀವಿಗಳಿಂದ ಹಣ ಸ್ವೀಕಾರ ಮಾಡೋದಿಲ್ಲ.
ಅನಘ ಸ್ಥಾಪನೆಯ ಹಿಂದೆ ಮತ್ತೊಂದು ಸದುದ್ದೇಶವಿದೆ. ಶಿಕ್ಷಣ ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಅನಾಥ ಪ್ರಜ್ಞೆ ಕಾಡಬಾರದು. ಅನಘ ತೆರೆದಿದ್ದರಿಂದ ಹಿರಿಯ ಮತ್ತು ಕಿರಿಯರಲ್ಲಿ ಕುಟುಂಬ ಭಾಂದವ್ಯ ಹುಟ್ಟಿದೆ.
ಅನಘದಲ್ಲಿ ಊಟ, ವಸತಿ, ಶುಶ್ರೂಷೆ ಮತ್ತು ವೈದ್ಯಕೀಯ ಪರೀಕ್ಷೆ ಕೂಡಾ ಉಚಿತ. ಮುಂದಿನ ದಿನದಲ್ಲಿ ಸಾರ್ವಜನಿಕರು ಸಹಕಾರಿಸಿದರೆ ಹುಚ್ಚರ ಆಶ್ರಮ ತೆರೆಯಲಾಗುತ್ತದೆ.


ಶ್ರೀಪತಿ ಹೆಗಡೆ ಹಕ್ಲಾಡಿ

0 comments:

Post a Comment