ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್
ಇಂದಿನ ಆಧುನಿಕ ಯುಗದಲ್ಲಿ ಸ್ಪರ್ಧಿಸಿ ಗೆಲ್ಲುವದು ಅನಿವಾರ್ಯ . ಸರಕಾರ ನಿಗಧಿಪಡಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉದ್ಯೋಗ ಪಡೆದು ಜೀವನದಲ್ಲಿ ಸಾಫಲ್ಯತೆಯನ್ನು ಪಡೆದುಕೊಳ್ಳಬೇಕೆಂಬುದು ಹಲವು ಜನರ ಆಕಾಂಕ್ಷೆ. ಆದರೆ ಹಲವು ಜನರಲ್ಲಿ ಕೆಲವು ಜನರು ಮಾತ್ರ ಸ್ಪರ್ಧೆ ಎದುರಿಸಲು ತಕ್ಕ ಸಿದ್ಧತೆಯನ್ನು ಮಾಡಿಕೊಂಡು ಆ ನಿಟ್ಟಿನಲ್ಲಿ ನಿರಂತರವಾಗಿ ಅಭ್ಯಾಸದಲ್ಲಿ ತೊಡಗುತ್ತಾರೆ, ಪ್ರಯತ್ನ ಪಡುವವರಿಗೇನೂ ಕಡಿಮೆಯಿಲ್ಲ, ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವದರಲ್ಲಿ ಸಂಶಯವಿಲ್ಲ ಎಷ್ಟೋ ಜನ ಅದು ಮಾಡಬೇಕು, ಇದು ಮಾಡಬೇಕು ಎಂದುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಪಡದೆ ಕಾಲಹರಣ ಮಾಡುವದನ್ನು ನೋಡುತ್ತೇವೆ.ಕರ್ನಾಟಕ ಲೋಕ ಸೇವಾ ಆಯೋಗ ನಡೆಸುವ ಎಸ್,ಡಿ,ಎ. ಎಫ್,ಡಿಎ. ಪಿ,ಡಿ,ಒ. ಗಳಂತಹ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಬರೆಯಲು ಲಕ್ಷ ಲಕ್ಷ ಜನರು ಅರ್ಜಿ ಹಾಕಿದ್ದಾರೆ. ಈ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ ಅತ್ಯವಶ್ಯಕ, ಆಂಗ್ಲ ಭಾಷೆಯು ಕೂಡ ಅವಶ್ಯವಾಗಿದೆ. ಗೆಲುವಿಗಾಗಿ ಪ್ರಯತ್ನ ಪಡಬೇಕಷ್ಟೇ. ಇತಿಹಾಸ, ಭೂಗೋಳ, ವಿಜ್ಞಾನ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಂಖ್ಯಾಶಾಸ್ತ್ರಗಳಂತಹ ವಿಷಯಗಳಲ್ಲಿ ಪ್ರಾವೀಣ್ಯತೆ ಹೊಂದಿರಬೇಕಾಗುತ್ತದೆ. ಕಂಪ್ಯೂಟರ್ ಜ್ಞಾನ ಹೊಂದುವುದು ಇದಕ್ಕೆ ಹೊರತಾಗಿಲ್ಲ, ಸಿ.ಇ.ಟಿ ಪರೀಕ್ಷೆಗಳಲ್ಲಿ ಒಂದೇ ವಿಷಯದ ಮೇಲೆ ಪ್ರಶ್ನೆಗಳನ್ನು ಕೇಳಲಾಗುವದಿಲ್ಲ. ಆದ್ದರಿಂದ ಸ್ಪರ್ಧಾಕಾಂಕ್ಷಿಗಳು ಹಲವು ವಿಷಯಗಳಲ್ಲಿ ಪ್ರಭುತ್ವ ಹೊಂದುವದು ಅಗತ್ಯವಾಗಿದೆ. ಎಲ್ಲಾ ವಿಷಯಗಳನ್ನು ಅಭ್ಯಾಸ ಮಾಡಬೇಕೆಂದರೆ ಗೊಂದಲ ಸೃಷ್ಟಿಯಾಗುವದು ಸಹಜ. ಸಿ.ಇ.ಟಿ ಪರೀಕ್ಷೆಗೆ ತಯಾರಾಗಬೇಕಾದರೆ ಪ್ರಥಮವಾಗಿ ಏಕಾಗ್ರತೆಯನ್ನು ಗಳಿಸಿಕೊಳ್ಳಬೇಕು. ನಮ್ಮ ಪ್ರೀತಿ ಎಲ್ಲಿರುತ್ತದೆಯೋ, ಅಲ್ಲ ನಮ್ಮ ಮನಸ್ಸಿರುತ್ತದೆ. ನಮ್ಮ ಮನಸ್ಸು ಎಲ್ಲಿರುತ್ತದೆಯೋ ಅಲ್ಲಿ ಏಕಾಗ್ರತೆ ಇರುತ್ತದೆ. ಮೊದಲು ಇಷ್ಟವಿರುವ ವಿಷಯವನ್ನು ಆಯ್ದುಕೊಂಡು ಅದರ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಬೇಕು.

ಎಲ್ಲಾ ವಿಷಯಗಳುಳ್ಳ ಪುಸ್ತಕಗಳನ್ನು ಕೂಡಿ ಹಾಕಿಕೊಂಡು ಅಭ್ಯಾಸ ಮಾಡುವದು ಒಳ್ಳೆಯ ಪದ್ಧತಿಯಲ್ಲ. ಏಕೆಂದರೆ ಯಾವುದನ್ನು ಓದಬೇಕು, ಯಾವುದನ್ನು ಬಿಡಬೆಕು ಎಂದು ಗಲಿಬಿಲಿಗೊಳ್ಳುವಂತಾಗುತ್ತದೆ. ಟೈಂ ಟೇಬಲ್ ಹಾಕಿಕೊಂಡು ಅಭ್ಯಾಸ ಮಾಡುವದು ಒಳ್ಳೆಯದು. ಕಳೆದು ಹೋದ ಸಮಯ ಮರಳಿ ಬಾರದು ಎಂಬ ಕಟುಸತ್ಯ ತಿಳಿದಿರಬೇಕಾಗುತ್ತದೆ. ಜೀವನದಲ್ಲಿ ಸಮಯ ಪಾಲನೆ ಅತ್ಯಗತ್ಯವಾಗಿದೆ. ಸಮಯದ ಮಹತ್ವ ತಿಳಿಯಬೇಕಾದರೆ, ವರ್ಷಪೂರ್ತಿ ಓದಿಕೊಂಡು ಪರಿಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಯನ್ನು ಕೇಳಬೇಕು, ಬಸ್ಸು ನಿಲ್ದಾಣಕ್ಕೆ ಐದು ನಿಮಿಷ ತಡವಾಗಿ ಬಂದು ಬಸ್ಸು ತಪ್ಪಸಿಕೊಂಡ ವ್ಯಕ್ತಿಯನ್ನು ಕೇಳಬೇಕು, ಟಿಕೇಟು ಖರೀದಿಸಲು ಲೇಟಾಗಿ ಒಂದು ನಿಮಿಷದಲ್ಲೇ ರೈಲು ತಪ್ಪಿಸಿಕೊಂಡ ಪ್ರಯಾಣಿಕನನ್ನು ಕೇಳಬೇಕು, ಓಲಂಪಿಕ್ಸ್ ಓಟದಲ್ಲಿ ಒಂದು ಸೆಕೆಂಡಿನಲ್ಲಿ ಸೋತು ಕಪ್ ಕಳೆದುಕೊಂಡ ಆಟಗಾರರನ್ನು ಕೇಳಬೇಕು. ಇದರಿಂದ ಸಮಯದ ಮಹತ್ವದ ಅರಿವಾಗುತ್ತದೆ, ವಿನಾಕಾರಣ ಸಮಯ ಕಳೆಯಲು ಪ್ರಯತ್ನಿಸಬೇಡಿ, ಇದ್ದ ಸಮಯದಲ್ಲೇ ಸಾಧಿಸುವದನ್ನು ಕಲಿತುಕೊಳ್ಳಿ.
ಯಾವುದಾದರೊಂದು ಕೆಲಸ ಮಾಡಬೇಕಾದರೆ ಅಥವಾ ಅಭ್ಯಾಸ ಮಾಡಬೇಕಾದರೆ ಮುಂದೂಡುವ ಪ್ರವೃತ್ತಿ ಸಲ್ಲದು. ನಾಳೆ ಮಾಡುವ ಕೆಲಸ ಇವತ್ತೇ ಮಾಡು, ಇವತ್ತೇ ಮಾಡುವ ಕೆಲಸ ಈಗಲೇ ಮಾಡಿ ಮುಗಿಸಿ ಬಿಡಿ. ಜೀವನದಲ್ಲಿ ಯಶಸ್ವಿಯನ್ನು ಸಾಧಿಸಿರುವ ವ್ಯಕ್ತಿಗಳು ವಿಭಿನ್ನ ಕೆಲಸಗಳನ್ನೇನೂ ಮಾಡುವದಿಲ್ಲ ಅವರು ಕೆಲಸಗಳನ್ನೆ ಭಿನ್ನಿ ಭಿನ್ನ ರೀತಿಯಲ್ಲಿ ಮಾಡುತ್ತಾರೆ, ಯಶ ಸಾಧಿಸುತ್ತಾರೆ. ಸಾಧಿಸಬೇಕೆನ್ನುವ ಛಲ, ಆತ್ಮವಿಶ್ವಾಸ, ದೃಢನಿರ್ಧಾರ ಇದ್ದರೆ ಜೀವನದಲ್ಲಿ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ.

ಕದಿಯಲು ಸಾಧ್ಯವಾಗದ ವಸ್ತುವೆಂದರೆ ಜ್ಞಾನ, ಜ್ಞಾನ ಸಂಪಾದಿಸಿದರೆ ಎಂತಹ ಸ್ಪರ್ಧಾತ್ಮ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಜ್ಞಾನದ ಬೆಳಕು ಪಸರಿಸಬೇಕು, ಪ್ರತಿಯೊಬ್ಬರಿಗೂ ತಿಳಿದುಕೊಳ್ಳೂವ ಜಿಜ್ಞಾಸೆ ಇರಬೇಕು, ತಿಳಿಸುವ ಆಸೆ ಇರಬೇಕು, ಕಲಿಕೆ ನಿರಂತವಾಗಿರಬೇಕು. ಇಂದಿನ ಯುವಜನತೆಯಲ್ಲಿ ಆತ್ಮವಿಶ್ವಾಸ ಇಲ್ಲದಿರುವದೇ ಅವರ ಹಿನ್ನೆಡೆಗೆ ಕಾರಣವಾಗಿದೆ. ಅವರಲ್ಲಿ ಉತ್ಸಾಹ ಪುಟಿದೇಳಬೇಕು, ತನ್ನಲ್ಲಿ ತನಗೆ ನಂಬಿಕೆ ಹುಟ್ಟಬೇಕು, ಯುವಕರು ತಮ್ಮಲ್ಲಿ ಅಡಗಿರುವ ಶಕ್ತಿಯನ್ನು ಪ್ರಚುರಪಡಿಸಿ ಆತ್ಮ ಬಲದಿಂದ ಮುನ್ನುಗ್ಗಿ ಶ್ರದ್ದೆಯಿಂದ ಕಾರ್ಯ ಸಾಧಿಸಬೇಕಾಗಿದೆ ಏಕೆಂದರೆ ಶ್ರದ್ಧೆಯೇ ಸಿದ್ದಿಯ ಕೀಲಿ ಕೈ ಆಗಿದೆ.
ಮುಂದೂಡುವ ಪ್ರವೃತ್ತಿ ಅತ್ಯಂತ ಭಯಂಕರ ಲಕ್ಷಣ ಒಬ್ಬನಲ್ಲಿ ಸಾಮರ್ಥ್ಯವಿದ್ದೂ ಹಿಂದುಳಿಯುತ್ತರುವನೆಂದರೆ ಅದಕ್ಕೆ ಕಾರಣ ಮುಂದೂಡುವ ಪ್ರವೃತ್ತಿಯೇ. ಕೆಲಸವನ್ನು ಪದೇ ಪದೇ ಮುಂದೂಡುವದನ್ನು ರೂಢಿಸಿಕೊಂಡರೆ ಸೋಮಾರಿತನ ಹೆಗಲೇರಿ ಗಹಗಹಿಸುತ್ತದೆ. ಇದು ಪ್ರತಿಯೊಬ್ಬರಿಗೂ ಅನ್ವಯವಾಗುವ ಮಾತು. ಒಂದು ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ಓದುವದರಿಂದ ಯಶಸ್ಸು ಕಟ್ಟಿಟ್ಟ ಬುತ್ತಿ.

ಅಮರೇಶ ನಾಯಕ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಗುಲಬರ್ಗಾ ವಿಶ್ವವಿದ್ಯಾಲಯ.

0 comments:

Post a Comment