ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:41 PM

ಗಾಂಧೀವಾದ

Posted by ekanasu

ವಿಚಾರ

ಸಾಮಾಜಿಕ ಬದಲಾವಣೆಯ ಅನಿವಾರ್ಯತೆಗೆ ಒಬ್ಬ ಹೊಸ ನಾಯಕನ ಉದಯವಾಗಿದೆ. ಕ್ರಿಸ್ತ-ಕೃಷ್ಣನೆಂಬ ಆಧ್ಯಾತಿಕ ಐಡಿಯಾಲಜಿಗಳ ಹಿನ್ನೆಲೆಯಲ್ಲಿ ಗಾಂಧಿ-ಮಂಡೇಲಾರಂತಹ ಮಹಾನಾಯಕರು ತಮ್ಮ ಜೀವನವನ್ನೇ ಎಲ್ಲಾ ಪೀಳಿಗೆಗೂ ಸರಿಹೊಂದುವಂತಹ ಸಂದೇಶವಾಗಿಸಿದ್ದಾರೆ. ಈ ಹೊಸ ಶತಮಾನದ ಹೈ-ಫೈ ಜಗತ್ತಿನ ಜಂಜಾಟದಲ್ಲಿ ಗಾಂಧೀವಾದ ಮುಗಿದೇಹೋಯಿತು ಎನ್ನುವಂತಹ ಕಾಲಘಟ್ಟದಲ್ಲಿ ಅಣ್ಣಾ ಹಜಾರೆಯವರ ದೃಢ ನಿಲುವು ಗಾಂಧೀವಾದದ ಅಭಿವ್ಯಕ್ತಿಯ ಕಿರೀಟಕ್ಕೆ ಮತ್ತೊಮ್ಮೆ ವಿಜಯ ಪತಾಕೆಯ ಗರಿಯನ್ನೇರಿಸಿದೆ. ಅಹಿಂಸೆಯ ಹರಿಕಾರ ಗಾಂಧಿಯ ಪ್ರತಿಮೆಯ ಆಸುಪಾಸಿನಲ್ಲಿ ನಡೆಸಿದ ಹಲವು ಬಾಂಬ್ ವಿಸ್ಫೋಟಗಳಿಗಿಂತಲೂ, ಗಾಂಧಿಯ ಭಾವಚಿತ್ರವನ್ನು ಗೋಡೆಗೆ ತಗಲಿಸಿ ಅದೇ ಕೋಣೆಯಲ್ಲಿ ಲಂಚಪಡೆದು ಲೋಕಾಯುಕ್ತ ಬಲೆಗೆ ಬಿದ್ದ ತಿಮಿಂಗಿಲಗಳ ಸುದ್ದಿಗಿಂತಲೂ ನೂರು ಪಟ್ಟು ಆಹಾರವನ್ನು ಗಾಂಧೀವಾದದ ಅನುಷ್ಠಾನ ಮಾಧ್ಯಮಗಳಿಗೆ ದೊರಕಿಸಿಕೊಟ್ಟಿದೆ. ಸತ್ಯ ಅಹಿಂಸೆಗಳೆಂಬ ಸಾರ್ವಕಾಲಿಕ ತಳಪಾಯದ ಮೇಲೆ ನಿಂತ ಪ್ರತಿಭಟನಾ ವಿಧಾನ ಅಬಾಲವೃದ್ಧರೆಂಬ ಭೇದವಿಲ್ಲದೆ ಪ್ರತಿಯೊಬ್ಬರನ್ನೂ ತನ್ನೆಡೆಗೆ ಸೆಳೆದುಕೊಂಡ ಪರಿ ಅದ್ಭುತ. ದೇಶದ ಮೂಲೆ ಮೂಲೆಗಳಲ್ಲಿ ಅಣ್ಣಾರ ವಿಚಾರಗಳನ್ನು ಬೆಂಬಲಿಸಿ ಪ್ರತಿಧ್ವನಿಸುತ್ತಿರುವ ಕೂಗೇ ಇದಕ್ಕೆ ಸಾಕ್ಷಿ.


ಗಾಂಧೀವಾದದ ಕಲ್ಪನೆ ಭಾರತದಲ್ಲಿ ಗಾಂಧೀಜಿಯವರಷ್ಟೇ ಆಳವಾಗಿ ಅಗೋಚರವಾಗಿ ತಳವೂರಿದೆ ಎಂಬುದಕ್ಕೆ ಹಲವು ಉದಾಹರಣೆಗಳು ಬೆನ್ನೆಲುಬಾಗಿ ನಿಲ್ಲುತ್ತವೆ. ಒಂದೆರಡು ವರ್ಷಗಳ ಹಿಂದೆ ವಿಧು ವಿನೋದ್ ಚೋಪ್ರಾರ ನಿರ್ದೇಶನದಲ್ಲಿ ಮೂಡಿಬಂದ "ಲಗೇ ರಹೋ ಮುನ್ನಾಭಾಯಿ" ಇಂತಹದ್ದೇ ಒಂದು ವಿಚಾರಧಾರೆಯನ್ನು ವಿಮರ್ಶಾತ್ಮಕವಾಗಿ ತೆರೆಯ ಮೇಲೆ ಮೂಡಿಸಿ ಜನಮನ ಗೆದ್ದಿತ್ತು. ಗಾಂಧೀವಾದವನ್ನು ಕೇವಲ "ಥಿಯರಿ"ಯೆಂಬ ಲೇಬಲ್ ಹಾಕಿ ಗ್ರಂಥಾಲಯದ ಧೂಳು ಹಿಡಿದ ಅಲಮಾರಿಗಳಲ್ಲಿರಿಸದೆ ನೈಜರೂಪದಲ್ಲೂ ಅನುಷ್ಠಾನಗೊಳಿಸಬಹುದೆಂಬ ಸತ್ಯವನ್ನು ಮನೋರಂಜನೆಯ ಧಾಟಿಯಲ್ಲಿ ಮೂಲವಿಚಾರಕ್ಕೆ ಕಿಂಚಿತ್ತೂ ಪೆಟ್ಟಾಗದಂತೆ ನಿರ್ದೇಶಕರು ಸಾಬೀತುಪಡಿಸಿದ್ದರು. ಮುನ್ನಾಭಾಯಿ ಸರಣಿಯ ಮೊದಲ ಭಾಗದಲ್ಲೂ ಶಾಂತಿ-ಸೌಹಾರ್ದ ಮತ್ತು ಪ್ರೀತಿಯ ನೆರಳಿನಲ್ಲಿ ಜನಸೇವೆ ನಡೆಸುವ ವೈದ್ಯಕೀಯ ಜೀವನದ ಹಿನ್ನೆಲೆಯುಳ್ಳ ಉತ್ತಮ ಸಂದೇಶವಿದೆ.

ಬಹುಶಃ "ಎಲ್ಲವೂ ಸರಿಯಿದೆ, ಇನ್ನು ಉಳಿದುದನ್ನು ಸರಿಮಾಡುವುದೇ ಅಸಂಭವ" ಎಂಬ ಭ್ರಮೆಯ ಮುಖವಾಡದ ಹಿಂದೆ ತನ್ನನ್ನು ತಾನು ಹತಾಶವಾಗಿ ಮರೆಮಾಚಿಸಿಕೊಂಡಿದ್ದ ಭಾರತೀಯರಿಗೆ ಒಂದು ದನಿಯ ಅನಿವಾರ್ಯತೆಯಿತ್ತು. ಅದು ಅಣ್ಣಾ ಹಜಾರೆಯವರ ರೂಪದಲ್ಲಿ ಸಂಪೂರ್ಣವಾಗಿದೆ. ಎಲ್ಲೋ ಹುದುಗಿಹೋಗಿದ್ದ ವ್ಯವಸ್ಥೆಯ ಬಗೆಗಿದ್ದ ಹತಾಶೆಯೆಲ್ಲವೂ ಈಗ ಒಮ್ಮೆಲೇ ವಕ್ಕರಿಸಿಬಂದಿದೆ. "ವನ್ ಮ್ಯಾನ್ ಆರ್ಮಿ " ಗಳಿಸಿಕೊಟ್ಟ ಈ ವಿಜಯವನ್ನು ಉಳಿಸಿಕೊಂಡು ಹೋಗುವುದೇ ಈಗ ಮುಂದಿರುವ ಪ್ರಶ್ನೆ. ಏಕೆಂದರೆ ಅಣ್ಣಾ ಹಜಾರೆಯೊಬ್ಬರೇ ಭಾರತವಲ್ಲ. ಇಲ್ಲಿ ನೂರು ಕೋಟಿಗೂ ಹೆಚ್ಚು ಜನಸಮೂಹವಿದೆ. ವ್ಯವಸ್ಥೆಯ ಬಗ್ಗೆ ಕಂಗೆಟ್ಟ ಅದೇ ಜನಸಮೂಹ. ಭ್ರಷ್ಟಾಚಾರಕ್ಕೆ ಈ ಹಿಂದೆ ತನ್ನ ಅನುಕೂಲಕ್ಕೆ ತಕ್ಕಂತೆ ಮೌನವಾಗಿ ಬೆಂಬಲಿಸಿದ ಅದೇ ಜನಸಮೂಹ. ಅಣ್ಣಾರ ನೈತಿಕತೆಯ ಬೆನ್ನೆಲುಬಾಗಿ ನಿಂತ ಈ ಸತ್ಯಾಗ್ರಹದುದ್ದಕ್ಕೂ ನಿಂತ ಜನತೆ ಪ್ರಾಮಾಣಿಕವಾಗಿ ಭ್ರಷ್ಟಾಚಾರದ ವಿರುದ್ಧ ತನ್ನನ್ನು ತಾನೂ ಅಣಿಗೊಳಿಸಿಕೊಳ್ಳಬೇಕಾಗಿದೆ. ಗಾಂಧಿವಾದದ ಬಗ್ಗೆ ಮತ್ತೊಮ್ಮೆ ಗಂಭೀರ ಚಿಂತನೆಯನ್ನು ಮಾಡಬೇಕಿದೆ.

ಗಾಂಧೀವಾದ ಮಾರ್ಟಿನ್ ಲೂಥರ್ ಕಿಂಗ್ ರಂತಹ ನಾಯಕರಿಂದ ಹಿಡಿದು ಹಲವು ಬರಹಗಾರರಿಗೂ, ಚಿಂತಕರಿಗೂ ಒಂದು ವೈಚಾರಿಕ ನೆಲೆಯನ್ನು ಕಟ್ಟಿಕೊಟ್ಟಿದೆ. ಗಾಂಧಿಯವರ ಬಗ್ಗೆ ಪ್ರಕಟವಾದಷ್ಟು ಸಾಧಾರಣವಾಗಿ ಇನ್ಯಾರ ಬಗ್ಗೆಯೂ ಸಾಹಿತ್ಯ ಲೋಕದಲ್ಲಿ ಪ್ರಕಟವಾಗಿರಲಿಕ್ಕಿಲ್ಲ. ಬಾಪೂ ತನ್ನ ಬಾಲ್ಯಾವಸ್ಥೆಯಲ್ಲಿ ಕಳ್ಳತನ ಮಾಡಿ ತಂದೆಯ ಬಳಿ ತಪ್ಪೊಪ್ಪಿಕೊಳ್ಳುವ ಘಟನೆ, ಹಲವು ಮಕ್ಕಳನ್ನು ಸತ್ಯ ಹೇಳಲು ಬೇಕಾಗಿರುವ ಧೈರ್ಯದ ಬಗ್ಗೆ ಚಿಂತಿಸಿ ಕ್ಷಣಮಾತ್ರಕ್ಕಾದರೂ ತಲ್ಲಣಗೊಳಿಸಿದೆ. ಶಾಂತಮೂರ್ತಿಯಂತೆ ಪುಸ್ತಕಗಳಲ್ಲಿ ಮುಳುಗಿಹೋಗಿದ್ದ ಬಾಲಕನೊಬ್ಬನನ್ನು ಅವನ ಕಿಡಿಗೇಡಿ ಸಹಪಾಠಿಯೊಬ್ಬ "ಆಧುನಿಕ ಗಾಂಧಿ"ಯೆಂದು ಛೇಡಿಸುತ್ತಾನೆ. ಗಾಂಧಿವಾದದ ತಲೆಬುಡ ಅವನಿಗೆ ಗೊತ್ತಿಲ್ಲದಿದ್ದರೂ ಗಾಂಧಿ ಎಂಬ ಮಹಾನುಭಾವ ಹೀಗೆ ಬದುಕಿದ್ದ ಎಂಬ ಸಾಮಾನ್ಯ ಅರಿವಿದೆ. ಲೌಕಿಕ ಆಸೆಗಳನ್ನು ಬದಿಗೊತ್ತಿ ಕೇವಲ ಗುರಿಯೆಡೆಗೆ ತನ್ನನ್ನು ತಾನು ಅಣಿಗೊಳಿಸುವ ಒಂದು ಜೀವನ ಶೈಲಿಯ ಬಗೆ ಹಲವು ಬೆರಳೆಣಿಕೆಯ ಹದಿಹರೆಯದ ಮನಸ್ಸುಗಳನ್ನು ನಿಮಿಷ ಮಾತ್ರವಾದರೂ ಚಕಿತಗೊಳಿಸಿದೆ. ಗಾಂಧೀ ಟೋಪಿ ಹಾಕಿ ಯಾವ ಯಾವ ರೀತಿ ಭರವಸೆಗಳ ಭಾಷಣ ಮಾಡಬಹುದು ಎಂದು ಇಂದಿಗೂ ರಾಜಕಾರಣಿಗಳು ಚುನಾವಣೆಯ ದಿನಗಳಲ್ಲಿ ತಲೆ ಕೆರೆದುಕೊಳ್ಳಬೇಕಾಗಿದೆ. ಹೀಗೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಗಾಂಧೀವಾದವು ನಮ್ಮೆಲ್ಲರಲ್ಲಿ ನಮಗರಿವಿಲ್ಲದಂತೆಯೇ ಬೆರೆತುಹೋಗಿದೆ. ಗಾಂಧೀವಾದ ಒಂದು ನಿದರ್ಶನ, ಚಿರಂತನ ವಿಚಾರಧಾರೆ ಮತ್ತು ಸಾರ್ವಕಾಲಿಕ ಸತ್ಯವಾಗಿದೆ.

ಗಾಂಧೀಜಿಯವರಿಗೆ ಶಾಂತಿಗೆ ಕೊಡಲ್ಪಡುವ ನೊಬೆಲ್ ಪುರಸ್ಕಾರ ಸಿಗದಿರಬಹುದು. ದೇಶದ ಸಂವಿಧಾನವನ್ನು ಕಟ್ಟಿದ ಮೊದಲ ಸರಕಾರದ ಕ್ಯಾಬಿನೆಟ್ ನಲ್ಲಿ ಅವರ ಹೆಸರು ಇಲ್ಲದಿರಬಹುದು. ಆದರೆ ಗಾಂಧೀವಾದದ ವಿಚಾರ ಎಷ್ಟು ಜನಸಾಮಾನ್ಯರನ್ನು ಕಾಡಿಲ್ಲ? ಇನ್ನೆಂಥಾ ಪ್ರಶಸ್ತಿಯೆಂಬ ಡಂಬಾಚಾರದ ಅವಶ್ಯಕತೆಯಿದೆ ಈ ದಂತಕಥೆಗೆ? ಗಾಂಧೀಜಿಯವರ ನಿಧನವಾಗಿ ಮುಕ್ಕಾಲು ಶತಮಾನ ಕಳೆದುಹೋದರೂ ಅವರ ವಿಚಾರಧಾರೆ ಇಂದು ನಿನ್ನೆಯದೆಂಬುದಷ್ಟು ಸ್ಪಷ್ಟವಾಗಿದೆ. ಲೆಕ್ಕವಿಲ್ಲದಷ್ಟು ಮಂದಿ ಇಂದಿಗೂ ವಿಶ್ವದ ಮೂಲೆ ಮೂಲೆಗಳಲ್ಲಿ ಸದ್ದಿಲ್ಲದೆ ಜನಸೇವೆ ಮಾಡುತ್ತಾ ಧನ್ಯತೆಯನ್ನು ಪಡೆಯುತ್ತಿದ್ದಾರೆ. ಆರೋಗ್ಯ, ಶಿಕ್ಷಣ, ಅಭಿವೃದ್ಧಿಗಳಂತಹ ದೂರದರ್ಶಿತ್ವದ ಅನಿವಾರ್ಯತೆಯಿರುವ ಕ್ಷೇತ್ರಗಳಲ್ಲಿ ಸರಕಾರದ ನಯಾಪೈಸೆಯನ್ನೂ ಮುಟ್ಟದೆ ತಮ್ಮದೇ ಆದ ಸೈದ್ಧಾಂತಿಕ ನೆಲೆಯಲ್ಲಿ ಹಲವರು ಮೌನಕ್ರಾಂತಿಯನ್ನು ನಡೆಸುತ್ತಿದ್ದಾರೆ. ಇವರಿಗೆ ಪ್ರಚಾರದ ಹಂಗಿಲ್ಲ, ಪುರಸ್ಕಾರಗಳ ಗುಂಗಿಲ್ಲ. "ಒಬ್ಬ ಮಾನವನ ಅಂತ್ಯವಾಗಬಹುದು, ಆದರೆ ಅವನ ಆದರ್ಶ ಮತ್ತು ವಿಚಾರಗಳಲ್ಲ" ಎಂಬ ಮಾತು ಗಾಂಧಿ ಮತ್ತು ಗಾಂಧೀವಾದದ ಪ್ರತೀ ಯೋಚನಾ ಲಹರಿಯಲ್ಲೂ ಗುನುಗುತ್ತದೆ.

ಪ್ರಸಾದ್
ಬಿ. ಟೆಕ್. ಸಿವಿಲ್ ಎಂಜಿನಿಯರ್
ವಾಪ್ಕೋಸ್ ಲಿಮಿಟೆಡ್
(ಭಾರತ ಸರಕಾರದ ಅಧೀನ)
ಗುರ್ಗಾಂವ್, ಹರಿಯಾಣ.

0 comments:

Post a Comment