ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಮೋಟುದ್ದದ ಕೂದಲಿಗೆ ಅಡ್ಡಾದಿಡ್ಡಿ ಕ್ಲಿಪ್ ಸಿಕ್ಕಿಸಿಕೊಳ್ಳುತ್ತಿದ್ದ ಮೊಮ್ಮಗಳನ್ನು ನೋಡಿದ ಅಜ್ಜಿ ಹಿಂದೊಂದು ಕಾಲವಿತ್ತು ಎಂದು ಉದ್ಗಾರವೆಳೆಯುತ್ತಾ... ಹೆಣ್ಮಕ್ಕಳು ಉದ್ದ ಜಡೆ ಹೆಣೆದು ಮೊಳವುದ್ದದ ಘಮಘಮಿಸುವ ಮಲ್ಲಿಗೆ ಹೂ ಮುಡಿದು ಸಿಂಗರಿಸಿಕೊಂಡರೆ, ಸೌಂದರ್ಯಕ್ಕೆ ಬೇರೆ ಉದಾಹರಣೆ ಬೆಕಿಲ್ಲ! ಎಂದು ತನ್ನ ಉಪದೇಶವನ್ನು ಸುಸೂತ್ರವಾಗಿ ಮುಗಿಸಿದಳು. ನಿಜ! ಹಳ್ಳಿಗಳಲ್ಲಿ ಅಂಗಳದ ತುದಿಯಲ್ಲಿಯೋ, ಹಿತ್ತಲ ಕಡೆಗೋ, ತೋಟದ ಕಾಲುವೆಯ ದಿಬ್ಬದ ಮೇಲೋ ಹಿಂಡು ಹಿಂಡಾಗಿ ಬೆಳೆದ ಮಲ್ಲಿಗೆಯ ಬುಡಗಳಿಗೆ ಅಜ್ಜಿಗಿನಂತಲೂ ಹೆಚ್ಚಿನ ಆಯಸ್ಸು!ಹೊತ್ತು ಮುಳುಗುವವರೆಗೆ ಎಷ್ಟೇ ಮೈಮುರಿಯುವ ಕೆಲಸವಿರಲಿ,ಮಲ್ಲಿಗೆ ಗಿಡದ ಆರೈಕೆ ಮಹಿಳೆಯ ದಿನಚರಿಯಲ್ಲೊಂದು.ಮಲ್ಲಿಗೆಗೇ ಪ್ರತ್ಯೇಕವಾದ ತೋಟವನ್ನೇನೂ ನಿರ್ಮಿಸುವುದು ಇವರ ಜಾಯಮಾನವಲ್ಲ. ಎಲ್ಲಿ ಹೊಸ ತರಹದ ಮಲ್ಲಿಗೆ ಗಿಡ ಇಲ್ಲವೇ ಬಳ್ಳಿ ಇದೆಯೆಂಬ ಸುದ್ದಿ ತಿಳಿಯುವುದೋ, ಅದನ್ನು ಹರಸಾಹಸ ಪಟ್ಟಂತೆ ತಂದು ಮನೆಯ ಸುತ್ತ ಮುತ್ತಲಲ್ಲಿ ಎಲ್ಲಿ ಖಾಲಿ ಸ್ಥಳವಿದೆಯೋ ಅಲ್ಲಿ ತಂದು ಊರಿಬಿಟ್ಟರೆಂದರೆ ಮುಗಿಯಿತು. ಅದು ಹೂಬಿಟ್ಟಾಗಲೇ ಆ ಗಿಡದ ಮೇಲೆ ಮತ್ತೊಮ್ಮೆ ದೃಷ್ಟಿ ಹಾಯುವುದು!ಮಲ್ಲಿಗೆಯ ಬಗ್ಗೆ ಕೇಳಹೊರಟೆವೆಂದರೆ ಸಾಕು ಪ್ರದೋಷ ಮಲ್ಲಿಗೆ, ಕಸ್ತ್ರ ಮಲ್ಲಿಗೆ, ಪತ್ರ ಮಲ್ಲಿಗೆ, ಭಟ್ಕಳ ಮಲ್ಲಿಗೆ, ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ, ಶಂಕರ ಮಲ್ಲಿಗೆ, ಕಾಕಡ ಮಲ್ಲಿಗೆ, ಮಾಗೀ ಮಲ್ಲಿಗೆ, ಚೆಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ನಿತ್ಯ ಮಲ್ಲಿಗೆ ಇತ್ಯಾದಿ ಇತ್ಯಾದಿ...ಹೀಗೆ ಮಾರುದ್ದದ ಪಟ್ಟಿಯನ್ನೇ ಬಿಚ್ಚಿಡುತ್ತಾರೆ.ಕಾಲ ಬದಲಾಗಿದೆ, ಗೊಡ್ಡು ಸಂಪ್ರದಾಯಕ್ಕೆ ಬೆಲೆ ಕೊಡುವಷ್ಟು ಸಮಯವಿಲ್ಲ ಎಂದು ಮೂಗು ಮುರಿಯುವ ನಮಗೆ, ಪೇಟೆಯಲ್ಲಿ ಮಾರಾಟಕ್ಕೆ ಬಂದ ಹಳಸಿದ ಹೂವನ್ನು ಒಂದಕ್ಕೆ ಎರಡರಷ್ಟು ಬೆಲೆಕೊಟ್ಟು ಕೊಂಡುಕೊಳ್ಳುವುದೇ ದೊಡ್ಡ ಫ್ಯಾಷನ್!
ಮಲ್ಲಿಗೆಯ ಹಿಂದೆ ಒಂದು ದೊಡ್ಡ ನಂಬಿಕೆಯೇ ಇದೆ.ಕೆಲವು ಜಾತಿಯ ಅಂದರೆ, ಕಸ್ತ್ರ ಮಲ್ಲಿಗೆ ಹಾಗೂ ಇನ್ನೂ ಕೆಲವು ಜಾತಿಯ ಮಲ್ಲಿಗೆಯ ಹೂಗಳು ಸುಮಾರು ಏಪ್ರಿಲ್ ಕೊನೆಗೆ ಹೂ ಬಿಡಲು ಪ್ರಾರಂಭವಾದರೆ, ಹೆಚ್ಚೆಂದರೆ ಮೂರು ದಿನದ ವರೆಗೆ ಬಹಳವಾಗಿ ಇರುತ್ತವೆ. ಅಲ್ಲದೇ ಇದು ಮೂರು ಬಾರಿ ಹೂ ಬಿಟ್ಟು ಮುಗಿದ ಮೇಲೆ ಗೆಡಿ ಹಿಡಿಯುತ್ತದೆ ಎಂದು ಮಳೆಯನ್ನು ಬರಹಾಯುವ ರೈತರ ನಂಬಿಕೆ ಇಂದಿಗೂ ಸುಳ್ಳಾಗಿಲ್ಲವೆಂದು ಹೇಳಲಗುತ್ತದೆ.

ಹಲವು ಜಾತಿಯ ಮಲ್ಲಿಗೆ ಗಿಡಕ್ಕೆ ಮಳೆಗಾಲ ಪ್ರಾರಂಭವಾಯಿತೆಂದರೆ, ಬಹು ನಿರೀಕ್ಷಿತ ಹಬ್ಬವೇ ಸರಿ! ಅಂತೆಯೇ ನಾಗರ ಪಂಚಮಿಯಿಂದ ಹೂ ಬಿಡುವ ಮಲ್ಲಿಗೆಯ ವಿಧಗಳೂ ಇವೆ. ಇನ್ನೂ ಕೆಲವು ವಿಧದ ಮಲ್ಲಿಗೆ ಪ್ರತಿದಿನವೂ ಹೂ ಬಿಡುತ್ತಿರುತ್ತದೆ.
ಮಲ್ಲಿಗೆಯ ಬುಡವು ಕೆಲವು ಗಿಡಗಳಾದರೆ, ಇನ್ನೂ ಕೆಲವು ಬಳ್ಳಿ. ಕೆಲವೊಮ್ಮೆ ಗಿಡಕ್ಕೆ ಆಧಾರವೇನಾದರೂ ಸಿಕ್ಕಿದರೆ, ಅದೂ ಸಹ ಬಳ್ಳಿಯಾಗಿಯೇ ಹಬ್ಬುತ್ತದೆ. ಆದರೆ ಚೆಂಡು ಮಲ್ಲಿಗೆಯು ಬಳ್ಳಿಯಾಗಲಾರದು. ಮಲ್ಲಿಗೆಗೆ ಚಪ್ಪರ ಮಾಡಿ ಹಬ್ಬಿಸುವುದು ರೂಢಿ. ಇದಕ್ಕೆ ಹೂವು ಬಹಳವಾಗಿ ಬಿಡುತ್ತದೆ ಎನ್ನುವುದು ಒಂದು ಕಾರಣವಾದರೆ,ಹೂ ಕೊಯ್ಯುವುದು ಸುಲಭವಾದೀತು ಎನ್ನುವುದು ಇನ್ನೊಂದು ಕಾರಣ. ಇದರಲ್ಲಿ ಅನೇಕ ಹೂಗಳು ಅತಿ ಪರಿಮಳಯುಕ್ತವಾಗಿದ್ದರೆ, ಇನನು ಕೆಲವು ಸುವಾಸನೆಯನ್ನೇ ಹೊಂದಿರುವುದಿಲ್ಲ.

ಮಹಿಳೆಗೆ, ಮಲ್ಲಿಗೆ ಹೂ ಬಿಡಲು ಪ್ರಾರಂಭವಾದಾಗಿನಿಂದ ಹೂ ಕೊಯ್ದು ಅದನ್ನು ಕಟ್ಟುವುದೇ ಒಂದು ಹವ್ಯಾಸ.ಒಮ್ಮೊಮ್ಮೆ ಬೆಳಿಗ್ಗೆಯಿಂದ ಪ್ರಾರಂಭವಾದ ಈ ಕಾರ್ಯ ಸಂಜೆಯಾದರೂ ಮುಗಿಯದು. ಮಾಲೆ ,ದಂಡೆ ಎಂದು ನಾವು ಸಾಮಾನ್ಯವಾಗಿ ಹೂ ಕಟ್ಟುವ ರೀತಿಯನ್ನು ಗುರುತಿಸಿದರೂ, ಅದರಲ್ಲಿ ಕಾಲ್ದಂಡೆ,ಕೈದಂಡೆ, ಮೂರ್ಬಳ್ಳಿ ದಂಡೆ, ಸುತ್ತುಬಳ್ಳಿ ದಂಡೆ,ಕಡ್ಡಿ ದಂಡೆ, ಮಾಲೆ ಇತ್ಯಾದಿಗಳನ್ನು ಗುರುತಿಸಲಾಗುತ್ತದೆ. ಹಾಗೂ ಜಾಜಿ ಮಲ್ಲಿಗೆ, ಶಂಕರ ಮಲ್ಲಿಗೆ, ಭಟ್ಕಳ ಮಲ್ಲಿಗೆ, ಕಾಕಡ ಮಲ್ಲಿಗೆ, ದುಂಡು ಮಲ್ಲಿಗೆ, ಕಸ್ತ್ರ ಮಲ್ಲಿಗೆಗೆಂದೇ ಬೇರೆ ಬೇರೆ ರೀತಿಯಲ್ಲಿ ದಂಡೆ ಹಾಗೂ ಮಾಲೆ ಕಟ್ಟುವ ರೂಢಿಯಿದೆ. ಮಹಿಳೆಯ ಸೃಜನಶೀಲತೆಯಲ್ಲಿ ಹೂ ಕಟ್ಟುವ ಹೊಸ ಹೊಸ ವಿನ್ಯಾಸಗಳು ರೂಪುಗೊಂಡೀತು!


ಮಲ್ಲಿಗೆಯು ನಮ್ಮ ನಿತ್ಯೋಪಯೋಗೀ ಅನೇಕ ವಸ್ತುಗಳ ಉತ್ಪನ್ನವಾಗಿ ಬಳಕೆಯಲ್ಲಿದೆ. ಆದರೂ ಅದನ್ನು ನೇರವಾಗಿಯೇ ಔಷಧಿಯಾಗಿ ಬಳಸುವುದು ಸ್ವಲ್ಪ ಕಡಿಮೆ. ಜಾಜಿ ಮಲ್ಲಿಗೆಯನ್ನು ಕೈಯಲ್ಲಿಯೇ ಅರೆದು, ಅದರ ರಸವನ್ನು ಗಾಯದಿಂದ ಕಲೆಯಾದ ಜಾಗಕ್ಕೆ ಹಾಗೂ ಮೊಡವೆಗಳಿಗೆ ಲೇಪಿಸಿದರೆ ಉತ್ತಮ ಪರಿಣಾಮ ಕಂಡು ಬರುತ್ತದೆ.
ತನ್ನ ಸೌಂದರ್ಯದ ಜೊತೆಗೆ ಮನೆಯ ಅಂಗಳದ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಂದು ಉತ್ಸಾಹೀ ಮಹಿಳೆಯ ಕರ್ತವ್ಯ. ಇನ್ನೇನು ಮಲ್ಲಿಗೆ ಗಿದ ಹಾಗೂ ಬಳ್ಳಿಗಳನ್ನು ಆಯ್ದು ನೆಡುವ ಸಮಯ. ಯಾವ ಬಳ್ಳಿ ಹಾಗೂ ಯಾವ ಮಲ್ಲಿಗೆ ಗಿಡ ಹೇಗೆ ಬೆಳೆಯುತ್ತದೆ ಮತ್ತು ಹಬ್ಬಬಹುದು ಎಂಬ ಆಧಾರದ ಮೇಲೆ ನಿರ್ದಿಷ್ಟ ಸ್ಥಳವನ್ನು ಆಯ್ದುಕೊಂಡು, ಮನೆಗೆ ಕಂಪೌಮಡ್ ಇದ್ದರೆ ಅದರ ನಾಲ್ಕೂ ಮೂಲೆಯಲ್ಲಿಯೂ, ಇಲ್ಲವೇ ಗೋಡೆಯ ಒಂದು ಸಾಲಿನಲ್ಲಿಯೂ ನೆಡಬಹುದು. ಹಾಗೂ ಮನೆಯ ಒಂದು ಮೂಲೆಯಿಂದ ಬಳ್ಳಿ ಮನೆಯ ಮಾಳಿಗೆಯ ಕಡೆ ಹಬ್ಬುವಂತೆ ಜಾಗೃತೆಯಿಂದ ದಾರಿ ಮಾಡಿಕೊಡಬಹುದು. ಒಂದು ಮನೆಯ ಹೊರ ವಿನ್ಯಾಸಕ್ಕೆ, ಅಂಗಳದ ಸ್ಥಳಾವಕಾಶಕ್ಕೆ ಅನುಗುಣವಾಗಿ ಮಲ್ಲಿಗೆ ಗಿಡ ಹಾಗೂ ಬಳ್ಳಿಯನ್ನು ಬೆಳೆಸಬಹುದಾಗಿದೆ.

- ಭವ್ಯಾ ನೇರಲಜಡ್ಡಿ,
ಸೋಂದಾ, ಶಿರಸಿ.

0 comments:

Post a Comment