ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ..ಹೌದು ಬೆಳಕಿನ ಹಬ್ಬ ದೀಪವಳಿ ಬಂತೆಂದರೆ ಎಲ್ಲೆಲ್ಲೂ ಸಡಗರ, ಸಂಭ್ರಮ. ಜನರ ಮಳೆಗಾಲದ ಜಡತ್ವವನ್ನೆಲ್ಲಾ ಕಳೆಯುವುದಕ್ಕೆ ಈ ಹಬ್ಬವೇ ನಾಂದಿ.ಊರ ತುಂಬಾ ಸೇವಂತಿಗೆ ಹೂವು,ಚಂಡು ಹೂವಿನ ಹಾರಗಳ ಜಾತ್ರೆ,ಜಾನುವಾರು ಸಾಕುವವರ ಕಣ್ಣಿ-ಹಗ್ಗಕ್ಕಾಗಿನ ಹುಡುಕಾಟ, ಹಣತೆ ದೀಪಗಳ ಚಿತ್ತಾರ,ಪಟಾಕಿಗಳ ಅಬ್ಬರ..ಒಟ್ಟಿನಲ್ಲಿ ದೀಪಾವಳಿ ಎಂದರೆ ಬೆಳಕಿನ ರೂಪಕ.


ಮಲೆನಾಡಿಗರಿಗೆ ದೀಪಾವಳಿ ಪ್ರಮುಖವಾದ ಹಬ್ಬ. ಕೊಟ್ಟಿಗೆಯಿಲ್ಲದ ಮನೆ ಮಲೆನಾಡಿನಲ್ಲಿ ಅಪರೂಪ.ಏನಿಲ್ಲವೆಂದರೂ ದೀಪಾವಳಿಯ ಗೋ ಪೂಜೆಗಾಗಿಯೇ... ಜಾನುವಾರು ಸಾಕುವವರೂ ಇದ್ದಾರೆ. ಮಲೆನಾಡಿನಲ್ಲಿ ಮೂರು ದಿನ ಅತ್ಯಂತ ಸಂಭ್ರಮದಿಂದ ಆಚರಿಸುವ ಈ ಹಬ್ಬ ಆಡು ಭಾಷೆಯಲ್ಲಿ ದೊಡ್ಡ ಹಬ್ಬವೆಂದೇ ಕರೆಯಲ್ಪಡುತ್ತದೆ.ಚತುರ್ದಶಿಯಂದು ಶುರುವಾಗುವ ಈ ಹಬ್ಬ ಪಾಡ್ಯದಂದು ಕೊನೆಗೊಳ್ಳುತ್ತದೆ.


ನರಕ ಚತುರ್ದಶಿ

ಈ ದಿನ ಸುಮಂಗಲಿಯರಿಂದ ಭೂರೆ ಹಬ್ಬ ಆಚರಿಸಲ್ಪಡುತ್ತದೆ. ಇದನ್ನು ನೀರು ತುಂಬುವ ಹಬ್ಬ ಎಂದೂ ಕರೆಯುತ್ತಾರೆ. ಹಿಂದಿನ ದಿನವೇ ಬಾವಿ ಕಟ್ಟೆಯನ್ನು ಹಸೆ,ಶೇಡಿ,ರಂಗೋಲಿಗಳಿಂದ ಚಂದಗಾಣಿಸಿಡುತ್ತಾರೆ. ಚತುರ್ದಶಿಯ ದಿನ ಮುಂಜಾನೆ ಐದಕ್ಕೇ ಬಾವಿಯ ನೀರನ್ನು ಪೂಜಿಸಿ,ಕಲಶದಲ್ಲಿ ತುಂಬಿಸಿ ದೇವರ ಮಂಟಪದೆದುರು ಇಡುತ್ತಾರೆ. ಇದನ್ನು ಗಂಗಾ ಜಲವೆಂದು ಕರೆಯುತ್ತಾರೆ.ಮನೆ ಮಂದಿಗೆಲ್ಲಾ ಎಣ್ಣೆ-ಅಭ್ಯಂಜನದ ಸ್ನಾನ ಕಡ್ಢಾಯ.ಮನೆಯ ಆಕಳಿಗೂ ಎಣ್ಣೆ ಹಚ್ಚುವ ಪದ್ಧತಿಯಿದೆ.ವೈಜ್ಞಾನಿಕ ಹಿನ್ನೆಲೆಯಲ್ಲಿ ಇದು ಚಳಿಗಾಲದಿಂದ ರಕ್ಷಣೆಗೆ ತೆಗೆದುಕೊಳ್ಳುವ ಮುನ್ನೆಚ್ಚರಿಕಾ ಕ್ರಮ. ಭೂರೆ ಕಡುಬು ನರಕ ಚತುರ್ದಶಿಯ ಹಬ್ಬದೂಟದ ವಿಶೇಷ.

ಸಂಜೆ 'ಬಲೀಂದ್ರ ಪೂಜೆ,ಪೌರಾಣಿಕ ಹಿನ್ನೆಲೆಯಲ್ಲಿ ಮಹಾ ವಿಷ್ಣುವಿನಿಂದ ವರ ಪಡೆದು ಭೂಮಿಗೆ ಭೇಟಿ ನೀಡುವ ಬಲಿ ಚಕ್ರವರ್ತಿಯನ್ನು ಬರಮಾಡಿಕೊಳ್ಳುವ ಸಂತಸ.ಅವನ ನೇತೃತ್ವದಲ್ಲಿಯೇ ಮೂರು ದಿನದ ದೀಪಾವಳಿ ಆಚರಿಸಲ್ಪಡುತ್ತದೆ. ಮಲೆನಾಡಿನ ಕೆಲವೇ ಮನೆಗಳಲ್ಲಿ ಮಾತ್ರ ಈ ಆಚರಣೆಯಿದೆ.ಮನೆಯ ಜಗುಲಿಯ ಮೇಲೆ ಕಲಶವನ್ನಿಟ್ಟು ಅದಕ್ಕೆ ಪ್ರಾಣ ಪ್ರತಿಷ್ಠೆ ಮಾಡಿ ಬಲಿ ರಾಜನನ್ನು ಆಹ್ವಾನಿಸುತ್ತಾರೆ.ಕಲಶದಿಂದ ಮನೆಯ ವಾಸ್ತುವಿನವರೆಗೆ ಏಳು ಹೆಜ್ಜೆಗಳನ್ನು ರಂಗೋಲಿಯಲ್ಲಿ ಚಿತ್ರಿಸಿರುತ್ತಾರೆ.ಇದು ಆಹ್ವಾನಿತ ದೇವತೆಯ ಗುರುತಾಗಿರುತ್ತದೆ.


ಅಮವಾಸ್ಯೆಯ ದಿನ ಲಕ್ಷ್ಮೀ ಪೂಜೆಯ ಜೊತೆಗೇ ಮಾರನೇ ದಿನದ ಗೋಪೂಜೆಗೆ ಸಿದ್ಧತೆಗಳೂ ನಡೆದಿರುತ್ತದೆ.ದೀಪಾವಳಿ ಪಾಡ್ಯದ ದಿನ ಆಚರಿಸಲ್ಪಡುತ್ತದೆ.ಹಬ್ಬದ ವಿಶೇಷ ಗೋ ಪೂಜೆ. ಮನೆಯಲ್ಲಿ ಕರು ಹಾಕಿದ ಹಸುವಿಗೆ ಅಗ್ರ ಪೂಜೆ.ಮನೆಯ ಜಾನುವಾರುಗಳನ್ನು ಹೂ ಮತ್ತು ಬಣ್ಣಗಳಿಂದ ಅಲಂಕರಿಸಿ ಪೂಜೆಯ ನಂತರ ಊರ ಜನರೆಲ್ಲಾ ಜಾಗಟೆ ಬಾರಿಸುತ್ತಾ ಊರ ದೇವಾಲಯದತ್ತ ಕೊಂಡೊಯ್ಯುತ್ತಾರೆ.ಅಲ್ಲಿ ಗ್ರಾಮ ದೇವತೆ,ಯಕ್ಷ, ಯಕ್ಷಿಣಿ,ಚೌಡಿ,ನಾಗರ ಮುಂತಾದ ದೈವಗಳಿಗೆ ಹಣ್ಣು ಕಾಯಿ ಪೂಜೆ ನೆರವೇರುತ್ತದೆ.ಇಲ್ಲಿ ಹಬ್ಬ ಕೇವಲ ಆಚರಣೆಯೊಂದೇ ಆಗಿರದೆ ಸಾಮಾಜಿಕ ಜೀವನ ಮೌಲ್ಯವನ್ನು ಒಳಗೊಂಡಿದೆ.ಯಾವುದೇ ಜಾತಿ ಭೇದವಿಲ್ಲದೆ ಈ ದಿನದ ಹಬ್ಬ ಆಚರಿಸಲ್ಪಡುತ್ತದೆ.

ಅದೇ ದಿನ ಸಂಜೆ ಬಲಿ ದೇವರ ಉದ್ಯಾವಪನೆ ಅಥವಾ ವಿಸರ್ಜನೆ ಇರುತ್ತದೆ.ನರಕ ಚತುರ್ದಶಿಯ ದಿನ ಬರ ಮಾಡಿಕೊಂಡ ಬಲಿ ರಾಜನನ್ನು ಸಕಲರಿಗೂ ಸನ್ಮಂಗಳವಾಗುವಂತೆ ಬೇಡಿಕೊಂಡು ಸಂಪ್ರದಾಯ ಬದ್ಧವಾಗಿ ಕಳುಹಿಸಿ ಕೊಡುತ್ತಾರೆ. ದೇವರ ಮಂಟಪದಿಂದ ಕೊಟ್ಟಿಗೆಯನ್ನೊಳಗೊಂಡು ಎಲ್ಲಾ ಕಡೆಗಳಲ್ಲಿ ಕಕ್ಕಡ( ಬಟ್ಟೆಯನ್ನು ಕೋಲಿಗೆ ಸುತ್ತಿ ಒಳ್ಳೆಣ್ಣೆಯಲ್ಲಿ ಮಾಡಿದ ದೀಪ) ಹಚ್ಚಿ ಮೂರು ದಾರಿ ಸೇರುವಲ್ಲಿ ಹೋಗಿ ಬಲಿ ಚಕ್ರವರ್ತಿಯನ್ನು ಕಳುಹಿಸಿ ಕೊಡುತ್ತಾರೆ.ವರ್ಷಕ್ಕೊಮ್ಮೆ ಭುವಿಗೆ ಬರುವ ಬಲಿರಾಜ ಎಲ್ಲೆಡೆಯೂ ಬೆಳಕಿನ ಮೂಲಕ ಹರ್ಷವನ್ನು ತುಂಬಿ ಒಳಿತನ್ನು ಮಾಡುವನೆಂಬ ನಂಬಿಕೆ ಈ ಆಚರಣೆಯಲ್ಲಿದೆ.ಮನೆ ಮಂದಿಯೆಲ್ಲಾ ಸೇರಿ 'ದೀಪ ದೀಪದೊಳಗೆ..ಹಬ್ಬಕ್ಕೊಂದು ಹೋಳಿಗೆಎನ್ನುತ್ತಾ ಬಲೀಂದ್ರನ್ನು ಕಳುಹಿಸಿ ಕೊಡುತ್ತಾರೆ.

ದೀಪಾವಳಿಯ ದಿನ ಹವ್ಯಕರು ಆಯುಧ ಪೂಜೆಯನ್ನಾಚರಿಸುತ್ತಾರೆ,ಹಾಗು ನವ ವಸ್ತ್ರ ಧಾರಣೆಯ ದಿನವಾಗಿ ಕೂಡ ಪರಿಗಣಿಸುತ್ತಾರೆ.ಹೊಸತಾಗಿ ಮದುವೆಯಾದ ದಂಪತಿಗಳನ್ನು ಕರೆಸಿ ಆರತಿ ಎತ್ತಿ ಉಡುಗೊರೆ ನೀಡುವ ಸಂಪ್ರದಾಯವೂ ಇದೆ.ಹಬ್ಬದ ದಿನ ರಾತ್ರಿ ಅಂಟಿಗೆ ಪಿಂಟಿಗೆ ತಂಡದವರು 'ಬೋ ಬೋಲೆಂದ್ರ ಬಲೀಂದ್ರನೆ,ಅದರ ನೀ ಕೇಳು ಸಾಲಂಗತನೆ.. ಎನ್ನುತ್ತಾ ಊರಿನ ಎಲ್ಲಾ ಮನೆಗಳಿಗೆ ಹೋಗಿ ದೀಪಾವಳಿಯ ಹಾಡುಗಳನ್ನು ಹಾಡುತ್ತಾರೆ.

ದೀಪಾವಳಿಯ ನಂತರ ಮೂರನೆ ದಿನ ಹೊಸತೊಡಗು ಎಂಬ ಹಬ್ಬವನ್ನೂ ಮಲೆನಾಡಿಗರು ಆಚರಿಸುತ್ತಾರೆ.ಈ ದಿನ ಕೃಷಿ ಮತ್ತು ಇತರ ಆಯುಧ ಉಪಕರಣಗಳನನ್ನು ತೆಗೆದು ಮುಂದಿನ ಕೆಲಸಗಳಿಗೆ ನಾಂದಿಯಿಡುತ್ತಾರೆ.ಮಲೆನಾಡಿನಲ್ಲಿ ಕಾರ್ತಿಕ ಮಾಸ ಪೂರ್ತಿ ದೀಪಾರಾಧನೆಯನ್ನು ದೇವಾಲಯಗಳಲ್ಲಿ ನಡೆಸುತ್ತಾರೆ.

ಹೀಗೆ ಬೆಳಕಿನ ಹಬ್ಬ ದೀಪಾವಳಿ ಮಲೆನಾಡಿನಲ್ಲಿ ಸಾಮಾಜಿಕ, ಧಾರ್ಮಿಕ ತಳಹದಿಯೊಂದಿಗೆ ಬೆಸೆದುಕೊಂಡು ಕೃಷಿ ಕೆಲಸಕ್ಕೆ ಕೂಡ ಸ್ಫೂರ್ತಿ ಯಾಗಿದೆ.ಹಸಿರ ತವರು ಮಲೆನಾಡಿನಲ್ಲಿ ಈ ಹಬ್ಬ ವೈಶಿಷ್ಟ್ಯದಿಂದ ಆಚರಿಸಲ್ಪಡುತ್ತದೆ.

- ಸೌಮ್ಯ ಸಾಗರ

1 comments:

Anonymous said...

nice

Post a Comment