ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:36 PM

ಅಸ್ಪೃಶ್ಯರು

Posted by ekanasu

ವೈದೇಹೀ ಕಾದಂಬರಿ

ಕಳೆದ ಸಂಚಿಕೆಯಿಂದ...


ನೀ ಏನೇ ಹೇಳು ವಾಸ್ತೇವ. ಈ ಶೂದ್ರ ಮಕ್ಕಳಿಗೆ ವಿದ್ಯೆ ಸಿಕ್ಕಿದರೆ ಪ್ರಪಂಚ ಇಡುತ್ತವಾ? ತಮ್ಮ ಅಂದಿಗರನ್ನೇ ಕಾಣದವು. `ನೀನು ಹಾಗೆ ಹೇಳುವುದು ಸುಮ್ಮನೆ ಪಾರ್ತಕ್ಕ. ಆಲೋಚನೆ ಮಾಡಿದರೆ - ನಾನು ನಿಮ್ಮನ್ನು ನೋಯಿಸುವುದಕ್ಕಂತ ಹೇಳುವುದಲ್ಲ. ಮಾತಿನಂಶ ಅಷ್ಟೇ - ನಿಮ್ಮ ಮಗ ಭಾಸ್ಕರ ಈಗ ? ನೀವು ಹೇಳುವ ಅಲ್ಪ ಜಾತಿಯವಳ ಒಟ್ಟಿಗೆ ಸುಖವಾಗಿಲ್ಲವ?'
ಪಾರ್ತಕ್ಕನ ದನಿ ಕಳಕಿತು. `ಸುಖವಾಗಿದ್ದಾನಾ? ಇರಲಿ ಸುಖವಾಗಿರಲಿ. ಅಬ್ಬೆಯ ನೆನಪನ್ನೂ ಮಾಡದವ. ಅಬ್ಬೆಯನ್ನು ಪರಾಧೀನ ಮಾಡಿದವ. , ಸುಖವಾಗಿರಲಿ. ಸುಖ , ಒಂದು ದಿನ ಏನಂತ ಗೊತ್ತಾದೀತು.'


ಗೌರಮ್ಮ ಈಗ ಯಾಕೆ ಆ ವಿಷಯ ತೆಗೆದದ್ದು ಎಂಬಂತೆ ಗಂಡನತ್ತ ನೋಡಿ `ಹಾಗೆ ಯಾಕೆ ಪರಾಧೀನ ಎನ್ನಬೇಕು? ನೀವು ನನಗೆ ಬೇಕು. ಇವತ್ತಿನವರೆಗೆ ನಾವು ನಿಮ್ಮನ್ನು ಬೇರೆಯವರು ಅಂತ ಕಂಡದ್ದುಂಟ? ಒಂದು ಲೆಕ್ಕದಲ್ಲಿ ನೀವಿಲ್ಲದಿದ್ದರೆ ಈ ಮನೆಯ ವಹಿವಾಟಿನಲ್ಲಿ ನಾನು ಪರಾಧೀನೆಯಾಗುತ್ತಿದ್ದೆ ' - ಎಂದರು.

`ನೀವು ಹಾಗೆಲ್ಲ ಎಣಿಸಿದರೆ ಅದು ನನಗೆ ಅವಮಾನ ಮಾಡಿದಂತೆ. ನಾ ಹೇಳಿದ್ದು ಮಾತಿನಂಶ ಎಂದೆನಲ್ಲ, ಮೊದಲೇ. ನಿಮಗೆ, ಭಾಸ್ಕರನ ತಾಯಿಗೆ, ಎಂತಹ ಸ್ಥಾನ ಇಲ್ಲಿದೆ ಅಂತ ಪುನಃ ಹೇಳುವುದಿಲ್ಲ.' ಹೀಗೆ ಹೇಳಿ ವಾಸುದೇವರಾಯರು ತಮ್ಮ ಕೋಣೆಗೆ ಹೊರಟು ಹೋದರು.

ಭಾಸ್ಕರನ ಮಾಡಲು ಪಾರ್ತಕ್ಕನಿಗೆ ವಚ್ಚಕೊಟ್ಟ ಹಾಗಾಯಿತು. ಬಾಣಂತಿ ಕೋಣೆಗೆ ಬಂದರು. ಗೋಡೆಗೆ ಬೆನ್ನು ಆನಿಸಿ ಕತೆ ಪುಸ್ತಕ ಹಿಡಿದು ಕುಳಿತಿದ್ದ ಬಾಣಂತಿಗೆ `ನಾಳೆ ಬೆನ್ನು ನೋವು ಸುರುವಾಗುತ್ತದೆ. ಹೀಗೆ ಓದಿದರೆ ಕಣ್ಣು ಯಾಕೆ ಮುಡಿಯುತ್ತದೆ? ತೆಗೆದಿಡು ಪುಸ್ತಕವನ್ನು ' - ಎಂದರು.

ಅವಳು ತೆಗೆದಿಡಲಿಲ್ಲ. `ಹೋಗಿ ಪಾರ್ತಕ್ಕ , ನಂಗೆ ಮಲಗಿ ಮಲಗಿ ಬೇಜಾರು ಬಂದು ಹೋಯಿತು.'
`ಈಗ ಹಾಗೇ. ಮಲಗಿ ಬೇಜಾರಾಗುತ್ತದೆ. ಮೂರು ತಿಂಗಳಾಗುವ ಹೊತ್ತಿಗೆ ಸ್ವಸ್ಥ ಮಲಗಿಯೇನೇ ಎಂದು ಕಾಣುತ್ತದೆ. ಅಷ್ಟು ಬೆನ್ನು ನೋವು , ಕಣ್ಣು ನೋವು , ಮೈ ಕೈ ನೋವು ಸುರುವಾಗುತ್ತದೆ. ನನ್ನ ಮಾತು ತಕೋ. ಬಾಣಂತನ ಕಾಟು ಮಾಡಿಕೊಳ್ಳಬಾರದು. ಮಲಕೋ' ಎಂದರು. ರತ್ನ ಪುಸ್ತಕ ತೆಗೆದಿಟ್ಟಳು.

ಮಗುವನ್ನು ಮೀಯಿಸಿ ಮಲಗಿಸಿದ್ದರಿಂದ ಅದು ಗಾಢ ನಿದ್ರೆಯಲ್ಲಿತ್ತು. ತಲೆಯ ಇಕ್ಕೆಲಗಳಲ್ಲಿ ಎರಡೂ ಕೈ ಮುಷ್ಟಿಯನ್ನಿರಿಸಿಕೊಂಡು ಮಲಗಿತ್ತು. `ಕಂಡೆಯ ಮಗು ಮಲಗಿದ್ದು ? ಹೆಡಿಗೆಯಲ್ಲಿ ಮಣ್ಣು ಹೊರುವಂತಿಲ್ಲವೇ? ಮಗು ಅಬ್ಬೆಯ ಹೊಟ್ಟೆಯಲ್ಲಿರುವಾಗ ಕಗ್ಗತ್ತಲೆ ಇರುತ್ತದೆಯಲ್ಲ. `ದೇವರೇ ಒಂದು ಸಲ ಈ ಕತ್ತಲೆಯಿಂದ ನನ್ನನ್ನು ತಪ್ಪಿಸು ' ಅಂತ ಬೇಡಿಕೊಳ್ಳುತ್ತದೆಯಂತೆ. `ತಪ್ಪಿಸಿದರೆ ಎಂತ ಕೊಡುತ್ತಿ ನನಗೆ ? ' ಎಂದು ದೇವರು ಕೇಳುತ್ತಾನಂತೆ. `ನಿಂಗೆ ದೇವಸ್ಥಾನ ಕಟ್ಟಿಸುತ್ತೇನೆ ' - ಎನ್ನುತ್ತದಂತೆ ಮಗು. ಈಗ ಭೂಮಿಗೆ ಬಂತಲ್ಲ. ಬೆಳಕು ಕಂಡಿತಲ್ಲ. `ನಂಗೆ ಯಂತದೂ ಮಾಡಿಲಿಲ್ಲ ನೀನು ' ಅಂತ ಆವಾಗವಾಗ ಬಂದು ದೇವರು ಮಾತನಾಡಿಸುತ್ತಾ ಹೇಳುತ್ತಾನಂತೆ. ನಿದ್ದೆಯಲ್ಲಿ ಮಗು ನಗುತ್ತದೆಯಲ್ಲ. ಅದಕ್ಕೇ .`ಆಯಿತು .ದೇವಸ್ಥಾನ ಖಂಡಿತ ಕಟ್ಟಿಸುತ್ತೇನೆ' ಅಂತ ಮಗು ಅವನನ್ನು ಕಳಿಸುತ್ತ ಇರುತ್ತದೆ.ಎರಡು ಎರಡೂವರೆ ತಿಂಗಳಲ್ಲಿ ದೇವಸ್ಥಾನ ಕಟ್ಟಲು ಸುರುಮಾಡುತ್ತದೆ. ಹೀಗೇ. ಮಣ್ಣು ಹೊತ್ತು. ಬೇಕಾದರೆ ಅದರ ಮುಷ್ಟಿ ಬಿಡಿಸಿ ನೋಡು ಅದರಲ್ಲಿ ಚೂರು ಮಣ್ಣಿರುತ್ತದೆ.'

- ವೈದೇಹಿ

0 comments:

Post a Comment